ಹಳೆಕಾಲದ ಸಪ್ಪೆ ಪ್ರದರ್ಶನ

ಮೊಹೆಂಜೊ ದಾರೊ (ಹಿಂದಿ)
ನಿರ್ದೇಶನ: ಆಶುತೋಶ್ ಗೊವಾರಿಕರ್
ನಿರ್ಮಾಪಕರು: ಸಿದ್ಧಾರ್ಥ್ ರಾಯ್ ಕಪೂರ್, ಸುನಿತಾ ಗೊವಾರಿಕರ್
ತಾರಾಗಣ: ಹೃತಿಕ್ ರೋಷನ್, ಪೂಜಾ ಹೆಗಡೆ, ಕಬೀರ್ ಬೇಡಿ, ಅರುಣೋದಯ್ ಸಿಂಗ್
* * *
ಸಿಂಧೂ ಕಣಿವೆ ನಾಗರಿಕತೆಯ ಇತಿಹಾಸದ ಪುಟಗಳಲ್ಲಿ ಕುತೂಹಲ ಮೂಡಿಸುವ ಕಥನಗಳಿವೆ. ಅವ್ಯಾವುದನ್ನೂ ತಲೆಯಲ್ಲಿ ಇಟ್ಟುಕೊಳ್ಳದೆ ಸುಮ್ಮನೊಂದು ಸಿನಿಮಾ ಆಗಿರುವುದಕ್ಕೆ ಉದಾಹರಣೆಯಾಗಿ ‘ಮೊಹೆಂಜೊ ದಾರೊ’ ನೋಡಬೇಕು.
ನಾಯಕನ ಎದೆಗೆ ಖಳನು ಚುಚ್ಚಿದ ಉಳಿಯಿಂದಾದ ತೀವ್ರ ಗಾಯ ಮರುದೃಶ್ಯದಲ್ಲೇ ಎಲ್ಲಿ ಮಾಯವಾಯಿತು ಎಂಬ ತರ್ಕಕ್ಕೆ ಹೋಗಕೂಡದು. ಗೊತ್ತೇ ಇಲ್ಲದ ನಗರಿಯಲ್ಲಿ ನಾಯಕನ ಪ್ರಭಾವಳಿ ಅಷ್ಟು ಬೇಗ ಅದು ಹೇಗೆ ಹರಡಿಕೊಂಡಿತು ಎಂದು ತಲೆ ಕೆರೆದುಕೊಳ್ಳುವುದೂ ಸಲ್ಲ. ಮಾಮೂಲಿ ಕಪ್ಪು–ಬಿಳುಪು ಕಥೆಯನ್ನು ಗತಕಾಲಘಟ್ಟದ ಚೌಕಟ್ಟಿನಲ್ಲಿ ಇಟ್ಟು ಆಶುತೋಶ್ ಪ್ರಯೋಗ ವಿಮುಖಿ ಆಗಿಬಿಟ್ಟಿದ್ದಾರೆ.
‘ಲಗಾನ್’ ಸಿನಿಮಾದಲ್ಲಿ ಕ್ರಿಕೆಟ್ ಆಟದ ಮೂಲಕವೇ ಭಾವತೀವ್ರ ಕಥೆಯೊಂದನ್ನು ಕಟ್ಟಿಕೊಟ್ಟು ಗೆದ್ದಿದ್ದ ಆಶುತೋಶ್, ಈ ಬಾರಿ ಸೇಡು–ಪ್ರೇಮ–ಹೋರಾಟ ಬೆರೆಸಿದ ಮಾಮೂಲಿ ಕಥಾನಕವನ್ನು ತೆರೆಗೆ ತಂದಿದ್ದಾರೆ. ‘ಪೀರಿಯೆಡ್ ಡ್ರಾಮಾ’ದಂತೆ ಕಾಣುವ ಸಿನಿಮಾಗೆ ಗತಿಸ್ಥಿರತೆ ಕೂಡ ಇಲ್ಲ; ರಾಜಕೀಯ ಸೂಕ್ಷ್ಮಗಳ ಪ್ರಸ್ತಾಪ ಕೂಡ ಹೆಣಗಾಟಕ್ಕೆ ಬಲಿಯಾಗಿದೆ.
ಕ್ರಿ.ಪೂ. 2016ರ ರೈತನೊಬ್ಬ ಮೊಹೆಂಜೊ ದಾರೊ ನಗರಕ್ಕೆ ವ್ಯಾಪಾರಿಯಂತೆ ಹೋಗಿ, ಅಲ್ಲಿ ತನ್ನ ಬೇರುಗಳನ್ನು ಹುಡುಕುತ್ತಲೇ ಪ್ರೀತಿಗಾಗಿ, ಜನರಿಗಾಗಿ ಹೋರಾಟ ನಡೆಸುವ ಊಹಾತ್ಮಕ ಸನ್ನಿವೇಶಗಳ ಮೆರವಣಿಗೆಯ ಚಿತ್ರವಿದು. ವೇಷಭೂಷಣ, ಮಾತಿನ ಬಾಗು–ಬಳುಕು, ಸೆಟ್ಗಳು, ಲೈಟಿಂಗ್ ಇವಿಷ್ಟರಲ್ಲಿ ಸಿಂಧೂ ಕಣಿವೆಯ ನಾಗರಿಕತೆಯ ಕಲ್ಪಿತ ಕಾಲಘಟ್ಟವನ್ನು ನಿರ್ದೇಶಕರು ಸೃಜಿಸಿದ್ದಾರೆ.
ಆದರೆ, ಅವು ಸ್ವಲ್ಪವೂ ಬೆರಗು ಮೂಡಿಸುವುದಿಲ್ಲ. ಒಂದು ಸಾಹಸ ದೃಶ್ಯವನ್ನು ಹೊರತುಪಡಿಸಿದರೆ ರೋಮಾಂಚನಕಾರಿಯಾದ ಇನ್ನೊಂದು ಹೊಡೆದಾಟವಿಲ್ಲ. ಅಣೆಕಟ್ಟೆಯನ್ನು ಒಡೆದು ನದಿ ನುಗ್ಗಿಬರುವ ಕೊನೆಯ ಹಂತದ ದೃಶ್ಯಗಳನ್ನು ನೋಡಿಯೂ ‘ಅಬ್ಬಬ್ಬಾ’ ಎಂಬ ಉದ್ಗಾರ ಹೊರಡುವುದಿಲ್ಲ.
ಸಿನಿಮಾಟೊಗ್ರಾಫರ್ ಸಿ.ಕೆ. ಮುರಳೀಧರನ್ ವಹಿಸಿರುವ ಶ್ರಮಕ್ಕೆ ಸಿನಿಮಾದಲ್ಲಿ ಹೆಚ್ಚು ಸುಳಿವುಗಳು ಉಳಿದಿವೆ. ಎ.ಆರ್. ರೆಹಮಾನ್ ಸಂಗೀತಕ್ಕೂ ಈ ಡ್ರಾಮಾವನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ಕೆಲವು ಕಡೆ ಮಾತಿಗಿಂತ ವಾದ್ಯನಾದವೇ ಅತಿಯಾಗಿರುವುದೂ ಇದೆ.
ಅಭಿನಯದಲ್ಲಿ ಹೃತಿಕ್ ರೋಷನ್ ಪಾತ್ರದ ಪರಕಾಯ ಪ್ರವೇಶ ಮಾಡಿದ್ದಾರೆ. ತಮಿಳು, ತೆಲುಗಿನಲ್ಲಿ ನಟಿಸಿರುವ ಅನುಭವ ಇರುವ ನಾಯಕಿ ಪೂಜಾ ಹೆಗಡೆ ಸುಮ್ಮನಿದ್ದರೆ ಚೆಂದ, ನಟನಾ ಕೌಶಲ ಅಷ್ಟಕ್ಕಷ್ಟೆ. ಕಬೀರ್ ಬೇಡಿ ಖದರ್ ತೋರಲು ಅವಕಾಶ ಇದ್ದರೂ ವೇಷ–ಭೂಷಣವೇ ಮುಂದಾಗಿ, ಭಾವಾಭಿನಯ ಉಡುಗಿಹೋಗಿದೆ. ಆಜಾನುಬಾಹು ಅರುಣೋದಯ್ ಸಿಂಗ್ ಅವರಿಗೆ ನೆನಪಿನಲ್ಲಿಟ್ಟುಕೊಳ್ಳುವಂಥ ಅವಕಾಶ ಸಿಕ್ಕಿದೆ.
ಹೃತಿಕ್ ರೋಷನ್ ಹಾಗೂ ಆಶುತೋಷ್ ಗೊವಾರಿಕರ್ ಇಬ್ಬರಿಗೂ ತಮ್ಮ ಕೃತಿಗಳನ್ನು ಕುರಿತು ಗೊಂದಲ ಮೂಡಿರುವ ಸಾಧ್ಯತೆಯನ್ನು ‘ಮೊಹೆಂಜೊ ದಾರೊ’ ಎದ್ದುಕಾಣಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.