ಹಲಸಿಗೆ ಹೊಸ ರೂಪ

7

ಹಲಸಿಗೆ ಹೊಸ ರೂಪ

Published:
Updated:
ಹಲಸಿಗೆ ಹೊಸ ರೂಪ

`ನಮ್ಮೂರ ಪ್ರತಿ ಮನೆಯಲ್ಲಿ ಹಲಸಿನ ಮರಗಳಿವೆ, ಯಥೇಚ್ಛ ಕಾಯಿಗಳಿವೆ. ಆದರೆ ಮರ ಏರಿ ಕೊಯ್ಯುವ ಸ್ಪೆಷಲಿಸ್ಟ್‌ಗಳಿಲ್ಲ. ಹಾಗಾಗಿ ಹಲಸಿನ ಕಾಯಿ ಮರದಲ್ಲೇ ಹಣ್ಣಾಗಿ, ಕೊಳೆತು ಬಿದ್ದು ಮಣ್ಣು ಸೇರುತ್ತದೆ.ಈ ಹಿನ್ನೆಲೆಯಲ್ಲಿ ಹಲಸಿನ ಕಾಯಿಯ ಸೊಳೆ (ತೊಳೆ) ತೆಗೆದು ಪ್ಲಾಸ್ಟಿಕ್ ಒಳಗಿಟ್ಟು ಒಂದು, ಎರಡು ಕಿಲೊ ಪ್ಯಾಕೆಟ್ ಮಾಡಿ ಪ್ರಾಯೋಗಿಕವಾಗಿ ಮಾರಾಟಕ್ಕಿಟ್ಟೆವು. ಒಂದೇ ದಿವಸದಲ್ಲಿ ಐವತ್ತು ಕಿಲೊ ಮಾರಾಟವಾಯಿತು~ ಎಂಬ ಹೊಸ ಸುದ್ದಿಯನ್ನು ನೀಡುತ್ತಾರೆ ಕೇರಳದ ಮೀಯಪದವಿನ ಕೃಷಿಕ ಡಾ. ಡಿ.ಸಿ.ಚೌಟ.ಹೆದ್ದಾರಿಯಿಂದ ಅನತಿ ದೂರದಲ್ಲಿದೆ ಮೀಯಪದವು ಹಳ್ಳಿ. ಹಿತ್ತಿಲಿನ ಮರದಲ್ಲಿ ಹಲಸು ಬಲಿತು ತೂಗಾಡುತ್ತಿದ್ದರೂ ಕೊಯ್ಯಲಾಗದ ಸ್ಥಿತಿ ಚೌಟರದು. ಅದರ ಸೊಳೆ ಬಿಡಿಸಿ ಕೊಟ್ಟರೆ ಕಾಸು ತೆತ್ತಾದರೂ ಒಯ್ಯುವ ಹಲಸು ಪ್ರಿಯರಿದ್ದಾರೆ.ಹೀಗಾಗಿ ಹಲಸಿನ ಹಣ್ಣಿನ ಸೊಳೆಯನ್ನು ಅಡಿಕೆ ಹಾಳೆಯ ಚಿಕ್ಕ ತಟ್ಟೆಯಲ್ಲಿ ಇಟ್ಟು ಅದಕ್ಕೆ  ಕ್ಲಿಂಗ್‌ಫಿಲಂ ಅಂಗಿ ತೊಡಿಸಿದರೆ ಮಾರಾಟವಾಗುತ್ತೋ ಎನ್ನುವ ಪ್ರಯತ್ನಕ್ಕೆ ಅವರು ಕೈಹಾಕಿದ್ದಾರೆ.ಹಲಸಿನ ಸಂಸ್ಕರಣೆಯೇ ಹಲಸಿನ ಬಳಕೆಗಿರುವ ಶಾಪ! ಅದನ್ನು ಬಿಡಿಸಿ, ಮೇಣದಿಂದ ಪಾರಾಗಿ, ಬೇಳೆಯಿಂದ ಬೇರ್ಪಡಿಸಿದ ಸೊಳೆ ಸಿಕ್ಕರೆ ನಮ್ಮ ಅಡುಗೆ ಮನೆಗಳು ಒಳ್ಳೊಳ್ಳೆಯ ಖಾದ್ಯಗಳಿಗೆ ಸಾಕ್ಷಿಯಾಗಬಹುದು. ಹಣ್ಣು ಸೊಳೆಗಳನ್ನು ಪ್ಲಾಸ್ಟಿಕ್ ಪ್ಯಾಕೆಟ್‌ನಲ್ಲಿ ಇಟ್ಟು ಕೊಟ್ಟರೆ ನಗರಗಳು ಯಾಕೆ, ಹಳ್ಳಿಗಳಲ್ಲೂ ಗ್ರಾಹಕರಿದ್ದಾರೆ! ಇನ್ನು ಅದನ್ನು ಕನಿಷ್ಠ ಸಂಸ್ಕರಣೆ (ಮಿನಿಮಲ್ ಪ್ರಾಸೆಸಿಂಗ್) ಮಾಡಿ ಅಡುಗೆಗೆ ಸಿದ್ಧವಾಗಿ ನೀಡಿದರೆ ಅಮ್ಮಂದಿರಿಗೆ ಎಷ್ಟೊಂದು ಖುಷಿಯಲ್ವಾ.ಕೇರಳದ ಪತ್ತನಾಂತಿಟ್ಟ ಕಾರ್ಡ್ ಕೃಷಿ ವಿಜ್ಞಾನ ಕೇಂದ್ರವು (ಕೆವಿಕೆ) ಇಂಥ ರೆಡಿ ಟು ಕುಕ್ ಉತ್ಪನ್ನವನ್ನು ಪ್ರಾಯೋಗಿಕವಾಗಿ ಮಾಡಿ ಗೆದ್ದಿದೆ. ತನ್ನ ಮಳಿಗೆಯಲ್ಲಿ ಮಾರಾಟಕ್ಕಿಟ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.ಎಳೆ ಹಲಸು, ಬಲಿತ ಹಲಸಿನ ಸೊಳೆ ಮತ್ತು ಹಲಸಿನ ಬೀಜಗಳನ್ನು ಅಡುಗೆಗೆ ಸಿದ್ಧ ರೂಪದಲ್ಲಿ ಕೆವಿಕೆ ತಯಾರಿಸುತ್ತಿದೆ. ಈ ಉತ್ಪನ್ನದ ತಾಳಿಕೆ ಒಂದು ದಿವಸ. ಫ್ರಿಜ್‌ನಲ್ಲಿ ಇಟ್ಟರೆ ಮೂರು ದಿವಸ. ತಾಳಿಕೆ ಕಡಿಮೆಯಾದರೂ ತೊಂದರೆಯಿಲ್ಲ. ರಾಸಾಯನಿಕ ಬಳಸದೇ ಇರುವ ಹಲಸಿನ ಉತ್ಪನ್ನ ಆರೋಗ್ಯಕ್ಕೆ ಉತ್ತಮ  ಎನ್ನುತ್ತಾರೆ ಹಲಸು ಆಂದೋಳನದ ರೂವಾರಿ ಶ್ರೀ ಪಡ್ರೆ.ಕೆವಿಕೆ ಉತ್ಪನ್ನಗಳನ್ನು ಆಯಾ ದಿನವೇ ಒಯ್ಯುವ ಗ್ರಾಹಕರಿದ್ದಾರೆ. ಪ್ಯಾಕಿಂಗ್ ತುಂಬ ಸರಳ. ಸದ್ಯಕ್ಕೆ ಥರ್ಮೋಕೋಲ್ ಟ್ರೇ ಮತ್ತು ಅದನ್ನು ಮುಚ್ಚಲು ಪಾರದರ್ಶಕ ಕ್ಲಿಂಗ್ ಫಿಲಂ. 250 ಗ್ರಾಂ ಎಳೆ ಹಲಸು ಮತ್ತು ಬೀಜದ ಪ್ಯಾಕೆಟ್‌ಗಳಿಗೆ ತಲಾ 20 ರೂಪಾಯಿ. ಬಲಿತ ಹಲಸಿನ ಅರ್ಧ ಕಿಲೊ ಪ್ಯಾಕ್‌ಗೆ ಕೂಡ 20 ರೂಪಾಯಿ.ಕೆವಿಕೆ ಈ ಉತ್ಪನ್ನ ತಯಾರಿಯ ವಿಧಾನವನ್ನು ಇನ್ನೂ ಸುಧಾರಿಸಿ ಮಾನದಂಡ ನಿಗದಿಪಡಿಸುವ ಉದ್ದೇಶ ಹೊಂದಿದೆ. ಇದೇನೇ ಇದ್ದರೂ ಅದು ಇದುವರೆಗೆ ಮಾಡಿದ ಕೆಲಸ ದೊಡ್ಡದು. ಹಲಸು ಬೆಳೆಯುವ ಪ್ರದೇಶಕ್ಕೆಲ್ಲಾ ಹೊಸ ಪಾಠ. ದೊಡ್ಡ ಯಂತ್ರ, ಎಕರೆಗಟ್ಟಲೆ ಜಾಗ, ಕೋಟಿಗಟ್ಟಲೆ ಬಂಡವಾಳ ಬೇಡ. ಸ್ಥಳೀಯವಾಗಿಯೇ ಮಾರಾಟವಾಗುವ ಅವಕಾಶ. ಜನಸಾಮಾನ್ಯರೂ ಕೂಡಾ ಖರೀದಿಸಿ ತಿನ್ನಬಹುದು. ಪತ್ತನಾಂತಿಟ್ಟದ ಕಾರ್ಡ್ ಕೆವಿಕೆ ಹಲಸಿನ ಮೌಲ್ಯವರ್ಧನೆಯಲ್ಲಿ ಗಣನೀಯ ಕೆಲಸ ಮಾಡಿದೆ.ನಗರ ಪ್ರದೇಶದಲ್ಲಿ ಬೆಳ್ಳಂಬೆಳಿಗ್ಗೆ ಮನೆಯೆದುರಿಗೆ ಬರುವ ತರಕಾರಿ ಗಾಡಿಗಳಲ್ಲಿ ಹಲಸಿನ ಅಡುಗೆಯ ಸಿದ್ಧ ಉತ್ಪನ್ನ ಸಿಕ್ಕರೆ, ರುಚಿ ಗೊತ್ತಿದ್ದ ಅಮ್ಮಂದಿರು ಖಂಡಿತಾ ಆಯ್ಕೆ ಮಾಡದೇ ಇರಲಾರರು. ವಿಷದಲ್ಲಿ ಮಿಂದೆದ್ದ ತರಕಾರಿಗಳ ಸೇವನೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದೇನೋ!ಉತ್ಪನ್ನವನ್ನು ಒದಗಿಸುವ ಚಿಕ್ಕ ಚಿಕ್ಕ ಘಟಕಗಳು ಗೃಹ ಉದ್ಯಮಗಳಾಗಿ ರೂಪುಗೊಳ್ಳಬೇಕು. ಮೀಯಪದವಿನಂತಹ ಹಳ್ಳಿಯಲ್ಲಿ ಪತ್ತನಾಂತಿಟ್ಟದಂತೆ ಅಲ್ಲದಿದ್ದರೂ ಸಣ್ಣಮಟ್ಟಿಗೆ  ಅಡುಗೆಗೆ ಸಿದ್ಧವಾಗಿಸಲು ಸಾಧ್ಯವಾಗಿದೆಯಂತೆ. ಹಾಗಿದ್ದರೆ ಉಳಿದೆಡೆಯೂ ಸಾಧ್ಯವಾಗಬಹುದು.ಹಳ್ಳಿಯ ಮಲ್ಲಿಗೆ ಹೂ ನಗರಕ್ಕೆ ಹೋಗುತ್ತದಲ್ಲಾ, ಅಂತಹ ಮಾರಾಟ ಸರಪಳಿಯನ್ನು ಬೆಸೆಯಬಹುದೇನೋ?ಕೆವಿಕೆ ಸಂಪರ್ಕ ತಾಣ cardkvk@yahoo.com ಕೇರಳದಲ್ಲೇ ಮೊದಲ ಬಾರಿಗೆ ಕಣ್ಣೂರು ಜಿಲ್ಲೆಯ ಹಳ್ಳಿ ಮೂಲೆಯ ನಡುವಿಲ್ ಪಂಚಾಯ್ತಿ ಈಚೆಗೆ ಎರಡು ದಿನದ ಹಲಸಿನ ಹಬ್ಬ ಸಂಘಟಿಸಿತು.`ಬಲಿತ ಹಲಸನ್ನು ಕತ್ತರಿಸಿ ಒಳಗಿನ ಬೀಜದೊಂದಿಗೆ ಇಡೀ ಸೊಳೆ (ಬಲ್ಬ್) ಯನ್ನು ಕೆಲ ಹೆಣ್ಮಕ್ಕಳು ಪ್ಯಾಕೆಟ್ ಮಾಡಿ ಮಾರಲು ತಂದರು. ಹತ್ತು ಹನ್ನೆರಡು ಇಡೀ ಸೊಳೆಗೆ ಹತ್ತು ರೂಪಾಯಿ ಬೆಲೆ. ಎಲ್ಲರಿಗೂ ಹಲಸು ತುಂಡು ಮಾಡಿ ಬಳಸಲು ಗೊತ್ತಿರುವ ಈ ಮೂಲೆಯ ಹಳ್ಳಿಯಲ್ಲಿ ಇದು ಮಾರಾಟವಾದೀತೇ ಎಂಬ ಸಂಶಯ ನನಗಿತ್ತು. ಆದರೆ ಆ ಅನುಮಾನ ಸುಳ್ಳಾಯಿತು~ ಎನ್ನುತ್ತಾರೆ ತಿರುವನಂತಪುರದ ಜ್ಯಾಕ್ ಫ್ರುಟ್ ಪ್ರಮೋಶನ್ ಕೌನ್ಸಿಲ್ ಕಾರ್ಯದರ್ಶಿಎಲ್. ಪಂಕಜಾಕ್ಷನ್.ಆ ಹೆಣ್ಮಕ್ಕಳು ಎರಡೇ ದಿನಗಳಲ್ಲಿ ಮುನ್ನೂರು ಪ್ಯಾಕೆಟ್ ಮಾರಿ ಮೂರು ಸಾವಿರ ರೂಪಾಯಿ ಸಂಪಾದಿಸಿದರು! ಹಬ್ಬ ಇಲ್ಲದಿದ್ದರೂ ರಸ್ತೆ ಬದಿಯಲ್ಲೊಂದು ಮೇಜಿಟ್ಟು ಮಾರಲು ಹೊರಟರೆ ಒಂದು ಕುಟುಂಬದ ಜೀವನ ಈ ಕೆಲಸದಿಂದ ಸಾಗುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry