ಹಲ್ಲೆ ನಡೆಸಿದ ಅಧಿಕಾರಿ ಅಮಾನತಿಗೆ ಆಗ್ರಹ

7

ಹಲ್ಲೆ ನಡೆಸಿದ ಅಧಿಕಾರಿ ಅಮಾನತಿಗೆ ಆಗ್ರಹ

Published:
Updated:
ಹಲ್ಲೆ ನಡೆಸಿದ ಅಧಿಕಾರಿ ಅಮಾನತಿಗೆ ಆಗ್ರಹ

ಶಿವಮೊಗ್ಗ: ಜನಪರ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಅವರೊಂದಿಗೆ ಅಸಭ್ಯವಾಗಿ ವರ್ತಿಸಿ, ದೈಹಿಕ ಹಲ್ಲೆ ನಡೆಸಿದ ಹೊಸನಗರದ ರಿಪ್ಪನ್‌ಪೇಟೆಯ ಬಿಎಸ್‌ಎನ್‌ಎಲ್ ಸಹಾಯಕ ಎಂಜಿನಿಯರ್ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ, ಬುಧವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ ನಗರದ ಸಾಗರದ ರಸ್ತೆಯ ಬಿಎಸ್‌ಎನ್‌ಎಲ್ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಉದ್ಯೋಗ ಖಾತ್ರಿ ಯೋಜನೆಯ ಕಾಯಕ ಬಂಧು ಕಾರ್ಯಕ್ರಮದ ಸುತ್ತೋಲೆಯನ್ನು ಅಂತರ್‌ಜಾಲದಲ್ಲಿ ಪಡೆಯಲು ಗ್ರಾಮ ಪಂಚಾಯ್ತಿಗೆ ತೆರಳಿದ ಕೃಷ್ಣಪ್ಪ ಅವರಿಗೆ ಅಲ್ಲಿ ಬಿಎಸ್‌ಎನ್‌ಎಲ್ ಅಂತರಜಾಲ ಸೇವೆ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ವಿಚಾರಣೆಗೆ ಸ್ಥಳೀಯ ಕಚೇರಿಗೆ ತೆರಳಿದ ಕೃಷ್ಣಪ್ಪ ಅವರೊಂದಿಗೆ ಅಲ್ಲಿನ ಸಹಾಯಕ ಎಂಜಿನಿಯರ್ ಉದ್ದಟತನದಿಂದ ವರ್ತಿಸಿದ್ದಾರೆ. ಅಲ್ಲದೇ, ಅವರ ಮೇಲೆ ದೈಹಿಕ ಹಲ್ಲೆ ನಡೆಸಿ, ಕಚೇರಿಯಿಂದ ಹೊರಗೆ ತಳ್ಳಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ತನಗಾಗಿರುವ ದೈಹಿಕ ಹಲ್ಲೆಯನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರ ಪ್ರಮಾಣ ಪತ್ರದೊಂದಿಗೆ ಟಿ.ಆರ್. ಕೃಷ್ಣಪ್ಪ ದೂರು ದಾಖಲಿಸಿದರೂ ಸಂಬಂಧಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ, ಕೃಷ್ಣಪ್ಪ ವಿರುದ್ಧ ಆ ಅಧಿಕಾರಿ ದಾಖಲಿಸಿದ ಸುಳ್ಳು ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಸಭ್ಯವಾಗಿ ವರ್ತಿಸಿದ ಅಧಿಕಾರಿ ಮೇಲೆ ಇಲಾಖೆ, ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಪಿಯುಸಿಎಲ್ ಜಿಲ್ಲಾ ಕಾರ್ಯದರ್ಶಿ ಸರ್ಜಾಶಂಕರ ಹರಳಿಮಠ, ಕರ್ನಾಟಕ ಜನಶಕ್ತಿ ಸಂಚಾಲಕ ಕೆ.ಎಲ್. ಅಶೋಕ್, ವಿಚಾರವಾದಿ ವೇದಿಕೆಯ ಡಿ.ಎಸ್. ಶಿವಕುಮಾರ್, ಪಿಎಫ್‌ಐನ ಸಲೀಮ್ ಮತ್ತಿತರರು ಪ್ರತಿಭಟನೆಯ ನೇತೃತ್ವವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry