ಹಳೆಯ ಕಥೆಗೆ ಹೊಸ ಮೆರುಗು

7

ಹಳೆಯ ಕಥೆಗೆ ಹೊಸ ಮೆರುಗು

Published:
Updated:
ಹಳೆಯ ಕಥೆಗೆ ಹೊಸ ಮೆರುಗು

ರೀಮೇಕ್ ನಂಟು ಬಿಟ್ಟರೂ ಬಿಡದ ಅಂಟು. ಒಂದಾದ ಮೇಲೊಂದು ರೀಮೇಕ್ ಚಿತ್ರಗಳನ್ನು ಮಾಡಿ ಸ್ವಮೇಕ್ ಚಿತ್ರದ ಮಂತ್ರ ಜಪಿಸುತ್ತಿದ್ದ ನಿರ್ದೇಶಕ ಮಹೇಶ್ ಬಾಬು ಮತ್ತೆ ರೀಮೇಕ್ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಸ್ವಮೇಕ್ ಚಿತ್ರ ಎಂದುಕೊಂಡರೂ ರೀಮೇಕ್ ಕಥೆಗಳೇ ಅವರ ಬಳಿ ಬರುತ್ತಿವೆಯಂತೆ. ಅವರೀಗ ತಮಿಳಿನ ಯಶಸ್ವಿ ಚಿತ್ರ `ಪೈಯ್ಯಾ'ವನ್ನು `ಅಜಿತ್' ಹೆಸರಿನಲ್ಲಿ ಕನ್ನಡಕ್ಕೆ ತರುತ್ತಿದ್ದಾರೆ.ಅಂದಹಾಗೆ, ಮಹೇಶ್‌ಬಾಬು ರೀಮೇಕ್‌ಗೆ ಮತ್ತೆ ಜೋತು ಬೀಳಲು ಕಾರಣ ನಿರ್ಮಾಪಕದ್ವಯರಾದ ಜಿ. ಪ್ರೇಮ್ ಮತ್ತು ಪ್ರಣವ್ ಗೌಡ. ನಾಯಕ ನಟ ಚಿರಂಜೀವಿ ಸರ್ಜಾ ಅವರ ಬಯಕೆಯೂ ಮತ್ತೊಂದು ಕಾರಣ. ಪುರುಷೋತ್ತಮ್ ನಿರ್ದೇಶಿಸಬೇಕಿದ್ದ ಈ ಚಿತ್ರ, ಅವರು ಬೇರೆ ಚಿತ್ರದಲ್ಲಿ ಬಿಜಿಯಾಗಿದ್ದ ಕಾರಣ ಮಹೇಶ್‌ಬಾಬು ಹೆಗಲಿಗೆ ಜಾರಿದೆ. ನಿರ್ಮಾಪಕರು ಶೀರ್ಷಿಕೆಯೊಂದಿಗೇ ತಮ್ಮ ಬಳಿ ಬಂದಾಗ ಮಹೇಶ್‌ಬಾಬು ಅವರಿಗೆ ಇಲ್ಲವೆನ್ನಲಾಗಲಿಲ್ಲ. ರೀಮೇಕ್ ಹಕ್ಕುಗಳಿಗೆ ನಿರ್ಮಾಪಕರು ತೆತ್ತಿರುವುದು 15 ಲಕ್ಷ ರೂ.

`ಅ'ಕಾರದ ಹಲವು ಸಿನಿಮಾಗಳನ್ನು ಮಾಡಿರುವ ಮಹೇಶ್ ಬಾಬು ಅವರಿಗೆ ಮತ್ತೊಮ್ಮೆ ಅದೇ ಅಕ್ಷರದ ಶೀರ್ಷಿಕೆಯ ಸಿನಿಮಾ ಸಿಕ್ಕಿರುವುದು ವಿಶೇಷ ಎನಿಸಿದೆ.ಇದು `ಪೈಯ್ಯಾ'ದ ಯಥಾವತ್ ರೀಮೇಕ್ ಅಲ್ಲ ಎಂಬ ಸ್ಪಷ್ಟನೆ ಅವರದು. ಪಕ್ಕಾ ನನ್ನದೇ ಶೈಲಿಯ ಸಿನಿಮಾ ಇದು ಎನ್ನುತ್ತಾರೆ ಅವರು. ಇದು ಪಯಣದ ಸಿನಿಮಾ. ಬೆಂಗಳೂರು ಮತ್ತು ಮುಂಬೈ ನಡುವಿನ ಪಯಣದಲ್ಲಿ ಈ ಚಿತ್ರ ಸಾಗುತ್ತದೆ.  `ಪೈಯ್ಯಾ'ದ ಯುವನ್ ಶಂಕರ್ ರಾಜಾ ಮಟ್ಟು ಹಾಕಿದ ಮೂರು ಹಾಡುಗಳ ಮೂಲ ಸಂಗೀತ ಇಲ್ಲೂ ಪುನರಾವರ್ತನೆಯಾಗಲಿದೆ. ಹೊಸ ಹಾಡುಗಳಿಗೆ ಮಾತ್ರ ಹೊಸ ಸಂಗೀತ ಅಳವಡಿಸಲಾಗುತ್ತದೆ.ನಟ ಚಿರಂಜೀವಿ ಸರ್ಜಾ `ಚಿರು' ಬಳಿಕ ಮತ್ತೆ ಮಹೇಶ್‌ಬಾಬು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರು ಪಾತ್ರ ರೂಪಿಸುವ ಬಗೆ ಚಿರುಗೆ ಹಿಡಿಸಿದೆ. ಅವರ ಜೊತೆ ಕೆಲಸ ಮಾಡುವಾಗ ಹೆಚ್ಚು ಸ್ವಾತಂತ್ರ್ಯವೂ ಸಿಗುತ್ತದೆ ಎನ್ನುವುದು ಚಿರು ಅನಿಸಿಕೆ.ನಟಿ ಸಂಜನಾರ ತಂಗಿ ನಿಕ್ಕಿ ಗಲ್ರಾನಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ತಮ್ಮ ಪ್ರವೇಶಕ್ಕೆ ಇದು ಸೂಕ್ತ ಚಿತ್ರ ಎನ್ನುವುದು ಅವರ ಅಭಿಪ್ರಾಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry