ಮಂಗಳವಾರ, ಆಗಸ್ಟ್ 20, 2019
27 °C

ಹಳೆ ಮಾಡೆಲ್‌ಗಳ ಹೊಸ ನೋಟ

Published:
Updated:

ಅದೊಂದು ಬಣ್ಣದ ಜಗತ್ತು. ವಿನ್ಯಾಸಕರ ದಿರಿಸುಗಳಿಗೆ ಮೈಯೊಡ್ಡಿ ನೋಡುಗರ ಎದೆಯಲ್ಲಿ ಮಿಂಚಿನ ಸಂಚಲನ ಮೂಡಿಸುವ ಈ ಕ್ಷೇತ್ರದತ್ತ ಸುಂದರಿಯರಿಗೆ ಹೆಚ್ಚು ಒಲವು. ಒಂದು ಕಾಲದಲ್ಲಿ ರೂಪದರ್ಶಿಯರೆಂದರೆ ಮೂಗು ಮುರಿಯುವವರೇ ಹೆಚ್ಚಿದ್ದರು. ಈಗ ಅದನ್ನೇ ವೃತ್ತಿಯಾಗಿ ಆರಿಸಿಕೊಂಡು ಅಲ್ಲಿ ಸಾಧನೆ ಮಾಡುವುದರ ಜತೆಗೆ ಸಿನಿಮಾ, ವಿನ್ಯಾಸ ಮುಂತಾದ ಕ್ಷೇತ್ರದತ್ತಲೂ ಕಣ್ಣು ಹಾಯಿಸುತ್ತಿದ್ದಾರೆ ಬೆಡಗಿಯರು.`ಎಲ್ಲಾ ವೃತ್ತಿಯಲ್ಲೂ ಕಷ್ಟ-ಸುಖಗಳಿವೆ. ಅನುಭವವಿದ್ದರೆ ಇಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಬಹುದಂತೆ. ಹೊಸಬರು ಬಂದಾಗ ಹಳಬರು ಮೂಲೆಗುಂಪಾಗುತ್ತಾರೆಂಬ ಮಾತು ಸುಳ್ಳು. ಫಿಟ್‌ನೆಸ್, ಆತ್ಮವಿಶ್ವಾಸವಿರುವ ಮಾಡೆಲ್‌ಗಳು ಎವರ್‌ಗ್ರೀನ್' ಎನ್ನುತ್ತಾರೆ ಈ ಕ್ಷೇತ್ರದಲ್ಲಿ ಪಳಗಿದ ರೂಪದರ್ಶಿಗಳು.

ಗಾಡ್‌ಫಾದರ್ ಅವಶ್ಯಕತೆ ಇಲ್ಲ

ಹನ್ನೆರಡು ವರ್ಷದ ಅನುಭವವಿದೆ. ಆದರೂ ಇನ್ನೂ ಕಲಿಯಬೇಕು ಎಂಬ ತುಡಿತ ಸದಾ ನನ್ನನ್ನು ಕಾಡುತ್ತದೆ. ಆಗಿನ ಸವಾಲುಗಳು, ಕಷ್ಟಗಳೇ ನನ್ನನ್ನು ಇಷ್ಟು ಗಟ್ಟಿ ಮಾಡಿದ್ದು. ನಾನು ಮೊದಲು ಈ ಕ್ಷೇತ್ರಕ್ಕೆ ಬಂದಾಗ ಶೋಗಳು ವಿರಳವಾಗಿದ್ದವು.ಆರು ತಿಂಗಳಿಗೊಮ್ಮೆ ಒಂದು ಶೋ. ಯಾರಾದರೂ ರೆಕಮೆಂಡ್ ಮಾಡಿದರೆ ಮಾತ್ರ ರ್‍ಯಾಂಪ್ ಮೇಲೆ ಹೆಜ್ಜೆ ಇಟ್ಟು ನಮ್ಮ ಆಸೆ ಈಡೇರಿಸಿಕೊಳ್ಳಬಹುದಾಗಿತ್ತು. ಈಗ ಹಾಗಲ್ಲ, ತಿಂಗಳಿಗೆ ನಾಲ್ಕೈದು ಶೋಗಳು ನಡೆಯುತ್ತಿವೆ. ಹೊಸಬರಿಗೆ ಅವಕಾಶ ಸಿಗುತ್ತಿದೆ.ರ್‍ಯಾಂಪ್ ಮೇಲೆ ಹೇಗೆ ಹೆಜ್ಜೆ ಹಾಕಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಲು, ನಮ್ಮ ತಪ್ಪುಗಳನ್ನು ತಿದ್ದಲು ಆಗ ಯಾರೂ ಇರಲಿಲ್ಲ. ಹತ್ತು, ಹದಿನೈದು ರೂಪದರ್ಶಿಗಳಿರುತ್ತಿದ್ದರು. ಈಗ ಎಲ್ಲದಕ್ಕೂ ಗೈಡ್ ಮಾಡುವವರು ಇದ್ದಾರೆ. ವಿನ್ಯಾಸಕರ ಸಂಖ್ಯೆ ಹೆಚ್ಚಾಗಿದೆ. ದೊಡ್ಡ ದೊಡ್ಡ ಬ್ರಾಂಡ್‌ಗಳು ಮಾರುಕಟ್ಟೆಗೆ ಬಂದಿವೆ. ಇವೆಲ್ಲಾ ರೂಪದರ್ಶಿಗಳಿಗೆ ಬೇಡಿಕೆ ತಂದಿದೆ.ಮಾಡೆಲಿಂಗ್ ನಮ್ಮ ವೃತ್ತಿ ಎಂದು ಹೇಳಿಕೊಳ್ಳುವುದಕ್ಕೂ ತುಸು ಮುಜುಗರವಾಗುತ್ತಿತ್ತು. ಈಗ ಕಾಲೇಜಿನಲ್ಲಿಯೇ ಫ್ಯಾಷನ್ ಶೋಗಳನ್ನು ನಡೆಸುತ್ತಿದ್ದಾರೆ. ಇದು ಸಂತಸದ ವಿಷಯ.ನಾನು ಸೀನಿಯರ್, ನನ್ನ ಕಾಲ ಮುಗಿಯಿತು ಎಂದೂ ಯಾವತ್ತೂ ನನಗನಿಸಿಲ್ಲ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚು ಕ್ರಿಯಾಶೀಲಳಾಗಿ ಇರಲು ಬಯಸುತ್ತೇನೆ. ಈಗ ಬಂದಿರುವ ಜೂನಿಯರ್‌ಗಳು ಸ್ಪರ್ಧೆ ನೀಡುತ್ತಾರೆ ಎಂದು ಕಳವಳಗೊಂಡಿಲ್ಲ. ನನಗೆ ನನ್ನ ಮೇಲೆ ಆತ್ಮವಿಶ್ವಾಸವಿದೆ. ಯಾವಾಗ ಅದನ್ನು ಕಳೆದುಕೊಳ್ಳುತ್ತೇವೆಯೋ ಅಂದಿಗೆ ಸೋತೆವು ಎಂದೇ ಅರ್ಥ.ಈಗಿನ ರೂಪದರ್ಶಿಯರಲ್ಲಿ ಕೆಲವರು ಬೇಗನೆ ಒತ್ತಡಕ್ಕೆ ಸಿಲುಕುತ್ತಾರೆ. ಹಾಗಾಗಿ ಶೋ ಮುಗಿಸಿ ಬಂದ ನಂತರ ಸಿಗರೇಟ್ ಸುಡುತ್ತಾರೆ. ಇದು ತಪ್ಪು. ಆರೋಗ್ಯದತ್ತ ಗಮನ ನೀಡಬೇಕು. ಮಾಡೆಲಿಂಗ್ ಒಂದನ್ನೇ ಜೀವನ ಎಂದು ನಂಬಬಾರದು. ಕೊನೆಗೆ ಕೈ ಹಿಡಿಯುವುದು ಶಿಕ್ಷಣವಷ್ಟೆ. ಯಾವುದೇ ಕಾರಣಕ್ಕೂ ಓದನ್ನು ಕಡೆಗಣಿಸಬಾರದು.ಇನ್ನು ಇಲ್ಲಿಗೆ ಬರಲು ಗಾಡ್‌ಫಾದರ್‌ನ ಅವಶ್ಯಕತೆ ಇಲ್ಲ. ಫ್ಯಾಷನ್, ನಡಿಗೆಯ ತಂತ್ರದ ಬಗ್ಗೆ ಅರಿವಿರಬೇಕು. ಫಿಟ್‌ನೆಸ್ ಕಾಪಾಡಿಕೊಳ್ಳಬೇಕು.

-ಅಪೂರ್ವ ವಿಶ್ವನಾಥನ್, ರೂಪದರ್ಶಿನಮ್ಮವರಿಗೆ ಆದ್ಯತೆ ನೀಡಿ


ಫ್ಯಾಷನ್ ನಿಂತ ನೀರಲ್ಲ. ಅದು ಬದಲಾಗುತ್ತಾ ಇರುತ್ತದೆ. ರೂಪದರ್ಶಿಗಳು ಆ ಬದಲಾವಣೆಗೆ ಹೊಂದಿಕೊಂಡರೆ ಮಾತ್ರ ಇಲ್ಲಿ  ನೆಲೆಯೂರಲು ಸಾಧ್ಯ. ರೂಪದರ್ಶಿಯಾಗಿ ಹತ್ತು ವರ್ಷದ ಅನುಭವವಿದೆ. ಇಷ್ಟು ವರ್ಷ ಈ ಕ್ಷೇತ್ರದಲ್ಲಿ ಗಟ್ಟಿಯಾಗಿ ಇರಲು ಕಾರಣ ನನ್ನ ಆತ್ಮವಿಶ್ವಾಸ ಮತ್ತು ಪರಿಶ್ರಮ. ನೋಡುವವರಿಗೆ ಇದು ಸುಲಭ ಅನಿಸಬಹುದು. ರ್‍ಯಾಂಪ್ ಮೇಲೆ ಬಂದು ನಾಲ್ಕು ಹೆಜ್ಜೆ ಹಾಕಿ ಹೋಗುತ್ತಾರೆ. ಏನು ಮಹಾ ಎಂಬ ಮಾತುಗಳನ್ನಾಡುತ್ತಾರೆ. ಈ ನಾಲ್ಕು ಹೆಜ್ಜೆಯ ಹಿಂದೆ ಎಷ್ಟು ಕಷ್ಟವಿದೆ ಎಂಬುದನ್ನು ಈ ಕ್ಷೇತ್ರಕ್ಕೆ ಕಾಲಿಟ್ಟಾಗ ಮಾತ್ರ ಅರಿಯಲು ಸಾಧ್ಯ.ಹವ್ಯಾಸಕ್ಕೆ ಅಂಟಿಕೊಂಡ ಕ್ಷೇತ್ರ ಈಗ ಜೀವನದ ದಿಕ್ಕನ್ನೇ ಬದಲಾಯಿಸಿದೆ. ಹತ್ತು ವರ್ಷದ ಹಿಂದೆ ಮಾಡೆಲಿಂಗ್ ಲೋಕ ಇಷ್ಟು ಬೆಳೆದಿರಲಿಲ್ಲ. ಜನರಿಗೂ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಈಗ ಇದನ್ನು ವೃತ್ತಿಯಾಗಿ ಪರಿಗಣಿಸುವಷ್ಟರ ಮಟ್ಟಿಗೆ ಮನೋಭಾವ ಬದಲಾಗಿದೆ. ಇದು ಸಂತಸದ ವಿಷಯ.ಈಗ ನಗರದಲ್ಲಿ ಲೆಕ್ಕವಿಲ್ಲದಷ್ಟು ಫ್ಯಾಷನ್ ಶೋಗಳು ನಡೆಯುತ್ತವೆ. ಅವಕಾಶಗಳು ಹೆಚ್ಚಿವೆ. ಹೊಸ ಹೊಸ ಮುಖಗಳು ಬೆಳಕಿಗೆ ಬರುತ್ತಿವೆ. ಮುಂಚೆ ಇರುವ ಶೋಗಳಲ್ಲಿಯೇ ನಮ್ಮ ಪ್ರತಿಭೆ ಪ್ರದರ್ಶಿಸಬೇಕಿತ್ತು. ಈಗಿನವರು ನಿಜಕ್ಕೂ ಅದೃಷ್ಟಶಾಲಿಗಳು.ನನಗೆ ಮದುವೆಯಾಗಿ ಮಗು ಕೂಡ ಇದೆ. ಈಗಲೂ ನಾನು ರ್‍ಯಾಂಪ್ ಮೇಲೆ ಮೊದಲಿಗಿಂತ ಹೆಚ್ಚು ಆತ್ಮವಿಶ್ವಾಸದಿಂದ ನಡೆಯುತ್ತೇನೆ. ಅನುಭವ ನನ್ನನ್ನು ಸಾಕಷ್ಟು ತಿದ್ದಿದೆ. ಇನ್ನೊಬ್ಬರೊಂದಿಗೆ ನನ್ನನ್ನು ನಾನು ಹೋಲಿಸಿಕೊಳ್ಳುವುದಿಲ್ಲ. ನನ್ನೊಂದಿಗೇ ಸ್ಪರ್ಧೆಗೆ ಇಳಿಯುತ್ತೇನೆ. ಇದೇ ಗುಣ ಇಷ್ಟರ ಮಟ್ಟಿಗೆ ಬೆಳೆಸಿದೆ ಎನ್ನಬಹುದು. ಸೀನಿಯರ್ ಎಂಬ ಹಮ್ಮಿಲ್ಲದೆ ಹೊಸಬರನ್ನು ಕೇಳಿ ತಿಳಿದುಕೊಳ್ಳುತೇನೆ. ಮಾಡೆಲಿಂಗ್ ಜತೆಗೆ ವಿನ್ಯಾಸ ಕ್ಷೇತ್ರದಲ್ಲಿಯೂ ಕೈಜೋಡಿಸಿದ್ದೇನೆ.ಈಗ ಅಂತರರಾಷ್ಟ್ರೀಯ ರೂಪದರ್ಶಿಗಳಿಗೆ ಮಣೆ ಹಾಕುತ್ತಾರೆ. ನಮ್ಮವರು ಅವರಿಗಿಂತ ಯಾವುದರಲ್ಲಿ ಕಡಿಮೆ ಇದ್ದಾರೆ ಹೇಳಿ? ಯಾವುದೇ ದಿರಿಸು ತೊಟ್ಟರೂ ಭಾರತೀಯರು ಸುಂದರವಾಗಿ ಕಾಣುತ್ತಾರೆ. ಬಿಳಿ ಚರ್ಮದವರೆಂದು ಅವರಿಗೆ ಹೆಚ್ಚು ಅವಕಾಶ ನೀಡುತ್ತಾರೆ. ನಮ್ಮವರ ಚರ್ಮ ಸ್ವಲ್ಪ ಕಪ್ಪಾದರೂ ಲಕ್ಷಣವಾಗಿದ್ದಾರೆ. ಮೊದಲು ನಮಗೆ ಅವಕಾಶ ನೀಡಬೇಕು. ಆಗ ದೇಶ ಬೆಳೆಯುತ್ತದೆ.ಈಗ ಬರುವ ಕಿರಿಯರು ಓದನ್ನು ಕಡೆಗಣಿಸಬಾರದು. ಬಾಡಿ ಫಿಟ್‌ನೆಸ್ ಕಾಪಾಡಿಕೊಳ್ಳುವುದನ್ನು ಮರೆಯಬಾರದು. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ಇದೇ ಸೌಂದರ್ಯದ ಗುಟ್ಟು.

-ಶ್ರುತಕೀರ್ತಿ, ರೂಪದರ್ಶಿತಾಳ್ಮೆಯಿದ್ದರೆ ಯಶಸ್ಸು


ರೂಪದರ್ಶಿಯಾಗುತ್ತೇನೆ ಎಂದಾಗ  ಮನೆಯಲ್ಲಿ ಮೊದಲು ಯಾರೂ ಒಪ್ಪಲಿಲ್ಲ. ಆಮೇಲೆ ಪ್ರೋತ್ಸಾಹ ನೀಡಿದರು. ಹಾಗೆಯೇ ಈ ಕ್ಷೇತ್ರ ಎಲ್ಲರನ್ನೂ ಕೈ ಬೀಸಿ ಕರೆಯುವುದಿಲ್ಲ. ಪ್ರತಿಭೆ, ಸೌಂದರ್ಯವಿದ್ದರೆ ಅವಕಾಶ ಸಿಗುತ್ತದೆ. ಒಂದೊಂದು ಶೋನಲ್ಲೂ ಹೊಸ ಅನುಭವ ಸಿಗುತ್ತದೆ. ಕಿರಿಯರು ಬಂದಾಕ್ಷಣ ಹಿರಿಯರನ್ನು ಈ ಕ್ಷೇತ್ರ ಕೈಬಿಡುವುದಿಲ್ಲ. ಅನುಭವವಿದ್ದವರಿಗೆ ಬೇಡಿಕೆ ಜಾಸ್ತಿ.ಇಲ್ಲಿಯೂ ಸ್ಪರ್ಧೆಗಳಿವೆ. ಅದೆಲ್ಲವನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕಷ್ಟೆ. ತಕ್ಷಣವೇ ನಾನು ಸೂಪರ್ ಮಾಡೆಲ್ ಆಗಬೇಕು ಎಂದರೆ ಸ್ವಲ್ಪ ಕಷ್ಟ. ಮೊದಲು ನನಗೆ ಎತ್ತರದ ಚಪ್ಪಲಿ ಹಾಕಿಕೊಂಡು ನಡೆಯಲು ಬರುತ್ತಿರಲಿಲ್ಲ. ಈಗ ಅದೆಲ್ಲಾ ಅಭ್ಯಾಸವಾಗಿದೆ. ತಪ್ಪುಗಳಿಂದಲೇ ಮನುಷ್ಯ ಪಾಠ ಕಲಿಯುವುದು. ನಗರದಲ್ಲಿ ಅವಕಾಶ ಹೆಚ್ಚು ಸಿಗುತ್ತಿದೆ. ಆದರೂ ಹುಡುಗಿಯರು ಎಚ್ಚರದಿಂದ ಇದ್ದರೆ ಒಳ್ಳೆಯದು. 

-ಡಯಾನಾ, ರೂಪದರ್ಶಿಅನುಭವವೇ ಪಾಠಶಾಲೆ


ಇಂದು ಫ್ಯಾಷನ್ ಕ್ಷೇತ್ರ ಮೊದಲಿನ ಹಾಗಿಲ್ಲ. ಸ್ಪರ್ಧೆ ಹೆಚ್ಚಿದೆ. ಈ ಸ್ಪರ್ಧಾತ್ಮಕ ಲೋಕದಲ್ಲಿ ಬೇಡಿಕೆ ಕಳೆದುಕೊಳ್ಳದ ಮಾಡೆಲ್‌ಗಳು ತುಂಬಾ ಇದ್ದಾರೆ. ಅನುಭವ ಪಾಠ ಕಲಿಸುತ್ತಾ ಹೋದಂತೆ ಮನಸ್ಸು ಗಟ್ಟಿಗೊಳ್ಳುತ್ತದೆ. ಅದೇ ಈ ಫ್ಯಾಷನ್ ಜಗತ್ತಿನಲ್ಲಿ ಗಟ್ಟಿಯಾಗಿ ನೆಲೆಯೂರಲು ಕಾರಣ. ಜಾಕಿ ಶೆಟ್ಟಿ, ಪ್ರಿಯಾ ನಾಯಕ್, ಶುಭ್ರ ಅಯ್ಯಪ್ಪ, ಅಪೂರ್ವ ವಿಶ್ವನಾಥನ್ ಇವರೆಲ್ಲಾ ಈಗಲೂ ಯಾವುದೇ ತರಬೇತಿ ಇಲ್ಲದೆ ರ್‍ಯಾಂಪ್ ಮೇಲೆ ಹೆಜ್ಜೆ ಹಾಕುತ್ತಾರೆ.ಯಾವುದಾದರೂ ಶೋನಲ್ಲಿ ಈ ಅನುಭವಿ ರೂಪದರ್ಶಿಗಳಿದ್ದರೆ ರೀಟೇಕ್ ಅವಶ್ಯಕತೆಯೇ ಇಲ್ಲ. ಅವರಲ್ಲಿರುವ ಅನುಭವ, ಆತ್ಮವಿಶ್ವಾಸವೇ ಅವರು ಐದು, ಹತ್ತು ವರ್ಷ ಈ ಫ್ಯಾಷನ್ ಜಗತ್ತಿನಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿರುವುದು. ಇವರು ರ್‍ಯಾಂಪ್ ಮೇಲೆ ನಡೆಯುವುದನ್ನು ನೋಡುವುದೇ ಒಂದು ಚೆಂದ.

-ಪ್ರಸಾದ್ ಬಿದಪ್ಪ, ಫ್ಯಾಷನ್ ಕೊರಿಯೋಗ್ರಫರ್

 

 

Post Comments (+)