ಶನಿವಾರ, ಮೇ 28, 2022
30 °C

ಹಳೆಯದಾದರೂ ಇಂದಿಗೂ ಮಾನವ ಪ್ರಯತ್ನಕ್ಕೆ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತ್ತೀಚೆಗೆ ಖಾಸಗಿ ಟಿ. ವಿ. ವಾಹಿನಿಯವರು ಎಪ್ಪತ್ತರ ದಶಕದ `ಬಂಗಾರದ ಮನುಷ್ಯ~ ಚಲನಚಿತ್ರ ಹಾಕಿದ್ದರು. ಅದನ್ನು ನಾನು 1972-73ರಲ್ಲಿ ಥಿಯೇಟರ್‌ನಲ್ಲಿ ನೋಡಿದ್ದೆ. ಅಂದು ಆ ಚಲನಚಿತ್ರವನ್ನು ಎಷ್ಟು ಆಸಕ್ತಿ ಮತ್ತು ಕುತೂಹಲದಿಂದ ನೋಡಿದ್ದೆನೋ 40 ವರ್ಷಗಳ ನಂತರ ಟಿ.ವಿ.ಯಲ್ಲೂ ಅಷ್ಟೇ ಆಸಕ್ತಿ ಮತ್ತು ಕುತೂಹಲದಿಂದ ನೋಡಿದೆ.`ಬಂಗಾರದ ಮನುಷ್ಯ~ದಲ್ಲಿ ಅಂಥದ್ದೇನಿದೆ ಎಂದು ಯಾರಾದರೂ ಕೇಳಿದರೆ ಅವರಿಗೆ ನನ್ನ ಉತ್ತರ: ಅದರಲ್ಲಿ ಅದು ಮಾಡುತ್ತೇನೆ, ಇದು ಮಾಡುತ್ತೇನೆ ಎಂದು ಭ್ರಮಾಧೀನರ ಒಣ, ಹುಚ್ಚು ಆದರ್ಶವಿರದೆ ಮಾಡಬೇಕೆಂದುಕೊಂಡಿದ್ದನ್ನು ಮಾಡುವ, ಮಾಡಿ ತೋರಿಸುವ ಛಲಗಾರನ ಆದರ್ಶವಿದೆ, ಕರ್ತೃತ್ವ ಶಕ್ತಿಯಿದೆ, ಮಾನವ ಸಂಬಂಧವಿದೆ, ಎಲ್ಲಕ್ಕಿಂತ ಮಿಗಿಲಾಗಿ ಮಾನವ ಪ್ರಯತ್ನವಿದೆ, ಗ್ರಾಮೀಣಾಭಿವೃದ್ಧಿ ಇದೆ. ಈ ಚಲನಚಿತ್ರ ನಲ್ವತ್ತು ವರ್ಷಗಳ ನಂತರವೂ ಮಾನವ ಪ್ರಯತ್ನಕ್ಕೆ, ಗ್ರಾಮೀಣಾಭಿವೃದ್ಧಿಗೆ ಮತ್ತು ಚಲನಚಿತ್ರ ಉದ್ಯಮಕ್ಕೆ ಮಾದರಿಯಾಗಿದೆ. ಮಾನವ ಪ್ರಯತ್ನದಿಂದ ಒಂದು ಸಂತ್ರಸ್ತ ಕುಟುಂಬ, ಒಂದು ಸಂತ್ರಸ್ತ ಊರು, ಸಂತ್ರಸ್ತ ನಾಡು ಸಮೃದ್ಧವಾಗಲು ಇದಕ್ಕಿಂತ ದೊಡ್ಡ ಮಾದರಿ ಏನಿದೆ? ಎಲ್ಲಿದೆ?ಭಾವ ಸತ್ತ ಮೇಲೆ ಅಕ್ಕ ಮತ್ತು ಅವಳ ಮಕ್ಕಳ ಬದುಕಿಗೆ ಆಸರೆಯಾಗಲು ಅಕ್ಕನ ಊರಿಗೆ ಬರುವ ಬಿಸಿ ರಕ್ತದ ತರುಣ ರಾಜೀವ ಆ ಊರಿನಲ್ಲಿ ಪುಕ್ಕಟೆ ಕೊಡುತ್ತೇನೆಂದರೂ ಕೊಳ್ಳಲು ಯಾರೂ ಮುಂದೆ ಬರದ, ಏನೂ ಬೆಳೆಯಲಾಗದ ಬೀಳುಬಿದ್ದ ಬರಡು ಜಮೀನನ್ನು ಖರೀದಿಸುತ್ತಾನೆ. ಆ ಜಮೀನಿನಲ್ಲಿ ಕಲ್ಲು ಬಂಡೆಗಳನ್ನು ಸಿಡಿಮದ್ದು ಸ್ಫೋಟಿಸಿ ಒಡೆದು, ನೆಲವನ್ನು ಸಮತಟ್ಟಾಗಿಸಿ, ಮಣ್ಣನ್ನು ಹದಗೊಳಿಸಿ, ಬಾವಿ ತೋಡಿಸಿ ಬೇಸಾಯ ಯೋಗ್ಯ ಜಮೀನನ್ನಾಗಿ ಪರಿವರ್ತಿಸಿ ಊರಿಗೇ ಮಾದರಿಯಾಗುವ ರಾಜೀವ ರಾಜೀವಪ್ಪನಾಗುವ ಪರಿಯೇ ಚಲನಚಿತ್ರ. ಈ ಕಥಾವಸ್ತು ದಿ. ಟಿ.ಕೆ.ರಾಮರಾವ್ ಅವರಿಗೆ ಬಹುಶಃ ಅವರ ಊರಿನಲ್ಲೇ ಸಿಕ್ಕಿರಬಹುದು. ಏಕೆಂದರೆ ಎಲ್ಲ ಊರುಗಳಲ್ಲಿಯೂ ಏನೂ ಬೆಳೆಯದ ಬೀಳುಬಿದ್ದ ಬರಡು ಜಮೀನು ಬಿಸಿ ರಕ್ತದ ತರುಣರ ಬೆವರ ಹನಿಗಾಗಿ ಕಾದಿರುತ್ತದೆ.`ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ~ ಎಂಬ ಹಾಡು ಕಳೆದ ನಲ್ವತ್ತು ವರ್ಷಗಳಲ್ಲಿ ಬಿಸಿ ರಕ್ತದ ಎಷ್ಟು ಜನ ಯುವಕರಿಗೆ ತಮ್ಮೂರಲ್ಲಿನ ಬರಡು ಜಮೀನನ್ನು ಬೇಸಾಯಯೋಗ್ಯ ಜಮೀನನ್ನಾಗಿ ಪರಿವರ್ತಿಸಲು ಪ್ರೇರಣೆಯಾಗಿದೆ?ಎರಡು ಸಲ ಅಮೆರಿಕಕ್ಕೆ ಹೋಗಿಬಂದ ಒಬ್ಬ ಸಾಫ್ಟವೇರ್ ಎಂಜಿನಿಯರ್, ಹಣವನ್ನು ಹೂಡಿಕೆ ಮಾಡಲು ರಾಜಧಾನಿ ಬೆಂಗಳೂರು ಮತ್ತು ತಮ್ಮ ತವರು ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿ ನಿವೇಶನಗಳನ್ನು ಖರೀದಿಸಿದ. ಆಮೇಲೆ ಜಮೀನಿನಲ್ಲಿ ಹಣವನ್ನು ಹೂಡಲು ತಮ್ಮ ಊರಿನಲ್ಲಿ ಊರಿನ ಹತ್ತಿರವೇ ರಸ್ತೆ ಬದಿ ಆಯಕಟ್ಟಿನ ಜಾಗದಲ್ಲಿನ ಬೀಳುಬಿದ್ದ ಬರಡು ಜಮೀನನ್ನು ಖರೀದಿಸಿದ. ಆ ಸಾಫ್ಟವೇರ್ ಎಂಜಿನಿಯರ್ ಮನಸ್ಸು ಮಾಡಿದ್ದರೆ `ಬಂಗಾರದ ಮನುಷ್ಯ~ದ ರಾಜೀವನಂತೆ ಈ ಬೀಳುಬಿದ್ದ ಬರಡು ಭೂಮಿಯನ್ನು ಬಂಗಾರದಂಥ ದವಸ ಧಾನ್ಯ ಬೆಳೆಯುವ ಭೂಮಿಯನ್ನಾಗಿ ಪರಿವರ್ತಿಸಬಹುದಾಗಿತ್ತು. ಆದರೆ ಅವನು ಅಲ್ಲಿ ತಿಂಗಳಿಗೆ 25,000 ದಿಂದ 30,000 ರೂಪಾಯಿ ಬಾಡಿಗೆ ಬರುವ ವಾಣಿಜ್ಯ ಮಳಿಗೆ ಕಟ್ಟಿಸಿದ.ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ನಿವೃತ್ತಿಯ ನಂತರ ತಮ್ಮ ಊರಿನಲ್ಲಿರುವ ಪಿತ್ರಾರ್ಜಿತ ಆರು ಎಕರೆ ಒಣ ಬೇಸಾಯದ ಹೊಲದಲ್ಲಿ ತಮ್ಮನ್ನು ಒಕ್ಕಲುತನದಲ್ಲಿ ತೊಡಗಿಸಿಕೊಂಡರು. ಸಕಾಲಕ್ಕೆ ಸರಿಯಾಗಿ ಮಳೆಯಾಗದ ಈ ಕಾಲದಲ್ಲಿ ಒಣ ಬೇಸಾಯದ ಬವಣೆ ಅನುಭವಿಸಿದವರಿಗೇ ಗೊತ್ತು. ನಿವೃತ್ತ ಶಿಕ್ಷಕರು ತಮ್ಮ ಒಣ ಬೇಸಾಯದ ಹೊಲದಲ್ಲಿ ಸ್ವತಃ ಹೆಂಟೆ ಒಡೆದು, ರಂಟೆ ಹೊಡೆಯುತ್ತ ನೀರಾವರಿಯಲ್ಲಿ ಎರಡು ಪಟ್ಟು ಬೆಳೆ ತೆಗೆಯುವ ಕನಸು ಕಾಣತೊಡಗಿದರು. ಅವರ ಹೊಲ ಗುಡ್ಡದ ಅಡಿಯಲ್ಲಿತ್ತು. ಆ ರೀತಿ ಗುಡ್ಡದ ಅಡಿಯಲ್ಲಿ ಹೊಲವಿದ್ದವರು ಮಳೆಗಾಲದಲ್ಲಿ ಗುಡ್ಡದ ವಾರಿಯಿಂದ ಕೆಳಗೆ ಹರಿದು ಬರುವ ಮಳೆ ನೀರನ್ನು ಹೊಲದಲ್ಲಿ ಸಂಗ್ರಹಿಸಿ ನೀರಾವರಿ ಮಾಡಬಹುದು ಎಂಬುದನ್ನು ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದರು. ಅದರ ಬಗ್ಗೆ ಅನುಭವಸ್ಥರಿಂದ ಇನ್ನಷ್ಟು ತಿಳಿದುಕೊಳ್ಳಲು ಒಕ್ಕಲುತನದಲ್ಲಿ ಪಳಗಿದ್ದ ಪರಿಚಯದ ವ್ಯಕ್ತಿಯನ್ನು 60-70 ಕಿ.ಮೀ. ದೂರದ ಅವರ ಊರಿನಿಂದ ಕರೆಯಿಸಿ ಗುಡ್ಡದ ಅಡಿಯಲ್ಲಿನ ತಮ್ಮ ಹೊಲವನ್ನು ತೋರಿಸಿದರು. ಆ ಅನುಭವಸ್ಥ, ನಿವೃತ್ತ ಶಿಕ್ಷಕರಿಗೆ ಉಪಯುಕ್ತ ಸಲಹೆ ನೀಡುವುದನ್ನು ಬಿಟ್ಟು ಗುಡ್ಡದ ಕಡೆ ಕೈಮಾಡಿ ತೋರಿಸುತ್ತ `ಆ ಗುಡ್ಡದಿಂದ ಮಳೆ ನೀರು ಹರಿದು ಬರುವುದು, ಆ ನೀರನ್ನು ನಿಮ್ಮ ಹೊಲದಲ್ಲಿ ಸಂಗ್ರಹಿಸುವುದು, ಅದರಿಂದ ನೀವು ನೀರಾವರಿ ಮಾಡುವುದು ಇದೆಲ್ಲ ಆಗದು ಮಾತು. ಅದಕ್ಕೆಲ್ಲ ನೆಲ ಅಗಿಯುವ ಜೆ.ಸಿ.ಬಿ.ಯಂತ್ರ ತರಿಸಿ ಆಳ ಉದ್ದ ಅಗಲದ ಹೊಂಡಗಳನ್ನು ತೋಡಿಸಬೇಕಾಗುತ್ತದೆ. ಅದಕ್ಕೆ ಲಕ್ಷಗಟ್ಟಲೆ ಖರ್ಚಾಗುತ್ತದೆ. ಅದೆಲ್ಲ ಹಣವಿದ್ದವರಿಗೆ ಮಾತ್ರ~ ಎಂದು ಹೇಳಿದ. ನಿವೃತ್ತ ಶಿಕ್ಷಕರಿಗೆ ನಿರಾಸೆಯಾಯಿತು. ಅದು ತನ್ನಿಂದಾಗದ ಕೆಲಸ ಎಂದು ಕೈಕಟ್ಟಿ ಕುಳಿತರು.

ಅಲ್ಲಿ ಸಾಫ್ಟವೇರ್ ಎಂಜಿನಿಯರ್ ಬೀಳುಬಿದ್ದ ಬರಡು ಜಮೀನಿನಲ್ಲಿ ಹಸಿರು ಹೊನ್ನಿನ ಕನಸು ಕಾಣದೆ ಅನಾಯಾಸವಾಗಿ ಬಾಡಿಗೆ ಬರುವ ವಾಣಿಜ್ಯ ಮಳಿಗೆ ಕಟ್ಟಿಸಿದ. ಇಲ್ಲಿ ನಿವೃತ್ತ ಶಿಕ್ಷಕರು ಬೇರೊಬ್ಬರ ಮಾತು ಕೇಳಿ ಗುಡ್ಡದ ಅಡಿಯಲ್ಲಿನ ತಮ್ಮ ಹೊಲದಲ್ಲಿ ಕಂಡ ನೀರಾವರಿಯ ಕನಸನ್ನು ನನಸಾಗಿಸುವ ಪ್ರಯತ್ನದಿಂದ ಹಿಂದಕ್ಕೆ ಸರಿದರು.ಭೂಮಿ ಮತ್ತು ನೀರು ಪ್ರಮುಖ ಸಂಪನ್ಮೂಲಗಳು. ಇವೆರಡನ್ನು ಬಳಸಿಕೊಂಡು ಬಡತನವನ್ನು ನಿವಾರಣೆ ಮಾಡುವ ಸಾಮರ್ಥ್ಯ ಮಾನವ ಪ್ರಯತ್ನಕ್ಕಿದೆ, ಇಂದು ಒಕ್ಕಲು ಮನೆತನದ ಮಕ್ಕಳೆಲ್ಲ ವಿದ್ಯಾವಂತರಾಗಿ ಊರು ಬಿಟ್ಟು ಹೋಗಿರುವುದರಿಂದ ಬೀಳುಬಿದ್ದ ಬರಡು ಜಮೀನು ಆ ವಿದ್ಯಾವಂತರ ಬೆವರ ಹನಿಯಿಂದ ವಂಚಿತವಾಗಿದೆ. ಅದಕ್ಕಾಗಿಯೇ ನಲ್ವತ್ತು ವರ್ಷಗಳ ನಂತರವೂ `ಬಂಗಾರದ ಮನುಷ್ಯ~ ಚಲನಚಿತ್ರವನ್ನು ನೋಡಬೇಕೆನಿಸಿತು. ಮನೋರಂಜನೆಗಾಗಿ ಅಲ್ಲ ಶಿಥಿಲಗೊಂಡಿರುವ ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಬದುಕಿಗೆ ಮಾದರಿಯೊಂದನ್ನು ಹುಡುಕಲು.ಗ್ರಾಮೀಣಾಭಿವೃದ್ಧಿ ಈಗ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಆಗಿದೆ. ಅಲ್ಲಿ ಗ್ರಾಮೀಣ ಅಭಿವೃದ್ಧಿಯನ್ನು ತರಗತಿಯಲ್ಲಿ ಕಲಿಸಲಾಗುತ್ತಿದೆ. ಅದು ಬೀಳುಬಿದ್ದ ಬರಡು ಭೂಮಿಯನ್ನು ಬೇಸಾಯ ಭೂಮಿಯನ್ನಾಗಿ ಪರಿವರ್ತಿಸುವಂಥ ಮಾನವ ಪ್ರಯತ್ನದ ಮಾದರಿಗಳಿಲ್ಲದ ಗ್ರಾಮೀಣಾಭಿವೃದ್ಧಿ ಕೋರ್ಸ್. ವಿಶ್ವವಿದ್ಯಾಲಯಗಳು `ಬಂಗಾರದ ಮನುಷ್ಯ~ದ ರಾಜೀವ ಬೀಳುಬಿದ್ದ ಬರಡು ಭೂಮಿಯನ್ನು ಬೇಸಾಯ ಯೋಗ್ಯ ಭೂಮಿಯನ್ನಾಗಿ ಮಾಡಿದಂಥಾ ಮಾದರಿಗಳನ್ನು ಪಠ್ಯದಲ್ಲಿ ಅಳವಡಿಸಬೇಕು.ರಾಜೀವ ಖರೀದಿಸಿದ ಬರಡು ಜಮೀನಿನಲ್ಲಿ ಕೃಷಿ ಕೆಲಸ ಆರಂಭಿಸುವ ಮುನ್ನ ಹೆಗಲ ಮೇಲೆ ನೇಗಿಲ ನೊಗ ಹೊತ್ತುನಿಂತ ಎತ್ತುಗಳಿಗೆ ಲಕ್ಷ್ಮೀ ಪಾತ್ರಧಾರಿ ಭಾರತಿ ಆರತಿ ಬೆಳಗುವ ದೃಶ್ಯ ನಮ್ಮ ಕೃಷಿ ಸಂಸ್ಕೃತಿಗೆ ನೀಡುವ ದೊಡ್ಡ ಗೌರವವಾಗಿ ಗೋಚರಿಸಿತು. ಹೊಸ ಕಾರು, ಹೊಸ ಮೋಟಾರ್ ಸೈಕಲ್‌ಗಳಿಗೆ ಪೂಜೆ ಮಾಡಿ ಆರತಿ ಬೆಳಗುವ ಈ ಕಾಲದಲ್ಲಿ, ನೇಗಿಲಿನಂಥ ಕೃಷಿ ಉಪಕರಣಗಳು ಕಣ್ಮರೆಯಾಗುತ್ತಿರುವ ಕಾಲದಲ್ಲಿ ನೇಗಿಲಿಗೆ ಆರತಿ ಬೆಳಗುವುದು ಪಿಚ್ಚೆನ್ನಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.