ಮಂಗಳವಾರ, ಜನವರಿ 28, 2020
19 °C

ಹಲ್ಲೆ ನಡೆಸಿದ್ದ ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:ಕುಖ್ಯಾತ ರೌಡಿ ಬೆತ್ತನಗೆರೆ ಶಂಕರನ ಸಹಚರ ರಂಗನಾಥ್‌ (30) ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಐದು ಮಂದಿ ಆರೋಪಿಗಳನ್ನು ಎಚ್‌ಎಎಲ್‌ ಪೊಲೀಸರು ಬಂಧಿಸಿದ್ದಾರೆ.ರೌಡಿ ಬಂಡೆ ಮಂಜನ ಸಹಚರರಾದ ಎಸ್‌.ಎನ್‌. ಕುಮಾರ್‌, ಅಲೆಗ್ಸಾಂಡರ್‌, ಕಿರಣ್‌, ತಂಗಮಣಿ ಮತ್ತು ಉಮೇಶ್‌ ಬಂಧಿತರು. ಡಿ.5ರ ರಾತ್ರಿ ರಂಗ­ನಾಥ್‌ ಯಮ್ಮಲೂರಿನ ವ್ಯಕ್ತಿಯೊಬ್ಬ­ರಿಂದ ಹಣ ಪಡೆದು ಕಾರಿನಲ್ಲಿ ನೆಲಮಂಗಲಕ್ಕೆ ವಾಪಸ್‌ ಹೋಗುತ್ತಿದ್ದಾಗ ಆರೋಪಿಗಳು ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.ಎಚ್‌ಎಎಲ್‌ ಸಮೀಪದ ಯಮ್ಮಲೂರು ಗೇಟ್‌ ಬಳಿ ರಂಗನಾತ್‌ ಇದ್ದ ವಾಹನವನ್ನು ಅಡ್ಡಗಟ್ಟಿದ್ದ ಆರೋಪಿಗಳು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕಾರಿನಲ್ಲಿದ್ದ ರಂಗನಾಥ್‌, ಗುರು ಮತ್ತು ಶಮಂತ್‌ಕುಮಾರ್‌ ಅವರ ಕಣ್ಣಿಗೆ ಕಾರದ ಪುಡಿ ಎರಚಿದ್ದ ಆರೋಪಿಗಳು ರಂಗನಾಥ್‌ ಕತ್ತು, ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ನಾಲ್ಕೈದು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ನಂತರ ಆರೋಪಿಗಳು ರಾಮನಗರ, ಚಿತ್ತೂರು, ಕೋಲಾರದಲ್ಲಿ ತಲೆಮರೆಸಿಕೊಂಡಿದ್ದರು. ಹಣಕಾಸು ವ್ಯವಹಾರದಲ್ಲಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಈ ಕೃತ್ಯ ಎಸಗಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)