ಹಲೋ ಸರ್, ನನ್ನದೊಂದು ಪ್ರಶ್ನೆ...

7

ಹಲೋ ಸರ್, ನನ್ನದೊಂದು ಪ್ರಶ್ನೆ...

Published:
Updated:
ಹಲೋ ಸರ್, ನನ್ನದೊಂದು ಪ್ರಶ್ನೆ...

ರೇಡಿಯೊದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ ಸಾಧನೆ ಮಾಡಬಹುದು ಎಂಬುದಕ್ಕೆ ಹಾಸನ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಸಿದ್ಧತಾ ಫೋನ್ ಇನ್ ಕಾರ್ಯಕ್ರಮವೇ ಸಾಕ್ಷಿ.ಹಲೋ ಸರ್, ಈ ಶಾರ್ಟ್‌ನೋಟ್ಸ್ ಪ್ರಶ್ನೆಗೆ ಎಷ್ಟು ಸಾಲು ಉತ್ತರ ಬರೀಬೇಕು?ಹಲೋ, ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಲು ಟೈಮ್ ಸಾಲುವುದಿಲ್ಲವಲ್ಲ, ಹೇಗೆ ಉತ್ತರಿಸಿದರೆ ಸಮಯ ಹೊಂದಿಸಿಕೊಳ್ಳಬಹುದು?ಮ್ಯೋಮ್, ಈ ಬಾರಿ ಪ್ರಶ್ನೆಪತ್ರಿಕೆ ಬದಲಾಗಿದೆ ಅಂತಾರಲ್ಲ, ಟಫ್ ಇರುತ್ತಾ?ಸರ್, ಮತ್ತೆ ಈ ಬಾರಿ ಕೊಟ್ಟಿರೋ ಬ್ಲೂಪ್ರಿಂಟ್ ತರಾನೇ ಪ್ರಶ್ನೆಪತ್ರಿಕೆ ಇರುತ್ತಾ ಅಥವಾ ಬೇರೆ ರೀತಿ ಇರುತ್ತಾ?ಹಲೋ, ವಿಜ್ಞಾನದ ಪ್ರಶ್ನೆಗಳಿಗೆ ಚಿತ್ರ ಬರೆಯುವುದು ಕಂಪಲ್ಸರೀನಾ? ಚಿತ್ರಕ್ಕೆ ಲೇಬಲಿಂಗ್ ಮಾಡ್ಲೇಬೇಕಾ?ಸರ್, ಮ್ಯೋಪ್ ನಾವೇ ಬರೀಬೇಕಾ ಅಥವಾ ಪ್ರಶ್ನೆಪತ್ರಿಕೆಯಲ್ಲೇ ಪ್ರಿಂಟ್ ಆಗಿರುತ್ತಾ?ಹಾಸನ ಆಕಾಶವಾಣಿ ಕೇಂದ್ರದಿಂದ ಪ್ರತಿ ಭಾನುವಾರ ಬೆಳಿಗ್ಗೆ 8.35ರಿಂದ 9.05ರವರೆಗೆ ಪ್ರಸಾರವಾಗುತ್ತಿದ್ದ 2012ರ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ- ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಹೀಗೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಕೇಳಿಬರುತ್ತಿದ್ದವು. ಹಾಸನದ ಸುತ್ತಮುತ್ತಲಿನ ಜಿಲ್ಲೆಗಳಿಗೆ ಸೇರಿದ ಸುಮಾರು 17 ತಾಲ್ಲೂಕುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೀಗೆ ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಇದೀಗ 2013ರ ಜನವರಿ 6ರ ಭಾನುವಾರದಿಂದ ಆರಂಭವಾಗಿರುವ ಈ ಸರಣಿ ಪರೀಕ್ಷಾ ಸಿದ್ಧತಾ ಕಾರ್ಯಕ್ರಮ ಮಾರ್ಚ್ ಕೊನೆಯವರೆಗೂ ಹಿಂದಿನ ಸಮಯದಲ್ಲೇ ಪ್ರಸಾರವಾಗಲಿದೆ. ಅದಕ್ಕಾಗಿ ಸಿದ್ಧತೆ ನಡೆದಿದೆ. ವಿದ್ಯಾರ್ಥಿಗಳೂ ಕಾತರದಿಂದ ಕಾಯುತ್ತಿದ್ದಾರೆ.ಕಳೆದ ಜನವರಿಯಿಂದ ಮಾರ್ಚ್ ಕೊನೆಯ ವಾರದವರೆಗೆ ಸತತವಾಗಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಸಿದ್ಧತಾ ಸರಣಿ ಫೋನ್ ಇನ್ ಕಾರ್ಯಕ್ರಮದ ಪರಿಣಾಮ ಎಷ್ಟಿತ್ತೆಂದರೆ, ಹಾಸನ ಜಿಲ್ಲೆ ರಾಜ್ಯದಲ್ಲೇ ಮೂರನೇ ಸ್ಥಾನ ಪಡೆಯುವಷ್ಟು! ಹಿಂದಿನ ವರ್ಷಗಳಲ್ಲಿ 15, 18 ಮತ್ತು 20ನೇ ಸ್ಥಾನಗಳಲ್ಲಿದ್ದ ಜಿಲ್ಲೆ ಮೂರನೇ ಸ್ಥಾನಕ್ಕೆ ಏರಿದ್ದರ ಹಿಂದೆ ಫೋನ್ ಇನ್ ಕಾರ್ಯಕ್ರಮದ ಕಾಣಿಕೆಯೂ ಸಾಕಷ್ಟಿತ್ತು.ಈ ಕಾರ್ಯಕ್ರಮದಲ್ಲಿ ಕೇವಲ ವಿಷಯ ತಜ್ಞರಷ್ಟೇ ಭಾಗವಹಿಸುವುದಿಲ್ಲ. ಖ್ಯಾತ ಮನೋವೈದ್ಯರು, ಮನಃಶಾಸ್ತ್ರಜ್ಞರು, ವ್ಯಕ್ತಿತ್ವ ವಿಕಸನ ತರಬೇತುದಾರರು ಸಹ ಭಾಗವಹಿಸಿ ಮಕ್ಕಳಲ್ಲಿರುವ ಪರೀಕ್ಷಾ ಭೀತಿ ನಿವಾರಿಸುತ್ತಾರೆ, ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಾರೆ. ಪರೀಕ್ಷೆ ಎಂಬುದು ಭೂತವಲ್ಲ, ಅದೊಂದು ಹಬ್ಬ, ಬನ್ನಿ ಸಂಭ್ರಮಿಸೋಣ ಎಂದು ಕರೆ ಕೊಟ್ಟು ಫಲಿತಾಂಶ ಹೆಚ್ಚಳಕ್ಕೆ ಕಾರಣರಾಗಿದ್ದಾರೆ.ಗ್ರಾಮೀಣ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಈ ಕಾರ್ಯಕ್ರಮ ಚಿತ್ರದುರ್ಗ ಆಕಾಶವಾಣಿ ಕೇಂದ್ರದಿಂದಲೂ ಇನ್ನು ಕೆಲ ದಿನಗಳ ನಂತರ ಮೂಡಿಬರಲಿದೆ. ಹೀಗೆ ಮಾಹಿತಿ- ಶಿಕ್ಷಣ- ಮನರಂಜನೆಯ ಉದ್ದೇಶದೊಂದಿಗೆ ದೇಶದ ಜನಮನದಲ್ಲಿ ಬೇರೂರಿರುವ ಆಕಾಶವಾಣಿ ಕಾಯಕ್ರಮಗಳ ಯಶಸ್ಸು ಈಗ ಸ್ಥಳೀಯ ರೇಡಿಯೊ ಕೇಂದ್ರಗಳ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯುತ್ತಿದೆ.`ಬೆಂಗಳೂರಿನಲ್ಲಿ ಕುಳಿತು ಪ್ರಸಾರ ಮಾಡುವುದಕ್ಕಿಂತ ರಾಜ್ಯದ ಎಲ್ಲ ಆಕಾಶವಾಣಿಗಳಿಂದ ಸ್ಥಳೀಯ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಪ್ರಸಾರ ಆಗುವುದಾದರೆ ಅಲ್ಲಿನ ಪ್ರತಿಭೆಗಳಿಗೆ ಮತ್ತು ಅಧಿಕಾರಿಗಳಿಗೆ ಒಳ್ಳೆಯ ಅವಕಾಶ ಸಿಕ್ಕಂತಾಗುತ್ತದೆ' ಎನ್ನುತ್ತಾರೆ ಶಿಕ್ಷಣ ಇಲಾಖೆ, ಸರ್ವಶಿಕ್ಷಾ ಅಭಿಯಾನ ಯೋಜನೆ ಮತ್ತು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಹಲವು ಹಿರಿಯ ಅಧಿಕಾರಿಗಳು.ಇದೇ ರೀತಿಯ ಕಾರ್ಯಕ್ರಮಗಳನ್ನು ಎಲ್ಲ ಬಾನುಲಿ ಕೇಂದ್ರಗಳಿಂದಲೂ ಬಿತ್ತರಿಸಲು ಅವಕಾಶವಿದ್ದು, ಆಯಾಯ ಜಿಲ್ಲೆಗಳ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಸೌಲಭ್ಯ ಬಳಸಿಕೊಂಡು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ನೆರವಾಗಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry