ಗುರುವಾರ , ಮಾರ್ಚ್ 4, 2021
29 °C

ಹಳಸಿದ ಮೌಲ್ಯಗಳ ಪ್ರತಿಭಟಿಸುತ್ತ ಹುಟ್ಟಿದ್ದೇ `ದಿಗಂಬರ ಕಾವ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳಸಿದ ಮೌಲ್ಯಗಳ ಪ್ರತಿಭಟಿಸುತ್ತ ಹುಟ್ಟಿದ್ದೇ `ದಿಗಂಬರ ಕಾವ್ಯ'

ನಿಮ್ಮ ಓದು, ವೃತ್ತಿ, ಕುಟುಂಬ ಹಿನ್ನೆಲೆ ಕುರಿತು...

ನಮ್ಮ ತಂದೆ ಪರಮ ಗಾಂಧಿವಾದಿಯಾಗಿದ್ದವರು. ಸ್ವಾತಂತ್ರ್ಯ ಕಾಲದ ಹೋರಾಟದಲ್ಲಿ ಧುಮುಕಿ ಆಸ್ತಿಯನ್ನೆಲ್ಲ ಪರಭಾರೆ ಮಾಡಿದರು. ಅದು ಹೇಗೋ ಒಬ್ಬ ಅಕ್ಕನಿಗೆ ಮದುವೆ ಮಾಡಿದರು, ನಂತರ ಪ್ರಾಪಂಚಿಕ ಜವಾಬ್ದಾರಿಗಳಿಂದ ಮುಕ್ತರಾಗಿಬಿಟ್ಟರು.

ಅಕ್ಕ, ತಂಗಿ, ತಮ್ಮಂದಿರ ದೊಡ್ಡ ಸಂಸಾರದ ಹೊರೆ ನನ್ನ ಹೆಗಲ ಮೇಲೆ ಬಿತ್ತು. `ಸೋವಿಯತ್‌ಲ್ಯಾಂಡ್' ಪತ್ರಿಕೆಗಾಗಿ ದೆಹಲಿಯಲ್ಲಿ ಕೆಲಸ ಮಾಡುವ ಅವಕಾಶ ಬಂದಿತ್ತು, ಕಾಶ್ಮೀರದ ವಿಧಾನಸಭೆಗಾಗಿ ಕೆಲಸ ಮಾಡಲು ನನ್ನ ಕವಿತೆಯೊಂದನ್ನು ಓದಿದ್ದ ಅಲ್ಲಿನ ಸ್ಪೀಕರ್ ಆಹ್ವಾನಿಸಿದ್ದರು. ಸಂಸಾರ ಬಿಟ್ಟು ದೂರ ಹೋಗಲಾರದೇ ಆ ಅವಕಾಶಗಳನ್ನು ನಿರಾಕರಿಸಿದೆ. ನನಗೆ ಮೂವರು ಮಕ್ಕಳು - ಒಬ್ಬ ಮಗಳು ಹಾಗೂ ಇಬ್ಬರು ಗಂಡುಮಕ್ಕಳು.ಕವಿತೆ, ಕ್ರಾಂತಿ ಮತ್ತು ಪ್ರೀತಿ ಕುರಿತು...

ಇದೇನು ಹೀಗೆ ಕೇಳುತ್ತಿರುವೆ? ಕವಿ, ಕ್ರಾಂತಿ, ಪ್ರೀತಿ - ಇವೆಲ್ಲ ಸಮಾನ ಪದಗಳು. ಕ್ರಾಂತಿ ಮತ್ತು ಪ್ರೀತಿ ಬೇರೆಯಲ್ಲ. ಅವು ಒಂದೇ ನಾಣ್ಯದ ಎರಡು ಮುಖಗಳು ಅಷ್ಟೆ. ಹಾಗೆಯೇ ಕ್ರಾಂತಿಕಾರಕ ಕನಸಿಲ್ಲದವನು ಕವಿಯಾಗಲಾರ. ಮೊದಲು ನಾನು ಕವಿಯಾಗಬೇಕೆಂದುಕೊಂಡಿರಲಿಲ್ಲ. ಕಾಲೇಜು ದಿನಗಳಲ್ಲಿ ಹೈದರಾಬಾದಿನಲ್ಲಿ ಪ್ರಗತಿಪರ ಮನಸ್ಸಿನ ಗೆಳೆಯರು ಒಟ್ಟುಗೂಡುತ್ತಿದ್ದೆವು.

ಸಂಘಟಕರು ಒಂದು ನಿಬಂಧನೆ ಮಾಡಿದರು - ಯಾರು ಅಲ್ಲಿ ಬರುವರೋ ಅವರೆಲ್ಲ ಎರಡು ಸಾಲೋ, ನಾಲ್ಕು ಸಾಲೋ ತಮ್ಮತಮ್ಮ ಕವಿತೆ ಓದಬೇಕು ಎಂದು. ಅದುವರೆಗೆ ಒಂದು ಸಾಲೂ ಕವಿತೆ ಬರೆದಿರದ ನಾನು ಹೀಗೆ ಗೆಳೆಯನ ಒತ್ತಾಯಕ್ಕೆ ಕಟ್ಟುಬಿದ್ದು ಕವಿತೆ ಬರೆದೆ. ನಂತರ ಅದು ಪ್ರಮುಖ ಪತ್ರಿಕೆಯಲ್ಲಿ ಪ್ರಕಟವಾಯ್ತು, ನಾನು ಕವಿಯಾಗಿಬಿಟ್ಟೆ! ನನ್ನ ಮೂಲ ಹೆಸರು ಎಂ. ಹೃಷಿಕೇಶವ ರಾವ್. ನನ್ನನ್ನು ಕವಿಯೆಂದು ಯಾರೂ ಗುರುತಿಸಬಾರದೆಂದು ಮೊದಲು `ಸುಧಾ' ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದೆ.

ನಂತರ `ಉದಯಂಚಿನ ಉದಯಾಲು' ಸಂಕಲನ ಮಾತ್ರ ಹೃಷಿಕೇಶವ ರಾವ್ ಹೆಸರಲ್ಲಿ ಬಂತು. 1965ರಲ್ಲಿ `ದಿಗಂಬರ' ಕಾವ್ಯ ಹುಟ್ಟಿದಾಗ ನಗ್ನಮುನಿಯಾದೆ. 1977ರಲ್ಲಿ ಚಂಡಮಾರುತ ಆಂಧ್ರ ಕರಾವಳಿಯನ್ನು ಅಪ್ಪಳಿಸಿದಾಗ ವ್ಯವಸ್ಥೆಯ ಜಡತ್ವ ಕಂಡು ರೋಸಿ ಹೋಯಿತು. `ಕೊಯ್ಯಗುರ್ಯರಂ' ಎಂಬ ದೀರ್ಘಕಾವ್ಯ ಬರೆದೆ. ಅದು ಬಹಳ ಜನಪ್ರಿಯವಾಯಿತು, ಹಲವು ಭಾಷೆಗೆ ಅನುವಾದಗೊಂಡಿತು.

ಜೊತೆಗೆ ಕಥೆಗಳನ್ನು ಬರೆದೆ. `ವಿಲೋಮ ಕಥಾಲು' (ಆಂಟಿ ಸ್ಟೋರೀಸ್) ಬಂತು. `ಆಕಾಶ ದೇವರ'ಎಂಬ ಆತ್ಮಕತೆ ಬಂತು. ಎಮರ್ಜೆನ್ಸಿ ಕಾಲದಲ್ಲಿ 18 ತಿಂಗಳು ಕೆಲಸದಿಂದ ಸಸ್ಪೆಂಡ್ ಆದೆ. ಆ ಸಮಯವನ್ನು ಮರೋಚರಿತ್ರ, ಉದಯಂ, ಎಂಎಲ್‌ಎ ಏಡುಕೊಂಡಲವಾಡು ಸಿನಿಮಾಗಳಿಗೆ ಚಿತ್ರಕತೆ ಬರೆಯಲು ಉಪಯೋಗಿಸಿಕೊಂಡೆ. ಹೀಗೇ..ದಿಗಂಬರ ಕಾವ್ಯ ಶುರುವಾದ ಕಾಲ ಮತ್ತು ಅನಿವಾರ್ಯತೆ ಕುರಿತು..

ಸ್ವಾತಂತ್ರ್ಯ ಬಂತು. ಅದರ ನಂತರ ಪರಿಸ್ಥಿತಿ ಬದಲಾಗಬಹುದೆಂದು ಭಾವಿಸಲಾಗಿತ್ತು. ಆದರೆ ಸ್ವಾರ್ಥ, ಅಸಮಾನತೆ, ಅನೀತಿಗಳು ಬೆಳೆದು ಸ್ವಾತಂತ್ರ್ಯ ಕೇವಲ ಭ್ರಮೆಯೆಂದು ಕೆಲವೇ ವರ್ಷಗಳಲ್ಲಿ ಸಾಬೀತಾಯಿತು. ಬಯಸಿದ್ದಕ್ಕೂ, ಬಂದದ್ದಕ್ಕೂ ಹೊಂದಿಕೆಯೇ ಇಲ್ಲವಾಯಿತು. ಮೊದಲೇ ಜನಸೇವೆ ಮಾಡಿರಬೇಕೆಂಬ ಯಾವ ನಿಯಮವಿಲ್ಲದೆ ಯಾರು ಬೇಕಾದರೂ ಚುನಾವಣೆಯಲ್ಲಿ ನಿಂತು ರಾಜಕೀಯ ಮುಖಂಡರಾಗಿ ಅಧಿಕಾರ ಪಡೆಯಬಹುದಾಯಿತು.

ಹೀಗಾಗಿ ಅಡ್ಡದಾರಿಯಲ್ಲಿ ಹಣ ಸಂಪಾದಿಸಿದವರು ಜಾತಿಮತಧರ್ಮದ ಆಧಾರದಿಂದ, ಧನಬಲದಿಂದ ಗೆಲ್ಲತೊಡಗಿದರು. ಅಪರಿಮಿತ ಸಂಪಾದನೆಗೆ, ಅಧಿಕಾರಕ್ಕೆ ರಾಜಕೀಯವು ಸುಲಭ ಮಾರ್ಗ ಒದಗಿಸಿತು. ಜನಗಳು ವೋಟುಗಳಾಗಿ ಮಾರ್ಪಟ್ಟರು. ನೀತಿ-ಅನೀತಿ; ಧರ್ಮ-ಅಧರ್ಮ ಯಾವುದು ಯಾವುದೆಂದು ತಿಳಿಯದೆ ಎಲ್ಲ ಕಲಸುಮೇಲೋಗರವಾದಂತಾಯಿತು.ಹೀಗೆ ಒಂದು ಕಡೆ ಸರ್ಕಾರದ ವೈಫಲ್ಯ, ವ್ಯವಸ್ಥೆಯ ಮುಖವಾಡಗಳು, ತಲೆಯಾಡಿಸುವ ಅಧಿಕಾರಿ ಗಣ ಕಣ್ಣಿಗೆ ರಾಚುವಂತಿದ್ದರೆ; ಇನ್ನೊಂದು ಕಡೆ ಚಿಂತಕರ ಉದಾಸೀನತೆ, ಕವಿಗಳ ಅಸ್ಪಷ್ಟ, ಹೊಗಳಿಕೆಯ ಕಾವ್ಯಗಳು, ಅಸತ್ಯ ಮರೆಮಾಚುವಿಕೆಗಳಿಂದ ಜನಾಂಗವು ನಿಸ್ತೇಜ ಹಾಗೂ ನಿರ್ವೀರ್ಯವಾಯಿತು. ಪ್ರಜಾಪ್ರಭುತ್ವದಲ್ಲಿ ಹೌದಪ್ಪಗಳ ಮೇಳ ನಡೆಯಿತು.ಇದನ್ನೆಲ್ಲ ಯಾರೊಬ್ಬರು ಪ್ರತಿಭಟಿಸುವುದು ಸಾಧ್ಯವಿರಲಿಲ್ಲ.  ನನ್ನ ಸಮಾನ ಮನಸ್ಕ ಕವಿಗಳಿಗೆ ಹುಡುಕತೊಡಗಿದೆ. ಭೈರವಯ್ಯ ಹಾಗೂ ಮಹಾಸ್ವಪ್ನ ನನ್ನ ಅಭಿಮಾನಿಗಳಾಗಿದ್ದರು. ನಿಖಿಲೇಶ್ವರ ಸಹಪಾಠಿಯಾಗಿದ್ದರು. ಅವರಿಗೆಲ್ಲ ಸದ್ಯದ ಪರಿಸ್ಥಿತಿಯಲ್ಲಿ ಏನಾದರೂ ಮಾಡಲೇಬೇಕಾದ ಅನಿವಾರ್ಯತೆ ಕುರಿತು ಹೇಳಿದೆ. ಆಗ ಇದೊಂದು ಸ್ಫೂರ್ತಿದಾಯಕ ಆಂದೋಲನವಾದೀತೆಂಬ ಯಾವ ಕಲ್ಪನೆಯೂ ಇರಲಿಲ್ಲ.

ಒಳತುಡಿತಕ್ಕೆ ದನಿಯಾದೆನಷ್ಟೆ. ನನ್ನನ್ನೊಳಗೊಂಡು ಆರು ಜನ ಕವಿಗಳು - ನಗ್ನಮುನಿ, ಚೆರಬಂಡರಾಜು, ಮಹಾಸ್ವಪ್ನ, ಜ್ವಾಲಾಮುಖಿ, ನಿಖಿಲೇಶ್ವರ ಮತ್ತು ಭೈರವಯ್ಯ - ಒಂದು ಆಂದೋಲನ ಪ್ರಾರಂಭಿಸಿದೆವು. ಹೀಗೆ ಹಳಸಿದ ಮೌಲ್ಯವನ್ನು ಪ್ರತಿಭಟಿಸುತ್ತ ಹುಟ್ಟಿದ ಕಾವ್ಯವೇ `ದಿಗಂಬರ ಕಾವ್ಯ'.  

ಜನಸಾಮಾನ್ಯರನ್ನು ಕವಿತೆ ಮುಟ್ಟಲು ಉತ್ತಮ ಬಗೆ ಯಾವುದು? ಹೇಗೆ? ಮೊಬೈಲು, ಕಂಪ್ಯೂಟರ್ ಮತ್ತು ವಿಷುವಲ್ ಮೀಡಿಯಾದ ಈ ಕಾಲದಲ್ಲಿ ಕಲಾ ಪ್ರಕಾರವಾಗಿ ಕಾವ್ಯ ಬದಲಾಗಬೇಕಿದೆ ಎನಿಸುವುದೆ?

ಕಾವ್ಯ ಕುರಿತು, ಅದು ತಲುಪುತ್ತಿದೆಯೆ ಇಲ್ಲವೆ ಎಂಬ ಕುರಿತು, ಅದರ ರೂಪ ಶೈಲಿಯ ಕುರಿತು ಏನೂ ಯೋಚಿಸಬೇಡಿ. ಯಾವ ಚಿಂತನೆ, ವಿಮರ್ಶೆ, ತರ್ಕದ ಹಂಗಿಲ್ಲದೆ ಮುಕ್ತವಾಗಿ ಬರೆಯಿರಿ. ಅದು ತಲುಪಬೇಕಾದವರನ್ನು ತನ್ನದೇ ವಿಧಾನದಲ್ಲಿ ತಲುಪುತ್ತದೆ. ಸತ್ವಶಾಲಿ ಕಾವ್ಯ ತನ್ನ ಓದಿಗೆ ತಕ್ಕ ವಾತಾವರಣವನ್ನೂ ಸೃಷ್ಟಿಸಿಕೊಳ್ಳುವ ತಾಕತ್ತು ಪಡೆದಿರುತ್ತದೆ. ಉಳಿದ ಯಾವುದರ ಕುರಿತೂ ತಲೆ ಕೆಡಿಸಿಕೊಳ್ಳದೇ ಸುಮ್ಮನೆ ಬರೆಯುತ್ತ ಹೋಗಿ.`ದಿಗಂಬರ' ಎಂಬ ಹೆಸರೇಕೆ?

ಮನುಷ್ಯ ತನ್ನ ಮುಖವಾಡ ಕಿತ್ತು ಬಿಸಾಡಬೇಕು. ನೀನು ನಿನ್ನ ದಿರಿಸು, ಅಧಿಕಾರ, ಕೀರ್ತಿ, ಬಂಧುಗಳು ಇವೆಲ್ಲದರೊಳಗೆ ಅಡಗಿರುವ ನಿನ್ನ ನಿಜವಾದ ಸ್ವರೂಪವನ್ನು, ನಿನ್ನತನವನ್ನು ನಂಬಬೇಕಿದೆ. ಈ ಪ್ರಪಂಚ, ಕಲಾಪ, ಜಂಗುಳಿಯ ನಡುವೆ ನೀನೆಂದೂ ಏಕಾಂಗಿ. ಹುಟ್ಟುಸಾವುಗಳ ನಡುವೆ ಹೋರಾಡುವ ಯೋಧ ನೀನು. ಏಕಾಂಗಿತನ ನಿನ್ನ ಕವಚವಾಗಬೇಕು. ನಿನ್ನ ಎಲುಬು, ಭಯ, ಕಣ್ಣೀರು, ಗೊಂದಲ, ಸುಖ ಈ ಎಲ್ಲವೂ ನಿಜ.

ಆದರೆ ಅವೆಲ್ಲದರಿಂದ ಅನತಿ ದೂರದಲ್ಲಿ ನಿರ್ಮಲವಾದ, ಸಹಜವಾದ, ಅಜೇಯವಾದ ನಿನ್ನ ನಿಜರೂಪವಿದೆ. ಪ್ರತಿ ಮನುಷ್ಯನ ನಿಜರೂಪವೂ ದೀಪದಂತೆ ಬೆಳಗುತ್ತಿರುತ್ತದೆ. ಆದರೆ ಹೊದಿಕೆಯೊಳಗೆ ಆಡಂಬರಗಳ ಹಿಂದೆ ಕಳ್ಳರಂತೆ ಬದುಕುತ್ತಿದ್ದೆೀವೆ. ನಿನ್ನನ್ನು ನೀನು ಒಮ್ಮೆ ದಿಗಂಬರವಾಗಿ ನೋಡಿಕೋ. ಮುಸುಕು ತೆಗೆದು ಬಿಸಾಡು. ನಿನ್ನ ನಿಜರೂಪದಿಂದ ಜಗವನ್ನು ಪರಿಪಾಲಿಸು..ಹೀಗೆನ್ನುತ್ತ ನಾವು ಆರು ಜನ ಸುತ್ತಣ ಜನರನ್ನು ಪ್ರೀತಿಸುತ್ತ, ಪ್ರೇರೇಪಿಸುತ್ತ ಹೋದೆವು. ನಮಗೆ ಪುಸ್ತಕಗಳಿಂದ ಮಾತಾಡುವ ಆಶೆಯಿರಲಿಲ್ಲ, ಅನುಭವದಿಂದ ಮಾತಾಡುವ ಆಶೆ. ಶಂಕರಾಚಾರ್ಯ, ಸಾರ್ತ್ರೆಯ ಮಾತುಗಳನ್ನು ಉದ್ಧರಿಸಬೇಕಿರಲಿಲ್ಲ.  ನಾವು ನಮ್ಮ ದಿಗಂಬರ ಕಂಠದಿಂದ ನಾವು ನಾವಾಗಿ ನುಡಿಯುತ್ತ ಹೋದೆವು.

ಇದು ದಿಗಂಬರತ್ವ. ನಮ್ಮ ಕಾವ್ಯವನ್ನು ಮುಕ್ತಛಂದ, ಸ್ವೇಚ್ಛಾ ಕವಿತೆ, ಅನಿಬದ್ಧ ಕಾವ್ಯ, ವಚನ ಗೇಯ ಹೀಗೆ ಏನೇನೋ ಹೆಸರುಗಳಿಂದ ಕರೆದರು. ಆದರೆ ಅದು ಅದಾವುದೂ ಅಲ್ಲ. ನಾವು ದಿಗಂಬರ ಕವಿಗಳು, ನಮ್ಮದು ದಿಗಂಬರ ಕವಿತೆ.ನಿಮ್ಮ ಹೆಸರು `ನಗ್ನಮುನಿ' ಏಕೆ?

ಸಾಮಾನ್ಯ ಅರ್ಥದಲ್ಲಿ ನಗ್ನತೆಯೆಂದರೆ ಬಟ್ಟೆ ತೊಡದಿರುವಿಕೆ. ನಗ್ನಮುನಿ ಎಂಬ ಹೆಸರು ಕೇಳಿ ಎಷ್ಟೋ ಜನ ಬಟ್ಟೆ ತೊಡದ ಒಬ್ಬ ಕವಿ ಬರುವನೆಂದು ಊಹಿಸಿ ಸಮಾರಂಭಗಳಿಗೆ ಬಂದದ್ದಿದೆ. ಒಂದು ಊರಿನ ಸಾಧುಸಂತರಂತೂ ಬರಲಿರುವ ನಗ್ನಮುನಿಯ ದರ್ಶನಕ್ಕಾಗಿ ಕಾದು ಕುಳಿತಿದ್ದರು! ಈ ಹೆಸರು ಎಷ್ಟೋ ಜನ ನಾನಲ್ಲದ ನನ್ನನ್ನು ಊಹಿಸಿಕೊಳ್ಳುವಂತೆ ಮಾಡಿದೆ.ಆದರೆ ತಾತ್ವಿಕವಾಗಿ ನಗ್ನತೆಯೆಂದರೆ ಬಟ್ಟೆಯಿಲ್ಲದಿರುವಿಕೆಯಲ್ಲ. ನಗ್ನತೆಯೆಂದರೆ ಮುಕ್ತತೆ. ನಿನ್ನ ನಾನೀಗ ನೋಡುತ್ತಿರುವಾಗ ನಿನ್ನ ಬಟ್ಟೆಯನ್ನಾಗಲೀ, ಕಣ್ಣನ್ನಾಗಲೀ, ಬರೆಯುತ್ತಿರುವ ಕೈಯನ್ನಾಗಲೀ, ಚರ್ಮದ ಬಣ್ಣವನ್ನಾಗಲೀ ನೋಡುತ್ತಿಲ್ಲ. ನಿನ್ನ ಒಳಗನ್ನು - ಅದನ್ನು ಆತ್ಮವೆಂದಾದರೂ ಕರಿ, ನಿನ್ನ ಕೇಂದ್ರ, ಮೌಲ್ಯ, ನಿನ್ನತನ, ಅಂತರಂಗ ಹೀಗೆ ಮತ್ತಿನ್ಯಾವುದಾದರೂ ಹೆಸರಿನಿಂದ ಕರಿ - ನಿನ್ನೊಳಗಿನ ಅಂತಸ್ಸತ್ವ, `ಎಸ್ಸೆನ್ಸ್ ಆಫ್ ಯು ` ಅಷ್ಟೇ ನನಗೆ ಕಾಣುತ್ತಿದೆ. ಇದು ನಗ್ನತೆ.  ದಿಗಂಬರವೆಂದರೂ ಇದೇ. ಇದುವರೆಗೆ ಹೊದಿಸಿರುವುದನೆಲ್ಲ , ಚೌಕಟ್ಟಾಗಿ ನಿನ್ನ ಬಂಧಿಸಿರುವುದನೆಲ್ಲ ಕಿತ್ತು ಬಿಸಾಡುವುದೇ ದಿಗಂಬರತೆ, ನಗ್ನತೆ.ನಗ್ನತೆಯ ಇನ್ನೊಂದು ಮುಖ - ನನ್ನೊಳಗನ್ನು ನಾನು ನೋಡಿಕೊಳ್ಳುವುದು. ನನ್ನೊಳಗೆ ಇನ್ನೊಬ್ಬನಿದ್ದಾನೆ. ಅವನು ಸಂಪೂರ್ಣ ನಗ್ನ. ನನ್ನ ಮುಖವಾಡಗಳ, ತೋರುಗಾಣಿಕೆಯ ಚಪಲಗಳ ಕಂಡು ಕೂಡಲೇ ಗಹಗಹಿಸಿ ನಗುವವ ಅವನು. ನಾವು ಬಹಳ ಸಾರಿ ಅವನನ್ನು ಹತ್ತಿಕ್ಕಲು ನೋಡುತ್ತೇವೆ. ಆತ ನಿಷ್ಠುರ ಸತ್ಯವಂತ. ನಾನು ಅವನೊಡನೆ ನಿರಂತರ ಸಂಭಾಷಣೆ ನಡೆಸಬೇಕು.

ಅವನು ನಿರಂತರ ಹೇಳುತ್ತಲೇ ಇರುತ್ತಾನೆ, `ವಿಂಟುನಾವಾ ನಗ್ನಮುನಿ? (ಕೇಳಿದೆಯಾ ನಗ್ನಮುನಿ?)' ಎಂದು. ಆ ಧ್ವನಿ ನಿಲ್ಲಬಾರದು. ಒಳಗಿನವನು ಮಾತು ನಿಲ್ಲಿಸಿದ ದಿನವೇ ಸಾವು. ಹೀಗೆ ನನ್ನೊಳಗಿನ ನಗ್ನ ನಾನು, ಹೊರಜಗತ್ತನ್ನು ನಗ್ನವಾಗಿ ನೋಡಬಯಸುವ ನಾನು - ಇದು ನಗ್ನತೆ.ಕೇವಲ 5 ವರ್ಷ ಉಚ್ಛ್ರಾಯ ಸ್ಥಿತಿಯಲ್ಲಿದ್ದ `ದಿಗಂಬರ ಪಂಥ `ಎಷ್ಟೊಂದು ಪರಿಣಾಮಕಾರಿಯಾಗಿ ತೆಲುಗು ಕಾವ್ಯದ ದಿಕ್ಕು ಬದಲಿಸಿತು. ಹಿಂದಿರುಗಿ ನೋಡುವಾಗ ಏನನಿಸುತ್ತಿದೆ?

ಶಿಥಿಲ ಭಾರತೀಯ ಸಮಾಜ ಇನ್ನೂ ಹುಟ್ಟಲಿರುವ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತಿಳಿಯಬೇಕಾಗಿದೆ. ದಿಗಂಬರ ಆಂದೋಲನ ಆರಂಭವಾದಾಗಿನಿಂದ ಇಂದಿನವರೆಗೆ ಅದು ಜನರನ್ನು ಉತ್ತೇಜಿಸುತ್ತಲೆ ಇದೆ. ಇದರ ಪ್ರಭಾವ ಆಧುನಿಕ ತೆಲುಗು ಸಾಹಿತ್ಯದ ಮೇಲೆ ಗಾಢವಾಗಿದೆ. ನಂತರ ಬಂದ ನಾನಾ ಆಂದೋಲನಗಳ ಬೀಜ ದಿಗಂಬರ ಕಾವ್ಯದಲ್ಲಿದೆ.ದಿಗಂಬರ ಕವಿತೆ ಮುಖ್ಯವಾಗಿ ದುಷ್ಟ ಮೌಲ್ಯಗಳಿಂದ ತುಂಬಿದ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಧಾರ್ಮಿಕ ಆಗ್ರಹದಿಂದ ಹೊರಬಂದ ಕವಿತೆ. ಸ್ವಾತಂತ್ರ್ಯಾನಂತರ ತೆಲುಗು ಸಾಹಿತ್ಯದಲ್ಲಿ ಹೊರಬಂದ ಮೊದಲ ಆಂದೋಲನ ಕವಿತೆ ಅದು. ಆ ಕವಿಗಳ ಆಗ್ರಹ ತಿಳಿದುಕೊಳ್ಳಲು ಕೇವಲ ಕವಿತಾಂಶವಷ್ಟೆ ಸಾಕಾಗುವುದಿಲ್ಲ. ಆ ಕಾಲಘಟ್ಟವನ್ನು ನೆನಪಿಸಿಕೊಳ್ಳಬೇಕು. ಅದುವರೆಗೆ ಕ್ಯಾಲೆಂಡರ್ ಕವಿತೆ, ಪ್ರಾಜೆಕ್ಟ್ ಕವಿತೆಗಳನ್ನು ಬರೆಯುತ್ತಿದ್ದರು. ನಿರ್ಬಲ ರಾಜಕೀಯ ವಾತಾವರಣದಲ್ಲಿ ನಿದ್ದೆ ಮಾಡುತ್ತಿದ್ದರು. ವಚನ, ಪದಗಳನ್ನು ಪುಂಖಾನುಪುಂಖವಾಗಿ ಪ್ರಕಟಿಸುತ್ತ ತಾವೇನು ಬರೆಯುತ್ತಿದ್ದೆೀವೆಂದೇ ತಿಳಿಯದೇ ಬರೆಯುತ್ತಿದ್ದರು.

ಅವರನ್ನು ದಿಕ್ ಎಂಬ ಚಾಟಿ ಏಟಿನಿಂದ ಸಂಚಲನಗೊಳಿಸ್ದ್ದಿದು ದಿಗಂಬರತ್ವ. ದಾರಿಪಕ್ಕ ಅನಾಥವಾಗಿ ಬಿದ್ದಿದ್ದ ಸಮಾಜಕಲ್ಯಾಣವನ್ನು ಮತ್ತೆ ಎಲ್ಲರ ಗಮನಕ್ಕೆ ತಂದಿದ್ದು ದಿಗಂಬರ ಕಾವ್ಯ. ಅದಕ್ಕೆ ರಾಜಕೀಯ ಉದ್ದೆೀಶವಿರಲಿಲ್ಲ. ಈ ದೇಶ-ಪ್ರಪಂಚದ ಪ್ರತಿ ಉಸಿರಾಡುವ ಜೀವಿಯ ಉಳಿವಿಗಾಗಿ ಪರಿತಪಿಸಿ, ಅವನ ಭವಿಷ್ಯ ಕಂಡು ದುಃಖಿಸಿ, ಹುಚ್ಚೆದ್ದು ಬರೆದ ಕವಿತೆಗಳು ಅವು.ಉಳಿದ ದಿಗಂಬರ ಕವಿಗಳ ಕುರಿತು.. ಈಗ?

ದಿಗಂಬರ ಆಂದೋಲನ ಒಂದು ವಿಸ್ಫೋಟ. ದಿಗಂಬರ ಕವಿಗಳು ಕುಲಮತ ಚಿಹ್ನೆಗಳಿದ್ದ ತಮ್ಮ ಹೆಸರು ತ್ಯಜಿಸಿ ಹೊಸ ಕಾವ್ಯನಾಮ ಧರಿಸಿದರು. ಚೆರಬಂಡ ರಾಜು, ಜ್ವಾಲಾಮುಖಿ, ನಿಖಿಲೇಶ್ವರ, ಭೈರವಯ್ಯ, ಮಹಾಸ್ವಪ್ನ ಹಾಗೂ ನಾನು - ಆರು ಜನ ದಿಗಂಬರ ಶಕೆ ಹುಟ್ಟುಹಾಕಿದೆವು. ಅಪರಾತ್ರಿಯಲ್ಲಿ ಎಲ್ಲೆಲ್ಲೋ ಒಟ್ಟಿಗೆ ಕೂತು ಚರ್ಚಿಸಿ, ಕಾವ್ಯದ ಕುರಿತು, ಪ್ರಸ್ತುತ ವ್ಯವಸ್ಥೆಯ ಟ್ರೆಂಡ್‌ಗಳ ಕುರಿತು ಚರ್ಚೆ ನಡೆಸುತ್ತಿದ್ದೆವು.

ನಾನು ಆಡಳಿತ ಯಂತ್ರಕ್ಕೆ ಹತ್ತಿರವಿದ್ದುದರಿಂದ ವಿಷಯಗಳು ಬೇಗ ತಿಳಿಯುತ್ತಿದ್ದವು. ಮೊದಮೊದಲು ನನ್ನಂತೆ ಬರೆಯಬಲ್ಲ  ನನ್ನ ಮನಸ್ಥಿತಿಗೆ ಹೊಂದುವವರನ್ನು ಹುಡುಕಿದೆ. 100 ಜನ ದಿಗಂಬರ ಕವಿಗಳನ್ನು ತಯಾರು ಮಾಡಬೇಕೆನ್ನುವುದು ನನ್ನ ಗುರಿಯಾಗಿತ್ತು. ಆವಾಗೀವಾಗ ಓರಿಯೆಂಟೇಷನ್ ತರಗತಿ ತೆಗೆದುಕೊಂಡು ಎಂಥ ವಸ್ತು ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ಮಾತನಾಡುತ್ತಿದ್ದೆ.

ನಂತರ ಆರು ಜನರ ಗುಂಪು ಸಿದ್ಧವಾಗಿ ಕಾವ್ಯ ರಚಿಸತೊಡಗಿದೆವು. ಆರು ಜನರಲ್ಲಿ ಚೆರಬಂಡರಾಜು ಬೇಗನೇ ತೀರಿಕೊಂಡರು. ಆತ ತುಂಬ ತೀವ್ರಗಾಮಿ ಮತ್ತು ಆಸೀಮ ನಿಷ್ಠೆಯ ಮನುಷ್ಯ. ತನ್ನ ತೀವ್ರತೆಯಿಂದಾಗಿಯೇ ಉಲ್ಕೆಯಂತೆ ಉರಿದುಹೋದನೇನೋ ಎನಿಸಿದ್ದಿದೆ. ಭೈರವಯ್ಯ ಆಧ್ಯಾತ್ಮದ ದಾರಿ ಹಿಡಿದು ಸಾಧುವಾಗಿ ಆಶ್ರಮ ನಡೆಸುತ್ತಿದ್ದಾರೆ.

ಮಹಾಸ್ವಪ್ನ ತಮ್ಮ ಸ್ವಂತ ಊರಾದ ಲಿಂಗಸಮುದ್ರ ಸೇರಿ ಆಂದೋಲನ ಮತ್ತು ಕಾವ್ಯದಿಂದ ದೂರವಾಗಿದ್ದರು. ಜ್ವಾಲಾಮುಖಿ, ನಿಖಿಲೇಶ್ವರ ಹೈದರಾಬಾದಿನಲ್ಲಿದ್ದರು. ದೇವರನ್ನು ನಂಬದವರು ನಿಖಿಲೇಶ್ವರನೆಂಬ ಹೆಸರೇಕೆ ಇಟ್ಟುಕೊಂಡಿರೆಂದು ಕೇಳಿದರೆಂದು ಅವರು ನಿಖಿಲ್ ಎಂಬ ಹೆಸರಿನಲ್ಲಿ ಕೆಲಕಾಲ ಬರೆದರು. ಜ್ವಾಲಾಮುಖಿ ಮತ್ತು ಮಹಾಸ್ವಪ್ನ ತೀರಿಕೊಂಡರು.

ತೆಲುಗಿನ ಕವಯಿತ್ರಿಯರ ಕುರಿತು...

ಒಂದು ಮಾತು ಹೇಳಲೆ? ನೀನು, ನಿನ್ನಂಥ ಹೆಣ್ಣುಮಕ್ಕಳು ಬಹಳ ಮೊದಲೇ ನನಗೆ ಸಿಗಬೇಕಿತ್ತು. ನಾನು ತುಂಬ ಹುಡುಕಾಟ ನಡೆಸಿದೆ. ಒಬ್ಬಳಾದರೂ ಮಹಿಳೆಯನ್ನು ದಿಗಂಬರ ಪಂಥದಲ್ಲಿ ತಯಾರು ಮಾಡಬೇಕೆಂದು ಪ್ರಯತ್ನಿಸಿದೆ. ಕೆಲವರ ಬಳಿ ಮಾತೂ ಆಡಿದ್ದೆ. ಆದರೆ ಅಂದಿನ ಸಾಮಾಜಿಕ ಪರಿಸ್ಥಿತಿ ಪೂರಕವಾಗಿರಲಿಲ್ಲ.  ಅಂದು ಮಹಿಳೆಯರು ಬರೆಯುವುದೆಂದರೆ ಹೆಚ್ಚಾಗಿ ಕಾದಂಬರಿ ಅಥವಾ ಕತೆ ಬರೆಯುತ್ತಿದ್ದರು.

ಕವಿತೆ ಬರೆಯುವವರು ಬಹಳ ಕಮ್ಮಿ ಜನರಿದ್ದರು. ಜೊತೆಗೆ ನಾವು ಕವಿಗಳು ಒಟ್ಟು ಸೇರುತ್ತಿದ್ದುದು ಎಷ್ಟೆಂದರೆ ಅಷ್ಟು ಹೊತ್ತಿನಲ್ಲಿ. ಐದಾರು ಜನರ ನಡುವೆ ಒಬ್ಬ ಮಹಿಳೆಯಿದ್ದರೆ ಜನ ಅವಳಿಗೆ ಏನೆಲ್ಲ ಹೆಸರಿಡಬಹುದಿತ್ತು? ದ್ರೌಪದಿ ಎಂದುಬಿಡುತ್ತಿದ್ದರು. ಅದು ಕೊಂಚ ರಿಸ್ಕಿಯಾಗಿ ಕಂಡಿತು. ಆದರೆ ಹೌದು, ತೆಲುಗು ಕಾವ್ಯ ಚಳವಳಿಗಳು ಮಹಿಳಾ ಸಾಮರ್ಥ್ಯವನ್ನು ಸೂಕ್ತವಾಗಿ ಬಳಸಿಕೊಂಡಿಲ್ಲ.  ಅದಕ್ಕೇ ನಂತರ ಬಂದ ಮಹಿಳಾ ಚಳವಳಿಯಲ್ಲಿ ಹುಟ್ಟಿದ ಕವಯಿತ್ರಿಯರು ಇದೇ ಪ್ರಶ್ನೆಯನ್ನು ಹೋರಾಟಗಾರರಿಗೆ ಕೇಳುತ್ತಾರೆ. ಅವರ ತಕರಾರು ಸಕಾರಣವಾಗಿದೆ.ವರ್ತಮಾನ ಸಂದರ್ಭದಲ್ಲಿ ಕಾವ್ಯದ ಸ್ಥಾನಮಾನ - ಒಂದು ಕಲಾ ಪ್ರಕಾರವಾಗಿ ಹಾಗೂ ಪ್ರತಿರೋಧದ ನೆಲೆಯಾಗಿ..

ವರ್ತಮಾನ ಸಂದರ್ಭದಲ್ಲಿ ಕಾವ್ಯದ ಜವಾಬ್ದಾರಿ ಮೊದಲಿಗಿಂತ ಹೆಚ್ಚಾಗಿದೆ, ಹಾಗೇ ಕವಿಯ ಜವಾಬ್ದಾರಿಯೂ ಕೂಡಾ. ಸುತ್ತಲ ಜಗತ್ತು ನೋವನುಭವಿಸುತ್ತಲೂ ಪ್ರತಿಭಟಿಸದೆ ನಿಷ್ಕ್ರಿಯವಾಗಿರುವಾಗ ಕವಿತೆ ಅವರನ್ನು ಚುಚ್ಚಿಚುಚ್ಚಿ ಎಚ್ಚರಿಸಬಲ್ಲದು. ಜನ ಮೊದಲಿನಿಂದಲೂ ವ್ಯವಸ್ಥೆಯ ಕುರಿತ ವಿರೋಧವನ್ನು ಕಾವ್ಯದಲ್ಲಿ ಹೊರಹಾಕಿದ್ದಾರೆ. ಕವಿ ಕೊಲೆಗಾರ. ಕವಿಯಿಂದ ಹೊರಬರುವ ಪ್ರತಿಮಾತು ಭಾವದ ಭ್ರೂಣಹತ್ಯೆ ಮಾಡಿ ಹೊರಬರುತ್ತದೆ. ಕಾಗದದಲ್ಲಿ ಅಕ್ಷರಗಳನ್ನು ಹುಗಿಯುವ ಕುಣಿಗಾರ ಕವಿ.ನಾವು ದಿಗಂಬರ ಕಾವ್ಯಸಂಪುಟಗಳನ್ನು ಮೂರು ಬಾರಿಯೂ ಮಧ್ಯರಾತ್ರಿ ಬೀದಿಯಲ್ಲಿ ಬಿಡುಗಡೆ ಮಾಡಿದೆವು. ಮೊದಲನೆಯದನ್ನು 1965ರಲ್ಲಿ ಒಬ್ಬ ರಿಕ್ಷಾವಾಲಾ, ಎರಡನೆಯದನ್ನು 1966ರಲ್ಲಿ ಒಬ್ಬ ಹೋಟೆಲ್ ಸರ್ವರ್ ಹಾಗೂ ಮೂರನೆಯದನ್ನು ಒಬ್ಬ ಮುದಿ ಭಿಕ್ಷುಕಿ 1968ರಲ್ಲಿ ನಡುರಾತ್ರಿ ಬಿಡುಗಡೆ ಮಾಡಿದರು. ಕಾವ್ಯ ಎಂದಿದ್ದರೂ ಮಧ್ಯರಾತ್ರಿಯ ಮಗು. ಮಧ್ಯರಾತ್ರಿಗಿರುವುದು ಒಂದೇ ಆಯ್ಕೆ - ಬೆಳಕು ಹರಿಯುವುದು. ಅದನ್ನು ಯಾರೂ ತಡೆಯಲಾರರು. ಕವಿ ಕಾವ್ಯದ ಈ ಶಕ್ತಿಯನ್ನು ನೆನಪಿಡಬೇಕು.ಸಶಸ್ತ್ರ ಕ್ರಾಂತಿ ಮತ್ತು ಪ್ರಜಾಸತ್ತಾತ್ಮಕ ಹೋರಾಟ - ಚಳವಳಿಯ ಮಾರ್ಗವಾಗಿ ಯಾವುದು ಪರಿಣಾಮಕಾರಿ, ಅವಶ್ಯ ಎಂದು ನಿಮ್ಮ ಅಭಿಮತ?

ಚಾರು ಮಜುಂದಾರ್ ಅವರ ನಕ್ಸಲ್‌ಬಾರಿ ಘಟನೆಯ ನಂತರ ಆಂಧ್ರದಲ್ಲಿ ಆ ಚಳವಳಿ ತುಂಬ ತೀವ್ರ ಸ್ವರೂಪ ಪಡೆಯಿತು. ಆಗ ಮುನ್ನೆಲೆಗೆ ಬಂದ ನೂರಾರು ಹೋರಾಟಗಾರರು ಹಾಗೂ ಹಾಡುಗಾರರು ನೀವು ಆರೇ ಜನ ವ್ಯವಸ್ಥೆಯ ವಿರುದ್ಧ ಹೋರಾಡಬೇಕೆ? ನಮ್ಮಡನೆ ಬನ್ನಿ ಎಂದರು. ಆ ಪ್ರಜಾಚಳವಳಿಯ ಉದ್ದೆೀಶ ದಿಗಂಬರ ಆಂದೋಲನದ ಜೊತೆ ಸಾಮ್ಯ ಹೊಂದಿದ್ದ ಸಲುವಾಗಿ ನಾವು ನಂತರ ವಿಪ್ಲವ ರಚಯಿತುಲ ಸಂಘಂ (ವಿರಸಂ) ದಲ್ಲಿ ಲೀನವಾದೆವು. ನಾನು 1979ರವರೆಗೆ ವಿರಸಂ ಜೊತೆ ಇದ್ದೆ. ನಂತರ ಹೊರಬಂದೆ.ನನಗೆ ನನ್ನದೆ ಆದ ವಿರೋಧಗಳಿದ್ದವು. ಸಶಸ್ತ್ರಕ್ರಾಂತಿಯನ್ನು ಪ್ರತಿಪಾದಿಸುತ್ತಿದ್ದ ನಕ್ಸಲ್ ಹೋರಾಟ ದುಡಿಯುವ ಕೈಗಳಿಗೆ ಶೋಷಿತರಿಂದ ಅಧಿಕಾರ ಕಿತ್ತುಕೊಳ್ಳಲು ಅದೇ ಸುಲಭದ ದಾರಿಯೆಂದು ಹೇಳಿತು. ಆದರೆ ಈ ಹಾದಿಯಿಂದ ಕೊನೆಗೆ ಸಾಧಿಸುವುದು ಏನನ್ನು ಎಂದು ಪ್ರಶ್ನಿಸಿಕೊಂಡೆ. ನನ್ನೆದುರು ಹತರಾದ ಜಮೀನ್ದಾರರಿದ್ದರು. ಅವರ ಮರಣದ ಬಳಿಕ ಆಸ್ತಿ ಶ್ರಮಿಕ ರೈತರಿಗೆ ಹೋಗುವ ಬದಲು ಕಾನೂನಿನ ಪ್ರಕಾರ ಉತ್ತರಾಧಿಕಾರಿಗಳಿಗೆ ಹೋಗುತ್ತಿತ್ತು.ಗೇಣಿರೈತರ ಶೋಷಣೆ ಮುಂದುವರೆಯುತ್ತಿತ್ತು. ಎಷ್ಟೋ ಸಲ ತಿರುಗಿ ನಡೆಸಿದ ದಾಳಿಗಳಲ್ಲಿ ನಿಶ್ಶಸ್ತ್ರ ಬಡ ರೈತರು ಅಸಾಮಾನ್ಯ ತೊಂದರೆ ಅನುಭವಿಸಿದರು. ಜೊತೆಗೆ ಪೊಲೀಸರ ಕಣ್ಣು ಅಂಥವರ ಮೇಲೆ ಬೀಳುತ್ತಿತ್ತು. ಪೊಲೀಸರ ಬೇಟೆಯ ಗುರಿಯಾಗಿ ಬದುಕು ಸವೆಸುವ ಶ್ರಮಿಕನ ಬವಣೆಗೆ ಯಾರು ಹೊಣೆ ಎನಿಸಿತು. ಎಂದೇ ಕೆಲ ವರ್ಷ ಕಳೆದ ತರುವಾಯ ಯಾವ ಕಾನೂನು ಜಮೀನ್ದಾರರನ್ನು ಜಮೀನ್ದಾರರನ್ನಾಗಲು ಬಿಟ್ಟಿದೆಯೋ, ಶೋಷಕನನ್ನು ಶೋಷಕನನ್ನಾಗಲು ಬಿಟ್ಟಿದೆಯೋ ಆ ಕಾನೂನು ವ್ಯವಸ್ಥೆಯನ್ನು ಬದಲಿಸುವತ್ತ ಆಂದೋಲನ ಗಮನ ಹರಿಸಬೇಕೆಂದು ಯೋಚಿಸಿದೆ.ಜನ ಒಂದು ವ್ಯವಸ್ಥೆ ಒಪ್ಪಿದ್ದಾರೆ, ಅದನ್ನು ಬದಲಿಸುವುದು ಅಷ್ಟು ಸುಲಭವಲ್ಲ.  ಅವರು ಹೊಸಹೆಜ್ಜೆ ಇಡಲು ಹೆದರುತ್ತಾರೆ. ಜನರನ್ನು ಬದಲಾವಣೆಗೆ ಸಿದ್ಧಗೊಳಿಸುವುದು ಕವಿಯ ಕೆಲಸ ಎನಿಸಿತು. ಎಂದೇ ಜನರ ನಡುವೆ ಕೆಲಸ ಮಾಡಲು ಶುರು ಮಾಡಿದೆ. ನನ್ನ ಪ್ರಕಾರ ಪ್ರತಿ ಬರಹಗಾರನಿಗೂ ರಾಜಕೀಯ ನಿಲುವಿರಲೇಬೇಕು, ಆದರೆ ಅವನು ಎಂದೆಂದೂ ರಾಜಕೀಯ ಪಕ್ಷವೊಂದರ ಭಾಗವಾಗಬಾರದು. ಅವನೆಂದೂ ಪಕ್ಷದ ಹೊರಗಿದ್ದೆೀ ನಿಯಂತ್ರಿಸಬಲ್ಲವನಾಗಿ  ಜನರ ನಡುವಿರಬೇಕು.73ರ ಯುವಕ ನೀವು. ಭವಿಷ್ಯ ಕುರಿತ ನಿಮ್ಮ ಕನಸುಗಳೇನು?  ಪ್ರಸ್ತುತ ಪ್ರಜಾಪ್ರಭುತ್ವ ಮತ್ತು ಚುನಾವಣಾ ರಾಜಕೀಯ. ಸುಧಾರಣೆ ಅವಶ್ಯವೆನಿಸುವುದೆ? ಹೇಗೆ?

ದಿಗಂಬರ ಕವಿತೆಗೆ ಯಾವುದು ಕಾವ್ಯಕಾರಣವಾಗಿತ್ತೋ ಅದೇ ಇಂದಿಗೂ ಮುಂದುವರೆದಿದೆ. ಜನರ ಬದುಕು ಅಸಹನೀಯ, ದಯನೀಯವಾಗಿ ಮುಂದುವರೆದಿದ್ದು ಬೀಭತ್ಸ ಪರಿಸ್ಥಿತಿ ಹೆಚ್ಚಾಗಿದೆ. ಆಂದೋಲನದ ಅವಶ್ಯಕತೆ ಇಂದು ಮೊದಲಿಗಿಂತ ಹೆಚ್ಚಾಗಿದೆ. ಪ್ರತಿಯೊಬ್ಬನೂ ಇಂದಿನವರೆಗೆ, ಈ ಕ್ಷಣದ ನಂತರ ಎಂಬ ಗೆರೆಯೆಳೆದುಕೊಂಡು ಇಲ್ಲಿಯವರೆಗಿನ ಎಲ್ಲವನ್ನು ನಿರಾಕರಿಸಿ ಹೊಸಮೌಲ್ಯ, ಸಮಾಜ, ವ್ಯವಸ್ಥೆ ಕಟ್ಟುವತ್ತ ಕಟಿಬದ್ಧರಾಗಬೇಕಿದೆ.

ನಾನೀಗ 1990ರಿಂದ `ಡೆಮಾಕ್ರಸಿ ರಿಸರ್ಚ್ ಸೆಂಟರ್' ನಡೆಸುತ್ತಿದ್ದು ಪ್ರಜಾಪ್ರಭುತ್ವದ ವಿವಿಧ ಮಗ್ಗಲು, ಸಾಧ್ಯತೆಗಳ ಬಗೆಗೆ ಅರಿವು ಮೂಡಿಸಲು ಸಾಧ್ಯವಾಗಬಹುದೇ ನೋಡುತ್ತಿರುವೆ. ನಮಗೆಂಥ ಡೆಮಾಕ್ರಸಿ ಇದೆ, ಬೇಕಿದೆ? ಜಾತಿ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ, ನೈತಿಕ - ಯಾವ ಡೆಮಾಕ್ರಸಿ ಬೇಕು? ಈ ಕುರಿತು ಎಲ್ಲರೂ ಯೋಚಿಸಬೇಕು. ಜೊತೆಗೆ ಈಗಿನಂತೆ ಚುನಾವಣೆಗಳು ನಡೆಯುತ್ತ ಹೋದರೆ ನಾವು ಸಿಂಗರಿಸುವುದು ಪ್ರಜಾಪ್ರಭುತ್ವದ ಹೆಣವನ್ನಷ್ಟೆ ಎಂದು ನೆನಪಿಡಬೇಕು.

-ಸಂದರ್ಶನ: ಡಾ. ಎಚ್.ಎಸ್. ಅನುಪಮಾ .

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.