ಹಳಿ ತಪ್ಪಿದ ರೈಲು- ಐವರ ಸಾವು

7

ಹಳಿ ತಪ್ಪಿದ ರೈಲು- ಐವರ ಸಾವು

Published:
Updated:
ಹಳಿ ತಪ್ಪಿದ ರೈಲು- ಐವರ ಸಾವು

ಜೌನ್‌ಪುರ (ಉತ್ತರ ಪ್ರದೇಶ) (ಪಿಟಿಐ): ಹೌರಾ- ಡೆಹ್ರಾಡೂನ್ ಎಕ್ಸ್‌ಪ್ರೆಸ್ ರೈಲಿನ 7 ಬೋಗಿಗಳು ಲಖನೌ ವಿಭಾಗದ ಮಹ್ರಾವ ನಿಲ್ದಾಣದ ಬಳಿ ಗುರುವಾರ ಹಳಿ ತಪ್ಪಿದ್ದರಿಂದ ಐವರು ಮೃತಪಟ್ಟಿದ್ದಾರೆ. 50 ಜನ ಗಾಯಗೊಂಡಿದ್ದಾರೆ.ಐದು ಸ್ಲೀಪರ್ ಮತ್ತು ಎರಡು ಸಾಮಾನ್ಯ ಬೋಗಿಗಳು ಮಧ್ಯಾಹ್ನ 1.13ರಲ್ಲಿ ಹಳಿ ತಪ್ಪಿದವು ರೈಲ್ವೆ ಸಚಿವಾಲಯದ ವಕ್ತಾರ ಅನಿಲ್ ಸಕ್ಸೇನ ದೆಹಲಿಯಲ್ಲಿ ತಿಳಿಸಿದ್ದಾರೆ. `ಅಗತ್ಯ ವೈದ್ಯಕೀಯ ಸೇವೆ ಒದಗಿಸುವಂತೆ ಮತ್ತು ಸಂತ್ರಸ್ತರಿಗೆ ನೀರು, ಆಹಾರ ಪೂರೈಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ, ಸಕಾಲದಲ್ಲಿ ಸೇವೆ ಒದಗಿಸಲು ಸಮೀಪದ ಆಸ್ಪತ್ರೆಗಳಿಗೆ ತಿಳಿಸಲಾಗಿದೆ~ ಎಂದು ರೈಲ್ವೆ ಎಡಿಜಿ ಗುರುದರ್ಶನ್ ಸಿಂಗ್ ತಿಳಿಸಿದ್ದಾರೆ.`ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇತ್ತೀಚಿನ ದಿನಗಳಲ್ಲಿ ಕಂಡುಬಂದ ಅತಿಯಾದ ತಾಪಮಾನದಿಂದ ಹಳಿ ಹಿಗ್ಗಿರಬಹುದು ಅಥವಾ ಯಾವುದಾದರೂ ದುಷ್ಕೃತ್ಯ ಇದರ ಹಿಂದಿರಬಹುದು~ ಎಂದು ರೈಲ್ವೆ ಮಂಡಳಿ ಸದಸ್ಯ ಎ.ಪಿ.ಮಿಶ್ರಾ ಹೇಳಿದ್ದಾರೆ.`ಗಂಟೆಗೆ 95 ಕಿ.ಮೀ ವೇಗದಲ್ಲಿ ರೈಲು ಚಲಿಸುತ್ತಿದ್ದಾಗ ಹಳಿಯಲ್ಲಿ ಏನೋ ತೊಡಕು ಕಂಡುಬಂದಿದ್ದರಿಂದ ಚಾಲಕ ಕೂಡಲೇ ಬ್ರೇಕ್ ಹಾಕಲು ಯತ್ನಿಸಿದರು. ಆಗ ಬೋಗಿಗಳು ಹಳಿ ತಪ್ಪಿವೆ. 14ರಿಂದ 15 ಗಂಟೆಯೊಳಗೆ ರೈಲು ಮಾರ್ಗ ಸಹಜ ಸ್ಥಿತಿಗೆ ಮರಳಲಿದೆ~ ಎಂದು ತಿಳಿಸಿದ್ದಾರೆ.ಆಂಧ್ರ ಪ್ರದೇಶದ ಪೆನುಕೊಂಡದಲ್ಲಿ ಮೇ 22ರಂದು ಬೆಂಗಳೂರು- ಹಂಪಿ ಎಕ್ಸ್‌ಪ್ರೆಸ್ ರೈಲು, ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಾಗ 25 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರು.

ತನಿಖೆಗೆ ಆಗ್ರಹ

ಕೋಲ್ಕತ್ತ (ಪಿಟಿಐ): ಇದು ಅಪಘಾತವೋ ಅಥವಾ ದುಷ್ಕೃತ್ಯವೋ ಎಂಬ ಬಗ್ಗೆ ತನಿಖೆ ನಡೆಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.`ದೇಶದಾದ್ಯಂತ ಬಂದ್ ಆಚರಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದರಿಂದ ಈ ಬಗ್ಗೆ ತನಿಖೆಯ ಅಗತ್ಯವಿದೆ~ ಎಂದು ಮಾಜಿ ರೈಲ್ವೆ ಸಚಿವೆಯೂ ಆದ ಮಮತಾ ಕೋಲ್ಕತ್ತದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪರಿಹಾರ ಘೋಷಣೆ

ಮೃತರ ಕುಟುಂಬಗಳಿಗೆ ಐದು ಲಕ್ಷ ರೂಪಾಯಿ, ಗಂಭೀರ ಸ್ವರೂಪದ ಗಾಯಾಳುಗಳಿಗೆ ಒಂದು ಲಕ್ಷ ಹಾಗೂ ಸಣ್ಣ ಗಾಯಗಳಾದವರಿಗೆ 25 ಸಾವಿರ ರೂಪಾಯಿ ಪರಿಹಾರವನ್ನು ರೈಲ್ವೆ ಸಚಿವ ಮುಕುಲ್ ರಾಯ್ ಘೋಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry