ಶುಕ್ರವಾರ, ಮೇ 7, 2021
26 °C

ಹಲಸಿನ ಕಾಲ ಆರಂಭ

ಮಾರುತಿ ಪೇಟಕರ,ಹಾನಗಲ್ Updated:

ಅಕ್ಷರ ಗಾತ್ರ : | |

ಮಾವಿನ ಹಣ್ಣಿನ ಕಾಲ ಮುಗಿಯುತ್ತಿದ್ದಂತೆ ಹಲಸಿನ ಹಣ್ಣಿನ ಕಾಲ ಆರಂಭವಾಗಿದೆ. ಹಾನಗಲ್ ತಾಲ್ಲೂಕಿನಲ್ಲಿ ವ್ಯವಸ್ಥಿತವಾಗಿ ಹಲಸು ಬೆಳೆಯುವುದಿಲ್ಲವಾದರೂ ಮಲೆನಾಡು ಭಾಗದ ಗ್ರಾಮಗಳ ಮನೆ ಹಿತ್ತಲು, ಅಂಗಳದಲ್ಲಿ ಮತ್ತು ಗದ್ದೆ-ತೋಟ ಪಟ್ಟಿಯ ಬದುಗಳಲ್ಲಿ ಬೃಹದಾಕಾರದ ಹಲಸು ಮರಗಳು ಹೇರಳವಾಗಿವೆ. ಸಾಮಾನ್ಯವಾಗಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಕಟಾವಿಗೆ ಬರುವ ಹಲಸು ಹಣ್ಣು ಪಕ್ವವಾದಂತೆಲ್ಲ ವಾಸನೆ ಸೂಸುತ್ತದೆ. ಈ ಕಾರಣಕ್ಕಾಗಿಯೇ ಮಲೆನಾಡಿಗೆ ಹೊಂದಿಕೊಂಡ ಗ್ರಾಮೀಣ ಪ್ರದೇಶದಲ್ಲಿ ಈಗ ಹಲಸು ಹಣ್ಣಿನ ಕಂಪು..!ಕಡಿಮೆ ಮಳೆಯಾಗುವ ಸ್ಥಳದಲ್ಲಿ ಚೆನ್ನಾಗಿ ಹೊಂದಿಕೊಳ್ಳುವ ಈ ಹಣ್ಣಿನ ಮರಕ್ಕೆ ಬೆಚ್ಚಗಿನ ಹಾಗೂ ತೇವದಿಂದ ಕೂಡಿದ ಹವಾಗುಣ ಬೇಕು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಮಲೆನಾಡು ಪ್ರದೇಶದಲ್ಲಿ ಹಲಸು ಯಥೇಚ್ಛವಾಗಿದೆ. ಒಂದು ಮರ (ಮರದ ಗಾತ್ರಕ್ಕೆ ಅನುಸಾರ) 50 ರಿಂದ 200ಕ್ಕೂ ಅಧಿಕ ಹಣ್ಣುಗಳನ್ನು ಕೊಡುತ್ತದೆ. ದೊಡ್ಡ ಗಾತ್ರದ ಹಲಸು ಹಣ್ಣು ಕೆಲವೊಮ್ಮೆ 150 ಕೆ.ಜಿ ವರೆಗೂ ತೂಗುವುದುಂಟು!ಅನೇಕ ವಿಧದಲ್ಲಿ ಉಪಯುಕ್ತ ಎನ್ನಿಸುವ ಹಲಸು ಮರ ಕುಟುಂಬವೊಂದಕ್ಕೆ ಒಂದಿದ್ದರೆ ಸಾಕು. ಹಲಸಿನ ಹಣ್ಣು ತಿನ್ನುವುದರಿಂದ ಆರೋಗ್ಯ ವೃದ್ಧಿಸುವುದಲ್ಲದೇ ಲಾಭವನ್ನು ಗಳಿಸಬಹುದು. ಹಲಸಿನ ಪ್ರಮಾಣ ಹೆಚ್ಚಿದರೆ ಸಂಸ್ಕರಿಸಿ ಇಟ್ಟುಕೊಂಡು ತಿನ್ನಬಹುದು. ಹಲಸಿನ ಹಣ್ಣಿನಿಂದ ಹಪ್ಪಳ, ಸಂಡಿಗೆ, ಜಾಮ್, ಜೆಲ್ಲಿ, ಪಾನಕ, ಉಪ್ಪಿನಕಾಯಿ ಮುಂತಾದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ತೊಳೆಗಳನ್ನು ಇಡ್ಲಿ ಹಿಟ್ಟಿಗೆ ಸೇರಿಸಿ ಅಥವಾ ಉಪ್ಪು-ಖಾರದಲ್ಲಿ ಅದ್ದಿ ಒಣಗಿಸಿ ಎಣ್ಣೆಯಲ್ಲಿ ಕರಿದು ತಿಂದರೆ ಅದರ ರುಚಿಯ ಗಮ್ಮತ್ತೇ ಬೇರೆ!ಸಕ್ಕರೆ ಪಾಕ ಇಲ್ಲವೆ ಜೇನುತುಪ್ಪದಲ್ಲಿ ಹಾಕಿಟ್ಟು ತಿಂದರೆ ಮತ್ತಷ್ಟು ಸ್ವಾದಿಷ್ಟ ಈ ಹಲಸು ತೊಳೆಗಳು. ಇನ್ನು ಹಣ್ಣಿನಲ್ಲಿನ ಹಸಿಬೀಜವನ್ನು ಸಾಂಬಾರಿಗೆ, ಉಪ್ಪಿಟ್ಟಿಗೆ ಹಾಕಿದರೆ ರುಚಿ ಹೆಚ್ಚುತ್ತದೆ. ರೊಟ್ಟಿ, ದೋಸೆ, ಚಪಾತಿಯ ಹಿಟ್ಟಿನಲ್ಲಿ ಇದನ್ನು ಮಿಶ್ರಣ ಮಾಡುತ್ತಾರೆ. ಬೀಜಗಳನ್ನು ಬೇಯಿಸಿ ಅಥವಾ ಹುರಿದು ತಿನ್ನುವುದು ಈ ಭಾಗದಲ್ಲಿ ಸಾಮಾನ್ಯ. ಹಲಸು ಕಾಯಿ ಎಳೆಯದಿದ್ದಾಗ ಪಲ್ಯ, ಸಾರು, ಹುಳಿ, ಸಾಗು, ಉಪ್ಪಿನಕಾಯಿ ಮಾಡಲು ಬಳಸಬಹುದು. ಹೇಗೆ ಬಳಸಿಕೊಂಡು ತಿಂದರೂ ಹಲಸು ತೊಳೆ ಮತ್ತು ಬೀಜಗಳಿಂದ ದೇಹಕ್ಕೆ ಪೋಷಕಾಂಶ ಸಿಗುತ್ತದೆ.ಹಲಸು ಹಣ್ಣು ದೇಹಕ್ಕೆ ಜಿಡ್ಡನ್ನು ಒದಗಿಸುತ್ತದೆ. ಇದರ ಸೇವನೆ ಪಿತ್ತರಸ ತೊಂದರೆಗೆ ಪರಿಹಾರ. ಹಲಸು ತಿಂದರೆ ರಕ್ತ ಶುದ್ಧಿಯಾಗುತ್ತದೆ.  ಹಲಸು ಬೀಜಗಳು ಮೂರ್ತವರ್ಧಕ ಗುಣ ಒದಗಿಸುತ್ತದೆ. ಇಂತಹ ಔಷಧಿಯ ಗುಣಗಳನ್ನು ಹೊಂದಿರುವ ಹಲಸು ಬೇಗ ಜೀರ್ಣವಾಗುವ ಪದಾರ್ಥವಲ್ಲ. ಆದ್ದರಿಂದ ಹಸಿದಾಗ ಹಲಸು ತಿನ್ನಬೇಕು ಎನ್ನುವ ಮಾತಿದೆ.ಹಣ್ಣಿನ ಸಿಪ್ಪೆ ಮತ್ತು ಎಲೆಗಳು ಜಾನುವಾರುಗಳಿಗೆ ಮೇವಾಗಿದೆ. ಈ ಮರದ ಎಲೆಗಳನ್ನು ಊಟದ ಎಲೆಗಳಾಗಿ, ಗೊಬ್ಬರ ತಯಾರಿಕೆಗೆ ಬಳಸಬಹುದು. ತೊಗಟೆಯಿಂದ ಒಸರುವ ಹಾಲಿನಲ್ಲಿ ಇರುವ ರಾಳ ಹಾಗೂ ಅಂಟು ವಿವಿಧ ಕಾರ್ಯಗಳಿಗೆ ಬಳಕೆಯಾಗುತ್ತದೆ. ತೊಗಟೆಯ ಮೇಲಿನ ಸಿಪ್ಪೆಯನ್ನು ಸುಣ್ಣಕಲ್ಲು ಸುಡಲು ಉರುವಲಾಗಿ ಬಳಸುತ್ತಾರೆ. ಹಲಸು ಕಟ್ಟಿಗೆ ಬೆಲೆ ಬಾಳುವಂತಹದ್ದು. ತೋಟದ ಸುತ್ತ ಗಾಳಿಯ ತಡೆಗಾಗಿ ಹಲಸು ನೆಟ್ಟರೆ ಎಲ್ಲ ವಿಧದಲ್ಲೂ ಲಾಭದಾಯಕ. ಇವೆಲ್ಲಾ ಕಾರಣಗಳಿಂದ ಹಲಸಿನ ಮರ ಸಾಕಷ್ಟು ಪ್ರಯೋಜನಕಾರಿ.`ಹಸಿನಲ್ಲಿ ಹಲವು ತಳಿಗಳಿವೆ. ಹವಾಗುಣ ಮತ್ತು ಭೂಗುಣ ಆಧರಿಸಿ ತಳಿಯನ್ನು ಆಯ್ಕೆ ಮಾಡಿಕೊಂಡು ಬೆಳೆಸಬಹುದು. ಆಸಕ್ತ ರೈತರಿಗೆ ಹಲಸು ಬೆಳೆಯ ಮಾಹಿತಿ ನೀಡಿ ಪ್ರೋತಾಹಿಸುವ ಮತ್ತು ಈಗಾಗಲೇ ಬೆಳೆದ ಮರಗಳ ಆರೈಕೆ, ಫಸಲು ರಕ್ಷಣೆ ಅಲ್ಲದೆ, ಕೀಟ, ರೋಗಗಳ ನಿಯಂತ್ರಣಕ್ಕೆ ಸಹಕಾರ ನೀಡಲಾಗುವುದು' ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹಾನಗಲ್‌ನ ಸಹಾಯಕ ತೋಟಗಾರಿಕೆ ಅಧಿಕಾರಿ ಎಸ್.ಎನ್.ಕುಲಕರ್ಣಿ.ಶ್ರೀಲಂಕಾದ ಗ್ರಾಮಾಂತರ ಪ್ರದೇಶದಲ್ಲಿನ ಪ್ರಮುಖ ಆಹಾರ ಹಲಸಿನ ಹಣ್ಣು. ಕರ್ನಾಟಕದ ಮಲೆನಾಡು ಜಿಲ್ಲೆಗಳು, ಕರಾವಳಿ ಪ್ರದೇಶ, ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಹೆಚ್ಚಾಗಿ ಹಲಸು ಕಂಡು ಬರುತ್ತಿದ್ದು, ರಾಜ್ಯದ 6,245 ಹೆಕ್ಟೇರ್ ಪ್ರದೇಶದಲ್ಲಿ 24.98 ಲಕ್ಷ ಟನ್ ಹಲಸು ಉತ್ಪಾದಿಸಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ವರದಿ ತಿಳಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಲಸಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದರಿಂದ ಇದರ ಕ್ಷೇತ್ರವ್ಯಾಪ್ತಿ ಮತ್ತಷ್ಟು ಹೆಚ್ಚಾಗಿದೆ. ಇಂತಹ ವಿಶೇಷ ಹಣ್ಣನ್ನು ವರ್ಷದಲ್ಲಿ ಒಮ್ಮೆಯಾದರೂ ಆಸ್ವಾದಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.