ಶುಕ್ರವಾರ, ಜೂನ್ 18, 2021
21 °C

ಹಲಸಿನ ತಿಂಡಿಗಳ ಭರ್ಜರಿ ಮಾರಾಟ

ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

ಅದೊಂದು ಮಹಿಳೆಯರ ಸಂತೆ. ಅಲ್ಲಿ ಮಾರಾಟ-ಖರೀದಿ ಎರಡರಲ್ಲೂ ಮಹಿಳೆಯರದ್ದೇ ಪ್ರಮುಖ ಪಾತ್ರ. ಆದರೆ ಈ ಸಂತೆ ಹಲಸಿನ ಉತ್ಪನ್ನಕ್ಕೆ ಮಾತ್ರ ಮೀಸಲು. ಹಲಸಿನ ಗುಜ್ಜು (ಮಿಡಿ ಹಲಸಿನ ಕಾಯಿ), ಸಂಸ್ಕರಿತ ಉತ್ಪನ್ನಗಳು, ಹಲಸಿನಕಾಯಿ ಬೋಂಡಾ, ಫುಲಾವ್, ಮಂಚೂರಿ ಹೀಗೆ ವಿಭಿನ್ನ ಉತ್ಪನಗಳು ಹಲಸಿನ ಸಂತೆಯಲ್ಲಿ ಭರ್ಜರಿ ಖರ್ಚಾದವು.ಸೋಂದಾ ಸ್ವರ್ಣವಲ್ಲೆ ಸಂಸ್ಥಾನದ ಗ್ರಾಮಾಭ್ಯುದಯ ಸಂಸ್ಥೆ ಮತ್ತು ಕದಂಬ ಆರ್ಗೆನಿಕ್ ಮತ್ತು ಮಾರ್ಕೆಟಿಂಗ್ ಟ್ರಸ್ಟ್ ಜಂಟಿಯಾಗಿ ಶನಿವಾರ ನಗರದ ಯೋಗ ಮಂದಿರದಲ್ಲಿ ಮೊದಲ ಬಾರಿಗೆ ಹಲಸಿನ ಸಂತೆ ಆಯೋಜಿಸಿದ್ದವು. ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳಿಂದ ಬಂದ 15ರಷ್ಟು ಸ್ವಸಹಾಯ ಸಂಘದ ಸದಸ್ಯರು ಬಲಿಯುವ ಹಂತದಲ್ಲಿರುವ ಹಲಸಿನಕಾಯಿಯ ವಿವಿಧ ಉತ್ಪನ್ನಗಳನ್ನು ಸಂತೆಗೆ ತಂದು ಮಾರಾಟ ಮಾಡಿ ಕಾಸು ಎಣಿಸಿದರು.ಕೆಲ ದಿನಗಳ ಹಿಂದಷ್ಟೇ ಹಲಸಿನ ಸಂಸ್ಕರಿತ ಉತ್ಪನ್ನಗಳ ತರಬೇತಿ ಪಡೆದ ಮಂಚಿಕೇರಿಯ ರಾಣಿಚೆನ್ನಮ್ಮ ಸ್ವ ಸಹಾಯ ಸಂಘದ ಕುಣಬಿ ಮತ್ತು ಮರಾಠಿ ಮಹಿಳೆಯರು ಉಪ್ಪು-ಅರಿಶಿಣ ಸೇರಿಸಿ ಸಂಸ್ಕರಿಸಿದ ಹಲಸಿನ ಗುಜ್ಜು, ಹಲಸಿನಕಾಯಿ ಅತ್ರಾಸ ಸಿದ್ಧಪಡಿಸಿ ತಂದಿದ್ದರು. ಮಣಕಣಿ ಲಕ್ಷ್ಮೀ ಸ್ವ ಸಹಾಯ ಸಂಘದ ಸದಸ್ಯೆಯರು ಒಣಗಿದ ಹಲಸಿನ ಗುಜ್ಜಿನ ತುರಿ, ಎಳೆ ಹಲಸಿನಕಾಯಿ ಚಟ್ನಿ, ಪಲ್ಯ ಮಾರಾಟ ಮಾಡಿದರು.ಶಮೇಮನೆಯ ಮಮತಾ, ಮೀನಾಕ್ಷಿ, ಗಿರಿಜಾ ಸ್ಥಳದಲ್ಲೇ ರುಚಿಕಟ್ಟಾದ ಬಿಸಿಬಿಸಿ ಹಲಸಿನ ಬೋಂಡಾ ಮಾಡಿಕೊಡುತ್ತ ಜನರನ್ನು ಸೆಳೆದರು. ಶಿರಸಿಯ ರಾಜಲಕ್ಷ್ಮೀ ಹೆಗಡೆ ಸಂಗಡಿಗರು ತಯಾರಿಸಿದ ಹಲಸಿನ ಮಂಚೂರಿ, ಹಲಸಿನ ಫಲಾವು ಪಾರ್ಸಲ್ ಮೂಲಕ ಅನೇಕ ಮನೆಗಳನ್ನು ಸಹ ತಲುಪಿತು. ವಾಜಗದ್ದೆ ಮಹಿಳೆಯರು ಉಂಡ್ಳೆಕಾಳು, ಪತ್ರೊಡೆ ಸಿದ್ಧಪಡಿಸಿ ತಂದಿದ್ದರು.ವರ್ಷಕ್ಕೊಮ್ಮೆ ಮೇಳದ ಮೂಲಕ ಗಮನ ಸೆಳೆಯುತ್ತಿದ್ದ ಹಲಸು ಇನ್ನು ಪಾಕ್ಷಿಕ ಸಂತೆಯಲ್ಲಿ ಮತ್ತಷ್ಟು ಗ್ರಾಹಕರನ್ನು ತಲುಪಲಿದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ನಿರಂತರವಾಗಿ ಹಲಸಿನ ಸಂತೆ ನಡೆಯಲಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.