ಬುಧವಾರ, ನವೆಂಬರ್ 20, 2019
26 °C

ಹಳೆ ಭವನ ಹೊಸ ರೂಪ...

Published:
Updated:
ಹಳೆ ಭವನ ಹೊಸ ರೂಪ...

ಗುಲ್ಬರ್ಗ: ಹೊಸತು ಅರ್ಥ ಹುಡುಕು ಹಳೆಯ ಮಾತಿನಲ್ಲಿ, ಹೊಸತು ಬೆಳಕು ಹುಡುಕು ಹಳೆಯ ಪಣತೆಯಲ್ಲಿ, ಹೊಸತು ಚಿಗುರು ಹುಡುಕು ಹಳೆಯ ಬೇರಿನಲ್ಲಿ ಎಂಬಂತೆ ನಗರದಲ್ಲಿರುವ ನೂರಾರು ವರ್ಷದ ಹಳೆಯ ಕಟ್ಟಡಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯ ನಡೆದಿದೆ.ಈಗಾಗಲೇ ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನವೀಕರಣಗೊಳಿಸಲಾಗಿದೆ. ಇದರಿಂದ ಅನುಪಯುಕ್ತವಾಗುತ್ತಿರುವ ಒಂದು ಕಟ್ಟಡ ಮತ್ತೆ ಮರುಜೀವ ಪಡೆದಂತಾಗಿದೆ.  ಭೂಮಿಯ ಬೆಲೆ ಗಗನೆಕ್ಕೇರಿರುವ ಇಂದಿನ ಕಾಲದಲ್ಲಿ ಸರ್ಕಾರದ ಹೊಸ  ಕಟ್ಟಡಗಳಿಗೆ ಜಾಗ ಸಿಗುವುದು ಕನಸಿನ ಮಾತಾಗಿದೆ. ಅಂಥದರಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿಯ ಈ ಹಳೆಯ ಕಟ್ಟಡಗಳನ್ನು ದುರಸ್ತಿಗೊಳಿಸುವುದರಿಂದ ಸರ್ಕಾರದ ಹಣ ಉಳಿಯುತ್ತದೆ. ಈ ಕಟ್ಟಡಗಳು ನಗರದ ಹೃದಯ ಭಾಗದಲ್ಲಿರುವುದರಿಂದ ಜನರಿಗೂ ಅನುಕೂಲವಾಗುತ್ತದೆ.1881ರಲ್ಲಿ ನಿರ್ಮಿಸಿದ ಗುಲ್ಬರ್ಗದ ಹಳೆ ಜಿಲ್ಲಾಧಿಕಾರಿ ಕಚೇರಿ ಎಷ್ಟೋ ದಿನಗಳಿಂದ ಅನುಪಯುಕ್ತವಾಗಿ ದೂಳು ತಿನ್ನುತ್ತಿತ್ತು. ಅದನ್ನು ಕೆಲವು ದಿನಗಳ ಹಿಂದಷ್ಟೇ ದುರಸ್ತಿಗೊಳಿಸಲಾಗಿದೆ. ಹಳೆಯ ಶೈಲಿಯ ಈ ಕಟ್ಟಡದೊಳಗೆ ಹೊಸ ಗೆಟಪ್ ಕೊಡಲಾಗಿದೆ. ಇದರಿಂದ ಈ ಕಟ್ಟಡ ಸುಂದರವಾಗಿ ಕಂಗೊಳಿಸುವುದಷ್ಟೆ ಅಲ್ಲದೆ ಆಧುನಿಕತೆ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದೆ. ಗುಲ್ಬರ್ಗ ಉತ್ತರ ವಲಯ ತಹಸೀಲ್ದಾರ್ ಕಚೇರಿಯ ಕಾರ್ಯಕಲಾಪಗಳು ಇದರಲ್ಲಿ ನಡೆಯುತ್ತಿವೆ.ಈ ಹಳೆಯ ಕಟ್ಟಡಗಳು ಆಯಾ ಕಚೆರಿಗಳಿಗೆ ಹೊಂದಿಕೊಳ್ಳುವಂತೆ, ಹೊರಗಿನಿಂದ ನೋಡಿದಾಕ್ಷಣ ಅದರ ಸಾರ ಗೊತ್ತಾಗುವಂತೆ ನಿರ್ಮಿಸಲಾಗಿದೆ. 1924ರಲ್ಲಿ ಕಟ್ಟಿಸಿದ ನಿಜಾಮನ ಕಾಲದ ಜಿಲ್ಲಾ ನ್ಯಾಯಾಲಯದ ಕಟ್ಟಡ ಸಹ ಇದಕ್ಕೆ ಹೊರತಾಗಿಲ್ಲ. ಅದನ್ನು ಹೊರಗಿನಿಂದ ನೋಡಿದಾಕ್ಷಣ ಜನರಲ್ಲಿ ನ್ಯಾಯಾಲಯದ ಘನತೆ, ಗಾಂಭೀರ್ಯ, ಪೂಜ್ಯ ಭಾವನೆಗಳು ಮೂಡುತ್ತವೆ. ಈ ಕಟ್ಟಡ ಹಲವು ವರ್ಷಗಳಿಂದ ಅನುಪಯುಕ್ತವಾಗಿತ್ತು.ಈಗ ಇದನ್ನು  ದುರಸ್ತಿಗೊಳಿಸಲಾಗುತ್ತಿದೆ. ಈ ಹಳೆಯ ಕಟ್ಟಡಕ್ಕೆ ಹೊಸ್ ಟಚ್ ಕೊಡುತ್ತಿರವುದರಿಂದ ಮತ್ತಷ್ಟು ಸುಂದರವಾಗಿ ಕಂಗೊಳಿಸುತ್ತಿದೆ. ಜಿಲ್ಲಾ ನ್ಯಾಲಯದ ಪಕ್ಕದ ಅರಣ್ಯ ಇಲಾಖೆ ಕಟ್ಟಡ ಸಹ ಹಳೆ ಶೈಲಿಯ ಸುಂದರ ವಿನ್ಯಾಸ ಹೊಂದಿದೆ ಅದನ್ನೂ ದುರಸ್ತಿಗೊಳಿಸಲಾಗುತ್ತಿದೆ.ಇದರಿಂದ ಸರ್ಕಾರದ ಅನೇಕ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸುವುದರ ಜೊತೆಗೆ ಪೂರ್ವಜರ ಸ್ಮಾರಕಗಳ ಕುರುಹು ಉಳಿಯುತ್ತದೆ.ಅನೇಕ ಕಚೇರಿಗಳಿಗೆ ಜಾಗ ಸಿಗದ ಕಾರಣ ನಗರದ ಹೊರ ವಲಯದಲ್ಲಿ ಸ್ಥಳಾಂತರಗೊಂಡಿವೆ. ಇದರಿಂದ ಜನರು ಅಲ್ಲಿಗೆ ಹೋಗಬೇಕಾದರೆ ಹರಸಾಹಸ ಪಡಬೇಕಾಗುತ್ತಿದೆ.ಸೂಪರ್ ಮಾರ್ಕೆಟ್‌ನಲ್ಲಿರುವ ತಹಸೀಲ್ದಾರ್ ಕಚೇರಿ, ಹಳೆಯ ಆಸ್ಪತ್ರೆಯಲ್ಲಿನ ಕಟ್ಟಡಗಳು, ಸೇಡಂ ರಸ್ತೆಯ ಸರ್ಕಾರಿ ಸಾರ್ವಜನಿಕ ಬಾಲಕರ ವಸತಿ ನಿಲಯ ಸೇರಿದಂತೆ ಅನೇಕ ದೊಡ್ಡ ದೊಡ್ಡ ಕಟ್ಟಡಗಳು ನಗರದಲ್ಲಿ ಕೆಲಸಕ್ಕೆ ಬಾರದೆ ಸ್ಮಾರಕಗಳಾಗಿ ನಿಂತಿವೆ.ಇಂಥ ಎಲ್ಲ  ಕಟ್ಟಡಗಳನ್ನು ಜಿಲ್ಲಾಡಳಿತ ದುರಸ್ತಿಗೊಳಿಸಿದರೆ ಸರ್ಕಾರಿ ಕಚೇರಿಗಳಿಗೆ ಕಟ್ಟಡಗಳು ದೊರೆಯುತ್ತವೆ. ಸಾರ್ವಜನಿಕರಿಗೆ ಅನುಕೂಲವೂ ಆಗುತ್ತದೆ.

ಪ್ರತಿಕ್ರಿಯಿಸಿ (+)