ಶುಕ್ರವಾರ, ಡಿಸೆಂಬರ್ 6, 2019
24 °C

ಹಳೆ ಆಯುಧಪೂಜೆ

Published:
Updated:
ಹಳೆ ಆಯುಧಪೂಜೆ

‘ಮುಂಗಾರು ಮಳೆ’ಯ ಪೂರ್ವಕಾಲವದು. ಕನ್ನಡ ಚಿತ್ರರಂಗ ‘ಜೋಗಿ’ ಚಿತ್ರದ ಗುಂಗನ್ನು ಹಚ್ಚಿಕೊಂಡಿತ್ತು. ಭಾವುಕ ನೆಲೆಗಟ್ಟಿನ, ನಾಟಕೀಯತೆಯನ್ನು ಢಾಳಾಗಿಸಿಕೊಂಡ ಕತೆಗಳಲ್ಲಿ ಮಚ್ಚು, ಲಾಂಗುಗಳಿದ್ದರೆ ಅವು ಹಣ ಮಾಡುವ ಸಾಧ್ಯತೆ ನಿಚ್ಚಳ ಎಂಬ ಅಭಿಪ್ರಾಯ ದಟ್ಟವಾಗಿದ್ದ ಸಂದರ್ಭ. ತೆಲುಗು, ತಮಿಳಿನಲ್ಲೂ ಅದೇ ಧೋರಣೆಯಲ್ಲಿ ಅನೇಕ ಚಿತ್ರಗಳು ಬಂದವು. ಆ ಪೈಕಿ ಬಾಕ್ಸಾಫೀಸ್‌ನಲ್ಲಿ ಹಣ ಮಾಡಿದ್ದಲ್ಲದೆ ಜೂನಿಯರ್ ಎನ್‌ಟಿಆರ್ ತಾರಾಪಟ್ಟವನ್ನು ಗಟ್ಟಿಗೊಳಿಸಿದ್ದು ‘ಸಿಂಹಾದ್ರಿ’. 2003ರಲ್ಲಿ ತೆರೆಕಂಡ ಆ ಚಿತ್ರ ಬಂಡವಾಳದ ನಾಲ್ಕು ಪಟ್ಟು ಹಣವನ್ನು ಗಳಿಸಿಕೊಟ್ಟಿದ್ದು ನಿಜ.ಅದೇ ಚಿತ್ರವನ್ನು ಅನಾಮತ್ತಾಗಿ ಎತ್ತಿಕೊಂಡು ಬಂದು ತುಷಾರ್ ರಂಗನಾಥ್ ಕನ್ನಡದಲ್ಲಿ ‘ಕಂಠೀರವ’ ನಿರ್ದೇಶಿಸಿದ್ದಾರೆ. ಚಿತ್ರಕತೆಯ ದೃಷ್ಟಿಯಿಂದ ಮೂಲ ಚಿತ್ರಕ್ಕೆ ಅವರು ಸಂಪೂರ್ಣ ನಿಷ್ಠರು. ತಮ್ಮ ಬುದ್ಧಿವಂತಿಕೆಯನ್ನು ಕೊಂಚವೂ ಬಳಸದೆ ಅವರು ಜೂನಿಯರ್ ಎನ್‌ಟಿಆರ್ ಜಾಗದಲ್ಲಿ ವಿಜಯ್ ಅವರನ್ನು ತಂದು ಕೂರಿಸಿದ್ದಾರೆ. ಅಂಕಿತಾ ಪಾತ್ರಕ್ಕೆ ರಿಷಿಕಾ ಅವರನ್ನೂ, ಭೂಮಿಕಾ ಬಣ್ಣಹಚ್ಚಿದ್ದ ಪಾತ್ರಕ್ಕೆ ಶುಭಾ ಪೂಂಜಾ ಅವರನ್ನೂ ಇಟ್ಟು ಅದೇ ಕತೆಯನ್ನು ಮುದ್ದಿಸಿದ್ದಾರೆ. ಮೂಲ ಚಿತ್ರದಲ್ಲಿ ಖಳನಾಯಕರಾಗಿದ್ದ ಮುಖೇಶ್ ರಿಶಿ ಹಾಗೂ ರಾಹುಲ್ ದೇವ್ ಅವರನ್ನು ರಂಗನಾಥ್ ಬದಲಾಯಿಸಲು ಹೋಗಿಲ್ಲ. ಕೆಲವು ದೃಶ್ಯಗಳಲ್ಲಂತೂ ಖಳನಾಯಕರ ಅಂಗಿಯ ಆಕಾರ, ಬಣ್ಣ ಕೂಡ ಬದಲಾಗಿಲ್ಲ.ಮಿತಿಗೆ ಒಳಪಟ್ಟೇ ರಂಗನಾಥ್ ಕೆಲಸ ನಿರ್ವಹಿಸಿರುವುದರಿಂದ ಹಾಗೂ ಅದನ್ನು ನಿರ್ಮಾಪಕರು ಅನುಮೋದಿಸಿರುವುದರಿಂದ ಅವರ ಸೃಜನಶೀಲತೆಯ ಮಗ್ಗಲುಗಳನ್ನು ತಡಕುವ ಪ್ರಮೇಯವೇ ‘ಕಂಠೀರವ’ದಲ್ಲಿ ಕಾಣುವುದಿಲ್ಲ. ಆದರೆ, ಒಬ್ಬ ವ್ಯಕ್ತಿಯ ಬಣ್ಣದ ಅಂಗಿಯನ್ನು ಇನ್ನೊಬ್ಬರಿಗೆ ತೊಡಿಸುವಾಗ ಆ ಬಣ್ಣ, ಆಕಾರ ಅವರಿಗೆ ಹೊಂದುವುದೇ ಇಲ್ಲವೇ ಎಂಬ ಅರಿವು ಮುಖ್ಯವಾಗುತ್ತದೆ. ‘ಕಂಠೀರವ’ ಹಿಂದೆ ಬಿದ್ದಿರುವುದು ಈ ವಿಷಯದಲ್ಲೇ. ವಿಜಯ್‌ಗೆ ತಮ್ಮದೇ ಆದ ಸಾಮರ್ಥ್ಯವಿದೆ. ಅವರಂತೆ ಜೂನಿಯರ್ ಎನ್‌ಟಿಆರ್ ಇಲ್ಲ. ಈ ಮಾತನ್ನು ತಿರುಗಾಮುರುಗಾ ಆಗಿಯೂ ಹೇಳಬಹುದು. ಹಾಗಿದ್ದೂ ವಿಜಯ್ ಮೇಲೆ ಅನಗತ್ಯವಾಗಿ ಜೂನಿಯರ್ ಎನ್‌ಟಿಆರ್ ಇಮೇಜಿನ ಭಾರವನ್ನು ಹೇರಲಾಗಿದೆ.ವಿಜಯ್ ಮೈಕಟ್ಟನ್ನು ನಿರ್ದೇಶಕರು ಇನ್ನೂ ಸಮರ್ಪಕವಾಗಿ ಬಳಸಿಕೊಳ್ಳಬಹುದಿತ್ತು. ಆ ಅವಕಾಶ ಚೊಚ್ಚಲ ಚಿತ್ರದಲ್ಲೇ ನಾಯಕಿ ರಿಷಿಕಾಗೆ ಸಿಕ್ಕಿದ್ದು, ಅದನ್ನು ಅವರು ‘ಉದರ ನಿಮಿತ್ತ’ ಪಾತ್ರವೆಂದೇ ಭಾವಿಸಿ ನಿಭಾಯಿಸಿದ್ದಾರೆ. ಮುಗ್ಧ ಹುಡುಗಿಯ ಪಾತ್ರದಲ್ಲಿ ಶುಭಾ ಪೂಂಜಾಗೆ ಕೃಪಾಂಕ ಕೊಡಬಹುದು. ಮೂಲ ಚಿತ್ರದಲ್ಲಿ ಬ್ರಹ್ಮಾನಂದಂ ನಿರ್ವಹಿಸಿರುವ ಪಾತ್ರವನ್ನು ಇದರಲ್ಲಿ ಮಂಡ್ಯ ರಮೇಶ್ ಅನುಕರಿಸಿಲ್ಲವೆಂಬುದು ಗಮನಾರ್ಹ ಅಂಶ. ಶ್ರೀನಿವಾಸ ಮೂರ್ತಿ ಅವರ ಅಭಿನಯಕ್ಕೂ ಈ ಮಾತು ಅನ್ವಯಿಸುತ್ತದೆ. ಮಂಡ್ಯ ರಮೇಶ್-ಸಾಧುಕೋಕಿಲಾ ಹಾಸ್ಯ ಪ್ರಸಂಗಗಳು ಮೂಲನಿಷ್ಠವೇ ಆದರೂ ಕನ್ನಡತನದ ಲೇಪ ಹಚ್ಚಿಕೊಂಡಿವೆ.ತೆಲುಗಿನಲ್ಲಿ ನಿರ್ದೇಶಕ ರಾಜಮೌಳಿ ‘ಪೈಸಾ ವಸೂಲ್’ ಧೋರಣೆಯಿಂದ ‘ಸಿಂಹಾದ್ರಿ’ ಕೊಟ್ಟಿದ್ದರು. ಕನ್ನಡದಲ್ಲಿ ‘ಬಿ’ ಹಾಗೂ ‘ಸಿ’ ಸೆಂಟರ್ ಪ್ರೇಕ್ಷಕರನ್ನು ಉದ್ದೇಶದಲ್ಲಿಟ್ಟುಕೊಂಡು ‘ಕಂಠೀರವ’ ಆಯುಧ ಹಿಡಿದಿದ್ದಾನೆ. ರಕ್ತದೋಕುಳಿಯಾಟ ನೋಡುವ ಹಳೆಯ ಅವಕಾಶ ಈಗ ಹೊಸದಾಗಿ ಬಂದಿದೆ; ಕೇರಳಕ್ಕಾಗಿ ಆಯುಧವೆತ್ತುವ ಕನ್ನಡಿಗನ ರೂಪದಲ್ಲಿ!

ಪ್ರತಿಕ್ರಿಯಿಸಿ (+)