ಮಂಗಳವಾರ, ಮೇ 17, 2022
24 °C

ಹಲ್ಲೆ: ಕಾಂಗ್ರೆಸ್ ಪಾಲಿಕೆ ಸದಸ್ಯನ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥ ಡಾ.ಯು.ವಿ.ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತ ಬಿಬಿಎಂಪಿ ಕಾಂಗ್ರೆಸ್ ಸದಸ್ಯ ಎನ್.ಚಂದ್ರ ಅವರನ್ನು ಪಕ್ಷದ ಸದಸ್ಯತ್ವದಿಂದ ಮಂಗಳವಾರ ಅಮಾನತುಪಡಿಸಲಾಗಿದೆ.‘ಯು.ವಿ.ಸಿಂಗ್ ಅವರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಅವರ ಕಾರ್ಯ ನಿರ್ವಹಣೆಗೆ ಚಂದ್ರ ಅವರು ಅಡ್ಡಿಪಡಿಸಿರುವುದು ಖಂಡನೀಯ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು. ದಕ್ಷ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತ ಚಂದ್ರ ಅವರನ್ನು ಪಕ್ಷದ ಸದಸ್ಯತ್ವ ಸ್ಥಾನದಿಂದ ಅಮಾನತುಪಡಿಸಲಾಗಿದೆ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎಂ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.‘ಅಪಾಯಕಾರಿ ಕೈಗಾರಿಕಾ ತ್ಯಾಜ್ಯವನ್ನು ನಾಗವಾರ ಕೆರೆಯಲ್ಲಿನ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಸುರಿಯುತ್ತಿದ್ದ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿದ ಸಿಂಗ್ ಅವರ ಕ್ರಮಕ್ಕೆ ಪಾಲಿಕೆ ಸದಸ್ಯರಾಗಿ ಚಂದ್ರ ಅವರು ಬೆಂಬಲ ಸೂಚಿಸಿ ಸಹಕರಿಸಬೇಕಿತ್ತು. ಬದಲಿಗೆ ಅವರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಖಂಡನೀಯ. ಅಲ್ಲದೇ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪವಿರುವ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ’ ಎಂದರು.ಮತ್ತೆ ನಾಲ್ವರ ಬಂಧನ: ಸಿಂಗ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣದ ನಾಲ್ಕು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು ಮಂಗಳವಾರ ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ ಆರಕ್ಕೆ ಏರಿದೆ. ಚಂದ್ರ ಅವರ ಸಹಚರರಾದ ಮುನಿರೆಡ್ಡಿಪಾಳ್ಯದ ಅಶೋಕ್, ಚನ್ನಸಂದ್ರದ ಪಳನಿ, ಹಲಸೂರಿನ ದೀನಾ ಮತ್ತು ತಿಮ್ಮಯ್ಯಗಾರ್ಡನ್‌ನ ಬಾಬು ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತರೆ ಆರೋಪಿಗಳಾದ ಚಂದ್ರ, ಖಲೀಂ ಮತ್ತು ರವಿ ಎಂಬುವರು ತಲೆಮರೆಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.