ಹಲವು ಸಾಧ್ಯತೆಗಳತ್ತ ರಾಜ್ಯ ಸರ್ಕಾರದ ಚಿತ್ತ

7

ಹಲವು ಸಾಧ್ಯತೆಗಳತ್ತ ರಾಜ್ಯ ಸರ್ಕಾರದ ಚಿತ್ತ

Published:
Updated:

ಬೆಂಗಳೂರು: ಬಹು ನಿರೀಕ್ಷೆಯ `ನಮ್ಮ ಮೆಟ್ರೊ~ ಎರಡನೇ ಹಂತದ ಯೋಜನೆ ಜಾರಿ ಸಂಬಂಧ ಮಂಗಳವಾರ ರಾಜ್ಯ ಸರ್ಕಾರ ಆದೇಶವನ್ನು (ಜಿಒ) ಹೊರಡಿಸಿದ್ದು, ಯೋಜನೆಗೆ ಬೇಕಾಗುವ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಹಲವು ಸಾಧ್ಯತೆಗಳತ್ತ ಮುಖ ಮಾಡಿದೆ. ತನ್ನ ಪಾಲಿನ ಹಣಕಾಸಿನಲ್ಲಿ ಅರ್ಧದಷ್ಟನ್ನು ಸಾಲಗಳಿಂದ ಹಾಗೂ ಇನ್ನರ್ಧದಷ್ಟನ್ನು ಹೊಸ ಮೂಲಗಳಿಂದ ಹೊಂದಿಸಲು ಸರ್ಕಾರ ಚಿಂತನೆ ನಡೆಸಿದೆ.ನಗರಾಭಿವೃದ್ಧಿ ಇಲಾಖೆಯು ಹೊರಡಿಸಿರುವ ಆದೇಶದಲ್ಲಿ ಉದ್ದೇಶಿತ ಯೋಜನೆಗೆ ವಿವಿಧ ಮೂಲಗಳಿಂದ ಆರ್ಥಿಕ ಸಂಪನ್ಮೂಲ ಸಂಗ್ರಹಿಸುವ ಸೂಚನೆ ನೀಡಿದೆ; ಮೆಟ್ರೊ ವ್ಯವಸ್ಥೆಯ ಗರಿಷ್ಠ ಪ್ರಯೋಜನ ಪಡೆಯುವ ರಾಜಧಾನಿಯ ನಿವಾಸಿಗಳು ತೆರಿಗೆ ರೂಪದಲ್ಲಿ ಯೋಜನೆಯ ವೆಚ್ಚವನ್ನು ಭರಿಸಬೇಕು ಎಂಬುದನ್ನು ಪ್ರತಿಪಾದಿಸಿದೆ.ದಟ್ಟಣೆ ಅವಧಿಯಲ್ಲಿ ನಿರ್ದಿಷ್ಟ ಮಾರ್ಗದಲ್ಲಿ, ನಿರ್ದಿಷ್ಟ ನಿಲ್ದಾಣಗಳ ನಡುವೆ ಹೆಚ್ಚುವರಿ ಪ್ರಯಾಣ ದರ ವಿಧಿಸಬಹುದಾದ ವಿಭಿನ್ನ ಪ್ರಯಾಣ ದರ ನೀತಿ ಅಳವಡಿಸಿಕೊಳ್ಳುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಸೂಚಿಸಲಾಗಿದೆ.ಮೆಟ್ರೊ ಸಾರಿಗೆ ವ್ಯವಸ್ಥೆಯು ಪರಿಸರ ಸ್ನೇಹಿ ಆಗಿರುವ ಹಿನ್ನೆಲೆಯಲ್ಲಿ ಯೋಜನೆಯ `ಕಾರ್ಬನ್ ಕ್ರೆಡಿಟ್~ ಪಡೆದುಕೊಳ್ಳುವ ಕಡೆಗೆ ಗಮನ ಹರಿಸುವಂತೆ ನಿಗಮಕ್ಕೆ ನಿರ್ದೇಶನ ನೀಡಲಾಗಿದೆ.ಸರ್ಕಾರವು ಆರ್ಥಿಕ ಸಂಪನ್ಮೂಲವನ್ನು ನಿರೀಕ್ಷಿಸಿರುವ ಇತರ ಮೂಲಗಳ ವಿವರ ಇಲ್ಲಿದೆ;

ನಗರದ ಯಾವುದೇ ಭಾಗದಲ್ಲಿ ಹೊಸದಾಗಿ ರಚನೆಯಾಗುವ ಬಡಾವಣೆಗಳು ಮತ್ತು ಅಭಿವೃದ್ಧಿಪಡಿಸಲಾಗುವ ಆಸ್ತಿಗಳ ಮೇಲೆ ಶೇಕಡಾ 5ರಷ್ಟು ಸೆಸ್ ವಿಧಿಸಲಾಗುವುದು. ಕರ್ನಾಟಕ ನಗರ ಯೋಜನಾ ಕಾಯ್ದೆ ಸೆಕ್ಷನ್ 18ಎ ಪ್ರಕಾರ ಈ ಸೆಸ್ ವಸೂಲಿ ಮಾಡಲಾಗುವುದು.  ಈ ಸೆಸ್‌ನಿಂದ ಸಂಗ್ರಹವಾಗುವ ಹಣವನ್ನು ನಿಗಮ, ಜಲ ಮಂಡಳಿ, ಬಿಡಿಎ ಕ್ರಮವಾಗಿ 65, 20, 15ರ ಶೇಕಡಾವಾರು ಪ್ರಮಾಣದಲ್ಲಿ ಹಂಚಿಕೊಳ್ಳಲಿವೆ.ಮೆಟ್ರೊ ಮೊದಲ ಮತ್ತು ಎರಡನೇ ಹಂತದ ಮಾರ್ಗದ ಅಕ್ಕಪಕ್ಕದ 500 ಮೀಟರ್ ಆಸುಪಾಸಿನ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಲ್ಲಿ ಕಟ್ಟಡ ಪ್ರದೇಶ ಅನುಪಾತವನ್ನು (ಎಫ್‌ಎಆರ್) 4ಕ್ಕೆ ಹೆಚ್ಚಿಸುವ ಮೂಲಕ ಅದರಿಂದ ಹೆಚ್ಚುವರಿ ಸೆಸ್ ಸಂಗ್ರಹಿಸಲಾಗುವುದು.ವಸತಿ ಕಟ್ಟಡಗಳಿಂದ ಶೇ 10 ಹಾಗೂ ವಾಣಿಜ್ಯ ಕಟ್ಟಡಗಳಿಂದ ಶೇ 20ರಷ್ಟು ಸೆಸ್ ಸಂಗ್ರಹಿಸಿ, ಅದರಿಂದ ಬರುವ ಹಣವನ್ನು ನಿಗಮ, ಪಾಲಿಕೆ, ಜಲಮಂಡಳಿ ಮತ್ತು ಬಿಡಿಎಗಳಿಗೆ ಕ್ರಮವಾಗಿ 60, 20, 10 ಮತ್ತು 10ರ ಶೇಕಡಾವಾರು ಪ್ರಮಾಣದಲ್ಲಿ ಹಂಚಿಕೆ ಮಾಡಲಾಗುವುದು. ಭೂ ಸ್ವಾಧೀನಕ್ಕೆ ಪರಿಹಾರವಾಗಿ ಅಭಿವೃದ್ಧಿ ಹಕ್ಕು ಹಸ್ತಾಂತರ (ಟಿಡಿಆರ್) ಪ್ರಮಾಣ ಪತ್ರಗಳನ್ನು ನೀಡುವ ಜವಾಬ್ದಾರಿಯನ್ನು ನಿಗಮಕ್ಕೆ ವಹಿಸಿಕೊಡಲಾಗುವುದು. ಈಗಿನ ಟಿಡಿಆರ್ ನೀತಿಯನ್ನು ಮತ್ತಷ್ಟು ಮಾರುಕಟ್ಟೆ ಸ್ನೇಹಿಯಾಗಿರುವಂತೆ ಸುಧಾರಣೆ ತರಲಾಗುವುದು.ಭಾಗಶಃ ಖಾಸಗೀಕರಣ: ನಾಗವಾರದಿಂದ ಗೊಟ್ಟಿಗೆರೆವರೆಗೆ ಹಾಗೂ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಎರಡು ಹೊಸ ಮಾರ್ಗಗಳಲ್ಲಿ ಹಳಿ ಅಳವಡಿಕೆ, ಸಿಗ್ನಲಿಂಗ್ ಮತ್ತು ಟೆಲಿಕಮ್ಯನಿಕೇಷನ್ ಸಿಸ್ಟಮ್ಸ, ರೈಲು ಗಾಡಿಗಳು, ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಖಾಸಗಿ ಸಹಭಾಗಿತ್ವದ ಸಾಧ್ಯತೆಗಳನ್ನು ಪರಿಶೀಲಿಸಲು ನಿಗಮಕ್ಕೆ ಮುಕ್ತ ಅವಕಾಶ ಕೊಡಲಾಗಿದೆ.ಎರಡನೇ ಹಂತದ ಯೋಜನೆಗೆ ರಾಜ್ಯ ಸಚಿವ ಸಂಪುಟ ಈಗಾಗಲೇ ಮಂಜೂರಾತಿ ನೀಡಿದ್ದು, ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯಲಾಗುತ್ತಿದೆ. ಯೋಜನೆಗೆ ಕೇಂದ್ರದಿಂದ ಅನುದಾನವಲ್ಲದೇ ದೇಶಿಯ ಮತ್ತು ಅಂತರರಾಷ್ಟ್ರೀಯ ಆರ್ಥಿಕ ಸಂಸ್ಥೆಗಳಿಂದ ದೀರ್ಘಾವಧಿ ಸಾಲ ಪಡೆಯಲು ಉದ್ದೇಶಿಸಲಾಗಿದೆ.ಪೂರ್ವಸಿದ್ಧತಾ ಕೆಲಸ ಆರಂಭಿಸಲು ಅನುಮತಿ

ಮೆಟ್ರೊ ಎರಡನೇ ಹಂತದ ಯೋಜನೆ ಮತ್ತು ವಿನ್ಯಾಸ, ಭೂಸ್ವಾಧೀನಕ್ಕೆ ನಗರ ಯೋಜನಾ ವರದಿ ತಯಾರಿ, ನೀರು ಪೂರೈಕೆ ಕೊಳವೆ ಮತ್ತಿತರ ನಾಗರಿಕ ಸೇವೆಗಳ ಸ್ಥಳಾಂತರ ಮತ್ತು ಭೂ- ತಾಂತ್ರಿಕ ಅಂಶಗಳ ಅಧ್ಯಯನ ಮೊದಲಾದ ಪೂರ್ವಸಿದ್ಧತಾ ಕೆಲಸಗಳನ್ನು ಪ್ರಾರಂಭಿಸಲು `ಬೆಂಗಳೂರು ಮೆಟ್ರೊ ರೈಲು ನಿಗಮ~ಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಸಿದ್ಧತಾ ಕಾರ್ಯಗಳಿಗೆ ಬೇಕಾಗುವ ಹಣವನ್ನು ರಾಜ್ಯ ಸರ್ಕಾರ ಒದಗಿಸಲಿದೆ ಎಂದು ಮಂಗಳವಾರ ಹೊರಡಿಸಿರುವ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.2018ರ ವೇಳೆಗೆ 15 ಲಕ್ಷ ಪ್ರಯಾಣಿಕರು!

ಮೆಟ್ರೊದ ಮೊದಲನೇ ಹಂತದ ಯೋಜನೆಯನ್ನು 2014ರ ವೇಳೆಗೆ ಹಾಗೂ ಎರಡನೇ ಹಂತವನ್ನು 2018ರ ವೇಳೆಗೆ ಪೂರ್ಣಗೊಳಿಸುವ ಗುರಿ ಇದ್ದು, ಎರಡೂ ಯೋಜನೆಗಳು ಸಂಪೂರ್ಣವಾದ ಮೇಲೆ ನಿತ್ಯ 14.80 ಲಕ್ಷ ಜನರು ಮೆಟ್ರೊ ರೈಲಿನಲ್ಲಿ ಸಂಚರಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry