ಹಲವು ಮುಖಗಳ `ಕಾರ್ಪೊರೇಟ್' ಭಯ

7

ಹಲವು ಮುಖಗಳ `ಕಾರ್ಪೊರೇಟ್' ಭಯ

Published:
Updated:
ಹಲವು ಮುಖಗಳ `ಕಾರ್ಪೊರೇಟ್' ಭಯ

ಧಾರವಾಡ ಸಾಹಿತ್ಯ ಸಂಭ್ರಮದ ಸಿದ್ಧತೆಗಳು ಪೂರ್ಣಗೊಳ್ಳುವ ಹೊತ್ತಿಗೆ ಕೆಲವರು `ಇದು ಕಾರ್ಪೊರೇಟ್ ಸಂಸ್ಕೃತಿ' ಎಂಬ ತಗಾದೆ ತೆಗೆದರು. ಈ ಕಾರ್ಯಕ್ರಮ ಅದು ಹೇಗೆ ಕಾರ್ಪೊರೇಟ್ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಿತ್ತು ಎಂಬುದನ್ನು ತಕರಾರು ಎತ್ತಿದವರ್‍ಯಾರೂ ವಿವರಿಸಲಿಲ್ಲ. ಅಥವಾ ಅವರ ವಿವರಣೆಗಳು `ಕಾರ್ಪೊರೇಟ್ ಸಂಸ್ಕೃತಿ' ಎಂದರೇನು, ಅದು ಹೇಗೆ ಸಾಹಿತ್ಯ ಸಂಭ್ರಮದಲ್ಲಿದೆ ಎಂಬುದನ್ನು ನನ್ನಂಥ ಪಾಮರರಿಗೆ ಅರ್ಥವಾಗುವಂತೆ ಹೇಳಿರಲಿಲ್ಲ. ಅಂತೂ ಇಂತೂ ಕಾರ್ಯಕ್ರಮ ನಡೆಯಿತು.ಆದರೆ ಅಲ್ಲೇ ಮತ್ತೊಂದು `ಕಾರ್ಪೊರೇಟ್' ಚರ್ಚೆ ಆರಂಭವಾಯಿತು. ದೊಡ್ಡ ವಾಣಿಜ್ಯ ಸಂಸ್ಥೆಗಳಲ್ಲಿ ಹೊಟ್ಟೆಪಾಡಿಗಾಗಿ ದುಡಿಯುತ್ತಾ ಸೃಜನಶೀಲ ಅಭಿವ್ಯಕ್ತಿಗಾಗಿ ಕನ್ನಡ ಸಾಹಿತ್ಯವನ್ನು ನೆಚ್ಚಿಕೊಂಡ ಕೆಲವರನ್ನು ಉದ್ದೇಶಿಸಿ ಹಿರಿಯ ವಿಮರ್ಶಕ ಜಿ.ಎಸ್. ಆಮೂರರು `ಕಾರ್ಪೊರೇಟ್ ಜಗತ್ತಿನ ಸಕಲ ಸವಲತ್ತು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಿರುವ ಇವರು ಈಗ ಸಾಹಿತ್ಯದಲ್ಲಿ ಹೆಸರು ಮತ್ತು ಕೀರ್ತಿಗಳಿಸಲು ಸಾಹಿತ್ಯ ಕೃಷಿ ಮಾಡುತ್ತಿರುವಂತಿದೆ' ಎಂಬ ಸಂಶಯದ ನೋಟ ಬೀರಿದರೆ ಕೆಣಕು ಮಾತಿಗೇ ಪ್ರಸಿದ್ಧರಾಗಿರುವ ಚಂದ್ರಶೇಖರ ಪಾಟೀಲರು `ನೀವೆಲ್ಲಾ ಕಾರ್ಪೊರೇಟ್ ಜಗತ್ತಿನ ಪ್ರತಿಪಾದಕರೋ? ಅಥವಾ ವ್ಯವಸ್ಥೆಯನ್ನು ದ್ವಂಸ ಮಾಡಿ ನಮ್ಮ ಕುತ್ತಿಗೆ ಕೊಯ್ಯುವ ಒಳಗಿನ ದ್ರೋಹಿಗಳೋ?' ಎಂದು ಕೆಣಕಿದರು.ಚಂದ್ರಶೇಖರ ಪಾಟೀಲರಾಗಲೀ ಜಿ.ಆಸ್. ಆಮೂರರಾಗಲೀ ತಮ್ಮ ಶಿಕ್ಷಣ ಮುಗಿಸಿ ವೃತ್ತಿಜೀವನಕ್ಕೆ ಕಾಲಿಟ್ಟ ದಿನಗಳಿಗೂ ವರ್ತಮಾನಕ್ಕೂ ಇರುವ ವ್ಯತ್ಯಾಸ ಬಹಳ ದೊಡ್ಡದು. ಸಮಕಾಲೀನ ಕನ್ನಡಕ್ಕೆ `ಕಾರ್ಪೊರೇಟ್' ಎಂಬ ಪದ ಪುಂಜ ಭಯ ಹುಟ್ಟಿಸುವಂಥದ್ದಲ್ಲ ಬದಲಿಗೆ ಅದು ಬದುಕಿನ ವಾಸ್ತವ. ಆರ್ಥಿಕ ಉದಾರೀಕರಣದ ಪ್ರಕ್ರಿಯೆ ಆರಂಭಗೊಂಡ ನಂತರ ಹುಟ್ಟಿದ ಒಂದು ತಲೆಮಾರು ನಮ್ಮ ನಡುವೆ ಇರುವ ಹೊತ್ತಿನಲ್ಲಿ ನಮ್ಮ `ಕಾರ್ಪೊರೇಟ್' ಭಯಗಳನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಈ ದೃಷ್ಟಿಯಲ್ಲಿ ನೋಡಿದಾಗ ಚಂಪಾ ಮತ್ತು ಆಮೂರರ ಭಯಕ್ಕೆ ತಲೆಮಾರಿನ ಅಂತರ ಮೂಡಿಸುವ ತಲ್ಲಣ ಕಾರಣವಾಗಿರುವುದು ಸ್ಪಷ್ಟ.ಚಂದ್ರಶೇಖರ ಪಾಟೀಲರ `ಒಳಗಿನ ದ್ರೋಹಿಗಳು' ಎಂಬ ಆರೋಪವನ್ನು ಪರಿಗಣಿಸಿದರೆ ಈ ಅವರ ಭಯದ ಹೂರಣ ಹೊರಬೀಳುತ್ತದೆ. ಇಂಥದ್ದೇ ಒಂದು ಭಯ ಈ ಹಿಂದೆ ಕುವೆಂಪು `ಶೂದ್ರ ತಪಸ್ವಿ'ಯನ್ನು ಬರೆದಾಗ ಕನ್ನಡ ಸಾಹಿತ್ಯದ ಹಿರಿಯರೊಬ್ಬರಿಗೆ ಕಾಡಿತ್ತು ಎಂಬುದೂ ನೆನಪಾಗುತ್ತದೆ. ಅವರಿಗೆ ಸಾಂಪ್ರದಾಯಿಕ ನಂಬಿಕೆಯೊಂದನ್ನು ಬುಡಮೇಲಾಗಿಸುವ ಬರವಣಿಗೆಯ ಬಗ್ಗೆ ಆತಂಕಕ್ಕಿಂತ ಹೆಚ್ಚಾಗಿ ಸಾಹಿತ್ಯದ ವ್ಯಾಪ್ತಿ ತಾವು ತಾಳಿಕೊಳ್ಳಬಹುದಾದ ವಿಸ್ತಾರವನ್ನು ಮೀರುತ್ತಿದೆಯಲ್ಲಾ ಎಂಬ ಭಯವಿತ್ತು. ಕನ್ನಡದಲ್ಲಿ ಸಮಕಾಲೀನವಾಗಿ ಬರೆಯುವುದೆಂದರೆ ಅದರೊಳಗೆ `ಕಾರ್ಪೊರೇಟ್' ವ್ಯವಸ್ಥೆಯೂ ಸರ್ಕಾರಗಳು ಅನುಸರಿಸಬೇಕೆಂದು ಬಯಸುವ `ಕಾರ್ಪೊರೇಟ್ ಗವರ್ನೆನ್ಸ್ ' ಕೂಡಾ ಬಂದುಬಿಡುತ್ತದೆ.ಶೋಷಣೆ, ಶೋಷಕ ಮತ್ತು ಶೋಷಿತನ ಹೊಸ ರೂಪಗಳೂ ಅದರ ಭಾಗವಾಗಿರುತ್ತವೆ. ವಿಚಾರಗಳ ಮಟ್ಟಿಗೆ ಎಪ್ಪತ್ತರ ದಶಕದ ರಾಜಕಾರಣವನ್ನು ಬಿಟ್ಟುಕೊಡಲಾಗದ ಚಂದ್ರಶೇಖರ ಪಾಟೀಲರಿಗೆ ಹೊಸ ಕಾಲದ ಅಭಿವ್ಯಕ್ತಿಯ ಅವಿಭಾಜ್ಯ ಅಂಗವಾಗಿ ಹೋಗಿಬಿಟ್ಟಿರುವ ಎಲ್ಲವೂ ಕ್ಷುಲ್ಲಕವೋ ಅಥವಾ `ಒಳಗಿನ ದ್ರೋಹಿಗಳ' ತಂತ್ರವಾಗಿ ಕಾಣುವುದಕ್ಕೆ ವರ್ತಮಾನದ ಬರಹಗಾರರೇನು ಮಾಡಲು ಸಾಧ್ಯ?

ಇನ್ನು `ಕಾರ್ಪೊರೇಟ್' ಎಂಬುದಕ್ಕೆ ಆರೋಪಿತವಾಗಿರುವ ಹೀನಾರ್ಥಗಳ ಹಿಂದೆಯೂ ಇರುವುದು ಸಾಹಿತ್ಯಾಭಿವ್ಯಕ್ತಿಯ ಕ್ಷೇತ್ರಕ್ಕೆ ಬಂದಿರುವ ಹೊಸ ತಲೆಮಾರಲ್ಲ.`ಲಾಭ'ವನ್ನು ಅತ್ಯಂತ ನೇತ್ಯಾತ್ಮಕವಾಗಿ ನೋಡುವ ಧೋರಣೆಯೊಂದು ಎಂಬತ್ತರ ದಶಕದ ಅಂತ್ಯದ ತನಕವೂ ಇತ್ತು. ಇದು ಸರಿಯೋ ತಪ್ಪೋ ಎಂಬುದು ಬೇರೆಯೇ ಮಾತು. ಆದರೆ ಹೀಗೆ `ಲಾಭ'ವೆಂಬುದು ನೇತ್ಯಾತ್ಮಕ ಮೌಲ್ಯವಾಗಿದ್ದ ಕಾಲದಲ್ಲಿ ಅದನ್ನು ಕದ್ದು ಮುಚ್ಚಿ ಆನಂದಿಸುವ ಪ್ರವೃತ್ತಿಯನ್ನು ಬೆಳೆಸಿದ್ದಂತೂ ನಿಜ. ತೊಂಬತ್ತರ ದಶಕದಲ್ಲಿ `ಲಾಭ' ಎಂಬುದು ಇತ್ಯಾತ್ಮಕವೂ ಆಗಬಹುದು ಎಂಬುದು ಮನವರಿಕೆಯಾದ್ದರ ಹಿಂದೆಯೇ `ಲಾಭಕೋರತನ'ವೂ ಒಂದು ಇತ್ಯಾತ್ಮಕ ಮೌಲ್ಯವಾಗಿಬಿಟ್ಟಿದ್ದರಲ್ಲಿ ಯಾರ ತಪ್ಪಿದೆ?ಕಷ್ಟ ಮತ್ತು ಬಡತನಗಳೂ ಕೂಡಾ ಯುಗಧರ್ಮಕ್ಕೆ ಅನುಗುಣವಾಗಿ ತಮ್ಮ ಸ್ವರೂಪದಲ್ಲಿ ಬದಲಾಗುತ್ತಿರುತ್ತವೆ. ಎರಡು ದಶಕಗಳ ಹಿಂದೆ ನಗರ ಪ್ರದೇಶದ ಬಡತನವೆಂಬುದು ಕೇವಲ ಕೊಳೆಗೇರಿ ನಿರ್ಮೂಲನೆಗಷ್ಟೇ ಸೀಮಿತವಾಗಿ ಉಳಿದಿತ್ತು. ಆದರೆ ಈಗ ನಗರಗಳ ಬಡತನದ ತೀವ್ರತೆ ಮತ್ತು ಸಂಕೀರ್ಣ ಸ್ವರೂಪ ಗ್ರಾಮೀಣ ಭಾರತಕ್ಕಿಂತ ದೊಡ್ಡದಾಗಿವೆ. ಮಧ್ಯಮ ವರ್ಗದವನೊಬ್ಬ ಬಡವನಾಗಿಬಿಡಲು ಒಂದು ಕಾಯಿಲೆ ಸಾಕಾಗುತ್ತದೆ.ಭಾರೀ ಪ್ರಮಾಣದ ಸಂಬಳ ಪಡೆಯುವ ಐ.ಟಿ. ಉದ್ಯೋಗಿ ಬೀದಿಗೆ ಬೀಳಲು ಅಮೆರಿಕ ಆರ್ಥಿಕತೆಗೆ ನೆಗಡಿ ಭಾದಿಸಿದರೆ ಸಾಕಾಗುತ್ತದೆ. ವಿಶ್ವದ ಎಲ್ಲೋ ಸುರಿದ ಮಳೆ, ಮತ್ತೆಲ್ಲೋ ಯಾರೋ ಪಡೆದ ಸಾಲ ಇಲ್ಲಿರುವ ಕಂಪೆನಿಯೊಂದರ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಬಹುದು. ಇಂಥ ಸ್ಥಿತಿಯಲ್ಲಿ ದುಡಿಯುತ್ತಿರುವವರನ್ನು `ನೀವು ಒಳಗಿನ ದ್ರೋಹಿಗಳೇ?' ಎಂದು ಪ್ರಶ್ನಿಸುವುದರ ಹಿಂದಿರುವ ಮನಸ್ಸು ಯಾವುದು? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry