ಶುಕ್ರವಾರ, ಡಿಸೆಂಬರ್ 6, 2019
17 °C

ಹಳಿಯ ಹಾದಿಯ ಕಾಲುದಾರಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳಿಯ ಹಾದಿಯ ಕಾಲುದಾರಿಗೆ ವಿರೋಧ

ದಾವಣಗೆರೆ: ನಗರದ ಹಳೇ ಬಸ್‌ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಕಾಲು ದಾರಿ ನಿರ್ಮಿಸುವ ಬಗ್ಗೆ ಇತ್ತೀಚೆಗೆ ಸಮೀಕ್ಷೆ ನಡೆದಿದ್ದು, ರೈಲ್ವೆ ಇಲಾಖೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಖಾಸಗಿ ಬಸ್‌ಗಳು ನಿಲ್ಲುವ ಹಳೇ ಬಸ್‌ನಿಲ್ದಾಣದ ಸಮೀಪದ ಶೌಚಾಲಯ ಒಡೆದು ನಿಲ್ದಾಣಕ್ಕೆ ನೇರ ಪ್ರವೇಶಕ್ಕೆ ಅವಕಾಶ ನೀಡುವ ಸಲುವಾಗಿ ಈ ದಾರಿ ನಿರ್ಮಿಸಲು ಜಿಲ್ಲಾಡಳಿತ, ಪಾಲಿಕೆ ಹಾಗೂ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಜಂಟಿ ಸಮೀಕ್ಷೆ ನಡೆಸಿವೆ. ಆದರೆ, ಭದ್ರತೆ, ಅನೈತಿಕ ಚಟುವಟಿಕೆಗಳು ನಡೆಯುವ ಆತಂಕ ಹಾಗೂ ಕಳ್ಳತನದ ಭೀತಿಯಿಂದಾಗಿ ರೈಲ್ವೆ ಇಲಾಖೆಯ ಎಂಜಿನಿಯರಿಂಗ್ ಮತ್ತು ರೈಲ್ವೆ ಪೊಲೀಸ್ ವಿಭಾಗ ಈ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದೆ.ಈ ದಾರಿ ತೆರವಾದರೆ ಬಸ್‌ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಇರುವ ಅಂತರ, ಪಿಬಿ ರಸ್ತೆಯ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಹರಿಹರದಂತೆ ಇಲ್ಲಿಯೂ ರೈಲು ಹಾಗೂ ಬಸ್‌ನಿಲ್ದಾಣಕ್ಕೆ ಕೇವಲ ಒಂದು ಕಾಂಪೌಂಡ್ ಮಾತ್ರ ಅಂತರ ಉಳಿಯಲಿದೆ.ಯಾಕೆ ವಿರೋಧ?

ಹಿಂದೆ ಇಲ್ಲಿ ಗೂಡ್ಸ್‌ಷೆಡ್ ಇದ್ದ ಸ್ಥಳದಲ್ಲಿ ಹೊಸ ಬುಕ್ಕಿಂಗ್ ಕಚೇರಿ, ಹಳಿ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳಿವೆ. ಇಲ್ಲಿ ಕಾಲುದಾರಿ ಮಾಡಿದರೆ ಅನಗತ್ಯವಾಗಿ ನಿಲ್ದಾಣ ಪ್ರವೇಶಿಸುವ ಜನರಿಂದಾಗಿ ನಿಲ್ದಾಣ ನಿರ್ವಹಣೆ ಕಷ್ಟವಾಗಲಿದೆ ಎಂಬುದು ರೈಲ್ವೆ ಮೂಲಗಳ ವಿವರಣೆ.ಅಲ್ಲದೇ, ಇಲ್ಲಿಯೇ ಸಮೀಪ ಗುಜರಿ ಅಂಗಡಿಗಳು ಇರುವುದರಿಂದ ರೈಲ್ವೆ ಇಲಾಖೆಯ ಲೋಹವಸ್ತುಗಳು ಕಳವಾದೀತು ಎಂಬ ಆತಂಕವೂ ಇಲಾಖೆಗಿದೆ.

ಸುಮಾರು 15 ಅಡಿ ಅಗಲದ ಕಾಲುದಾರಿಗೆ ಸಮೀಕ್ಷೆ ನಡೆದಿರುವುದು ನಿಜ. ಆದರೆ, ರೈಲ್ವೆ ಇಲಾಖೆ ಅನುಮತಿ ಕೊಟ್ಟರೆ ಈ ಕಾಮಗಾರಿ ನಡೆಸಬಹುದು. ಇದುವರೆಗೆ ಯಾವುದೇ ಪ್ರಕ್ರಿಯೆ ಅಂತ್ಯಗೊಂಡಿಲ್ಲ ಎಂದು `ದೂಡಾ~ ಆಯುಕ್ತ ಬಾಲಕೃಷ್ಣ `ಪ್ರಜಾವಾಣಿ~ಗೆ ತಿಳಿಸಿದರು.ನಿಲ್ದಾಣದ ಕಥೆ


ಮುಂಗಡ ಬುಕ್ಕಿಂಗ್ ಒತ್ತಡ: ಮುಂಗಡ ಬುಕ್ಕಿಂಗ್ ವಿಭಾಗದ ನಾಲ್ಕು ಕೌಂಟರ್ ಪೈಕಿ ಎರಡು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಪ್ರಯಾಣಿಕರ ಸರದಿ ಹೆಚ್ಚಾದಾಗ ನಿಭಾಯಿಸುವುದು ಕಷ್ಟವಾಗುತ್ತದೆ. ಆದ್ದರಿಂದ, ಇಲ್ಲಿ ನಾಲ್ಕೂ ಕೌಂಟರ್‌ಗಳನ್ನು ತೆರೆಯಬೇಕು ಎಂಬುದು ಪ್ರಯಾಣಿಕರ ಒತ್ತಾಯ.ಆದರೆ, ಹಾಗೆ ತೆರೆಯಬೇಕಾದಲ್ಲಿ ಪ್ರತಿ ಪಾಳಿಯಲ್ಲಿ ಪ್ರತಿ ಕೌಂಟರ್‌ನಲ್ಲಿ 250ಕ್ಕಿಂತ ಹೆಚ್ಚು ಟಿಕೆಟ್ ಬುಕ್ಕಿಂಗ್ ಆಗಬೇಕು ಎನ್ನುತ್ತಾರೆ ಇಲಾಖೆಯ ಉನ್ನತಾಧಿಕಾರಿಗಳು. ನಿತ್ಯ ಒತ್ತಡದಿಂದ ಸಿಬ್ಬಂದಿ-ಪ್ರಯಾಣಿಕರು ಇಬ್ಬರೂ ತೊಂದರೆಗೆ ಒಳಗಾಗುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸ್ಟೇಷನ್ ಮೇಲ್ವಿಚಾರಕ ಹುದ್ದೆ ಸಹಿತ ಹಲವು ಸಿಬ್ಬಂದಿ ಕೊರತೆಯಿದೆ ಎಂದು ಪ್ರಯಾಣಿಕರೊಬ್ಬರು ಬೇಸರ ವ್ಯಕ್ತಪಡಿಸಿದರು.ಸಾಮಾನ್ಯ ಟಿಕೆಟ್ ಕೌಂಟರ್‌ನಲ್ಲಿ ಪ್ರಯಾಣದ ಮಾಹಿತಿ ನೀಡುವ ಕಂಪ್ಯೂಟರ್ ಫಲಕವೂ ಕೆಟ್ಟು ನಿಂತಿದೆ. ರೈಲು ಸಂಚಾರದ ವಿವರ ಒದಗಿಸುವ ಟಚ್‌ಸ್ಕ್ರೀನ್‌ನ ಕಥೆಯೂ ಇದೇ. ಇದೀಗ ಇದೇ ಸ್ಥಳದಲ್ಲಿ ರೈಲು ಸಂಚಾರದ ಮಾಹಿತಿ ಒದಗಿಸುವ ದೊಡ್ಡದಾದ ಎಲ್‌ಇಡಿ ಫಲಕ ಅಳವಡಿಸುವ ಕೆಲಸ ನಡೆಯುತ್ತಿದೆ.

ನಿಲ್ದಾಣದ ಎಲ್ಲ ಉಪಕರಣಗಳಿಗೂ ಏಕಪ್ರಕಾರದ ವಿದ್ಯುತ್ ಪೂರೈಸುವ ಪರ್ಯಾಯ ವ್ಯವಸ್ಥೆ ಬೇಕು. ಆಗ ಸಾಧ್ಯವಾದಷ್ಟು ಉತ್ತಮ ಸೇವೆ ಒದಗಿಸಲು ಸಾಧ್ಯ ಎನ್ನುತ್ತಾರೆ ಸ್ಟೇಷನ್ ಮಾಸ್ಟರ್ ಎಂ.ಎಸ್. ಶರ್ಮಾ.

 

ಪ್ರತಿಕ್ರಿಯಿಸಿ (+)