ಹಳೆಯ ಬಾಗಲಿಗೆ ಹೊಸ ತೋರಣ

7
ಅಮಾವಾಸ್ಯೆ ಲೆಕ್ಕಕ್ಕಿಲ್ಲ, ಕೇಕ್, ಮೊಟ್ಟೆ, ಬಿಯರ್‌ಗೆ ಭರ್ಜರಿ ವ್ಯಾಪಾರ

ಹಳೆಯ ಬಾಗಲಿಗೆ ಹೊಸ ತೋರಣ

Published:
Updated:

ಕೋಲಾರ: ಅಂಗಡಿಗಳಲ್ಲಿ ಖರ್ಚಾಗದ ಕ್ಯಾಲೆಂಡರ್‌ಗಳು ಮತ್ತು ಗ್ರೀಟಿಂಗ್ ಕಾರ್ಡ್‌ಗಳ ಒಂಟಿ ಉಯ್ಯಾಲೆ, ಮೊಬೈಲು ಫೋನು, ಇ-ಮೇಲ್‌ಗಳಲ್ಲಿ ಅನಾವರಣಗೊಂಡ ಶುಭಾಷಯಗಳ ವರ್ಣರಂಜಿತ ಲೋಕ. ಬೇಕರಿಗಳಲ್ಲಿ ವಿಧವಿಧದ ಕೇಕುಗಳಿಗೆ ಭರ್ಜರಿ ಬೇಡಿಕೆ, ದೇವಸ್ಥಾನಗಳಲ್ಲಿ ಹೊಸ ಪೂಜೆಯ ಶ್ರದ್ಧೆ, ದೀಪಾಲಂಕಾರಗಳಲ್ಲಿ ಹೊಳೆದ ಬಾರ್ ಅಂಡ್ ರೆಸ್ಟೋರೆಂಟ್, ಡಾಬಾ­ಗಳಲ್ಲಿ ಉಕ್ಕಿದ ಬಿಯರ್‌ ನೊರೆಯ ಸಂಭ್ರಮಕ್ಕೆ ನಾಚಿದ ಅಮಾವಾಸ್ಯೆಯ ಕತ್ತಲು..,– ಹೊಸ ವರ್ಷಕ್ಕೆ ಸ್ವಾಗತ ಕೋರುತ್ತಾ, ಜಿಲ್ಲೆಯ ಜನ ಹಳೆ ವರ್ಷಕ್ಕೆ ಹೋಗಿ ಬಾ ಎಂದಿದ್ದಾರೆ. ಅಮಾ­ವಾಸ್ಯೆಯ ದಿನವೇ ಹೊಸ ವರ್ಷ ಬಂದರೂ ನಂಬಿಕೆಗಳು ಮೂಲೆಗುಂಪಾ­ಗಿವೆ. ಹೊಸ ವರ್ಷದ ಮೊದಲ ಕ್ಷಣ, ಮೊದಲ ದಿನ ನಿರೀಕ್ಷೆಗಳ ಅಲೆಗಳ ಮೇಲೆ ಹರ್ಷದ ಹೊನಲು ಹರಿದಿದೆ.  ಜನರ ಹೊಸ ವರ್ಷದ ಸಂಭ್ರಮದಲ್ಲಿ ಹಲವು ಮಿಶ್ರ ಭಾವನೆಗಳು ತಳುಕು ಹಾಕಿಕೊಂಡಿರುವುದು ವಿಶೇಷ.ಹೊಸ ವರ್ಷಕ್ಕೆ ಸ್ವಾಗತ ಕೋರುವ ಆಚರಣೆಗಳಿಗೆ ಎರಡು ಮುಖ. ಒಂದು ಮನೆ ಒಳಗಿನದು. ಮತ್ತೊಂದು ಮನೆ ಹೊರ­ಗಿನದು. ಮನೆ ಒಳಗೆ ‘ಕೇಕ್ ಸಂಭ್ರಮ’. ದೀಪ ಹಚ್ಚುವ ಸಂಭ್ರಮ. ಹೊರಗೆ ‘ಪಾರ್ಟಿ ಸಂಭ್ರಮ’. ಉಳಿದದ್ದೆಲ್ಲವೂ ನೀರಸ! ಕೇಕ್‌ಗಳಿಗೆ ಭಾರಿ ಬೇಡಿಕೆ: ನಗರದಲ್ಲಿ­ರುವ ಸುಮಾರು 80 ಬೇಕರಿಗಳಲ್ಲಿ ಸಾವಿ­ರಾರು ಕೇಕ್‌ಗಳ ತಯಾರಿ ಭರ್ಜರಿ­ಯಾಗಿ ನಡೆದಿದೆ. ಹೊಸ ವರ್ಷಕ್ಕೆ ಮೂರ್ನಾಲ್ಕು ದಿನ ಮುಂಚೆ ಬಂದಿ­ರುವ ಬೇಡಿಕೆ ಅಚ್ಚರಿ ಮೂಡಿಸುವಷ್ಟಿದೆ.ಸಣ್ಣ ಬೇಕರಿಯೊಂದರಲ್ಲೇ ಈ ದಿನ­ಗಳಲ್ಲಿ ಕನಿಷ್ಠ 300 ಕೆಜಿಯಷ್ಟು ಕೇಕ್‌­ಗಳು ತಯಾರಾಗಿ ಮಾರಾಟವಾಗು­ತ್ತಿವೆ. ಅರ್ಧ ಕೆಜಿ, ಒಂದು ಕೆಜಿಯಿಂದ 15 ಕೆಜಿ ತೂಕದವರೆಗಿನ ಕೇಕ್‌ಗಳು ಮಾರಾಟವಾಗಿವೆ. ಬಹುತೇಕರು ಅರ್ಧ ಮತ್ತು ಒಂದು ಕೆಜಿ ತೂಕದ ಕೇಕ್‌­ಗಳನ್ನೇ ಖರೀದಿಸುತ್ತಾರೆ. ಈ ಲೆಕ್ಕದಲ್ಲಿ ಪ್ರತಿ ಅಂಗಡಿಯಲ್ಲಿ ಸುಮಾರು 500 ಕೇಕ್ ತಯಾರಾಗುತ್ತದೆ ಎಂಬ ಲೆಕ್ಕ­ದಲ್ಲಿ ಅಂದಾಜು ಮಾಡಿದರೂ, ನಗರ­ವೊಂದರಲ್ಲೇ 40 ಸಾವಿರ ಕೇಕ್‌ಗಳು ಮಾರಾಟವಾಗುತ್ತವೆ. ಹೀಗಾಗಿ ಬೇಕರಿ­ಗಳಲ್ಲಿ ಹಗಲು ರಾತ್ರಿ ಕೆಲಸ.ಹೊಸ ವರ್ಷದ ಹಿಂದಿನ ಎರಡು ದಿನ ಮತ್ತು ನಂತರದ ಎರಡು ದಿನ ನಮ್ಮ ಬೇಕರಿಯಲ್ಲಿ ಕೇಕ್ ಬಿಟ್ಟರೆ ಬೇರೇನೂ ಹೆಚ್ಚಿಗೆ ವ್ಯಾಪಾರವಾಗು­ವು­ದಿಲ್ಲ. ಹೀಗಾಗಿ ಶೋಕೇಸಿನ ತುಂಬ ಕೇಕ್‌­ಗಳನ್ನೇ ಇಡುತ್ತೇವೆ ಎನ್ನುತ್ತಾರೆ ಅಮ್ಮ­ವಾರಿ­ಪೇಟೆ ಬೇಕರಿಯೊಂದರ ವಿ.ತಿಲಕ್.ಲಕ್ಷಾಂತರ ಮೊಟ್ಟೆ: ಕೇಕ್‌ಗಳ ತಯಾ­ರಿಗೆ ಬೇಕಾದ ಮೊಟ್ಟೆಗಳ ಮಾರಾಟವೂ ಹೆಚ್ಚಿರುವುದು ವಿಶೇಷ. ನಗರದಲ್ಲಿರುವ ಮೊಟ್ಟೆ ಅಂಗಡಿಗಳಲ್ಲಿ ಸಾವಿರಾರು ಸಂಖ್ಯೆ­ಯಲ್ಲಿ ಮೊಟ್ಟೆಗಳ ಮಾರಾಟ ಹೆಚ್ಚಾ­ಗಿದೆ. ಒಂದು ಕೆಜಿ ಕೇಕ್ ತಯಾ­ರಿ­ಸಲು ಕನಿಷ್ಠ 8 ಮೊಟ್ಟೆ ಬಳಸಲಾಗು­ತ್ತದೆ. ಪ್ರತಿ ಬೇಕರಿಯಲ್ಲಿ ಸುಮಾರು 2400 ಮೊಟ್ಟೆಯಂತೆ 80 ಬೇಕರಿ­ಗ­ಳಲ್ಲಿ ಬಳಸಲಾಗುವ ಮೊಟ್ಟೆಗಳ ಸಂಖ್ಯೆ 1,90 ಲಕ್ಷ! ಮೊಟ್ಟೆಯ ವಹಿ­ವಾಟಿನ ಲೆಕ್ಕ ಹಾಕಿದರೆ ₨ 8 ಲಕ್ಷ ದಾಟುತ್ತದೆ.ದಿನವೂ ಮೂರು ಸಾವಿರ ಮೊಟ್ಟೆ­ಗಳು ಮಾರಾಟವಾಗುತ್ತದೆ. ಆದರೆ ಹೊಸ ವರ್ಷದ ಆರಂಭದ ಹಿಂದಿನ ಮತ್ತು ಮುಂದಿನ ಕೆಲವು ದಿನಗಳಲ್ಲಿ ಕನಿಷ್ಠ ಒಂದು ಸಾವಿರ ಮೊಟ್ಟೆಯಾ­ದರೂ ಹೆಚ್ಚಾಗಿ ಮಾರಾಟವಾಗುತ್ತದೆ ಎಂಬುದು ಅಮ್ಮಾರಿಪೇಟೆಯ ಮೊಟ್ಟೆ ವ್ಯಾಪಾರಿ ಅಕ್ಮಲ್ ಪಾಷಾ  ಮಾತು.ಡಾಬಾಗಳು ಮತ್ತು ಬಾರ್ ಅಂಡ್ ರೆಸ್ಟೋರೆಂಟುಗಳಲ್ಲಿ ಮಾಂಸಾಹಾರದ ಜೊತೆಗೆ ಮೊಟ್ಟೆ, ಮೊಟ್ಟೆಯಿಂದ ತಯಾ­ರಿಸಿದ ಪದಾರ್ಥಗಳಿಗೂ ಹೆಚ್ಚು ಬೇಡಿಕೆ ಇರುವುದರಿಂದ ಮೊಟ್ಟೆಗೆ ಹೆಚ್ಚು ಬೇಡಿಕೆ ಇರುತ್ತದೆ. ಆದರೆ ಈ ಬಾರಿ ಮೊಟ್ಟೆಯ ಬೆಲೆ ಹೆಚ್ಚಾಗಿಲ್ಲ ಎನ್ನುತ್ತಾರೆ ಅವರು.ನಗರದಲ್ಲಿ ಸಗಟು ಮೊಟ್ಟೆ ಮಾರುವ ಅಂಗಡಿಗಳು ಸುಮಾರು ಹತ್ತಕ್ಕೂ ಹೆಚ್ಚು ಇವೆ. ಎಲ್ಲ ಅಂಗಡಿಗಳ ಮಾಲೀಕರಿಗೂ ವರ್ಷಕ್ಕೊಮ್ಮೆ ಭಾಗ್ಯದ ಬಾಗಿಲ ತೆರೆಯುತ್ತದೆ.ಬಿಯರ್ ಮಾರಾಟ: ವೈನ್ ಶಾಪ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಹೊಸ ವರ್ಷದ ಹಿಂದಿನ ದಿನ ಮತ್ತು ಹೊಸ ವರ್ಷದ ದಿನ ಬೇರೆಲ್ಲದ್ದ­ಕ್ಕಿಂತಲೂ ಬಿಯರ್ ಹೆಚ್ಚಿನ ಪ್ರಮಾಣದಲ್ಲಿ ರಾಟ­ವಾಗುತ್ತದೆ. ಬಹಳಷ್ಟು ಜನ ಬಿಯರ್ ನೊರೆ­ಯನ್ನು ಚಿಮ್ಮಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರಲು ಬಯಸುತ್ತಾರೆ ನಗರದ ಬಾರ್ ಒಂದರ ಮಾಲೀಕರಾದ ಗಿರೀಶ್ ಅವರ ನುಡಿ.ಬಿಯರ್‌ ಬಳಸುವರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಹಲವು ಬಾರ್‍ ಗಳಲ್ಲಿಯೇ ಹೊಸ ವರ್ಷಾಚರಣೆಗೆ ಅವಕಾಶವೂ ಕೊಡುವುದರಿಂದ ಸಂಭ್ರಮ ಹೆಚ್ಚಿರು­ತ್ತದೆ. ಆದರೆ ಅದು ಮಿತಿ ಮೀರದಂತೆ ಎಚ್ಚರ ವಹಿಸಲೇಬೇಕಾಗುತ್ತದೆ ಎನ್ನುತ್ತಾರೆ ಅವರು.ತಾಲ್ಲೂಕಿನಲ್ಲಿ ವೈನ್ ಶಾಪ್‌ಗಳೂ ಸೇರಿದಂತೆ ಸುಮಾರು 56 ಬಾರ್ ಅಂಡ್ ರೆಸ್ಟೋರೆಂಟ್‌ಗಳಿವೆ. ನಗರ­ವೊಂದ­ರಲ್ಲೇ 30 ಬಾರ್ ಅಂಡ್ ರೆಸ್ಟೋರೆಂಟ್ ಗಳಿರುವುದು ವಿಶೇಷ. ಹೀಗಾಗಿ ವರ್ಷಾಚರಣೆಯ ಸಂಭ್ರಮ­ದಲ್ಲಿ ಪಾಲ್ಗೊಳ್ಳಲು ಸುತ್ತಮುತ್ತಲಿನ ಪ್ರದೇಶಗಳ ಯುವಕರೂ ನಗರದ ದಾರಿ ಹಿಡಿಯುತ್ತಾರೆ. ನಗರದ ಸುತ್ತಮುತ್ತ ಹೊರ­ವಲಯದಲ್ಲಿರುವ ಡಾಬಾ­ಗಳಲ್ಲೂ ವ್ಯಾಪಾರ ಭರ್ಜರಿಯಾಗಿ ನಡೆದಿದೆ.ಮನೆ ಹೊರಗೆ ಯುವಜನರ ವರ್ಷಾ­ಚರಣೆ ಸಂಭ್ರಮ ಈ ರೀತಿ ಇದ್ದರೆ, ಮನೆಗಳಲ್ಲಿಯೂ ಮಹಿಳೆಯರು, ಮಕ್ಕಳು ಕೇಕ್‌ಗಳನ್ನು ಕತ್ತರಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರಿದ್ದಾರೆ. ಮನೆ­ಗಳಲ್ಲಿ ವಿಶೇಷ ಪೂಜೆಗಳೂ ಮಧ್ಯರಾತ್ರಿ­ಯಿಂದಲೇ ಶುರುವಾಗಿದ್ದವು.

ಓಂಶಕ್ತಿ ಪ್ರವಾಸ ಜೋರು

ಹೊಸ ವರ್ಷದಲ್ಲಿ ಓಂಶಕ್ತಿ ಭಕ್ತರ ಧಾರ್ಮಿಕ ಪ್ರವಾಸವೂ ಜೋರಾಗಿದೆ. ತಮಿಳುನಾಡಿನ ಓಂಶಕ್ತಿ ದೇವಾಲಯಕ್ಕೆ ಹೋಗಿ ಹರಕೆ ತೀರಿಸುವ ಸಲುವಾಗಿ ಸಾವಿರಾರು ಭಕ್ತರು ಪ್ರವಾಸ ಮಾಡುವುದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೂ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಒದಗಿಸುವುದು ಸವಾಲಾಗಿ ಪರಿಣಮಿಸಿದೆ.

ಡಿಸೆಂಬರ್‌ನ ಕೊನೇ ವಾರದಲ್ಲಿ ಸುಮಾರು 15ಕ್ಕೂ ಹೆಚ್ಚು ರಾಜ್ಯ ರಸ್ತೆ ಸಾರಿಗೆ ಬಸ್ ಗಳು ಓಂಶಕ್ತಿ ಪ್ರವಾಸಕ್ಕೆ ನಿಗದಿಯಾದ ಪರಿಣಾಮ, ಗ್ರಾಮಾಂತರ ಪ್ರದೇಶಗಳಿಗೆ ನಗರ ಸಾರಿಗೆ ಬಸ್‌ಗಳನ್ನು ನಿಯೋಜಿಸಲಾಗಿದೆ.  ಕೋಲಾರ­ದಿಂದ 70 ಕಿಮೀ ದೂರದಲ್ಲಿರುವ ದೊಡ್ಡಬಳ್ಳಾಪುರಕ್ಕೂ ಈ ವಾರದಲ್ಲಿ ನಗರ­ಸಾರಿಗೆ ಬಸ್‌ಗಳನ್ನೇ ನಿಯೋಜಿಸಲಾಗಿತ್ತು. ಅಯ್ಯಪ್ಪ ಸ್ವಾಮಿಯ ಭಕ್ತರು ಶಬರಿಮಲೆಗೆ ತೆರಳಲು ಸಿದ್ಧತೆ ನಡೆಸುತ್ತಿ­ರುವು­ದರಿಂದ ಇನ್ನಷ್ಟು ಬಸ್‌ಗಳನ್ನು ನಿಯೋಜಿಸಬೇಕಾಗುತ್ತದೆ ಎಂಬುದು ಸಂಸ್ಥೆಯ ಸಿಬ್ಬಂದಿಯೊಬ್ಬರ ನುಡಿ.

ಕ್ಯಾಲೆಂಡರ್‌ ಕೇಳೋರಿಲ್ಲ

ಹಳೇ ವರ್ಷ ಕಳೆದ ಬಳಿಕ ಹಳೇ ಕ್ಯಾಲೆಂಡರನ್ನು ಮಗುಚಿ ಹೊಸದನ್ನು ಗೋಡೆಗೆ ತೂಗಿಬಿಡುವುದು ಸಹಜ. ಹಾಗಂತ ಕ್ಯಾಲೆಂಡರ್‌ಗಳನ್ನು ಜನರು ಹಣಕೊಟ್ಟು ಕೊಳ್ಳುತ್ತಾರೆ ಎಂಬುದು ಮಾತ್ರ ಅರ್ಧ ಸತ್ಯ. ಹೊಸ ವರ್ಷ ಬಂದಿರುವ ಕ್ಷಣದಲ್ಲಿ ಕ್ಯಾಲೆಂಡರ್‌ಗಳು ಎಷ್ಟು ಮಾರಾಟವಾದವು ಎಂದು ವ್ಯಾಪಾರಿಗಳನ್ನು ಕೇಳಿದರೆ ಅವರದು ನಿರಾಶೆಯ ನೋಟ.

  ಕ್ಯಾಲೆಂಡರ್‌ಗಳನ್ನು ಉಚಿತವಾಗಿ ಹಂಚುವ ಮಂದಿ ಹೆಚ್ಚಾಗಿರುವಾಗ ದುಡ್ಡು ಕೊಟ್ಟು ಕ್ಯಾಲೆಂಡರುಗಳನ್ನು ಕೊಳ್ಳುವವರು ಯಾರು? ಎಲ್ಲರಿಗೂ ಪುಗಸಟ್ಟೆ ಕ್ಯಾಲೆಂಡರೇ ಬೇಕು ಎನ್ನುತ್ತಾರೆ ನಗರದ ಹೊಸ ಬಸ್ ನಿಲ್ದಾಣದ ಅಂಗಡಿಯ ಲಕ್ಷ್ಮಮ್ಮ.ಕಳೆದ ವರ್ಷವಾದರೂ ಕ್ಯಾಲೆಂಡರ್‌ಗಳನ್ನು ಬಹಳಷ್ಟು ಮಂದಿ ಖರೀದಿಸಿದ್ದರು. ಆದರೆ ಅವರ ಪೈಕಿ ಶೇ 25ರಷ್ಟು ಮಂದಿಯೂ ಈ ಬಾರಿ ಖರೀದಿಸಿಲ್ಲ. ಮಾರಾಟಕ್ಕೆಂದು ತಂದಿರುವ ಕ್ಯಾಲೆಂಡರ್‌ಗಳ ಹಲವು ಬಂಡಲ್ ಗಳನ್ನು ನಾವು ತೆರೆದೇ ಇಲ್ಲ. ಪಾಕೆಟ್ ಕ್ಯಾಲೆಂಡರುಗಳನ್ನೂ ಯಾರೂ ಕೇಳುತ್ತಿಲ್ಲ ಎಂದು ಅವರು ವಿಷಾದಿಸಿದರು.

ಚರ್ಚ್‌ಗಳಲ್ಲಿ ವಿಶೇಷ ಪೂಜೆ

ನಗರದ ಸಾವಿರಾರು ಕ್ರೈಸ್ತರು ಮಂಗಳವಾರ ರಾತ್ರಿ 10ರಿಂದ ಮಧ್ಯರಾತ್ರಿ 12.30ರವರೆಗೆ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಿ, ದ್ರಾಕ್ಷಾರಸ–ರೊಲಿಯೊಂದಿಗೆ ಹೊಸ ವರ್ಷ ಸ್ವಾಗತಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry