ಮಂಗಳವಾರ, ನವೆಂಬರ್ 19, 2019
28 °C
ಯುವಜನರಿಗೆ ಸಿಗದ ಮನ್ನಣೆ: 60 ವರ್ಷ ದಾಟಿದ 9 ಅಭ್ಯರ್ಥಿಗಳ ಸ್ಪರ್ಧೆ

ಹಳೆಯ ಮುಖಗಳ ಜುಗಲ್‌ಬಂದಿ

Published:
Updated:

ಚಾಮರಾಜನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಈ ಬಾರಿಯ ಚುನಾವಣೆಯಲ್ಲೂ ರಾಜಕೀಯ ಪಕ್ಷಗಳು ಹಳೆಬರಿಗೆ ಟಿಕೆಟ್ ನೀಡಿದ್ದು, ಹಳೆಯ ಮುಖಗಳ ನಡುವೆ ಜುಗಲ್‌ಬಂದಿಗೆ ಅಖಾಡ ಸಜ್ಜಾಗಿದೆ.ನಾಲ್ಕು ಕ್ಷೇತ್ರಗಳಿಗೆ ಒಟ್ಟು 60 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 7 ಮಂದಿ ಸಲ್ಲಿಸಿದ್ದ ನಾಮಪತ್ರ ಅಸಿಂಧುಗೊಂಡಿವೆ. ಏ. 20 ಉಮೇದುವಾರಿಕೆ ಹಿಂಪಡೆಯಲು ಅಂತಿಮ ದಿನ. ಮುಕ್ಕಾಲು ಭಾಗದಷ್ಟು ಅಭ್ಯರ್ಥಿಗಳು ಈಗಾಗಲೇ ಚುನಾವಣೆಯಲ್ಲಿ ಬೇವು-ಬೆಲ್ಲದ ಅನುಭವ ಪಡೆದಿದ್ದಾರೆ.ಹಿಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲಿನ ರುಚಿ ಅನುಭವಿಸಿದ್ದ ಕೆಲವು ಪಕ್ಷೇತರರು ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಹುಜನ ಸಮಾಜ ಪಕ್ಷದಿಂದ ಅಖಾಡಕ್ಕೆ ಇಳಿದಿರುವ ಅಭ್ಯರ್ಥಿಗಳು ಕಳೆದ ಚುನಾವಣೆಯಲ್ಲೂ ಗೆಲುವಿಗಾಗಿ ಜಿದ್ದಾಜಿದ್ದಿ ಸ್ಪರ್ಧೆಗೆ ಇಳಿದಿದ್ದರು. ಉಳಿದಂತೆ ಕರ್ನಾಟಕ ಜನತಾ ಪಕ್ಷದಿಂದ ನಾಲ್ಕು ಕ್ಷೇತ್ರಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಕೂಡ ರಾಜಕೀಯಕ್ಕೆ ಹೊಸಬರಲ್ಲ. ಎಲ್ಲರೂ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷದಿಂದ ಹೋಗಿರುವ ವಲಸಿಗರಾಗಿದ್ದಾರೆ.ಪ್ರಾಧಾನ್ಯ ಕಡಿಮೆ

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು 25 ವರ್ಷ ವಯಸ್ಸಾಗಿರಬೇಕು. ಚುನಾವಣೆಗೆ ಸ್ಪರ್ಧಿಸಿರುವ ನಾಲ್ಕು ಕ್ಷೇತ್ರದ ಅಭ್ಯರ್ಥಿಗಳ ವಯೋಮಾನ ಪರಿಶೀಲಿಸಿದರೆ ಯುವಜನರಿಗೆ ಹೆಚ್ಚಿನ ಪ್ರಾಧಾನ್ಯ ಸಿಗದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.ರಾಷ್ಟ್ರಿಯ ಹಾಗೂ ಪ್ರಾದೇಶಿಕ ಪಕ್ಷಗಳು ಹಳೆಯ ಮುಖಗಳಿಗೆ ಟಿಕೆಟ್ ನೀಡಿವೆ. ಪುನರಾಯ್ಕೆ ಬಯಸಿರುವ ನಾಲ್ಕು ಕ್ಷೇತ್ರದ ಶಾಸಕರ ವಯಸ್ಸು 50 ದಾಟಿದೆ. ಒಟ್ಟು 53 ಅಭ್ಯರ್ಥಿಗಳಲ್ಲಿ 25ರಿಂದ 30 ವರ್ಷ ವಯೋಮಾನದವರ ಸಂಖ್ಯೆ ಕೇವಲ ಎರಡು. 30ರಿಂದ 40 ವರ್ಷದ 8 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. 12 ಅಭ್ಯರ್ಥಿಗಳು 40ರಿಂದ 50 ವರ್ಷ ವಯೋಮಾನದವರಾಗಿದ್ದಾರೆ. 50ರಿಂದ 60 ವರ್ಷದ ಅಭ್ಯರ್ಥಿಗಳ ಸಂಖ್ಯೆ 22.ಸರ್ಕಾರಿ ನೌಕರರ ನಿವೃತ್ತಿಗೆ 60 ವರ್ಷ ನಿಗದಿಪಡಿಸಲಾಗಿದೆ. ಆದರೆ, ರಾಜಕೀಯದಲ್ಲಿ ನಿವೃತ್ತಿಗೆ ವಯಸ್ಸಿನ ಮಾನದಂಡವಿಲ್ಲ. 60 ವರ್ಷ ದಾಟಿದ 9 ಅಭ್ಯರ್ಥಿಗಳು ಈ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದರಲ್ಲಿ ಒಬ್ಬರನ್ನು ಹೊರತುಪಡಿಸಿದರೆ ಉಳಿದ ಎಲ್ಲ ಅಭ್ಯರ್ಥಿಗಳು ವಿವಿಧ ರಾಜಕೀಯ ಪಕ್ಷ ಪ್ರತಿನಿಧಿಸುತ್ತಾರೆ.

ಇಬ್ಬರು ಮಹಿಳೆಯರು ನಾಮಪತ್ರ ಸಲ್ಲಿಕೆ

ಚಾಮರಾಜನಗರ: ಜಿಲ್ಲೆಯ ಆರು ದಶಕದ ರಾಜಕೀಯ ಇತಿಹಾಸದಲ್ಲಿ ಮೂವರು ಮಹಿಳೆಯರು ಮಾತ್ರವೇ ಶಾಸನಸಭೆ ಪ್ರವೇಶಿಸಿದ್ದಾರೆ.ಗುಂಡ್ಲುಪೇಟೆ ಕ್ಷೇತ್ರದಿಂದ ಕೆ.ಎಸ್. ನಾಗರತ್ನಮ್ಮ ಆಯ್ಕೆಯಾಗಿ ಉನ್ನತ ಹುದ್ದೆ ಅಲಂಕರಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕೊಳ್ಳೇಗಾಲ ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಕೆಂಪಮ್ಮ ಚುನಾಯಿತರಾಗಿದ್ದರು. ಹನೂರು ಕ್ಷೇತ್ರದಿಂದ ಪರಿಮಳಾ ನಾಗಪ್ಪ ಶಾಸನಸಭೆ ಪ್ರವೇಶಿಸಿದ ಜಿಲ್ಲೆಯ ಮೂರನೇ ಮಹಿಳೆ ಎಂಬ ಹಿರಿಮೆ ಹೊಂದಿದ್ದಾರೆ.ಆದರೆ, ಈ ಬಾರಿಯ ಚುನಾವಣೆಯಲ್ಲಿ ಕೇವಲ ಇಬ್ಬರು ಮಹಿಳೆಯರು ಮಾತ್ರವೇ ನಾಮಪತ್ರ ಸಲ್ಲಿಸಿದ್ದಾರೆ. ಹನೂರು ಕ್ಷೇತ್ರದಿಂದ ಪರಿಮಳಾ ನಾಗಪ್ಪ ಜೆಡಿಎಸ್‌ನಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ. ಉಳಿದಂತೆ ಕೊಳ್ಳೇಗಾಲ ಮೀಸಲು (ಪರಿಶಿಷ್ಟ ಜಾತಿ) ಕ್ಷೇತ್ರದಿಂದ ಎಂ. ನಾಗರತ್ನಾ ಎಂಬುವರು ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.ಜಿಲ್ಲೆಯಲ್ಲಿ 7,30,184 ಮತದಾರರು ಇದ್ದಾರೆ. ಇದರಲ್ಲಿ ಮಹಿಳಾ ಮತದಾರರ ಸಂಖ್ಯೆ 3,59,078. ಒಟ್ಟು ಮತದಾರರಲ್ಲಿ ಶೇ. 49.17ರಷ್ಟು ಮಹಿಳಾ ಮತದಾರರು ಇದ್ದಾರೆ. ಆದರೆ, ಕೇವಲ ಈ ಇಬ್ಬರು ಮಹಿಳೆಯರು ಮಾತ್ರವೇ ನಾಮಪತ್ರ ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)