ಹಲವೆಡೆ ರಸ್ತೆ ತಡೆ, ಸಂಚಾರ ಅಸ್ತವ್ಯಸ್ತ

7
ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹ: ಮುಂದುವರಿದ ಹೋರಾಟ

ಹಲವೆಡೆ ರಸ್ತೆ ತಡೆ, ಸಂಚಾರ ಅಸ್ತವ್ಯಸ್ತ

Published:
Updated:

ಮಂಡ್ಯ: ತಮಿಳುನಾಡಿಗೆ ನೀರು ಬಿಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಕೆಲಕಾಲ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಲಾಯಿತು. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಗುರುವಾರ ಧರಣಿಯನ್ನೂ ಮಾಡಲಾಯಿತು. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ನೀರು ಬಿಡಬಾರದು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.ಹಲ್ಲೆ: ರಸ್ತೆ ತಡೆ ನಡೆಸುತ್ತಿರುವುದನ್ನು ಪ್ರಶ್ನಿಸಿದ ಪ್ರಯಾಣಿಕರೊಬ್ಬರ ಮೇಲೆ ಕೆಲ ಪ್ರತಿಭಟನಾಕಾರರು ಹಲ್ಲೆ ನಡೆಸಿದ ಘಟನೆ ನಡೆಯಿತು.ಕೆಆರ್‌ಎಸ್ ಮುತ್ತಿಗೆ ಮುಂದಕ್ಕೆ: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸುಪ್ರೀಂಕೋರ್ಟ್ ಮುಂದೆ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಲಾಗುವುದು. ಅಲ್ಲಿಯವರೆಗೆ ನೀರು ಬಿಡುವುದಿಲ್ಲ ಎಂದು ಘೋಷಿಸಿರುವುದರಿಂದ ಕೆಆರ್‌ಎಸ್ ಮುತ್ತಿಗೆ ಹಾಕುವುದುನ್ನು ಮುಂದಕ್ಕೆ ಹಾಕಲಾಗಿದೆ ಎಂದು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಜಿ. ಮಾದೇಗೌಡ ತಿಳಿಸಿದರು.ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಸಮಿತಿ ಕಾರ್ಯದರ್ಶಿ ಎನ್. ರಾಜು, ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ವಿಜಯಾನಂದ ಶಿವಾನಂದ, ಸಿ.ಎಂ. ದ್ಯಾವಪ್ಪ, ಬಿ. ಶಿವಲಿಂಗಯ್ಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ. ಮಹೇಶ್, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಎಂ.ಎಸ್. ಚಿದಂಬರ್, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಶಂಕರೇಗೌಡ, ಚಂದ್ರು, ವಕೀಲರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಹರೀಶ್, ಹನಕೆರೆ ಶಶಿ ಮತ್ತಿತರರು ಪಾಲ್ಗೊಂಡಿದ್ದರು.ಪಾಂಡವಪುರ ವರದಿ:ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ವಿರೋಧಿಸಿ ತಾಲ್ಲೂಕು ಒಕ್ಕಲಿಗರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಐದು ದೀಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಕೋರ್ಟ್ ತೀರ್ಪು ಅವೈಜ್ಞಾನಿಕ. ರಾಜ್ಯ ಸರ್ಕಾರ ನೀರು ಬಿಡದಿರುವ ನಿರ್ಧಾರಕ್ಕೆ ಬರಬೇಕು ಎಂದು ಒತ್ತಾಯಿಸಿದರು.ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಖಂಡನಾ ನಿರ್ಣಯ ಕೈಗೊಳ್ಳಬೇಕು. ಪಕ್ಷಾತೀತವಾಗಿ ಕಾವೇರಿ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ತೀರ್ಪು ಪುನರ್ ಪರಿಶೀಲನೆಗೆ ಕೋರ್ಟ್‌ನಲ್ಲಿ ಮನವಿ ಮಾಡಬೇಕು ಎಂದರು. ರಸ್ತೆ ತಡೆಯಿಂದ ಶ್ರೀರಂಗಪಟ್ಟಣ- ಬೀದರ್ ರಾಜ್ಯ ಹೆದ್ದಾರಿಯಲ್ಲಿ ರಸೆ ಸಂಚಾರ ಅಸ್ತವ್ಯಸ್ತಗೊಂಡಿತು. ಮುಖಂಡರಾದ ಗಿರೀಶ್, ಹಾರೋಹಳ್ಳಿ ನಾಗೇಗೌಡ, ರಮೇಶ್, ಚಿಕ್ಕಾಡೆ ಮಹೇಶ್, ಹರವು ವೆಂಕಟೇಶ್, ಬೆಟ್ಟಹಳ್ಳಿ ಕೃಷ್ಣೇಗೌಡ, ಪ್ರಭಾಕರ, ಸೀತಾರಾಮು, ಚಂದ್ರುಶೇಖರ್ ಇದ್ದರು.ಹೋರಾಟ ಬೆಂಬಲಿಸಿ: `ಕಾವೇರಿ ಕಣಿವೆ ಭಾಗದ ರೈತರ ಕೃಷಿ, ಕುಡಿಯುವ ನೀರಿಗೆ ಕಷ್ಟವಾಗಿರುವ ಸನ್ನಿವೇಶದಲ್ಲಿ ವಸ್ತುಸ್ಥಿತಿ ಅರಿಯದೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ದುರಾದೃಷ್ಟಕರ' ಎಂದು ತಾಲ್ಲೂಕು ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಿ.ಅಣ್ಣೇಗೌಡ ಹೇಳಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಕಾವೇರಿ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಎಂ. ರಾಮಕೃಷ್ಣ, ಮುನ್‌ಮುಲ್ ನಿರ್ದೇಶಕ ಎಲ್.ಸಿ.ಮಂಜುನಾಥ್, ಕರವೇ ಅಧ್ಯಕ್ಷ ಗೋವಿಂದರಾಜು ಉಪಸ್ಥಿತರಿದ್ದರು.ಮದ್ದೂರು ವರದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡದಂತೆ ಆಗ್ರಹಿಸಿ ಪಟ್ಟಣದಲ್ಲಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಗುರುವಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿ ದಹಿಸಿ ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು.ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದ ಅವರು, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಮೊಳಗಿಸಿದರು.ಸಂಘಟನೆ ತಾಲ್ಲೂಕು ಅಧ್ಯಕ್ಷ ಮೋಹಿತ್‌ಗೌಡ ಮಾತನಾಡಿ, ನಮ್ಮಲ್ಲಿಯೇ ನೀರಿನ ಲಭ್ಯತೆ ಕ್ಷೀಣಿಸಿದ್ದು, ಪ್ರತಿನಿತ್ಯ 10ಸಾವಿರ ಕ್ಯೂಸೆಕ್‌ನಂತೆ ಒಟ್ಟು 50ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ನ್ಯಾಯಾಲಯ ತೀರ್ಪು ನೀಡಿರುವುದು ರಾಜಕೀಯ ಪ್ರೇರಿತ ಎಂದರು.

ಸಂಘಟನೆ ಕಾರ್ಯದರ್ಶಿ ಸಂಪತ್‌ಕುಮಾರ್, ಸ್ವಾಮಿವಿವೇಕಾನಂದ ಕ್ರೀಡಾ ಸಂಸ್ಥೆ ಅಧ್ಯಕ್ಷ ಲಾರಾ ಪ್ರಸನ್ನ, ಜಯಂತಿಲಾಲ್ ಪಟೇಲ್,ಇನಾಯತ್, ಗೋವಿಂದ ಇತರರ ಪಾಲ್ಗೊಂಡಿದ್ದರು.ಆಕ್ರೋಶ: ತಮಿಳುನಾಡಿಗೆ ಕೆಆರ್‌ಎಸ್‌ನಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅವೈಜ್ಞಾನಿಕ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪು ರಾಜಕೀಯ ಪ್ರೇರಿತ ಹಾಗೂ ಏಕಪಕ್ಷೀಯವಾಗಿದೆ. ಈ ಆದೇಶಕ್ಕೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮನ್ನಣೆ ನೀಡಬಾರದು ಎಂದು ವಿನಂತಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಸಂದರ್ಶ, ಮುಖಂಡರಾದ ಡಾಬ ಮಹೇಶ್, ಶಿವರಾಂ, ಕೃಷ್ಣ ಇತರರು ಇದ್ದರು.ಶ್ರೀರಂಗಪಟ್ಟಣ ವರದಿ: ತಮಿಳುನಾಡಿಗೆ ಪ್ರತಿನಿತ್ಯ 10 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ವಕೀಲರು ಗುರುವಾರ ನ್ಯಾಯಾಲಯ ಕಲಾಪ ಬಹಿಷ್ಕರಿಸಿದರು.ಸಂಘದ ಕಚೇರಿಯಲ್ಲಿ ಅಧ್ಯಕ್ಷ ಚಂದಗಿರಿಕೊಪ್ಪಲು ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡರು. ರಾಜ್ಯದ ಜಲಾಶಗಳಲ್ಲಿ ನೀರಿನ ಕೊರತೆ ಇದೆ. ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳನ್ನು ಉಳಿಸಿಕೊಳ್ಳುವುದೇ ದುಸ್ತರವಾಗಿದೆ. ಫೆಬ್ರುವರಿ ತಿಂಗಳ ಹೊತ್ತಿಗೆ ಬೆಂಗಳೂರು, ಮೈಸೂರು, ಮಂಡ್ಯ ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಕಾವೇರಿ ಕಣಿವೆಯಲ್ಲಿನ ನೀರಿನ ಸ್ಥಿತಿಗತಿ ಕುಡಿತು ಸುಪ್ರೀಂ ಕೋರ್ಟ್‌ಗೆ ಸಮರ್ಪಕ ಮಾಹಿತಿ ಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕಾವೇರಿ ನ್ಯಾಯಮಂಡಳಿ ರಾಜ್ಯಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ.  ಹಾಗಾಗಿ ನ್ಯಾಯಮಂಡಳಿಯನ್ನು ಬದಿಗಿಟ್ಟು ಎರಡೂ ರಾಜ್ಯಗಳು ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಸಂಘದ ಕಾರ್ಯದರ್ಶಿ ಹಾಲಪ್ಪ, ಉಪಾಧ್ಯಕ್ಷ ಶಕ್ತಿಪ್ರಸಾದ್, ಬಿ,ನಿಂಗೇಗೌಡ, ಎನ್.ಕುಮಾರಸ್ವಾಮಿ, ಸತ್ಯನಾರಾಯಣ, ಶಿವರಾಜು, ಗಂಗರಾಜು, ಎ.ಟಿ.ಜಯಕುಮಾರ್ ಇತರರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry