ಹಳಿ ದಾಟುವ ಅನಿವಾರ್ಯತೆಯಲ್ಲಿ ಪ್ರಯಾಣಿಕರು

7
ಬಯ್ಯಪ್ಪನಹಳ್ಳಿ ರೈಲು ನಿಲ್ದಾಣದ ವಾಸ್ತವ ಚಿತ್ರಣ

ಹಳಿ ದಾಟುವ ಅನಿವಾರ್ಯತೆಯಲ್ಲಿ ಪ್ರಯಾಣಿಕರು

Published:
Updated:
ಹಳಿ ದಾಟುವ ಅನಿವಾರ್ಯತೆಯಲ್ಲಿ ಪ್ರಯಾಣಿಕರು

ಬೆಂಗಳೂರು: ನಿತ್ಯ ನೂರು ರೈಲುಗಳ ಓಡಾಟ, ಮೂರು ಸಾವಿರ ಮಂದಿ ಪ್ರಯಾಣ. ಇರುವ ಎರಡು ಪ್ಲಾಟ್‌ಫಾರ್ಮ್‌ಗಳಿಗೆ ಸಂಪರ್ಕ ಕಲ್ಪಿಸಲು ಸ್ಕೈವಾಕ್ ಅಥವಾ ಪಾದಚಾರಿ ಸುರಂಗ ಮಾರ್ಗವಿಲ್ಲ. ಇದು ರಾಜಧಾನಿಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ಬಯ್ಯಪ್ಪನಹಳ್ಳಿ ರೈಲು ನಿಲ್ದಾಣದ ವಾಸ್ತವ ಚಿತ್ರಣ.ಬಯ್ಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರು, ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಕಂಪೆನಿ ನೌಕರರು, ಕೂಲಿ ಕಾರ್ಮಿಕರು ಹಳಿಗಳನ್ನು ದಾಟಿಕೊಂಡೇ ಹೋಗಬೇಕಾಗಿದೆ. ವಾಹನಗಳ ಸಂಚಾರಕ್ಕೆಂದು ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಲಾದ ಮೇಲ್ಸೇತುವೆ ಇಲ್ಲಿದೆ. ಆದರೆ, ಪಾದಚಾರಿಗಳ ಬಗ್ಗೆ ಯೋಚಿಸುವ ವ್ಯವಧಾನ ಸರ್ಕಾರಕ್ಕಾಗಲೀ, ರೈಲ್ವೆ ಇಲಾಖೆಗಾಗಲೀ ಇಲ್ಲ. ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸುವ ರೈಲ್ವೆ ಇಲಾಖೆಗೆ ಲಕ್ಷ ರೂಪಾಯಿ ಖರ್ಚು ಮಾಡಿ ಸ್ಕೈವಾಕ್ ಕಟ್ಟುವುದು ದೊಡ್ಡ ಮಾತೇನಲ್ಲ. ಹಲವು ವರ್ಷಗಳಿಂದ ಈ ಭಾಗದ ಜನರ ಬೇಡಿಕೆ ಇದಾದರೂ ಸಲ್ಲಿಸಿದ ಮನವಿಗಳಿಗೆ ಈವರೆಗೂ ಉತ್ತರ ಸಿಕ್ಕಿಲ್ಲ ಎಂಬುದು ಸ್ಥಳೀಯರ ಆಕ್ರೋಶ. `ಕಳೆದ ವರ್ಷ ಈ ರೈಲು ನಿಲ್ದಾಣ ವ್ಯಾಪ್ತಿಯಲ್ಲಿ 19 ಮಂದಿ ರೈಲಿಗೆ ಬಲಿಯಾಗಿದ್ದಾರೆ. ಇದರಲ್ಲಿ ಎಂಟು ಆತ್ಮಹತ್ಯೆ ಪ್ರಕರಣಗಳು. ಉಳಿದ 11 ಮಂದಿ ಹಳಿ ದಾಟುವ ವೇಳೆ ಸಾವನ್ನಪ್ಪಿದವರು' ಎಂದು ರೈಲ್ವೆ ಪೊಲೀಸರು ಹೇಳಿದರು.`ನಿಲ್ದಾಣದ ಪಕ್ಕದಲ್ಲೇ ಮೆಟ್ರೊ ನಿಲ್ದಾಣ ಸ್ಥಾಪನೆಯಾಗಿರುವುದರಿಂದ ಕಳೆದ ವರ್ಷದಿಂದ ಹಳಿಗಳ ಮೇಲೆ ಓಡಾಡುವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮೆಟ್ರೊದಲ್ಲಿ ಬರುವ ಪ್ರಯಾಣಿಕರು ಇಲ್ಲಿನ ನಿಲ್ದಾಣಕ್ಕೆ ಬಂದು ಹಳಿ ದಾಟಿಕೊಂಡೇ ಮುಂದೆ ಸಾಗುತ್ತಾರೆ. ಬೆಳಿಗ್ಗೆ ಆರು ಗಂಟೆಯಿಂದ ಒಂಬತ್ತು ಗಂಟೆವರೆಗೆ ಹಾಗೂ ಸಂಜೆ ನಾಲ್ಕು ಗಂಟೆಯಿಂದ ಏಳು ಗಂಟೆವರೆಗೆ ಹಳಿಗಳ ಮೇಲೆ ಓಡಾಡುವವರ ಸಂಖ್ಯೆ ಹೆಚ್ಚಿರುತ್ತದೆ' ಎಂಬುದು ಕಸ್ತೂರಿನಗರದ ನಿವಾಸಿ ಮಹೇಶ್ ಅವರ ಅಭಿಪ್ರಾಯ.`ಇಲ್ಲಿ ಪಾದಚಾರಿ ಸುರಂಗಮಾರ್ಗ ಅಥವಾ ಪಾದಚಾರಿ ಮೇಲ್ಸೇತುವೆಯನ್ನು ನಿರ್ಮಿಸಬೇಕು ಎಂದು ಹಲವು ಬಾರಿ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಈ ಹಿಂದೆ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ ಅವರು ಬಯ್ಯಪ್ಪನಹಳ್ಳಿ ರೈಲು ನಿಲ್ದಾಣವನ್ನು ಅಂತರರಾಷ್ಟ್ರೀಯ ದರ್ಜೆಗೆ ಏರಿಸುವುದಾಗಿ ಹೇಳಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿಯಿತು. ನಿಲ್ದಾಣದಲ್ಲಿ ಕನಿಷ್ಠ ಮೂಲಸೌಕರ್ಯಗಳನ್ನಾದರೂ ಒದಗಿಸಲಿ' ಎಂಬುದು ಅವರ ಒತ್ತಾಯ.`ಬಯ್ಯಪ್ಪನಹಳ್ಳಿ ರೈಲು ನಿಲ್ದಾಣ ಮಾರ್ಗವಾಗಿ ನಿತ್ಯ 80 ಪ್ರಯಾಣಿಕ ರೈಲುಗಳು ಹಾಗೂ 20 ಸರಕು ಸಾಗಣೆ ರೈಲುಗಳು ಓಡಾಟ ನಡೆಸುತ್ತಿವೆ. ಪ್ರಯಾಣಿಕರ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸದ್ಯ ಎರಡೂವರೆ ಸಾವಿರದಿಂದ ಮೂರೂವರೆ ಸಾವಿರ ಮಂದಿ ಇಲ್ಲಿಂದ ಪ್ರಯಾಣ ಬೆಳೆಸುತ್ತಿದ್ದಾರೆ. ಹಳಿ ದಾಟದಂತೆ ಜನರಿಗೆ ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಯೋಜನವಾಗುತ್ತಿಲ್ಲ' ಎಂದು ಸ್ಟೇಷನ್ ಮಾಸ್ಟರ್ ಮತ್ತು ಟಿಕೆಟ್ ವಿತರಕ ವಿಜಯ್ `ಪ್ರಜಾವಾಣಿ'ಗೆ ತಿಳಿಸಿದರು.ಬಿಎಂಆರ್‌ಸಿಎಲ್ ಜತೆ ಒಪ್ಪಂದ

ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ಸ್ಕೈವಾಕ್ ನಿರ್ಮಾಣ ಮಾಡುತ್ತಿದೆ. ಇದರ ಕಾಮಗಾರಿ ಈಗಾಗಲೇ ಮುಕ್ತಾಯ ಹಂತ ತಲುಪಿದೆ. ಈ ಸ್ಕೈವಾಕ್ ಬಯ್ಯಪ್ಪನಹಳ್ಳಿ ರೈಲು ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಬೇಕು ಎಂದು ಕಾಮಗಾರಿಯ ಆರಂಭದಲ್ಲೇ ಬಿಎಂಆರ್‌ಸಿಎಲ್ ಜತೆ ಒಪ್ಪಂದವಾಗಿದೆ. ಹೀಗಾಗಿ, ಕೆಲ ದಿನಗಳಲ್ಲೇ ಪ್ರಯಾಣಿಕರಿಗೆ ಈ ಸೇವೆ ಲಭ್ಯವಾಗಲಿದೆ.

- ಅನಿಲ್ ಅಗರವಾಲ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕ(ನೈರುತ್ಯ)`ಪೊಲೀಸರ ಸುಳಿವಿಲ್ಲ'

`ಕೃಷ್ಣಯ್ಯನಪಾಳ್ಯ, ಕಸ್ತೂರಿ ನಗರ, ಸದಾನಂದ ಬಡಾವಣೆ ಸೇರಿದಂತೆ ಸುತ್ತಮುತ್ತಲ ಪ್ರದೇಶದ ನಿವಾಸಿಗಳು ಹಳಿ ದಾಟಿಕೊಂಡೇ ಹೋಗುತ್ತಾರೆ. ಅಲ್ಲದೇ, ಬೇರೆ ಬೇರೆ ಊರುಗಳಿಂದ ಇಲ್ಲಿನ ಶಾಲೆಗಳಿಗೆ ಬರುವ ಮಕ್ಕಳ ಹಾಗೂ ಕೆಲಸ ಮಾಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಹಿಂದೆ ಒಂದೆರಡು ರೈಲ್ವೆ ಪೊಲೀಸರು ನಿಲ್ದಾಣದ ಬಳಿ ಇರುತ್ತಿದ್ದರು. ಆದರೆ, ಈಗ ಯಾರಾದರೂ ರೈಲಿಗೆ ಸಿಲುಕಿ ಸಾವನ್ನಪ್ಪಿದಾಗ ಮಾತ್ರ ಇಲ್ಲಿಗೆ ಬರುತ್ತಾರೆ'.

-  ಸತೀಶ್, ಅಂಗಡಿ ಮಾಲೀಕ, ಬಯ್ಯಪ್ಪನಹಳ್ಳಿ ರೈಲು ನಿಲ್ದಾಣ`ಪ್ರಯಾಣಿಕರ ನಿರ್ಲಕ್ಷ್ಯ'

`34 ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಇತ್ತೀಚೆಗೆ ರೈಲಿಗೆ ಸಿಲುಕಿ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ನಿಜ. ಇದಕ್ಕೆ ಪ್ರಯಾಣಿಕರ ನಿರ್ಲಕ್ಷ್ಯವೇ ಕಾರಣ. ಮೇಲ್ಸೇತುವೆ  ಮೇಲೆ ಓಡಾಡುವ ಬದಲು ಜನ ಪರ್ಯಾಯ ದಾರಿಗಳನ್ನು ಮಾಡಿಕೊಂಡು ಹಳಿಗಳ ಮೇಲೆ ಓಡಾಡುತ್ತಿದ್ದಾರೆ. ಇದಕ್ಕೂ ಮೀರಿ ಕೆಲವರು ಕಿವಿಗೆ ಹೆಡ್‌ಸೆಟ್ ಹಾಕಿಕೊಂಡು ಹಾಡು ಕೇಳುತ್ತಾ, ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹಳಿ ಮೇಲೆ ನಡೆದು ಹೋಗುತ್ತಾರೆ'.

- ಕುಪ್ಪಸ್ವಾಮಿ ಪಾಯಿಂಟ್‌ಮೆನ್`ಕಟ್ಟುನಿಟ್ಟಿನ ಆದೇಶ ಬೇಕು'

`ನಿಲ್ದಾಣದಲ್ಲಿ ಎರಡು ಪ್ಲಾಟ್‌ಫಾರ್ಮ್‌ಗಳಿವೆ. ಆದರೆ, ಒಂದನೇ ಪ್ಲಾಟ್‌ಫಾರ್ಮ್‌ನಲ್ಲಿ ಟಿಕೆಟ್ ಕೌಂಟರ್ ಇದೆ. ಪ್ರಯಾಣಿಕರು ಟಿಕೆಟ್ ಪಡೆದು, ಹಳಿ ದಾಟಿಕೊಂಡೇ ಎರಡನೇ ಪ್ಲಾಟ್‌ಫಾರ್ಮ್‌ಗೆ ಬರಬೇಕು. ಕೆಲವೊಮ್ಮೆ ಏಕಕಾಲದಲ್ಲಿ ಎರಡು-ಮೂರು ರೈಲುಗಳು ನಿಂತಿರುತ್ತವೆ. ಇದರಿಂದಾಗಿ ಕುಟುಂಬ ಸಮೇತರಾಗಿ ಬರುವ ಪ್ರಯಾಣಿಕರು, ವಯಸ್ಕರು, ಅಂಗವಿಕಲರು ತಮ್ಮ ಪ್ರಯಾಣವನ್ನು ರದ್ದುಪಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾದಂತಹ ಉದಾಹರಣೆಗಳಿವೆ. ಹೀಗಾಗಿ ಜನರ ಓಡಾಟಕ್ಕೆ ಅನುಕೂಲವಾಗುವಂತೆ ರೈಲ್ವೆ ಇಲಾಖೆ ಸ್ಕೈವಾಕ್ ನಿರ್ಮಿಸಬೇಕು ಮತ್ತು ಸ್ಕೈವಾಕ್ ಮೂಲಕವೇ ಓಡಾಡಬೇಕೆಂಬ ಕಟ್ಟು ನಿಟ್ಟಿನ ಆದೇಶವನ್ನೂ ನೀಡಬೇಕು'.

- ಬಸವರಾಜ್, ಪ್ರಯಾಣಿಕಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry