ಹಳೆ ಟೈಟ್ಲು... ಹೊಸ ರೀಲು

7

ಹಳೆ ಟೈಟ್ಲು... ಹೊಸ ರೀಲು

Published:
Updated:

ಹಳೇ ಸಿನಿಮಾ ಟೈಟಲ್‌ಗಳ ಮೇಲೆ ಹೊಸ ರೀಲು ಬಿಡುವ ಸಾಲಿಗೆ ಮತ್ತೊಂದು ಸೇರ್ಪಡೆ ‘ಬ್ರಹ್ಮ ವಿಷ್ಣು ಮಹೇಶ್ವರ’. 1988ರಲ್ಲಿ ತೆರೆಗೆ ಬಂದ ರವಿಚಂದ್ರನ್‌, ಅಂಬರೀಷ್, ಅನಂತನಾಗ್ ಅಭಿನಯದ ‘ಬ್ರಹ್ಮ ವಿಷ್ಣು ಮಹೇಶ್ವರ’ ಚಿತ್ರದ ಟೈಟಲ್‌ಗೆ ಹೊಸ ಕಥೆಯನ್ನು ಹೊಂದಿಸಿದ್ದಾರೆ ನಿರ್ದೇಶಕ ಸ್ವರೂಪ್‌ ಸ್ವರ. ‘ಜನಾಕರ್ಷಣೆಗಾಗಿಯೇ ಈ ಶೀರ್ಷಿಕೆ ಬಳಸಿಕೊಳ್ಳಲಾಗಿದೆ. ಆದರೆ ಹೊಸಕಥೆಯ ಮೇಲೆ ಹಳೇ ತ್ರಿಮೂರ್ತಿಗಳ ಪ್ರಭಾವವಿಲ್ಲ. ಚಿತ್ರದಲ್ಲಿ ನಾಯಕರಿಗೆ ಬೇರೆ ಬೇರೆಯದೇ ಹೆಸರಿರುತ್ತದೆ’ ಎಂದರು ಚೊಚ್ಚಿಲ ಚಿತ್ರ ನಿರ್ದೇಶನದ ಉತ್ಸಾಹದಲ್ಲಿರುವ ಸ್ವರೂಪ್‌.‘ಪ್ರತಿ ಪಾತ್ರಗಳೂ ಹೆಸರಿನ ಆಶಯಕ್ಕೆ ತಕ್ಕಂತಿವೆ. ಚಿತ್ರದ ಶೀರ್ಷಿಕೆ ಮತ್ತು ಕಥೆ ಒಂದಕ್ಕೊಂದು ಪೂರಕವಾಗಿವೆ. ಇದು ಸ್ನೇಹ, ಪ್ರೇಮ ಕಥೆಯ ಮೇಲೆ ಅರಳುವ ಚಿತ್ರ’ ಅಂದಷ್ಟೇ ಹೇಳಿದ ಅವರು, ಚಿತ್ರಕಥೆಯ ಬಗ್ಗೆ ಮಾತನ್ನು ಸಡಿಲಗೊಳಿಸಲಿಲ್ಲ. ಚಿತ್ರದ ಅಡಿಬರಹ ‘ಅವ್ರೇ ಇಟ್ಕೊಂಡಿರೋ ಹೆಸ್ರು’. ನಿರ್ಮಾಪಕ ಮೈಸೂರು ಕೃಷ್ಣ ಶೀರ್ಷಿಕೆಯನ್ನೇ ಪ್ರಧಾನವಾಗಿ ಪರಿಗಣಿಸಿ ಬಂಡವಾಳ ಹೂಡಿದ್ದಾರೆ. ಮೂಲ ಚಿತ್ರದಲ್ಲಿನ ಯಶಸ್ಸಿನ ಅಲೆ ತಮ್ಮ ಚಿತ್ರದ ಮೇಲೂ ಪ್ರಭಾವ ಬೀರಿ ದಡ ಸೇರಿಸುವ ನಂಬಿಕೆ ಅವರದ್ದು. ಪೋಸ್ಟರ್‌ಗಳಲ್ಲೂ ಮೂಲ ಚಿತ್ರದ ಪಾತ್ರಗಳ ಛಾಯೆ ಇದೆ. ಚಿತ್ರದಲ್ಲಿ ಅಂಜನ್‌ ದೇವ್, ಪ್ರೀತಂ ಮತ್ತು ಸುನೀಲ್‌ಗೆ ಮೇಘನಾ ಸಂಜನಾ, ಜೀವಿತಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಮೈಸೂರು ಮೂಲದ ಐಶ್ವರ್ಯಾ ಎನ್ನುವ ನಟಿಯ ಪರಿಚಯವೂ ಆಗಿದೆ. ಬಹುತೇಕ ತಾರಾಗಣ ಹೊಸದು. ವಿಭಿನ್ನ ಹಿನ್ನೆಲೆಗಳಿಂದ ಬಂದಿರುವ ಚಿತ್ರದ ನಾಯಕ ನಾಯಕಿಯರು ಸಂಕ್ಷಿಪ್ತವಾಗಿ ತಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕನ್ನು ಪರಿಚಯಿಸಿಕೊಂಡರು.ಬೆಂಗಳೂರು, ಮೈಸೂರು, ಗೋವಾದಲ್ಲಿ ಚಿತ್ರೀಕರಣ ನಡೆಸಿ 60 ದಿನಗಳಲ್ಲಿ ಚಿತ್ರ ನಿರ್ಮಿಸುವ ಯೋಜನೆ ಚಿತ್ರ ತಂಡದ್ದು. ಒಟ್ಟು ಐದು ಹಾಡುಗಳಿರುವ ಚಿತ್ರಕ್ಕೆ ಅನೂಪ್ ಸೀಳಿನ್‌ ಸಂಗೀತ ನೀಡುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry