ಭಾನುವಾರ, ಜೂನ್ 20, 2021
25 °C

ಹಲ್ಮಿಡಿ: ಕುಡಿಯುವ ನೀರಿಗೆ ಬವಣೆ

ಪ್ರಜಾವಾಣಿ ವಾರ್ತೆ/ ಬಿ.ಎಂ. ರವೀಶ್‌ Updated:

ಅಕ್ಷರ ಗಾತ್ರ : | |

ಬೇಲೂರು: ಶಿಲಾಶಾಸನದ ಮೂಲಕ ಕನ್ನಡ ಭಾಷೆಯ ಪ್ರಾಚೀನತೆಗೆ ದಾಖಲೆ ಒದಗಿಸಿದ ಗ್ರಾಮ ‘ಹಲ್ಮಿಡಿ’. ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಲಭಿಸಲು ಈ ಶಾಸನ ಒದಗಿಸಿದ ದಾಖಲೆಯೂ ಕಾರಣ­ವಾಗಿದೆ.ಆದರೆ ಹಾಸನ ಜಿಲ್ಲೆಯ ಕಟ್ಟಕಡೆಯ ಗ್ರಾಮವಾಗಿರುವ ಹಲ್ಮಿಡಿಯ ಜನರು ಈಗ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಮೂಲ­ಸೌಕರ್ಯಗಳೂ ಇಲ್ಲದೆ ಈ ಗ್ರಾಮ ನಲುಗುತ್ತಿರುವುದು ದೌರ್ಭಾಗ್ಯ­ವಾಗಿದೆ.ಕನ್ನಡದ ಪ್ರಥಮ ಶಿಲಾ ಶಾಸನ ಲಭಿಸಿದ ಊರು ಯಾವುದೆಂದು ಎಲ್ಲರಿಗೂ ಗೊತ್ತಿದೆ. ಆದರೆ ಈ ಹಲ್ಮಿಡಿ ಎಲ್ಲಿದೆ, ಎಂಥ ಸ್ಥಿತಿಯಲ್ಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಹಾಸನ ಜಿಲ್ಲೆಯ ಕಟ್ಟಕಡೆಯ ಗ್ರಾಮವಾಗಿರುವ ಹಲ್ಮಿಡಿ ಬೇಲೂರು ತಾಲ್ಲೂಕಿಗೆ ಸೇರಿದ ಗ್ರಾಮವಾಗಿದ್ದರೂ, ಚಿಕ್ಕಮಗಳೂರಿ ನಿಂದ ಕೇವಲ 8 ಕಿ.ಮೀ. ದೂರದಲ್ಲಿದೆ.ಸುಮಾರು 350 ಕುಟುಂಬಗಳು ಮತ್ತು ಎರಡು ಸಾವಿರ ಜನಸಂಖ್ಯೆ ಹೊಂದಿರುವ ಹಲ್ಮಿಡಿ ಬೇಲೂರಿನಿಂದ 20 ಕಿ.ಮೀ. ದೂರದಲ್ಲಿದೆ. ಹೀಗಾಗಿ ಜನರು ತಮ್ಮ ದೈನಂದಿನ ವ್ಯವಹಾರ­ಗಳನ್ನು ಹೆಚ್ಚಾಗಿ ಚಿಕ್ಕಮಗಳೂರಿ­ನಲ್ಲಿಯೇ ನಡೆಸುತ್ತಾರೆ. ಗ್ರಾಮಕ್ಕೆ ಈ ಹಿಂದೆ ಪೈಪ್‌ಲೈನ್‌ ಮೂಲಕ ನೀರು ಹರಿಸಲಾಗುತ್ತಿತ್ತಾದರೂ ಕೊಳವೆ ಬಾವಿ ಬತ್ತಿ ಹೋಗಿರುವುದರಿಂದ ನೀರು ಸರಬರಾಜು ಸ್ಥಗಿತಗೊಂಡಿದೆ. ನೀರಿಗಾಗಿ ಎರಡು ಮೂರು ಕೊಳವೆ ಬಾವಿ ಕೊರೆಸಿದ್ದರೂ ಇಡೀ ಗ್ರಾಮಕ್ಕೆ ಸರಬರಾಜು ಮಾಡುವಷ್ಟು ನೀರು ಬಂದಿಲ್ಲ. ಜನರು ಕೆರೆ ನೀರು, ಖಾಸಗಿಯವರ ಕೊಳವೆ ಬಾವಿ ಮುಂತಾದ ಮೂಲಗಳನ್ನು ಆಶ್ರಯಿಸಬೇಕಾಗಿ ಬಂದಿದೆ.ಬೆನಕನ ಹೊಳೆಯ ಮೂಲಕ ಒದಗಿಸುತ್ತಿರುವ ನೀರಿಗೆ ಚಿಕ್ಕಮಗಳೂರಿನ ಕೊಳಚೆ ನೀರು ಸೇರುತ್ತಿರುವುದರಿಂದ ಬಳಕೆಗೆ ಯೋಗ್ಯವಾಗಿಲ್ಲ.ಗ್ರಾಮದ ಸಮೀಪದಲ್ಲಿಯೇ ಯಗಚಿ ಜಲಾಶಯದ ಹಿನ್ನೀರು ಹೇರಳವಾಗಿದೆ. ಇಲ್ಲಿಂದ ಗ್ರಾಮಕ್ಕೆ ನೀರು ಸರಬರಾಜು ಮಾಡಬೇಕೆಂಬ ಬೇಡಿಕೆಯ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸರ್ಕಾರ ಗಮನಹರಿಸಿಲ್ಲ.ಕೆಳಹಳ್ಳಿ– ನಾರಾಯಣಪುರ ಗ್ರಾಮದ ನಡುವೆ ಯಗಚಿ ಹಿನ್ನೀರಿನಿಂದ ಹಲ್ಮಿಡಿ ಗ್ರಾಮಕ್ಕೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನ­ವಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗುರುಸಿದ್ದೇಗೌಡ ಅಳಲು ತೋಡಿಕೊಳ್ಳುತ್ತಾರೆ.ವೈ.ಎನ್‌. ರುದ್ರೇಶ್‌ಗೌಡ ಶಾಸಕರಾದ ನಂತರ ಗ್ರಾಮದ ಅಭಿವೃದ್ಧಿಗಾಗಿ ಅನುದಾನ ಕೊಡಿಸಿದ್ದರೂ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ನಡೆದಿಲ್ಲ. ದಲಿತ ಕಾಲೋನಿಗೆ ಚರಂಡಿ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 40 ಲಕ್ಷ ರೂ.ವೆಚ್ಚ ಮಾಡಲಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ಭವನ ನಿರ್ಮಾಣಕ್ಕೆ 30 ಲಕ್ಷ, ಪ್ರವಾಸೋದ್ಯಮ ಇಲಾಖೆಯ ಮೂಲಕ ಗ್ರಾಮದ ಡಾಂಬರ್‌ ರಸ್ತೆ ನಿರ್ಮಾಣಕ್ಕೆ 40 ಲಕ್ಷ, ಸುವರ್ಣ ಗ್ರಾಮ ಯೋಜನೆಯಡಿ 40ಲಕ್ಷ ರೂ. ಬಿಡುಗಡೆಯಾಗಿದೆ. ಚನ್ನಾಪುರ–ಹಲ್ಮಿಡಿ ರಸ್ತೆ ಗುಂಡಿ ಬಿದ್ದು ಹಾಳಾಗಿದ್ದು, ಈ ರಸ್ತೆಯನ್ನು ದುರಸ್ತಿ ಪಡಿಸಬೇಕಾಗಿದೆ.ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗ್ರಾಮದಲ್ಲಿ ಶಾಸನದ ಪ್ರತಿಕೃತಿ ಮಂಟಪ ನಿರ್ಮಾಣ ಮಾಡಲಾಗಿದೆ. ಕನ್ನಡ ಭಾಷೆಯ ಅಧ್ಯಯನಕ್ಕೆ, ಸಂಶೋಧನೆಗೆ ಇದು ಅನುಕೂಲ ಕಲ್ಪಿಸಲಿದೆ.ಆದರೆ ಚಿಕ್ಕಮಗಳೂರು ರಸ್ತೆಯಲ್ಲಿ ಈ ಗ್ರಾಮದ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಆಗಿಲ್ಲ. ಹಲ್ಮಿಡಿ ಗ್ರಾಮಕ್ಕೆ ಪಿ.ಯು. ಕಾಲೇಜು, ಆಸ್ಪತ್ರೆ, ಪಶು ಆಸ್ಪತ್ರೆ ಬೇಕೆಂಬ ಬೇಡಿಕೆ ಈಡೇರಿಲ್ಲ.ಒಟ್ಟಾರೆ ಕನ್ನಡ ಭಾಷೆಗೆ ಮಹತ್ವ ದಾಖಲೆಯನ್ನು ಒದಗಿಸಿಕೊಟ್ಟ ಹಲ್ಮಿಡಿ ಗ್ರಾಮವನ್ನು ಪ್ರಮುಖ ಪ್ರವಾಸಿ ಕೇಂದ್ರ, ಅಧ್ಯಯನ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಮನಹರಿಸ ಬೇಕೆಂಬುದು ಕನ್ನಡಿಗರ ಆಗ್ರಹವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.