ಹಲ್ಲೆ; ಉಪ ನಿರ್ದೇಶಕರ ಸ್ಥಿತಿ ಗಂಭೀರ

7

ಹಲ್ಲೆ; ಉಪ ನಿರ್ದೇಶಕರ ಸ್ಥಿತಿ ಗಂಭೀರ

Published:
Updated:

ಬೆಂಗಳೂರು: ದುಷ್ಕರ್ಮಿಗಳು ನಡೆಸಿದ ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಂತೇಶ್ ಅವರಿಗೆ ಇನ್ನೂ ಪ್ರಜ್ಞೆ ಬಂದಿಲ್ಲ.ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪ ನಿರ್ದೇಶಕರಾಗಿರುವ ಮಹಂತೇಶ್ ಅವರ ಮೇಲೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಅವರ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.`ಅವರು ಶಾಂತ ಸ್ವಭಾವದ ವ್ಯಕ್ತಿಯಾಗಿದ್ದರು. ಕೆಲಸದ ವಿಷಯಗಳನ್ನು ಮನೆಯಲ್ಲಿ ಮಾತನಾಡುತ್ತಿರಲಿಲ್ಲ. ಆದರೆ, ಹಲವು ದಿನಗಳಿಂದ ಒಂಟಿಯಾಗಿರಲು ಬಯಸುತ್ತಿದ್ದರು~ ಎಂದು ಮಹಂತೇಶ್ ಅವರ ಕುಟುಂಬದ ಸದಸ್ಯರು ತಿಳಿಸಿದರು.`ನನ್ನ ಮಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಆದರೆ, ಆತ ಪ್ರಾಮಾಣಿಕತೆಗೆ ಹೆಸರಾಗಿದ್ದ ಎಂಬ ಹೆಮ್ಮೆ ನನಗಿದೆ. ದುಷ್ಕರ್ಮಿಗಳು ಏಕೆ ನನ್ನ ಮಗನ ಮೇಲೆ ಹಲ್ಲೆ ನಡೆಸಿದರು ಎಂಬುದು ತಿಳಿಯುತ್ತಿಲ್ಲ~ ಎಂದು ಮಹಂತೇಶ್ ಅವರ ತಂದೆ ಎಸ್.ಬಿ.ಪುಟ್ಟಣ್ಣಯ್ಯ ಭಾವುಕರಾದರು. `ಮಹಂತೇಶ್ ಅವರ ದವಡೆಗೆ ಪೆಟ್ಟು ಬಿದ್ದಿದೆ ಹಾಗೂ ಅವರ ಮೆದುಳಿನಲ್ಲಿ ರಕ್ತ ಸ್ರಾವ ಉಂಟಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ~ ಎಂದು ವೈದ್ಯರಾದ ಚೇತನ್ ರಾಜ್ ಹೇಳಿದ್ದಾರೆ.ಸುಳಿವು ಸಿಕ್ಕಿಲ್ಲ : `ಇಬ್ಬರು ದುಷ್ಕರ್ಮಿಗಳು ಮಹಂತೇಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ, ಈ ಪ್ರಕರಣದ ಬಗ್ಗೆ ಸಾಕ್ಷಿ ನೀಡುವಂತಹ ಪ್ರತ್ಯಕ್ಷದರ್ಶಿಗಳು ಇದುವರೆಗೂ ಮುಂದೆ ಬಂದಿಲ್ಲ~ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.`ಮಹಂತೇಶ್ ಅವರ ಕಾರು ಹಾದು ಹೋಗಿರುವ ದೃಶ್ಯ ಮಹರಾಣಿ ಕಾಲೇಜು ಬಳಿ ಇರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಸಂಗ್ರಹವಾಗಿದೆ. ಆದರೆ, ದೃಶ್ಯ ಸ್ಪಷ್ಟವಾಗಿಲ್ಲ. ಏಟ್ರಿಯಾ ಹೋಟೆಲ್ ಸಮೀಪ ಇದ್ದ ಸಿಸಿಟಿವಿ ಕ್ಯಾಮೆರಾವನ್ನು ಇತ್ತೀಚೆಗೆ ತೆಗೆಯಲಾಗಿತ್ತು~ ಎಂದು ಪೊಲೀಸರು ತಿಳಿಸಿದರು.ಕಮಿಷನರ್ ಕಚೇರಿಯಲ್ಲಿ ಗುರುವಾರ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ಸಭೆ ನಡೆಸಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ನಿರ್ದೇಶಕ ಜಿ.ಕರಿಬಸಪ್ಪ ಭಾಗವಹಿಸಿದ್ದರು. `ಮಹಂತೇಶ್ ಅವರ ಕಡತಗಳನ್ನೆಲ್ಲಾ ಪರಿಶೀಲಿಸಲಾಗಿದ್ದು ತನಿಖೆ ಚುರುಕುಗೊಂಡಿದೆ. ಶೀಘ್ರವೇ ಆರೋಪಿಗಳ ಪತ್ತೆ ಮಾಡುತ್ತೇವೆ~ ಎಂದು ಅಧಿಕಾರಿಗಳು ತಿಳಿಸಿದ್ದಾರೆ.`ಮಂಗಳವಾರ ಸಂಜೆ ಸಹಕಾರ ಸಂಘದ ಲೆಕ್ಕ ಪರಿಶೋಧನೆಯ ನಿಮಿತ್ತ ಮಹಂತೇಶ್ ಅವರು ಯಲಹಂಕಕ್ಕೆ ಹೋಗಿದ್ದರು. ಮನೆಗೆ ಹಿಂದಿರುವಾಗ ಈ ದುರ್ಘಟನೆ ನಡೆದಿದೆ. ಘಟನೆ ನಡೆದ ದಿನ ಅವರು ಯಾರನ್ನು ಭೇಟಿ ಮಾಡಿದ್ದರು, ಯಾವ ವಿಷಯವಾಗಿ ಚರ್ಚೆ ನಡೆಸಿದ್ದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ~ ಎಂದು ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry