ಹಳಿತಪ್ಪಿದ ಭಾರತಕ್ಕೆ ಸ್ಟೇನ್ ಆಪತ್ತು

ಕ್ರಿಕೆಟ್: ‘ಮಹಿ’ ಪಡೆಗೆ ಮತ್ತೆ ಆಘಾತ; ಮೊದಲ ದಿನವೇ ದಕ್ಷಿಣ ಆಫ್ರಿಕಾದ ಬಿಗಿ ಹಿಡಿತ
ಡರ್ಬನ್: ಹೀಗೆ ಆಗುತ್ತದೆಂದು ಹೇಳುವುದಕ್ಕೆ ಕ್ರಿಕೆಟ್ ಪಂಡಿತರಾಗಿರುವ ಅಗತ್ಯವೇನು ಇರಲಿಲ್ಲ! ಬೀದಿ ಬದಿಯ ಅಂಗಡಿಯೊಂದರ ಹುಡುಗ ಕೂಡ ಭಾರತ ಕ್ರಿಕೆಟ್ ತಂಡ ಮತ್ತೆ ಕುಸಿಯುತ್ತದೆ ಎಂದು ಭವಿಷ್ಯ ನುಡಿದಿದ್ದ!ಹೌದು; ಹಾಗೆಯೇ ಆಯಿತು. ದಕ್ಷಿಣ ಆಫ್ರಿಕಾ ವಿರುದ್ಧ ಅದರ ನೆಲದಲ್ಲಿಯೇ ಆಡುವಾಗ ಭಾರತವು ಪಟ್ಟಪಾಡಿಗೆ ಇತಿಹಾಸ ಸಾಕ್ಷಿಯಿದೆ. ಅಂಥ ಇತಿಹಾಸ ಬದಲಿಸುವ ಮಹತ್ವಾಕಾಂಕ್ಷೆ ಹೊಂದಿದ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡವು ಎರಡನೇ ಟೆಸ್ಟ್‌ನ ಮೊದಲ ದಿನವೇ ‘ದೊಡ್ಡ’ ಖ್ಯಾತಿಯ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಕಳೆಗುಂದಿತು.
ಇಲ್ಲಾದರೂ ಚೆನ್ನಾಗಿ ಆಡುತ್ತಾರೆ; ಒಂದಿಷ್ಟು ಹೊತ್ತು ನೋಡೋಣ ಎಂದು ಕಾಯ್ದಿದ್ದ ಮಳೆರಾಯನಿಗೂ ಬೇಸರವಾಗಿರಬೇಕು. ಸಾಕು ಮುಗಿಸಿ ದಿನದಾಟವೆಂದು ಮೋಡವನ್ನು ಕಳಚಿ ಕ್ರೀಡಾಂಗಣಕ್ಕೆ ಬಿಟ್ಟ. ಮಳೆಯ ಆರ್ಭಟ; ಮುಂದುವರಿಯಲ್ಲಿ ಭಾನುವಾರದ ಆಟ. ಆ ಹೊತ್ತಿಗೆ ಭಾರತವು ನಿರಾಸೆಯ ಭಾರ ಹೊತ್ತು ನಿಂತಿತ್ತು. 56 ಓವರುಗಳ ಆಟದಲ್ಲಿ ‘ಮಹಿ’ ಬಳಗ ಆರು ವಿಕೆಟ್ ಕಳೆದುಕೊಂಡು ಗಳಿಸಿದ್ದು 183 ರನ್ ಮಾತ್ರ!
‘ಟಾಸ್’ ಗೆಲುವು ಮಹತ್ವದ್ದು ಎಂದು ಹೇಳಿದ್ದ ಪ್ರವಾಸಿ ತಂಡದ ನಾಯಕನಿಗೆ ಕಿಂಗ್ಸ್‌ಮೇಡ್ ಕ್ರೀಡಾಂಗಣದಲ್ಲಿಯೂ ನಾಣ್ಯ ಚಿಮ್ಮುವ ಆಟದಲ್ಲಿ ಅದೃಷ್ಟ ಒಲಿಯಲಿಲ್ಲ.ನೆಲಕ್ಕೆ ಬಿದ್ದ ನಾಣ್ಯದ ಗೆಲುವಿನ ಮುಖ ನೋಡಿದ ದಕ್ಷಿಣ ಆಫ್ರಿಕಾ ತಂಡದ ಮುಂದಾಳು ಗ್ರೇಮ್ ಸ್ಮಿತ್ ಮತ್ತೊಂದು ಗೆಲುವಿನ ಗರಿ ತಮ್ಮ ಕಿರೀಟಕ್ಕೆ ಎನ್ನುವಂತೆ ಕಿರುನಗೆ ಬೀರಿದರು. ಮೊದಲು ಬೌಲಿಂಗ್ ಮಾಡುವ ಅವರ ನಿರ್ಧಾರವು ಸರಿಯಾದ ಲೆಕ್ಕಾಚಾರವೆಂದು ಸಾಬೀತಾಗಲು ಹೆಚ್ಚು ಸಮಯ ಬೇಕಾಗಲೇ ಇಲ್ಲ.
ಹನ್ನೊಂದನೇ ಓವರ್‌ನಲ್ಲಿಯೇ ವೀರೇಂದ್ರ ಸೆಹ್ವಾಗ್ (25; 47 ನಿ., 32 ಎ., 4 ಬೌಂಡರಿ) ಹಾಗೂ ಮುರಳಿ ವಿಜಯ್ ನಡುವಣ ಮೊದಲ ವಿಕೆಟ್ ಜೊತೆಯಾಟದ ಕೊಂಡಿ ಕಳಚಿಕೊಂಡಿತು. ಅಲ್ಲಿಂದ ಶುರುವಾಯಿತು ಭಾರತದ ಮತ್ತೊಂದು ‘ಪತನ ಪುರಾಣ’. ಹೊಸ ಚೆಂಡಿನೊಂದಿಗೆ ದಾಳಿ ನಡೆಸಿದ್ದ ಡೆಲ್ ಸ್ಟೇನ್ ಮತ್ತೊಮ್ಮೆ ಪ್ರವಾಸಿಗಳಿಗೆ ಆಪತ್ತು ತಂದರು.
ಜತನದಿಂದ ವಿಕೆಟ್‌ಗಳನ್ನು ಕಾಯ್ದುಕೊಳ್ಳುವ ಯತ್ನ ಮಾಡಿದರೂ ಎಡವಿದ ರಾಹುಲ್ ದ್ರಾವಿಡ್ (25; 121 ನಿ., 68 ಎ., 3 ಬೌಂಡರಿ) ಅಷ್ಟೇ ಅಲ್ಲ ಸೆಹ್ವಾಗ್, ವಿಜಯ್ ಹಾಗೂ ಇನಿಂಗ್ಸ್ ಕಟ್ಟುವ ವಿಶ್ವಾಸ ಮೂಡಿಸಿದ್ದ ವಿ.ವಿ.ಎಸ್.ಲಕ್ಷ್ಮಣ್ (38; 94 ನಿ., 73 ಎ., 4 ಬೌಂಡರಿ, 1 ಸಿಕ್ಸರ್) ಕೂಡ ಡೆಲ್ ಸ್ಟೇನ್ ಅವರ ಎದುರು ತಡಬಡಾಯಿಸಿದರು.
ಪ್ರಥಮ ಟೆಸ್ಟ್‌ನಲ್ಲಿಯೇ ಭಾರತದವರ ಎದೆಯಲ್ಲಿ ನಡುಕ ಹುಟ್ಟಿಸಿದ್ದ 27 ವರ್ಷ ವಯಸ್ಸಿನ ಡೆಲ್ ಎದುರು ದೋನಿ ಬಳಗದ ಆಟ ನಡೆಯಲಿಲ್ಲ. ಬಲಗೈ ವೇಗಿಯ ಆರ್ಭಟವನ್ನು ತಗ್ಗಿಸಲು ಮಾಡಿದ ಪ್ರಯತ್ನಗಳೆಲ್ಲ ವಿಫಲ. ದ್ರಾವಿಡ್ ಮತ್ತು ಲಕ್ಷ್ಮಣ್ ಒಂದಿಷ್ಟು ಹೊತ್ತು ಕ್ರೀಸ್‌ನಲ್ಲಿ ಗಟ್ಟಿಯಾದರೂ, ರನ್ ಮೊತ್ತದ ಗತಿ ಆಮೆ ವೇಗ!ದಕ್ಷಿಣ ಆಫ್ರಿಕಾದ ಬೌಲರ್‌ಗಳ ಉತ್ಸಾಹ ಗುಗ್ಗಿಸುವಂಥ ಆಕ್ರಮಣಕಾರಿ ಹೊಡೆತಗಳನ್ನು ಪ್ರಯೋಗಿಸಿದ ಕೆಲವೇ ನಿಮಿಷಗಳಲ್ಲಿ ಭಾರತದವರ ಪಾಲಿಗೆ ವಿಕೆಟ್ ಪತನದ ಆಘಾತ.
ಐವತ್ತು ಟೆಸ್ಟ್ ಶತಕಗಳ ಶ್ರೇಯ ಹೊಂದಿರುವ ಸಚಿನ್ ತೆಂಡೂಲ್ಕರ್ (13; 42 ನಿ., 22 ಎ., 3 ಬೌಂಡರಿ) ಬ್ಯಾಟಿಂಗ್ ಕೂಡ ಕಣ್ಣಿಗೆ ಹಿತವೆನಿಸಲಿಲ್ಲ. ಅನುಭವದ ದೊಡ್ಡ ಬುತ್ತಿಗಂಟು ಕಟ್ಟಿಕೊಂಡ ಕ್ರಿಕೆಟಿಗನಿಗೇ ಕಷ್ಟವಾಗುವಂಥ ಎಸೆತಗಳನ್ನು ಪ್ರಯೋಗಿಸಿದರು ಸ್ಮಿತ್ ಬಳಗದವರು. ಮಂದಗತಿಯಲ್ಲಿ ರನ್ ಗಳಿಸುತ್ತಾ, ಕ್ರೀಸ್‌ನಲ್ಲಿ ಗಟ್ಟಿಯಾಗಲು ಪ್ರಯತ್ನ ಮಾಡಿದ್ದಾಗಲೇ ‘ಮಾಸ್ಟರ್ ಬ್ಲಾಸ್ಟರ್’ ವಿಕೆಟ್ ಪತನ. ಭಾರತದ ದೊಡ್ಡದೊಂದು ವಿಕೆಟ್ ಪಡೆದ ಸಂಭ್ರಮದಲ್ಲಿ ಲಾನ್‌ವಾಬೊ ತ್ಸೊತ್ಸೊಬೆ ಅವರು ನವಿಲಂತೆ ನಲಿದರು.
ಹಿರಿಯರೇ ಮುಗ್ಗರಿಸಿದಾಗ ಯುವ ಆಟಗಾರ ಚೆತೇಶ್ವರ ಪೂಜಾರ ಮೇಲೆ ಹೆಚ್ಚಿನ ನಿರೀಕ್ಷೆಯ ಭಾರ ಹೇರುವುದೂ ಸಾಧ್ಯವಿರಲಿಲ್ಲ. ಪೂಜಾರ ನಿರ್ಗಮಿಸುವ ಹೊತ್ತಿಗೆ ಭಾರತದ ಒಟ್ಟು ಮೊತ್ತ 156 ರನ್. ಇಂಥ ಆತಂಕಕಾರಿ ಸ್ಥಿತಿಯಲ್ಲಿ ಇನಿಂಗ್ಸ್ ಹಿಗ್ಗಿಸುವ ಹೊರೆ ಬಿದ್ದಿದ್ದು ನಾಯಕ ಮಹೇಂದ್ರ ಸಿಂಗ್ ದೋನಿ (20; 31 ಎ., 2 ಬೌಂಡರಿ) ಹಾಗೂ ಹರಭಜನ್ ಸಿಂಗ್ (15; 25 ಎ., 2 ಬೌಂಡರಿ) ಮೇಲೆ. ದಿನದಾಟಕ್ಕೆ ತೆರೆ ಬೀಳುವ ಹೊತ್ತಿಗೆ ಇವರಿಬ್ಬರೂ ಮುರಿಯದ ಏಳನೇ ವಿಕೆಟ್‌ನಲ್ಲಿ 27 ರನ್ ಕಲೆಹಾಕಿದ್ದರು.
ಸ್ಕೋರ್ ವಿವರ
ಭಾರತ: ಮೊದಲ ಇನಿಂಗ್ಸ್ 56 ಓವರುಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 183
ವೀರೇಂದ್ರ ಸೆಹ್ವಾಗ್ ಸಿ ಜಾಕ್ ಕಾಲಿಸ್ ಬಿ ಡೆಲ್ ಸ್ಟೇನ್ 25
ಮುರಳಿ ವಿಜಯ್ ಸಿ ಮಾರ್ಕ್ ಬೌಷರ್ ಬಿ ಡೆಲ್ ಸ್ಟೇನ್ 19
ರಾಹುಲ್ ದ್ರಾವಿಡ್ ಸಿ ಮಾರ್ಕ್ ಬೌಷರ್ ಬಿ ಡೆಲ್ ಸ್ಟೇನ್ 25
ಸಚಿನ್ ತೆಂಡೂಲ್ಕರ್ ಸಿ ಕಾಲಿಸ್ ಬಿ ಲಾನ್‌ವೊಬೊ ತ್ಸೊತ್ಸೊಬೆ 13
ವಿ.ವಿ.ಎಸ್.ಲಕ್ಷ್ಮಣ್ ಸಿ ಲಾನ್‌ವಾಬೊ ತ್ಸೊತ್ಸೊಬೆ ಬಿ ಡೆಲ್ ಸ್ಟೇನ್ 38
ಚೆತೇಶ್ವರ ಪೂಜಾರ ಸಿ ಬೌಷರ್ ಬಿ ಲಾನ್‌ವಾಬೊ ತ್ಸೊತ್ಸೊಬೆ 19
ಮಹೇಂದ್ರ ಸಿಂಗ್ ದೋನಿ ಬ್ಯಾಟಿಂಗ್ 20
ಹರಭಜನ್ ಸಿಂಗ್ ಬ್ಯಾಟಿಂಗ್ 15
ಇತರೆ: (ಬೈ-1, ಲೆಗ್‌ಬೈ-2, ವೈಡ್-4, ನೋಬಾಲ್-2) 09
ವಿಕೆಟ್ ಪತನ: 1-43 (ವೀರೇಂದ್ರ ಸೆಹ್ವಾಗ್; 10.4), 2-48 (ಮುರಳಿ ವಿಜಯ್; 12.5); 3-79 (ಸಚಿನ್ ತೆಂಡೂಲ್ಕರ್; 19.5); 4-117 (ರಾಹುಲ್ ದ್ರಾವಿಡ್; 36.6); 5-130 (ವಿ.ವಿ.ಎಸ್.ಲಕ್ಷ್ಮಣ್; 40.6); 6-156 (ಚೆತೇಶ್ವರ ಪೂಜಾರ; 49.4).
ಬೌಲಿಂಗ್: ಡೆಲ್ ಸ್ಟೇನ್ 14-3-36-4, ಮಾರ್ನ್ ಮಾರ್ಕೆಲ್ 15-2-60-0 (ನೋಬಾಲ್-2), ಲಾನ್‌ವಾಬೊ ತ್ಸೊತ್ಸೊಬೆ 11-3-40-2 (ವೈಡ್-1), ಜಾಕ್ ಕಾಲಿಸ್ 8-2-18-0 (ವೈಡ್-1), ಪಾಲ್ ಹ್ಯಾರಿಸ್ 8-1-26-0
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.