ಗುರುವಾರ , ಜೂನ್ 17, 2021
23 °C
ಚಿತ್ರ: ಶಿವಾಜಿನಗರ

ಹಳೆ ಕಬ್ಬಿಣಕ್ಕೆ ಹೊಸ ಬಣ್ಣ

ಅಮಿತ್‌ ಎಂ.ಎಸ್‌. Updated:

ಅಕ್ಷರ ಗಾತ್ರ : | |

ನಿರ್ಮಾಪಕ: ರಾಮು, ನಿರ್ದೇಶಕ: ಪಿ.ಎನ್. ಸತ್ಯ, ತಾರಾಗಣ: ದುನಿಯಾ ವಿಜಯ್, ಪರೂಲ್ ಯಾದವ್, ಅವಿನಾಶ್, ಆಶಿಶ್ ವಿದ್ಯಾರ್ಥಿ, ಆದಿತ್ಯ ಮೆನನ್‌, ಅಭಿಮನ್ ಸಿಂಗ್, ತ್ರಿವೇಣಿ, ಸುಮಿತ್ರಾ, ಸತ್ಯಜಿತ್‌ ಮತ್ತಿತರರು.‘ಮೆಜೆಸ್ಟಿಕ್’ ಎಂಬ ಸಿನಿಮಾ ನಿರ್ದೇಶಿಸಿದ್ದ ಪಿ.ಎನ್. ಸತ್ಯ, ತಮ್ಮ ಚಿತ್ರದಲ್ಲಿ ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್‌ನಲ್ಲಿ ಭೂಗತ ಜಗತ್ತಿನ ನೆರಳಿನಡಿ ನೆತ್ತರು ಹರಿಸಿದ್ದರು. ಆ ಚಿತ್ರ ಯಶಸ್ವಿಯಾಗಿತ್ತು ಕೂಡ. ಮಚ್ಚು ಮತ್ತು ನೆತ್ತರಿನ ಸಖ್ಯವನ್ನು ಆನಂದಿಸುತ್ತಲೇ ಅದನ್ನು ತಮ್ಮ ಮುಂದಿನ ಸಿನಿಮಾಗಳಿಗೂ ವಿಸ್ತರಿಸಿದ್ದರು.ಆಪ್ಯಾಯಮಾನವಾಗಿ ಕಂಡ ಕಡಿ, ಕೊಚ್ಚು, ಕೊಲ್ಲುವ ಕಾರ್ಯವನ್ನು ಸಾಧಿಸಲು ಈ ಬಾರಿ ಶಿವಾಜಿನಗರ ಕ್ಷೇತ್ರವನ್ನು ಅವರು ಆಯ್ದುಕೊಂಡಿದ್ದಾರೆ. ಶಿವಾಜಿನಗರದ ಗಲ್ಲಿಗಳಲ್ಲಿ ಅವರಿಗೆ ಮಾಂಸದಂಗಡಿಗಳೇ ಹೆಚ್ಚಾಗಿ ಕಂಡಿರಬೇಕು. ನಿರ್ದಯವಾಗಿ ಮನುಷ್ಯರನ್ನು ಕತ್ತರಿಸಿ ರಕ್ತ ಚೆಲ್ಲಾಡಿದ್ದಾರೆ. ರಸ್ತೆಗಳನ್ನೇ ಸ್ಮಶಾನವಾಗಿಸಿದ್ದಾರೆ. ರಕ್ತತರ್ಪಣದ ಮೂಲಕ ಮನರಂಜನೆ ಕೊಡುವ ಅವರ ಬಯಕೆ ಯಶಸ್ವಿಯಾಗಿದೆ.

ಶಿವಾಜಿನಗರ ನೂರಾರು ಬಗೆಯ ವಹಿವಾಟುಗಳು ನಡೆಯುವ, ಸಾವಿರಾರು ಜನರ ಬದುಕಿಗೆ ನೆಲೆಕೊಟ್ಟ ಜಾಗ. ಸಿನಿಮಾದ ನಾಯಕನಿಗೂ ‘ಶಿವಾಜಿನಗರ’ ನೆಲೆ ಕೊಟ್ಟಿದೆ. ಜನ್ಮವೆತ್ತ ಕೋಪವೊಂದೇ ಆತನ ಋಣಾತ್ಮಕ ಗುಣ. ಉಳಿದಂತೆ ಅಪ್ಪಟ ಚಿನ್ನದ ಮನಸ್ಸಿನ ಆತ ಹೊಡೆದಾಟಕ್ಕೆ ನಿಂತಾಗ ರಾವಣನ ಅಪರಾವತಾರ. ಕೈಕಾಲುಗಳನ್ನು ಮುರಿದು ಚೆಂಡಾಡಿದರೂ ನಾಯಕ ರೌಡಿಯಲ್ಲ. ಹಳೆಯ ರೌಡಿಸಂ ಚಿತ್ರಗಳಲ್ಲಿ ನಾಯಕ ಮಚ್ಚು ಹಿಡಿಯಲು ಕಾರಣವಾಗುವ ‘ಅನಿವಾರ್ಯ’ ಮತ್ತು ‘ಆಕಸ್ಮಿಕ’ ಸನ್ನಿವೇಶಗಳ ಮಾಸಲು ಛಾಯೆ ಇಲ್ಲಿಯೂ ಇದೆ.ಎರಡು ಸಂಸಾರಗಳನ್ನು ತೂಗಿಸುವ ತಂದೆಗೆ ಇಸ್ಪೀಟ್‌ ಅಡ್ಡೆ ಮೂರನೇ ಸಂಸಾರ. ಈ ಸಂಸಾರ ಸೂತ್ರವನ್ನು ಮೆಚ್ಚದ ನಾಯಕನಿಗೆ ಬಾಲ್ಯದಿಂದಲೂ ತಂದೆಯ ಮೇಲೆ ದ್ವೇಷ. ಬದುಕಿನ ಪಲ್ಲಟ ಆತನನ್ನು ಬಸವನಗುಡಿಯಿಂದ ಶಿವಾಜಿನಗರಕ್ಕೆ ಕರೆತರುತ್ತದೆ. ಉತ್ತರಾರ್ಧದಲ್ಲಿ ಮೂಡುವ ಪಿತೃಪ್ರೇಮವೇ ರಕ್ತದೋಕುಳಿಗೆ ಮೂಲ ಕಾರಣ. ದಂಡೆತ್ತಿ ಬರುವ ಖಳನಾಯಕನ ವಂಶಾವಳಿಗಳನ್ನು ಕತ್ತರಿಸುವ ನಾಯಕ ಸಲೀಸಾಗಿ ಹೆಣಗಳನ್ನು ಮಲಗಿಸುತ್ತಾನೆ.ದುನಿಯಾ ವಿಜಯ್‌ ಆ್ಯಕ್ಷನ್‌ ತಾಕತ್ತು ಮತ್ತು ನಿರ್ದೇಶಕ ಸತ್ಯ ಅವರ ಕೊಚ್ಚುವ ಬಾಬತ್ತು ತಾಳೆಯಾಗಿವೆ. ಹೀಗಾಗಿ ಈ ಸಿದ್ಧ ಮಾದರಿಯ ಹೊಡೆದಾಟದ ಕಥನಗಳನ್ನು ಬೇರಾವ ನಿರೀಕ್ಷೆಗಳಿಲ್ಲದೆ ಮೆಚ್ಚುವ ‘ಮಾಸ್‌’ ಪ್ರೇಕ್ಷಕರಿಗೆ ಭೂರಿ ಭೋಜನ. ‘ನಾನು ಕೊಡೋ ಒದೆಗೂ ನನ್‌ ಹೈಟ್‌ಗೂ ಸಂಬಂಧನೇ ಇಲ್ಲ’ ಎಂಬ ಡೈಲಾಗ್‌ ಪದೇ ಪದೇ ನಾಯಕನ ಬಾಯಿಂದ ಹೊರಹೊಮ್ಮುತ್ತದೆ. ನಿರ್ದೇಶಕರು ಹೊಸೆದ ಕಥೆಗೂ, ದಿಕ್ಕುಗೆಟ್ಟ ದೃಶ್ಯ ಜೋಡಣೆಗೂ ಸಂಬಂಧನೇ ಇಲ್ಲ ಎಂದೂ ಅರ್ಥೈಸಬಹುದು. ಟೀವಿ ಚಾನೆಲ್‌ಗೇ ನುಗ್ಗಿ ಕೊಲೆ ಮಾಡುವುದು ಇಲ್ಲಿ ಸಾಧ್ಯವಾಗಿದೆ.ಜನಪ್ರಿಯತೆಯ ಆಧಾರದಲ್ಲಿ ಪಾತ್ರ ಪಡೆದಿರುವ ಪರೂಲ್‌ ಯಾದವ್‌ಗೆ ಒಂದೆರಡು ದೃಶ್ಯಗಳಲ್ಲಿ ಲಂಗ–ದಾವಣಿ ತೊಡಿಸಿ ಸಂಪ್ರದಾಯಸ್ಥೆಯ ಲುಕ್‌ನಲ್ಲಿ ತೋರಿಸುವ ಸಾಹಸ ಮಾಡಲಾಗಿದೆ. ಹಾಡುಗಳಲ್ಲಿ ಅವರನ್ನು ನೋಡುವುದಕ್ಕೆ ಸೊಗಸು. ಎಂದಿನಂತೆ ವಿಜಯ್‌ ಹೊಡೆದಾಟ ಸನ್ನಿವೇಶಗಳಲ್ಲಿ ರೋಮಾಂಚನ ಉಂಟುಮಾಡುತ್ತಾರೆ. ಅವಿನಾಶ್‌, ತ್ರಿವೇಣಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಜೆಸ್ಸಿ ಗಿಫ್ಟ್‌ ಸಂಗೀತ ಹಳೆ ಕಬ್ಬಿಣಕ್ಕೆ ಬಣ್ಣ ಬಳಿದಂತಿದೆ. ಸೆಲ್ವಂ ಛಾಯಾಗ್ರಹಣ ಆ್ಯಕ್ಷನ್‌ ಸಿನಿಮಾದ ಸೂತ್ರಗಳನ್ನು ಪಾಲಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.