ಗುರುವಾರ , ಜೂನ್ 24, 2021
25 °C

ಹಳೆ ಬಸ್ ನಿಲ್ದಾಣ ತೆರವಿಗೆ ಹೈಕೋರ್ಟ್ ತಡೆಯಾಜ್ಞೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ನಗರದ ಹಳೆಯ ಬಸ್ ನಿಲ್ದಾಣವನ್ನು ನೆಲಸಮ ಮಾಡುವಸಾರಿಗೆ ಸಂಸ್ಥೆಯ ಯೋಜನೆಗೆ ಬುಧವಾರ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆ ಮೂಲಕ ಬಸ್ ನಿಲ್ದಾಣವನ್ನು ಉಳಿಸಿಕೊಳ್ಳಬೇಕು ಎಂದು ಹಲವು ತಿಂಗಳಿಂದ ಹೋರಾಟ ನಡೆಸುತ್ತಿರುವವರಿಗೆ ಬಲ ಬಂದಂತಾಗಿದೆ.ಹಾಸನದಲ್ಲಿ ಹೊಸ ಬಸ್ ನಿಲ್ದಾಣ ಉದ್ಘಾಟನೆಯಾದ ಬಳಿಕ ಹಳೆಯ ಬಸ್ ನಿಲ್ದಾಣವನ್ನು ಏನು ಮಾಡಬೇಕು ಎಂಬ ಚಿಂತನೆ ಆರಂಭವಾಗಿತ್ತು. ಇಲ್ಲಿ ಡಿಪೋ ಸ್ಥಾಪಿಸಬೇಕು ಎಂದು ಸಾರಿಗೆ ಸಂಸ್ಥೆಯವರು ಯೋಜನೆ ರೂಪಿಸಿದ್ದರೂ, ನಗರದ ಮಧ್ಯದಲ್ಲಿ ಡಿಪೋ ಮಾಡಬಾರದೆಂದು ಸಾರ್ವಜನಿಕ ವಲಯದಿಂದ ವಿರೋಧ ಬಂದ ಬಳಿಕ ಆ ಯೋಜನೆಯನ್ನು ಕೈಬಿಡಲಾಗಿತ್ತು.

 

ಹಳೆಯ ಬಸ್ ನಿಲ್ದಾಣವನ್ನು ಗ್ರಾಮೀಣ ಮತ್ತು ನಗರ ಸಾರಿಗೆಗೆ ಮೀಸಲಿಡಬೇಕು ಎಂದು ಪ್ರಜಾವೇದಿಕೆ ಸೇರಿದಂತೆ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು ಆಗ್ರಹಿಸಿದ್ದವು. ಇದರ ಜತೆಯಲ್ಲೇ ಇಲ್ಲಿ ಬಹುಮಹಡಿಯ ವ್ಯಾಪಾರ ಸಂಕೀರ್ಣ ನಿರ್ಮಿಸುವ ಯೋಜನೆಯನ್ನೂ ಸಾರಿಗೆ ಸಂಸ್ಥೆಯವರು ರೂಪಿಸಿದ್ದರು. ಇದಕ್ಕೆ ನಗರಸಭೆ ಹಾಗೂ ಜನಪ್ರತಿನಿಧಿಗಳಿಂದ ವಿರೋಧ ಬಂದ ಹಿನ್ನೆಲೆಯಲ್ಲಿ ಇಡೀ ಯೋಜನೆ ವಿಳಂಬವಾಗಿತ್ತು.ಈ ನಡುವೆ ಪ್ರಜಾವೇದಿಕೆಯ ವೈ.ಎಸ್. ವೀರಭದ್ರಪ್ಪ ಅವರು ಹಳೆಯ ಬಸ್ ನಿಲ್ದಾಣವನ್ನು ಕೆಡವುವ ಯೋಜನೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದರು. ಬುಧವಾರ ಇದನ್ನು ವಿಚಾರಣೆಗೆ ಎತ್ತಿಕೊಂಡ ಹೈಕೋರ್ಟ್, ಬಸ್ ನಿಲ್ದಾಣ ಕೆಡವದಂತೆ ತಡೆಯಾಜ್ಞೆ ನೀಡಿದೆ.ಹಳೆಯ ಬಸ್ ನಿಲ್ದಾಣದ ಉದ್ದೇಶಿತ ಕಾಮಗಾರಿ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಸಾರಿಗೆ ಸಚಿವ ಆರ್. ಅಶೋಕ್ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್ ಅವರಿಗೆ ನೋಟಿಸ್ ಜಾರಿಮಾಡುವಂತೆ ಕೋರ್ಟ್ ಆದೇಶಿಸಿದೆ ಎಂದು ವೀರಭದ್ರಪ್ಪ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.