ಹಳೆ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆ ಪುನಶ್ಚೇತನ

7

ಹಳೆ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆ ಪುನಶ್ಚೇತನ

Published:
Updated:
ಹಳೆ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆ ಪುನಶ್ಚೇತನ

ಮಳವಳ್ಳಿ: ತಾಲ್ಲೂಕಿನ ಮಾದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಖಾಸಗಿ ಶಾಲೆಯಲ್ಲಿರುವ  ಸೌಲಭ್ಯಗಳನ್ನು ತಮ್ಮೂರ ಸರ್ಕಾರಿ ಶಾಲೆಗೆ ಒದಗಿಸಿ, ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದ್ದಾರೆ.ಗ್ರಾಮದ ಶಾಲೆಯಲ್ಲಿ 1 ರಿಂದ 7 ನೇ ತರಗತಿ ವರೆಗೆ ಕೇವಲ 35 ಮಕ್ಕಳಿದ್ದಾರೆ. ಈಗ ಹಳೆ ವಿದ್ಯಾರ್ಥಿಗಳು ಮನೆ, ಮನೆಗೆ ಭೇಟಿ ಕೊಟ್ಟು ಪೋಷಕರನ್ನು  ಮನವೊಲಿಸಿ ತಾವೇ ಆರಂಭಿಸಿದ ಎಲ್.ಕೆ.ಜಿ ಗೆ 35 ಮಕ್ಕಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಲೆಗೆ ಕೇವಲ ಮಕ್ಕಳನ್ನು ಸೇರಿಸಿದರೆ ಸಾಲದು, ಅವರಿಗೆ ಸವಲತ್ತು ನೀಡಬೇಕು ಎನ್ನುವುದನ್ನು ಅರಿತು ಸರ್ಕಾರ ಕೊಡುವ ಸಮವಸ್ತ್ರದ ಜೊತೆಗೆ ತಾವೂ ಸಹ ಉಚಿತ ಸಮವಸ್ತ್ರ ಹಾಗೂ ಮಕ್ಕಳು ಕುಳಿತುಕೊಳ್ಳಲು ಡೆಸ್ಕ್ ನೀಡುತ್ತಿದ್ದಾರೆ.

 

ಕಂಪ್ಯೂಟರ್ ಶಿಕ್ಷಣ, ಇಂಗ್ಲಿಷ್ ಭಾಷೆ ಕಲಿಸಲು ಖಾಸಗಿಯಾಗಿ ಮೂವರು ಶಿಕ್ಷಕರ ನೇಮಕ ಮಾಡಿದ್ದಾರೆ. ಅವರ  ವೇತನವನ್ನು ಪ್ರೊ.ಭೂಮಿಗೌಡ ಹಾಗೂ ಅವರ ಪತ್ನಿ, ಮಂಗಳೂರು ವಿ.ವಿ.ಯಲ್ಲಿ ಕೆಲಸ ಮಾಡುತ್ತಿರುವ ಪ್ರೊ.ಸಬೀಹಾ ಭೂಮಿಗೌಡ ನೀಡಲು  ಮುಂದಾಗಿದ್ದಾರೆ.ಇಂತಹ ರಚನಾತ್ಮಕ ಕೆಲಸಕ್ಕೆ ಮೊದಲು ಸ್ಫೂರ್ತಿ ನೀಡಿದ್ದು ಗ್ರಾಮದವರೇ ಆದ ಸಾಹಿತಿ ಪ್ರೊ.ಭೂಮಿಗೌಡ. ಇವರು ಮಂಗಳೂರಿನಲ್ಲಿ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಈಚೆಗೆ ರಜೆಯಲ್ಲಿ ಹುಟ್ಟೂರಿಗೆ ಬಂದಾಗ ಶಾಲೆಯ ಮಕ್ಕಳ ಸಂಖ್ಯೆ ಗಮನಿಸಿ, ತಾವು ಓದಿದ ಶಾಲೆ ಮುಚ್ಚುವ  ಹಂತಕ್ಕೆ ಬಂದಿರುವುದರಿಂದ ಆತಂಕಗೊಂಡರು. ಕೂಡಲೇ ಗ್ರಾಮದ ಮುಖಂಡರು ಹಾಗೂ ಹಳೆಯ ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡಿ ಶಾಲೆ  ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದರು.ಇದಕ್ಕೆ ಪೂರಕವಾಗಿ ಗ್ರಾಮದ ಶಿವಕುಮಾರ್, ಮಮತಾ, ಶಿವನಂಜು, ನಂಜುಂಡೇಗೌಡ, ಆನಂದ್, ಮಹದೇವಸ್ವಾಮಿ, ಮೂರ್ತಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆಂಪಯ್ಯ, ನಂದೀಶ್, ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರಾಚಾರಿ ಮತ್ತಿತರರು ಕೈ ಜೋಡಿಸಿ, `ಶಾಲೆಯಲ್ಲಿ ಉತ್ತಮ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಊರಿನ ಶಾಲೆಗೇ ಮಕ್ಕಳನ್ನು ದಾಖಲಿಸಿ~ ಎಂದು ಮನೆ, ಮನೆಗೆ ತೆರಳಿ ಮನವಿ ಮಾಡಿಕೊಂಡರು. ಇದರ ಪರಿಣಾಮ ಎಲ್.ಕೆ.ಜಿ. ಗೆ 35 ಮಕ್ಕಳು ದಾಖಲಾಗಿವೆ. ಇದೇ ಮಕ್ಕಳು ಮುಂದೆ ಹಂತ ಹಂತವಾಗಿ ಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸಲಿವೆ. ಗ್ರಾಮದ ಡಾ.ನಂಜಯ್ಯ, ಪುಟ್ಟು ಮಕ್ಕಳಿಗೆ ಸಮವಸ್ತ್ರ ನೀಡಲು ಮುಂದಾಗಿದ್ದಾರೆ.`ಸರ್ಕಾರಿ ಶಾಲೆಗಳು ಮುಚ್ಚಿದರೆ ಕೂಲಿ ಕಾರ್ಮಿಕರು, ಬಡವರಿಗೆ ತಮ್ಮ ಮಕ್ಕಳನ್ನು ಬೇರೆಡೆ ಕಳುಹಿಸಿ, ಓದಿಸಲು ಸಾದ್ಯವಾಗದೇ ಶಿಕ್ಷಣದಿಂದ ವಂಚಿತರಾಗುತ್ತಾರೆ. ಆದ್ದರಿಂದಲೇ ಹೇಗಾದರೂ ಮಾಡಿ ನನ್ನೂರಿನ ಶಾಲೆಯನ್ನು ಉಳಿಸಿಕೊಳ್ಳಬೇಕು ಎಂದು ಮುಂದಾಗಿದ್ದೇವೆ.ಯುವಕರನ್ನು ಸಂಘಟಿಸಿ, ಹಳೆ ವಿದ್ಯಾರ್ಥಿಗಳ ಸಂಘ ಪ್ರಾರಂಭಿಸಿ ಅಜೀವ ಸದಸ್ಯತ್ವ ಮಾಡಿಸಿಕೊಂಡಿದ್ದೇವೆ. ಅದರ ಮೂಲಕ ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ.ಯನ್ನು ಮೇ 30 ರಂದು ಪ್ರಾರಂಭಿಸಲು ಮುಂದಾಗಿದ್ದೇವೆ~ ಎಂದು ಪ್ರೊ.ಭೂಮಿಗೌಡ ಹೇಳುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry