ಭಾನುವಾರ, ಜೂನ್ 13, 2021
24 °C

ಹಲ್ಲೆ ಘಟನೆ: ಸಮಿತಿಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೈಕೋರ್ಟ್ ಪ್ರತಿನಿಧಿ, ವಕೀಲರು, ಮಾಧ್ಯಮದವರು ಹಾಗೂ ಸರ್ಕಾರದ ಕಡೆಯಿಂದ ಕಾನೂನು ಇಲಾಖೆ ಕಾರ್ಯದರ್ಶಿ ಅಥವಾ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.ನಗರದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಇತ್ತೀಚೆಗೆ ಕೆಲವು ವಕೀಲರು, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣ ಮತ್ತು ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂತಹದೊಂದು ಸಮಿತಿ ರಚನೆಗೆ ಸರ್ಕಾರ ನಿರ್ಧರಿಸಿದ್ದು, ಸದ್ಯದಲ್ಲೇ  ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ. ಈ ರೀತಿಯ ಘರ್ಷಣೆ ಮರುಕಳಿಸದಂತೆ ಈ ಸಮಿತಿಯೇ ಮುಂಜಾಗ್ರತೆ ವಹಿಸಲಿದೆ. ಮೇಲಿಂದ ಮೇಲೆ ಸಭೆ ಸೇರಿ, ಪರಸ್ಪರರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸುವ ಅಧಿಕಾರವನ್ನೂ ಈ ಸಮಿತಿಗೆ ನೀಡಲು ತೀರ್ಮಾನಿಸಲಾಗಿದೆ.ಸರ್ಕಾರಿ ಆದೇಶ: ನ್ಯಾಯಾಲಯದ ಆವರಣದಲ್ಲಿ ನಡೆದ ದಾಂದಲೆ ಬಗ್ಗೆ ಆಂತರಿಕವಾಗಿ ತನಿಖೆ ನಡೆಸಲು ಸಿಐಡಿ ಡಿಜಿಪಿ ಆರ್.ಕೆ.ದತ್ತ ನೇತೃತ್ವದ ಸಮಿತಿ ರಚನೆಗೆ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಈ ಸಮಿತಿ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ನೀಡಲಿದೆ ಎಂದು ಗೃಹ ಸಚಿವ ಆರ್.ಅಶೋಕ ಸುದ್ದಿಗಾರರಿಗೆ ತಿಳಿಸಿದರು.ಗಾಯಗೊಂಡ ವಕೀಲರು ಮತ್ತು ಮಾಧ್ಯಮದವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಈ ಸಂಬಂಧವೂ ಆದೇಶ ಹೊರಡಿಸಲಾಗಿದೆ. ಜಖಂಗೊಂಡ ವಾಹನಗಳ ರಿಪೇರಿಗೆ ವಿಮಾ ಕಂಪೆನಿಗಳಿಂದ ಆದಷ್ಟು ಬೇಗ ಹಣ ಕೊಡಿಸುವುದಕ್ಕೂ ಕ್ರಮ ತೆಗೆದುಕೊಳ್ಳಲಾಗುವುದು. ಲೋಕಾಯುಕ್ತ ನ್ಯಾಯಾಲಯವನ್ನು ತಕ್ಷಣ ಸ್ಥಳಾಂತರ ಮಾಡುವ ಸಂಬಂಧ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಕೋರಿ ಹೈಕೋರ್ಟ್‌ಗೂ ಪತ್ರ ಬರೆಯಲಾಗಿದೆ ಎಂದು ಅವರು ವಿವರಿಸಿದರು.ಸಿಬಿಐ ಕೋರ್ಟ್ ಸ್ಥಳಾಂತರ ಇನ್ನೂ ಸುಮಾರು ಏಳು ತಿಂಗಳ ಕಾಲ ವಿಳಂಬವಾಗಲಿದೆ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮುಂಭಾಗದಲ್ಲಿ ಕಟ್ಟಡ ನಿರ್ಮಾಣ ಮಾಡಬೇಕಿದೆ. ಈ ಕೆಲಸ ಪೂರ್ಣಗೊಂಡ ನಂತರ ಸಿಬಿಐ ಕೋರ್ಟ್ ಅಲ್ಲಿಗೆ ಸ್ಥಳಾಂತರವಾಗಲಿದೆ ಎಂದರು.ಸಿಜೆ ಜತೆ ಭೇಟಿ: ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಮತ್ತು ಗೃಹ ಸಚಿವ ಆರ್.ಅಶೋಕ ಬುಧವಾರ ಬೆಳಿಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರನ್ನು ಭೇಟಿ ಮಾಡಿ ಬಿಕ್ಕಟ್ಟು ನಿವಾರಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.