ಹಳೆ ಬೇರು ಹೊಸ ಚಿಗುರು

7
ನಾದದ ಬೆನ್ನೇರಿ...

ಹಳೆ ಬೇರು ಹೊಸ ಚಿಗುರು

Published:
Updated:
ಹಳೆ ಬೇರು ಹೊಸ ಚಿಗುರು

ಸಂಗೀತ ವಿದ್ಯಾಲಯಗಳ ಪೈಕಿ ವಿಜಯಾ ಸಂಗೀತ ಕಾಲೇಜು ನಗರದಲ್ಲಿ ಹಳೆಯ ಮತ್ತು ಪರಂಪರೆಯ ಸಂಗೀತ ಸಂಸ್ಥೆ ಎನಿಸಿಕೊಂಡಿದೆ. ಹಳೆಯ ತಲೆಮಾರಿನ ಅನೇಕ ವಿದ್ವಾಂಸರು ಈ ಸಂಗೀತ ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ್ದು, ಇಂದು 60 ವರ್ಷಗಳನ್ನು ಪೂರೈಸಿ ಪ್ರತಿಷ್ಠಿತ ಸಂಗೀತ ಸಂಸ್ಥೆಯಾಗಿ ರೂಪುಗೊಂಡಿದೆ. `ಹಳೆ ಬೇರು ಹೊಸ ಚಿಗುರು' ಎಂಬಂತೆ ಇಲ್ಲಿ ಹಳೆಯ ಹೊಸ ತಲೆಮಾರಿನ ಕಲಾವಿದರ ಸಂಗಮ, ಇವರೆಲ್ಲರ ಸಂಗೀತ ಚಟುವಟಿಕೆಗಳು ನೋಡಿದಾಗ ಇದೊಂದು ಅಪೂರ್ವ ಸಂಸ್ಥೆ ಎನ್ನಲು ಅಡ್ಡಿಯಿಲ್ಲ.ಬಸವನಗುಡಿಯಲ್ಲಿ 1953ರಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ಈ ಸಂಗೀತ ಸಂಸ್ಥೆಯನ್ನು ವಿದ್ವಾನ್ ನಾರಾಯಣಸ್ವಾಮಿ ಭಾಗವತರ್ ಆರಂಭಿಸಿದರು. ಈ ಸಂಸ್ಥೆ ಇಂದು ಹೆಮ್ಮರವಾಗಿದೆ. ನಾರಾಯಣಸ್ವಾಮಿ ಭಾಗವತರ್ ಅವರು ರಾಗಂ ತಾನಂ ಪಲ್ಲವಿಯ ಪರಿಣತ ಹಾಡುಗಾರ ಕಾಂಚಿಪುರಂ ನಯನ ಪಿಳ್ಳೈ ಅವರ ಬಳಿ ಗುರುಕುಲ ಪದ್ಧತಿಯಲ್ಲಿ ಕಲಿತರು. ನಂತರ ಅವರು ಪಿಟೀಲು ವಿದ್ವಾಂಸರಾದ ಟಿ. ಚೌಡಯ್ಯ ಅವರ ಅಯ್ಯನಾರ್ ಕಾಲೇಜಿಗೆ ಸೇರಿದರು. ಸಂಗೀತದ ಲಕ್ಷ್ಯ ಮತ್ತು ಲಕ್ಷಣ ಭಾಗಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಬಳಿಕ ವಿಜಯಾ ಕಾಲೇಜಿನಲ್ಲಿ ಕರ್ನಾಟಕ ಸಂಗೀತ ಗಾಯನ, ಪಿಟೀಲು, ವೀಣೆ, ಕೊಳಲು ಮತ್ತು ಮೃದಂಗ ತರಗತಿಗಳನ್ನು ನಡೆಸಲಾರಂಭಿಸಿದರು.1974ರಲ್ಲಿ ನಾರಾಯಣಸ್ವಾಮಿ ಭಾಗವತರ್ ನಿಧನರಾದರು. ಬಳಿಕ ಅವರದೇ ಶಿಷ್ಯರಾದ ಎಚ್.ಕೆ. ಕೃಷ್ಣಮೂರ್ತಿ ಕಾಲೇಜನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತರು. ಪಿಟೀಲು ವಾದಕರಾದ ಎ. ವೀರಭದ್ರಯ್ಯ ಅವರೂ ಕಾಲೇಜಿನ ಒಳಿತಿಗೆ ಶ್ರಮಿಸಿದರು. ಕಾಲೇಜಿನ ಅಭಿವೃದ್ಧಿಗೆ ಎಚ್.ವಿ. ಕೃಷ್ಣಮೂರ್ತಿ ಅವರೂ ಅವಿರತವಾಗಿ ದುಡಿದರು.ಎಚ್.ವಿ. ಕೃಷ್ಣಮೂರ್ತಿ ಅವರ ಬಳಿ ಕಲಿತ ವಿದ್ವಾನ್ ಆರ್.ಕೆ. ಪದ್ಮನಾಭ, ಡಿ.ವಿ. ನಾಗರಾಜನ್, ಬಸವನಗುಡಿ ನಟರಾಜ್, ಎಚ್.ಕೆ. ರಾಘವೇಂದ್ರ, ಎಚ್.ಕೆ. ವೆಂಕಟರಾಮ್, ಎಚ್.ಕೆ. ಗಣೇಶ್, ಎಸ್.ವಿ. ನಾರಾಯಣನ್ (ಪಿಟೀಲು), ಎಸ್.ಎ. ಶಶಿಧರ್, ಜಿ. ಮೋಹನ ರಂಗನ್, ಜಿ. ರವಿಕಿರಣ್ (ಕೊಳಲು), ಸುಮಾ ಸುಧೀಂದ್ರ, ಅಶ್ವಿನ್ ಆನಂದ್ (ವೀಣೆ) ಮುಂತಾದವರು ಇಂದು ನಾಡಿನ ಪ್ರಸಿದ್ಧ ಸಂಗೀತಗಾರರಾಗಿದ್ದಾರೆ.ನಿರಂತರ ಚಟುವಟಿಕೆ

ಕಾಲೇಜಿನಲ್ಲಿ `ಗಾನವಾಹಿನಿ' ಎಂಬ ತಿಂಗಳ ಕಾರ್ಯಕ್ರಮ ಪ್ರತೀ ತಿಂಗಳೂ ನಡೆಯುತ್ತದೆ. ಇಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆ ಕೊಡುತ್ತಿದ್ದು ಮಕ್ಕಳು ಸಂಗೀತ ಕಛೇರಿ ಕೊಡಬಹುದು. ನುರಿತ ಮತ್ತು ಉದಯೋನ್ಮುಖ ಕಲಾವಿದರ ಸಂಗೀತ ಕಛೇರಿಗಳನ್ನು ಕಾಲೇಜಿನಲ್ಲಿ ಆಗಾಗ ಆಯೋಜಿಸಲಾಗುತ್ತದೆ. ಸಂಗೀತ ಪ್ರಾತ್ಯಕ್ಷಿಕೆ, ಸೋದಾಹರಣ ಭಾಷಣ, ಅತಿಥಿ ಉಪನ್ಯಾಸಗಳು ನಿರಂತರ ಚಟುವಟಿಕೆಗಳಲ್ಲಿ ಸೇರಿವೆ. ಪುರಂದರ ದಾಸರ, ತ್ಯಾಗರಾಜರ, ಮುತ್ತು ಸ್ವಾಮಿ ದೀಕ್ಷಿತರ ಆರಾಧನೋತ್ಸವ ಪ್ರತೀವರ್ಷ ಅದ್ದೂರಿಯಾಗಿಯೇ ನಡೆಯುತ್ತದೆ.ಪ್ರತೀವಾರ ನಡೆಯುವ `ಭಜನ್ಸ್' ಕಾರ್ಯಕ್ರಮ ಗಮನ ಸೆಳೆಯುವಂತಿದೆ. ಹಳೆಯ ಸಂಪ್ರದಾಯವನ್ನು ಯಥಾವತ್ ಪಾಲಿಸುವ ಈ ಭಜನ್ಸ್ ಕಾರ್ಯಕ್ರಮದಲ್ಲಿ ದೇವರನಾಮ, ತ್ಯಾಗರಾಜರ ಉತ್ಸವ ಸಂಪ್ರದಾಯ ಕೃತಿಗಳು, ತ್ಯಾಗರಾಜರದ್ದೇ ದಿವ್ಯನಾಮ ಕೀರ್ತನೆಗಳು ಭಜನೆಯಲ್ಲಿ ನಿರಂತರವಾಗಿ ನಡೆಯುತ್ತದೆ. ಖ್ಯಾತ ಕಲಾವಿದರೆಯರಾದ ಸರಳಾಯ ಸಹೋದರಿಯರು ಇಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಜತೆಗೆ ದೇವರನಾಮವನ್ನೂ ಹೇಳಿಕೊಡುತ್ತಾರೆ.ಎಚ್.ವಿ. ಕೃಷ್ಣಮೂರ್ತಿ ಅವರ ನಂತರ ಈಗ ಅವರ ಮಗ ವಿದ್ವಾನ್ ಎಚ್.ಕೆ. ವೆಂಕಟ್ರಾಮ್ ಕಾಲೇಜಿನ ಪ್ರಾಂಶುಪಾಲರಾಗಿದ್ದು, ಖ್ಯಾತ ಪಿಟೀಲು ವಾದಕರಾಗಿಯೂ ರೂಪುಗೊಂಡಿದ್ದಾರೆ. ಸದ್ಯ ನಾದ ತರಂಗಿಣಿ ಸಂಸ್ಥೆಯ ಮುಖ್ಯಸ್ಥರಾದ ಬಳ್ಳಾರಿ ಸುರೇಶ್ ಭಜನೆ ಕಾರ್ಯಕ್ರಮದ ನೇತೃತ್ವ ವಹಿಸುತ್ತಿದ್ದಾರೆ.ರಿಯಾಲಿಟಿ ಶೋ ಮಹಿಮೆ

`ನಾನು ಮೊದಲು ರಿಯಾಲಿಟಿ ಶೋಗಳಿಗೆ ಅಭಿನಂದನೆ ಹೇಳಬೇಕು; ಏಕೆಂದರೆ ಬೆಂಗಳೂರಿನಲ್ಲಿರುವ ಪ್ರಮುಖ ಸಂಗೀತ ಸಂಸ್ಥೆಗಳಿಗೆ ಹೆಚ್ಚು ಹೆಚ್ಚು ಮಕ್ಕಳು ಬರಲಾರಂಭಿಸಿದ್ದು ಈ ರಿಯಾಲಿಟಿ ಶೋಗಳಿಂದಲೇ..' ಎನ್ನುತ್ತಾ ಈ ರಿಯಾಲಿಟಿ ಶೋಗಳಿಂದ ಸಂಗೀತ ಶಾಲೆಗಳಿಗಾದ ಲಾಭ ಮತ್ತು ಮಕ್ಕಳು ಸಂಗೀತದತ್ತ ಹೆಚ್ಚು ಒಲವು ತೋರಿಸುವುದನ್ನು ವಿವರಿಸುತ್ತಾರೆ ವಿಜಯಾ ಸಂಗೀತ ಕಾಲೇಜಿನ ಮುಖ್ಯಸ್ಥ  ವಿದ್ವಾನ್ ಎಚ್.ಕೆ. ವೆಂಕಟ್‌ರಾಮ್.ಸಂಗೀತದ ಬಗ್ಗೆ ಹೇಳುವುದಾದರೆ ಬೆಂಗಳೂರಿನಲ್ಲಿ ಹಿಂದೂಸ್ತಾನಿ, ಸುಗಮ ಸಂಗೀತ, ಫ್ಯೂಷನ್, ಜಾಸ್ ಮುಂತಾದ ವೈವಿಧ್ಯಗಳಿದ್ದರೂ ಕರ್ನಾಟಕ ಸಂಗೀತಕ್ಕೆ ಬೇಡಿಕೆ ಕಡಿಮೆಯಾಗಿಲ್ಲ. ಇದಕ್ಕೆಲ್ಲ ರಿಯಾಲಿಟಿ ಶೋಗಳೂ ಕಾರಣವೇ ಎನ್ನುತ್ತಾರೆ ಅವರು.ಸಂಗೀತ ದಿಗ್ಗಜರಾದ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಡಾ. ಬಾಲಮುರಳಿಕೃಷ್ಣ, ಆರ್.ಕೆ. ಶ್ರೀಕಂಠನ್, ಡಿ.ಕೆ. ಪಟ್ಟಮ್ಮಾಳ್, ಎಂ.ಎಲ್. ವಸಂತಕುಮಾರಿ, ಕದ್ರಿ ಗೋಪಾಲನಾಥ್, ಡಾ.ಎನ್. ರಮಣಿ, ಟಿ.ಎನ್. ಶೇಷಗೋಪಾಲನ್, ಟಿ.ವಿ. ಶಂಕರನಾರಾಯಣನ್ ಮುಂತಾದವರಿಗೆ ಪಿಟೀಲು ಸಹಕಾರ ನೀಡಿದ ಹೆಗ್ಗಳಿಕೆ ವೆಂಕಟರಾಮ್ ಅವರದು.ಸದ್ಯ ವಿಜಯಾ ಸಂಗೀತ ಕಾಲೇಜಿನಲ್ಲಿ ಎಚ್.ಕೆ. ವೆಂಕಟರಾಮ್ ಮತ್ತು ಎಚ್.ಕೆ. ಗಣೇಶ್, ನಾಗರಾಜ್ ಮಂಡ್ಯ ಅವರು ಪಿಟೀಲು, ಬಳ್ಳಾರಿ ರಮೇಶ್, ಸರಳಾಯ ಸಹೋದರಿಯರು ಗಾಯನ ಪಾಠ, ನಾಗರಾಜ್ ಮಂಡ್ಯ ಪಿಟೀಲು, ನರೇಂದ್ರ ಅವರು ಮೃದಂಗ, ಸಿ. ರವಿಕಿರಣ್ ಕೊಳಲು ಕಲಿಸುತ್ತಿದ್ದಾರೆ. ಸುಮಾರು 110 ವಿದ್ಯಾರ್ಥಿಗಳಿದ್ದು, ಗಾಯನ, ವಾದನ ಎರಡನ್ನೂ ಕಲಿಯುತ್ತಿದ್ದಾರೆ.ಸಾಧನೆಯ ಹಾದಿಯಲ್ಲಿ

ಕಾಲೇಜಿನ ವಿದ್ಯಾರ್ಥಿಗಳು ಸೇರಿ ವಾಲ್ಮೀಕಿಯ ಶ್ರೀಮದ್ ರಾಮಾಯಣ ಎಂಬ ಸಂಗೀತ ನುಡಿಚಿತ್ರ ರಚಿಸಿದ್ದು, ಸಂಗೀತಪ್ರಿಯರ ಮೆಚ್ಚುಗೆ ಗಳಿಸಿದೆ.  ಅಲ್ಲದೆ ತ್ಯಾಗರಾಜರ ಪ್ರಹ್ಲಾದ ಭಕ್ತಿ ವಿಜಯ ಕೃತಿಯನ್ನೂ ಸಂಗೀತ ನುಡಿಚಿತ್ರ ಮಾಡಲಾಗಿದೆ. ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ಜೀವನ ಸಾಧನೆಯನ್ನೊಳಗೊಂಡ ಸಂಗೀತ ನಾಟಕ ಕೂಡ ಕಾಲೇಜಿನ ವಿದ್ಯಾರ್ಥಿಗಳೇ ರಚಿಸಿ ಅಭಿನಯಿಸಿದ್ದು ಸಂಗೀತ ಪ್ರಪಂಚದಲ್ಲೇ ವಿಶಿಷ್ಟವಾಗಿ ಉಳಿದಿದೆ.ತ್ಯಾಗರಾಜರ ಘನ ರಾಗ ಪಂಚರತ್ನ ಕೃತಿಗಳ ಮಲ್ಟಿಮೀಡಿಯ ಪ್ರಸೆಂಟೇಷನ್ ಕೂಡ ವಿಶಿಷ್ಟವಾದದ್ದೆ ಆಗಿದೆ. ಜತೆಗೆ ಮುತ್ತುಸ್ವಾಮಿ ದೀಕ್ಷಿತರು, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ವೀಣೆ ಶೇಷಣ್ಣ ಅವರ ಜೀವನ ಸಾಧನೆಯನ್ನೊಳಗೊಂಡ ಸೀಡಿ ಮತ್ತು ಪುಸ್ತಕ ಪ್ರಕಟಣೆ ಕೂಡ ವಿಜಯಾ ಸಂಗೀತ ಕಾಲೇಜಿನ ಸಾಧನೆ ಎನ್ನಬಹುದು.

ವಿಳಾಸ: ವಿದ್ವಾನ್ ಎಚ್.ಕೆ. ವೆಂಕಟ್‌ರಾಮ್, ವಿಜಯಾ ಸಂಗೀತ ಕಾಲೇಜು, 53, 8ನೇ ಬಿ ಮುಖ್ಯರಸ್ತೆ, ನಾಲ್ಕನೇ ಬ್ಲಾಕ್, ಜಯನಗರ, ಬೆಂಗಳೂರು-560 011. ಫೋನ್: 080-26636896,  98451-54405 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry