ಶನಿವಾರ, ಅಕ್ಟೋಬರ್ 19, 2019
28 °C

ಹಲವು ಸಂಕ್ರಾಂತಿ

Published:
Updated:
ಹಲವು ಸಂಕ್ರಾಂತಿ

ಸಂಕ್ರಾಂತಿಯು ರೈತರೊಂದಿಗೆ, ಬೆಳೆದ ಬೆಳೆಯೊಂದಿಗೆ, ತಮಗೆ ಹೆಗಲುಕೊಡುವ ಎತ್ತು, ದನ ಕರುಗಳೊಂದಿಗೆ, ಭೂಮಿಯೊಂದಿಗೆ, ನದಿ ಹೊಳೆಯೊಂದಿಗೆ ಬೆಸೆದುಕೊಂಡಿದೆ. ಈ ಎಲ್ಲವುಗಳೂ ಸೂರ್ಯ ಪಥ ಬದಲಿಸಿದಂತೆ, ತಾವೂ ಪಥ ಬದಲಿಸುತ್ತಿವೆ.ಈ ಬದಲಾಗುವಿಕೆ ಸಂಭ್ರಮಿಸುವಂತಿಲ್ಲದೆ, ನೋವ ಕೊಡುವಂತಿದೆ. ಹಾಗಾಗಿ ಸಂಕ್ರಾಂತಿಯ ನೆನಪೆಂದರೆ, ಈಗದು ರೈತಪರಿವಾರದ ದುಃಸ್ಥಿತಿಯ ನೆನಪೂ ಕೂಡ.

ರೈತನ ಇಂದಿನ ಸ್ಥಿತಿ ಸಂಭ್ರಮಿಸುವಂತಿಲ್ಲ. ತಾನು ಉತ್ತಿ ಬಿತ್ತುವ ನೆಲ ತನ್ನ ಕೈ ಹಿಡಿದೀತೆಂಬ ಭರವಸೆ ಕರಗುತ್ತಿದೆ.ನೆಲ ತನ್ನ ಕೈಬಿಡುವ ಆತಂಕ ಕೆಲವರದು. ತನ್ನ ನೆಲವ ಕದ್ದೊಯ್ಯುತ್ತಿರುವ ಹಗಲುಗಳ್ಳರ ಕನಸಾಗಿ ಬೆಚ್ಚುವ ಸ್ಥಿತಿ ಹಲವರದ್ದು. ಬಿತ್ತಿದ ಬೆಳೆ ಬದುಕ ನೀಗಿಸಲು ಸೋಲುತ್ತಿರುವುದೂ, ಸದ್ಯದ ಬಹುಪಾಲು ರೈತರ ಅನುಭವ. ಕೃಷಿ ಸಮೃದ್ಧಿಯೇ ಕನಸಾದಾಗ ಅದರ ಸಂಕೇತದ ಹಬ್ಬ ಯಾವ ತೆರನದ್ದು ಎನ್ನುವ ಪ್ರಶ್ನೆ ಎದುರಾಗುತ್ತದೆ. ಸದ್ಯದ ಸಂಕ್ರಮಣ ಯಾವ ಸಮೃದ್ಧಿಯ ಸಂಕೇತ? ಯಾರ ಸಮೃದ್ಧಿಯ ಸಂಕೇತ ಎನ್ನುವ ಪ್ರಶ್ನೆಗಳೂ ಕಾಡದಿರವು.ನಿಸರ್ಗಕ್ಕೆ ಸ್ಪಂದನ

ನಿಸರ್ಗದಲ್ಲಾಗುವ ಬದಲಾವಣೆಗೆ ಜನ ಸಮುದಾಯ ತೋರುವ ಸ್ಪಂದನ ರೂಪದ ಹಲವು ಆಚರಣೆಗಳಲ್ಲಿ ಸಂಕ್ರಾಂತಿಯೂ ಒಂದು. ಸೂರ್ಯ ಒಂದು ರಾಶಿಯೊಳಗಿನ ಹೆಜ್ಜೆಯನ್ನು, ಮತ್ತೊಂದರಲ್ಲಿ ಇಡುವುದರ ಸಾಂಕೇತಿಕ ಸಂಭ್ರಮವಿದು. ಹನ್ನೆರಡು ರಾಶಿ, ಮಾಸಗಳ ಕಾರಣ ವರ್ಷಕ್ಕೆ ಹನ್ನೆರಡು ಸಂಕ್ರಾಂತಿಗಳೇ ಸಂಭವಿಸುತ್ತವೆ.ಇವುಗಳಲ್ಲಿ ಎರಡನ್ನು ಮಾತ್ರ ಮುಖ್ಯವೆಂದು ಭಾವಿಸಲಾಗುತ್ತದೆ. ಸೂರ್ಯ ಮಿಥುನದಿಂದ ಕರ್ಕಾಟಕಕ್ಕೆ ಪ್ರವೇಶಿಸುವುದು ಒಂದಾದರೆ, ಧನುವಿನಿಂದ ಮಕರಕ್ಕೆ ಸಂಕ್ರಮಿಸುವುದು ಮತ್ತೊಂದು. ಇವೆರಡೂ ಸೂರ್ಯನ ದಾರಿಯ ಮಾರ್ಗಸೂಚಿಗಳು. ಒಂದು ದಕ್ಷಿಣಾಯಣ, ಮತ್ತೊಂದು ಉತ್ತರಾಯಣ. ಈ ಬಗೆಗಿನ ಪುರಾಣ ಐತಿಹ್ಯಗಳು ಹಲ ಬಗೆಯ ಕಥನಗಳನ್ನು ಹುಟ್ಟಿಸಿವೆ. ಇದರಲ್ಲಿ ತಿಲಾಸುರನ ವಧೆಯ ಕಥೆ ಜನಪ್ರಿಯ.ಬ್ರಹ್ಮನಿಂದ ವರ ಪಡೆದ ತಿಲಾಸುರನೆಂಬ ರಾಕ್ಷಸ ಲೋಕಪೀಡಕನಾಗುತ್ತಾನೆ. ಆಗ `ಮಕರ~, `ಕರ್ಕ~ ಎಂಬ ಮಹಿಳೆಯರ ಸಹಾಯ ಪಡೆದು ಸೂರ್ಯ ಆತನನ್ನು ಸಂಹರಿಸುತ್ತಾನೆ. ಮಕರ ತಿಲಾಸುರನ ಹೊಟ್ಟೆ ಬಗೆದಾಗ ಭೂಮಿಗೆ ಎಳ್ಳಿನ ಪ್ರವೇಶವಾಗುತ್ತದೆ.

 

ಮಕರನ ಸಾಹಸ ಮೆಚ್ಚಿ ಸೂರ್ಯ- `ನಿನ್ನನ್ನು, ನಿನ್ನಿಂದ ಭೂಮಿಗೆ ಬಂದ ಎಳ್ಳನ್ನು ಪೂಜಿಸಿದವರಿಗೆ ಒಳಿತಾಗಲಿ~ ಎಂದು ಹರಸಿದನಂತೆ. ಹೀಗೆ ಎಳ್ಳು ಬೀರುವ ಆಚರಣೆ ಬಂದದ್ದಾಗಿಯೂ, `ಮಕರ ಸಂಕ್ರಮಣ~ ಎಂಬ ಹೆಸರು ಜನರಲ್ಲಿ ಉಳಿದದ್ದಾಗಿಯೂ ಈ ಕಥೆ ಹೇಳುತ್ತದೆ.ರಾತ್ರಿಯೇ ಹೆಚ್ಚಾಗಿ, ಹಗಲು ಕಡಿಮೆ ಇರುವ ಚಳಿಗಾಲಕ್ಕಿದು ಇಳಿಗಾಲ. ಹಗಲು ಹಿಗ್ಗಿಕೊಂಡು, ರಾತ್ರಿ ಕುಗ್ಗಿಕೊಳ್ಳುವ, ಶೀತವು ಶಾಖಕ್ಕೆ ಅಂಜಿ ಹಿಂದೆ ಸರಿಯುವ ಕಾಲಮಾನವಿದು. ಹೀಗಾಗಿಯೇ ಜನಪದರು `ಸಂಕ್ರಾಂತಿಗೆ ಚಳಿ ಕಡಿಮೆಯಾಗಿ, ಶಿವರಾತ್ರಿಗೆ ಶಿವ ಶಿವ ಅಂತ ಮಾಯವಾಯ್ತೆ~ ಎಂದದ್ದಿದೆ.ಹಾಗಾಗಿ ಚಳಿಯಲ್ಲಿ ಮುದುಡಿಕೊಂಡ ದೇಹ ಮನಸ್ಸುಗಳನ್ನು ಬಿಸಿಲಿಗೆ ಬೆಚ್ಚಗಾಗಿಸುವ, ಹೈದರಾಬಾದ್ ಕರ್ನಾಟಕದವರಿಗೆ ಬರಲಿರುವ ಬಿಸಿಲಿನ ತಾಪವ ನೆನಪಿಸಿ ಬೆವರಿಳಿಸುವ ಹಬ್ಬ ಈ ಸಂಕ್ರಮಣ.ಹದವಾಗಿ ಹುರಿದ ಎಳ್ಳು, ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುಂಡು, ಬೆಲ್ಲದಚ್ಚು, ಮುಂತಾದವುಗಳ ಮಿಶ್ರಣವನ್ನು ತಯಾರಿಸುವುದೂ, ಅದನ್ನು ಎಳ್ಳುಬೀರಿ `ಎಳ್ಳು ಬೆಲ್ಲ ಕೊಳ್ಳಿ, ಒಳ್ಳೊಳ್ಳೆ ಮಾತಾಡಿ~ ಎನ್ನುವುದು ಸಂಕ್ರಮಣದ ಸಂಭ್ರಮವನ್ನು ಹಂಚಿಕೊಳ್ಳುವ ವಿಧಾನ. ಇದು ಎಲ್ಲಾಕಡೆಗೂ ಸಾಮಾನ್ಯವಾಗಿದೆ.ಇದನ್ನೇ ವೈದ್ಯರು- `ಚಳಿಗಾಲದಲ್ಲಿ ದೇಹದಲ್ಲಿರುವ ಎಣ್ಣೆ ಅಂಶ (ಫ್ಯಾಟ್) ದೇಹವನ್ನು ಬಿಸಿಯಾಗಿಡಲು ಹೆಚ್ಚು ಖರ್ಚಾಗಿ ಕಡಿಮೆಯಾಗುತ್ತದೆ. ಹಾಗಾಗಿ ಎಣ್ಣೆ ಅಂಶವಿರುವ ಎಳ್ಳು, ಒಣಕೊಬ್ಬರಿ, ನೆಲಗಡಲೆ ಜತೆ ಬೆಲ್ಲಸಕ್ಕರೆಯನ್ನು ತಿನ್ನುವುದು ಒಳ್ಳೆಯದು~ ಎನ್ನುವ ಅಭಿಪ್ರಾಯ ತಾಳುತ್ತಾರೆ.ಸಂಕ್ರಾಂತಿಯ ಆಚರಣೆ ಕರ್ನಾಟಕದಾದ್ಯಂತ ಒಂದೇ ತೆರನಾಗಿಲ್ಲ. ಸಂಕ್ರಾಂತಿ ಕರ್ನಾಟಕ ಹಲವು ಕಡೆ ತನ್ನದೇ ಪ್ರಾದೇಶಿಕ ಪರಕುಗಳನ್ನು ಈಗಲೂ ಉಳಿಸಿಕೊಂಡಿದೆ. ಕರ್ನಾಟಕದ ಕೆಲ ಭಾಗಗಳಲ್ಲಿ ಸಂಕ್ರಾಂತಿಯ ಹೆಸರನ್ನೂ ಕೇಳದ ಹಳ್ಳಿಗಳಿವೆ. ಅಲ್ಲ್ಲೆಲಾ ರೈತ, ಹೊಲ, ಸುಗ್ಗಿಯನ್ನು ನೆನಪಿಸುವ ಬೇರೆ ಬೇರೆ ಆಚರಣೆಗಳಿವೆ. ಜಾನುವಾರುಗಳನ್ನು ಗೌರವಿಸುವ ಬಸವ ಜಯಂತಿಯಂತಹ ಹಬ್ಬಗಳೂ ಇವೆ. ಹಾಗಾಗಿ ಇಲ್ಲಿ ಒಂದು ಸಂಕ್ರಾಂತಿಗಿಂತ ಹಲವು ಸಂಕ್ರಾಂತಿಗಳಿವೆ. 

 

ಜಾನುವಾರು ಸ್ನೇಹಿ ಹಬ್ಬ

ಸಂಕ್ರಾಂತಿಯಂದು ಹೋರಿಗಳನ್ನು ಕಿಚ್ಚು ಹಾಯಿಸುವ ಸಂಪ್ರದಾಯ ಹೆಚ್ಚಿದೆ. ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಭಾಗದಲ್ಲಿ ಇದರ ಸಂಭ್ರಮ ಹೆಚ್ಚು. ಎತ್ತು, ಆಕಳಗಳನ್ನು ಸಿಂಗರಿಸುವ ಪರಿ ನೋಡಲು ಮೋಹಕವಾಗಿರುತ್ತದೆ. ಎತ್ತುಗಳೂ ಚಳಿಯಿಂದ ಬಿಡಿಸಿಕೊಂಡು ಕಾವೇರಲಿ, ಎತ್ತಿನ ದೇಹದಲ್ಲಿನ ಕ್ರಿಮಿಗಳು ನಾಶವಾಗಲಿ, ಒಳ್ಳೆಯ ರಾಸುಗಳಿಗೆ ರಾವು ಬಡಿಯದಿರಲಿ ಎನ್ನುವ ಹಿನ್ನೆಲೆಯೂ ಈ ಆಚರಣೆಗೆ ಇದ್ದಂತಿದೆ.ಹೀಗೆ ಕಿಚ್ಚಾಯಿಸುವ ಸಂಪ್ರದಾಯಗಳೂ ಪ್ರಾದೇಶಿಕವಾಗಿ ಭಿನ್ನವಾಗಿವೆ. ಚಿಕ್ಕಬಳ್ಳಾಪುರ ಭಾಗದಲ್ಲಿ ಮನೆಗಾಗಿ ದುಡಿದು ತೀರಿದ ಎತ್ತುಗಳ ಸಮಾಧಿಗೆ ಪೂಜೆ ಮಾಡುವ ಆಚರಣೆಯಿದೆ. ಇಲ್ಲಿ ಎತ್ತುಗಳನ್ನು ದೇವರೆಂದು ಭಾವಿಸುತ್ತಾರೆ. ಹಬ್ಬಕ್ಕೆ ಮಾಡಿದ ಕಿಚಡಿಯನ್ನೇ ಆ ದಿನ ಎತ್ತುಗಳಿಗೆ ತಿನ್ನಿಸಲಾಗುತ್ತದೆ. ಹಬ್ಬದಡುಗೆಯನ್ನು ಎತ್ತಿಗೂ ತಿನ್ನಿಸುವ ಮೂಲಕ ಎತ್ತನ್ನು ಮನೆ ಮಕ್ಕಳಂತೆ ನೋಡಿಕೊಳ್ಳುವ ಆಶಯ ವ್ಯಕ್ತವಾಗುತ್ತದೆ.ಎತ್ತು, ದನ, ಕರು, ಹಸುಗಳಿಗೆ ಕಾಟ ಕೊಡುವ ಪ್ರಾಣಿಗಳನ್ನು ಹಿಡಿದು ಬೆದರಿಸಿ ಓಡಿಸುವ ಆಚರಣೆಗಳಿವೆ. ಇದು ಕಾಡುಪ್ರಾಣಿಗಳು ಜಾನುವಾರುಗಳ ಮೇಲೆ ಕಣ್ಣು ಹಾಕಬಾರದೆಂಬ ಬೆದರಿಕೆ ಹುಟ್ಟಿಸುವ ತೆರನದ್ದು. ಕರ್ನಾಟಕದಲ್ಲಿಯೇ ವಿಶಿಷ್ಠವಾದ ಆಚರಣೆಯೊಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕದಬಳ್ಳಿಯಲ್ಲಿತ್ತು. (ಕದಂಬರ ದೊರೆ ಈ ಊರಿಗೆ ಬಂದದ್ದರ ಕಾರಣ ಕದಂಬಳ್ಳಿ ಎಂಬ ಹೆಸರಿತ್ತು ಎಂದು ಕ.ರಾ.ಕೃ. ಹೇಳುತ್ತಾರೆ).ಈ ಹಳ್ಳಿಯಲ್ಲಿ ಊರಿನವರು ಬೇಟೆಗೆ ಹೋಗಿ ಜೀವಂತ ನರಿಗಳನ್ನು ಹಿಡಿದು ತಂದು, ಅವುಗಳಿಗೆ ಪಟಾಕಿ ಹಚ್ಚಿ ಕಾಡಿಗೆ ಓಡಿಸುತ್ತಿದ್ದರು. ಈಚೆಗೆ ಮೂರ‌್ನಾಲ್ಕು ವರ್ಷದಿಂದ ಪ್ರಾಣಿ ದಯಾ ಸಂಘದವರ ದೂರಿನ ಮೇರೆಗೆ, ಈ ಆಚರಣೆಯನ್ನು ಹೈಕೋರ್ಟ್ ನಿಷೇಧಿಸಿದೆ. ಸಂಕ್ರಮಣದಲ್ಲೆಗ ಅಲ್ಲಿ ಪೊಲೀಸರ ಕಾವಲು.ಸಂಕ್ರಮಣವು ಕರ್ನಾಟಕದ ಆಹಾರ ವೈವಿಧ್ಯಗಳನ್ನು ಅದರೆಲ್ಲಾ ರುಚಿಗಳೊಂದಿಗೆ ಒಟ್ಟಿಗೆ ತರುತ್ತದೆ. ಆ ವರ್ಷ ಬೆಳೆದ ಬೆಳೆಗಳ ವೈವಿಧ್ಯಗಳನ್ನೆಲ್ಲಾ ಬಳಸಿಕೊಳ್ಳುವಷ್ಟು ವಿಭಿನ್ನವಾದ ಅಡುಗೆ ಮಾಡಲಾಗುತ್ತದೆ.ಅವರೆ ಕಾಳಿನ ಕಿಚಡಿ, ಗೆಣಸಿನ ಕಡುಬು, ಗೋಧಿ ಪಾಯಸ, ಉತ್ತರ ಕರ್ನಾಟಕದ ಭಾಗದಲ್ಲಿ ಎಳ್ಳಚ್ಚಿದ ಸಜ್ಜೆ, ಜೋಳದ ರೊಟ್ಟಿ, ಎಣ್ಣೆ ಬದನೆಕಾಯಿ, ಕಲಬೆರಕೆ ಸೊಪ್ಪು ಸಾರು, ಹಾಗಲಕಾಯಿ ಪಲ್ಯ, ಉಪ್ಪಿನಕಾಯಿಗಳು, ಮೊಸರು ಬಾನ, ಗುರೆಳ್ಳು ಚೆಟ್ನಿ, ಸೌತೆ, ಮೂಲಂಗಿ, ಗಜ್ಜರಿಯ ಪಚಡಿ, ಮೆಂತೆಸೊಪ್ಪು ಈರುಳ್ಳಿಯ ಕಲಬೆರಕೆ, ತರಕಾರಿಗಳನ್ನು ಹಾಕಿ ಮಾಡುವ ಬರ್ತ, ಕುಂಬಳಕಾಯಿ ಬರ್ತ, ಕೆಂಪು ಮೆಣಸಿನಕಾಯಿ ಚಟ್ನಿ- ಹೀಗೆ ಹೇಳುತ್ತಾ ಹೋದರೆ ಬಾಯಿಯಲ್ಲಿ ನೀರೂರುತ್ತದೆ. ಅಡುಗೆಯನ್ನು ಬುತ್ತಿ ಕಟ್ಟಿಕೊಂಡು ಹೊಳೆ ದಡಕ್ಕೋ, ನದಿ ತಟಕ್ಕೋ ಹೋಗಿ ಊಟ ಮಾಡುವುದೂ ಸಹ ರುಚಿಯನ್ನು ಹೆಚ್ಚಿಸುತ್ತದೆ.ಮಾಗಡಿ ತಾಲೂಕಿನ ಭಾಗದಲ್ಲಿರುವ ಇಲ್ಲಿಗ ಸಮುದಾಯವು ಸಂಕ್ರಾಂತಿಯನ್ನು ಸಂಕುರಾತಿ ಎನ್ನುತ್ತಾರೆ. ಹಸಿ ಮಣ್ಣಿನಿಂದ ಸಂಕುರಾತಿ ಅಮ್ಮನ ಕೋಟೆ ಕಟ್ಟಿ, ನಾಲ್ಕು ಆರತಿ ಮಾಡಿ ಆರತಿಗೊಂದರಂತೆ ನಾಲ್ಕು ಕೋಳಿ ಬಲಿ ಕೊಟ್ಟು, ಹಸುವಿನ ಕೆಚ್ಚಲಿನಿಂದ ಉಣ್ಣೆ ತೆಗೆದು ಅನ್ನಕ್ಕೆ ಹಾಕಿ ಬೇಯಿಸುತ್ತಾರೆ. ಇದನ್ನು `ಉನ್ನಿ ಅನ್ನ~ ಎನ್ನುತ್ತಾರೆ.ಈ ಅನ್ನವನ್ನು ದನದ ಹಿಂಡಿನ ಮೇಲೆ ಚೆಲುತ್ಲ್ತಾರೆ. ತುಮಕೂರು ಮುಂತಾದ ಕಡೆ ಊರ ಹೊರಗೆ ಜೇಡಿ ಮಣ್ಣಿನಿಂದ ಪಿರಮಿಡ್ಡಿನಾಕಾರದಲ್ಲಿ ಗುಡಿ ಕಟ್ಟುತ್ತಾರೆ. ಅದನ್ನು ಕಾಟುಮ್ ರಾಯ್, ಕಾಟ್ ಮೆಟ್ರಾಯ್, ಸಂಕ್ರಾತೆಮ್ಮಾ ಅಂತೆಲ್ಲಾ ಕರೆಯುತ್ತಾರೆ. ಅದನ್ನು ಕಾರೆಗಿಡದ ರೆಂಬೆಗೆ ಸಿಕ್ಕಿಸಿ, ಉಗುನಿ ಹೂ ಮುಡಿಸಿ ಸಿಂಗರಿಸಿ ದನಗಳನ್ನು ಪೂಜಿಸುತ್ತಾರೆ. ಇವೆಲ್ಲಾ ದನಗಾರ ಸಂಸ್ಕೃತಿಯ ನೆನಪುಗಳನ್ನು ತರುತ್ತವೆ.ಸೂರ್ಯನು ಎಕ್ಕೆ ಗಿಡದಲ್ಲಿ ನೆಲೆಸಿದ್ದಾನೆಂಬ ನಂಬಿಕೆಯ ಕಾರಣ, ಕೆಲವೆಡೆ ಸಂಕ್ರಮಣಕ್ಕೆ ಎಕ್ಕೆ ಗಿಡದ ಎಲೆಗಳನ್ನು ತಲೆ ಮೇಲಿಟ್ಟುಕೊಂಡು ಸ್ನಾನ ಮಾಡುತ್ತಾರೆ. ಈ ಹಬ್ಬದಲ್ಲಿ ಕೆಲವೆಡೆ ಪ್ರಸಿದ್ಧ ಗೋವಿನ ಹಾಡು ಹೇಳುವ ಪರಂಪರೆ ಇದೆ.ಉತ್ತರ ಭಾರತದಿಂದ ಬಂದ ಈ ಆಚರಣೆ, ಹುಲಿ ಪುಣ್ಯಕೋಟಿ ಹಸುವನ್ನು ತಿನ್ನಲು ನಿರಾಕರಿಸಿ, ಬೆಟ್ಟದ ಮೇಲಿಂದ ಹಾರಿದ ದಿನದ ನೆನಪನ್ನು ತರುತ್ತದೆ. ಎಳ್ಳನ್ನು ಶನಿದೇವರೆಂದು ಭಾವಿಸುವುದೂ ಇದೆ. ದೇವರಿಗೆ ಎಳ್ಳಿನ ದೀಪ ಹಚ್ಚಿದರೆ ಶನಿ ದೂರಾಗಿ ನಿರಾಳವಾಗುವ ನಂಬಿಕೆಯೂ ಕೆಲ ಕಡೆ ಇದೆ.ನಂಬಿಕೆಗಳು ನೂರಾರು!

ಆಂಧ್ರಕ್ಕೆ ಹೊಂದಿಕೊಂಡ ಹಳ್ಳಿಗಳಲ್ಲಿ ರಾಮನು ರಾವಣನನ್ನು ಕೊಂದು ಸೀತೆಯನ್ನು ಪಡೆದ ದಿನವ ಸಂಕ್ರಾಂತಿ ಎನ್ನುವ ನಂಬಿಕೆಯಿದೆ. ಗತಿಸಿದ ಹಿರಿಯರು ಮನೆಗೆ ಮರಳುತ್ತಾರೆಂಬ ವಾಡಿಕೆಯೂ ಇದೆ. ಕೊಡಗಿನ ಮೇರರ ಸಮುದಾಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಕಾವೇರಿ ಸಂಕ್ರಮಣ ಮಾಡುವುದೂ ಇದೆ.ಉತ್ತರ ಕರ್ನಾಟಕದಲ್ಲಿ ಇದು ಸಸ್ಯಾಹಾರಿ ಹಬ್ಬವಾದರೆ, ದಕ್ಷಿಣ ಕರ್ನಾಟಕದಲ್ಲಿ ಸಂಕ್ರಮಣ ಮಾಂಸಾಹಾರಿ ಹಬ್ಬ. ಚಾಮರಾಜ ನಗರ ಮುಂತಾದ ಕಡೆ ಸೇಲಂ ಕೊಯಮತ್ತೂರು ಭಾಗದ ಪ್ರಭಾವವಿದ್ದರೆ, ಬಾಗೇಪಲ್ಲಿ ಶಿರುಗುಪ್ಪ ಮುಂತಾದ ಕಡೆ ಆಂಧ್ರದ ಗಡಿ ಜಿಲ್ಲೆಗಳ ಪ್ರಭಾವವಿದೆ.ಚಾಮರಾಜ ನಗರದಲ್ಲಿ ಮಕ್ಕಳನ್ನು ಕೂರಿಸಿ ಎಳ್ಳೆರೆಯುವ ಆಚರಣೆ ಇದೆ. ಇದರಲ್ಲಿ ಹಸಿ ಉಪ್ಪುಕಡಲೆ, ಎಲಚಿ ಹಣ್ಣು (ಬೋರೆಹಣ್ಣು, ಸಂಕ್ರಾಂತಿ ಗಿಡ ಎಂತಲೂ ಕರೆಯುತ್ತಾರೆ), ನಾಣ್ಯಗಳನ್ನು ಬೆರೆಸಿ ತಲೆ ಮೇಲಿಂದ ಎರೆಯುತ್ತಾರೆ.ನದಿ ದಡಗಳಿಗೆ, ಹೊಳೆ ದಂಡೆಗಳಿಗೆ, ಹಳ್ಳದ ಬದುವುಗಳಿಗೆ ಈ ಹಬ್ಬ ಜನರನ್ನು ಕರೆತರುತ್ತದೆ. ಎಳ್ಳೆಣ್ಣೆ ಹಚ್ಚಿ ಜನ ನೀರಿಗಿಳಿದು ಸ್ನಾನ ಮಾಡಿ ಸೂರ್ಯ ನಮಸ್ಕಾರ ಮಾಡುತ್ತಾರೆ.ಇದಕ್ಕೆ `ಸಂಕ್ರಾಂತಿಯ ಕರಿ ಕಳೆಯುದು~ ಎನ್ನುವ ಹೆಸರಿದೆ. ಹೀಗೆ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡದಿದ್ದರೆ ಸಂಕ್ರಾಮಪ್ಪ ದೇವರು ಬಂದು ಮೈ ಮೂಸಿ ನೋಡಿ ಶಾಪ ಕೊಡುತ್ತಾನೆಂಬ ನಂಬಿಕೆ ಸಿರುಗುಪ್ಪ ಭಾಗದಲ್ಲಿದೆ.ಉತ್ತರ ಕನ್ನಡದ ಕೆಲವೆಡೆ ಹುಲುಸಾಗಿ ಬೆಳೆ ಬಂದ ಗದ್ದೆಗೆ ದೃಷ್ಟಿಯಾಗದಿರಲೆಂದು ಸಂಕ್ರಮಣದ ಸಂದರ್ಭದಲ್ಲಿ ಬೆಚ್ಚನ್ನು ನಿಲ್ಲಿಸುವುದಿದೆ. ಇದನ್ನು `ಬೆಚನ್ ಸಂಕ್ರಾಂತಿ~ ಎನ್ನುತ್ತಾರೆ . ಕೊಡಗಿನ ಅಂಚಿನ ಭಾಗದ ಕೆಲವೆಡೆ ಎತ್ತುಗಳಿಗೆ ನೊಗ ಕಟ್ಟಿ ಬೇಸಾಯ ಆರಂಭಿಸುವ ಅನುಕರಣೆ ಮಾಡುವಿಕೆಯೂ ಇದೆ. ಇದನ್ನವರು `ಬಿಸು ಸಂಕ್ರಾಂತಿ~ ಎನ್ನುತ್ತಾರೆ. ಸಂಕ್ರಾಂತಿ ಮೂಲತಃ ಸೂರ್ಯನ ಆರಾಧನೆಯ ಹಬ್ಬವಾದರೂ, ಸೂರ್ಯನನ್ನು ಹೆಣ್ಣು ದೇವತೆಯೆಂದು ಆರಾಧಿಸುವಿಕೆ ಕೆಲವೆಡೆ ಕಾಣುತ್ತದೆ. ಸಂಕ್ರಾಂತಿಯನ್ನೇ ಸಂಕ್ರಾತಮ್ಮನ ಪೂಜೆ, ಸಂಕ್ರಾತಮ್ಮನ ತಿದ್ದುದು ಅಂತೆಲ್ಲಾ ಮಂಡ್ಯ, ತುಮಕೂರು ಭಾಗದಲ್ಲಿ ಕರೆಯುತ್ತಾರೆ. ಗಂಗೆಯಲ್ಲಿ ಮೀಯುವುದೂ ಕೂಡ ಇದರ ಪ್ರಭಾವವೇ ಇರಬೇಕು. ಸಂಕ್ರಾಂತಿಗೆ ಕೆಲವೆಡೆಗಳಲ್ಲಿ ಹೆಣ್ಣುದೇವಿಯ ಜಾತ್ರೆಗಳೂ ನಡೆಯುತ್ತವೆ.ಈಗ ಗ್ರಾಮೀಣ ಪ್ರದೇಶದಲ್ಲಿ ಸಾಗುವಳಿ ಭೂಮಿಯ ಪ್ರಮಾಣ ಕಡಿಮೆಯಾಗುತ್ತಿದೆ. ತುಂಡು ಹಿಡುವಳಿಗಳು ಹೆಚ್ಚಾಗುತ್ತಿವೆ. ಈ ಕಾರಣಕ್ಕೆ ಎತ್ತುಗಳನ್ನು ಹೊಂದುವಿಕೆಯ ಪ್ರಮಾಣದಲ್ಲೂ ಇಳಿಮುಖವಾಗುತ್ತಿದೆ. ಬೆಳೆಗಳಲ್ಲಿನ ವೈವಿಧ್ಯತೆಗಳು ನಾಶವಾಗಿ ಏಕ ಮಾದರಿಯ ವಾಣಿಜ್ಯ ಬೆಳೆಗಳು ಹೆಚ್ಚಿವೆ.ಹಾಗಾಗಿ ಹಸು ಕರು ಎತ್ತುಗಳಿಗೆ ಬೇಕಾಗುವ ಮೇವಿನ ಬೆಳೆಗಳು ಇಲ್ಲವಾಗುತ್ತಿವೆ. ದನ ಕರುಗಳು ತಿರುಗಾಡಿ ಮೇಯುವ ಗೋಮಾಳಗಳು ನಿವೇಶನಗಳಾಗುತ್ತಿವೆ. ಇದೆಲ್ಲ ಬದಲಾವಣೆ ಸಂಕ್ರಾಂತಿ ಹಬ್ಬದ ಆಚರಣೆಯನ್ನೂ ಸಹಜವಾಗಿ ಬದಲುಗೊಳಿಸಿದೆ.ಮನುಷ್ಯರೇ ಬದಲಾಗುವಾಗ ಆಚರಣೆಗಳು ಬದಲಾಗದಿರಲು ಸಾಧ್ಯವೇ?

 

Post Comments (+)