ಹಲ್ಲೆ ಮಾಡಿ ಚಾಲಕನ ಕೊಲೆ

7

ಹಲ್ಲೆ ಮಾಡಿ ಚಾಲಕನ ಕೊಲೆ

Published:
Updated:

ಬೆಂಗಳೂರು: ಟೆಂಪೊ ಚಾಲಕ ರಮೇಶ್ (27) ಎಂಬುವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಕುಮಾರಸ್ವಾಮಿಲೇಔಟ್‌ನ ಪ್ರಗತಿಪುರದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ರಮೇಶ್ ಅವರ ನಾದಿನಿಯನ್ನು ಕೆಲ ಯುವಕರು ಚುಡಾಯಿಸುತ್ತಿದ್ದರು. ಈ ರೀತಿ ವರ್ತಿಸದಂತೆ ರಮೇಶ್, ದುಷ್ಕರ್ಮಿಗಳಿಗೆ ಬುದ್ಧಿ ಮಾತು ಹೇಳಿದ್ದರು. ಈ ಸಂದರ್ಭದಲ್ಲಿ ವಾಗ್ವಾದ ನಡೆದಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದ ಅವರು ರಮೇಶ್ ಮೊಬೈಲ್‌ಗೆ ಕರೆ ಮಾಡಿ ಪ್ರಗತಿಪುರ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದರು. ರಮೇಶ್ ಅವರು ಸಂಬಂಧಿಕ ಆನಂದ್ ಎಂಬುವರ ಜತೆ ಹೋಗಿದ್ದರು. ಅಲ್ಲಿ ಸಹ ರಮೇಶ್ ಮತ್ತು ಯುವಕರ ಮಧ್ಯೆ ವಾಗ್ವಾದವಾಗಿದೆ. ಇದು ವಿಕೋಪಕ್ಕೆ ಹೋದಾಗ ಚಾಕುವಿನಿಂದ ಹೊಟ್ಟೆ ಮತ್ತು ತಲೆಗೆ ಇರಿದು ಕೊಲೆ ಮಾಡಿದ್ದಾರೆ. ಇದನ್ನು ತಡೆಯಲು ಹೋದ ಆನಂದ್ ಅವರಿಗೂ ಚಾಕುವಿನಿಂದ ಇರಿದಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳು ಯಾರೆಂದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು ಆವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕುಮಾರಸ್ವಾಮಿಲೇಔಟ್ ಇನ್‌ಸ್ಪೆಕ್ಟರ್ ಬಾಬು ನರೋನ ಹೇಳಿದ್ದಾರೆ.ಕ್ಷುಲ್ಲಕ ಕಾರಣಕ್ಕೆ ಹಲ್ಲೆ

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಕೋರಮಂಗಲದ ಅಂಬೇಡ್ಕರ್‌ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.ಅಂಬೇಡ್ಕರ್‌ನಗರ ನಿವಾಸಿ ಭಾಸ್ಕರ್ ಹಲ್ಲೆಗೊಳಗಾದವರು. ಅವರು ರಾತ್ರಿ ಮನೆಯ ಸಮೀಪ ನಡೆದು ಹೋಗುತ್ತಿದ್ದಾಗ ಸೈಕಲ್‌ನಲ್ಲಿ ಬಂದ ರಮೇಶ್ ಎಂಬಾತ ಡಿಕ್ಕಿ ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಜಗಳವಾಗಿದೆ. ಆ ನಂತರ ಇಬ್ಬರೂ ಮನೆಗೆ ತೆರಳಿದ್ದಾರೆ.ರಾತ್ರಿ ಹತ್ತು ಗಂಟೆ ಸುಮಾರಿಗೆ ರಮೇಶ ತನ್ನ ಗೆಳೆಯ ಮುನಿರಾಜು ಎಂಬಾತನ ಜತೆ ಬಂದು ಮನೆಯಲ್ಲಿದ್ದ ಭಾಸ್ಕರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಡುಗೋಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಆತ್ಮಹತ್ಯೆ

ಆರ್ಥಿಕ ಸಂಕಷ್ಟದಿಂದ ಬೇಸತ್ತ ತಂದೆ ಮತ್ತು ಮಗಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಪೇಗೌಡನಗರದ ಮಾಚಿದೇವ ವಸತಿ ಸಮುಚ್ಚಯದ ಮನೆಯಲ್ಲಿ ಸೋಮವಾರ ನಡೆದಿದೆ.ಗಂಗಣ್ಣ (55) ಮತ್ತು ದಾಕ್ಷಾಯಿಣಿ (19) ಆತ್ಮಹತ್ಯೆ ಮಾಡಿಕೊಂಡವರು. ದಾಕ್ಷಾಯಿಣಿ ಅವರು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಗಂಗಣ್ಣ ಕೂಲಿ ಕೆಲಸ ಮಾಡುತ್ತಿದ್ದರು. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಅವರು ಸೋಮವಾರ ಮಧ್ಯಾಹ್ನ ವಿಷ ಕುಡಿದಿದ್ದರು. ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ರಾತ್ರಿ ವೇಳೆಗೆ ಇಬ್ಬರೂ ಸಾವನ್ನಪ್ಪಿದರು ಎಂದು ಕೆಂಪೇಗೌಡನಗರ

ಪೊಲೀಸರು ತಿಳಿಸಿದ್ದಾರೆ.ಘಟನೆ ನಡೆದಾಗ ಗಂಗಣ್ಣ ಅವರ ಪತ್ನಿ ಮನೆಯಲ್ಲಿ ಇರಲಿಲ್ಲ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೆಂಪೇಗೌಡನಗರ ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry