ಶನಿವಾರ, ಮೇ 28, 2022
26 °C

ಹಳೆ ಹಾಸ್ಯದ ಹೊಸ ರೂಪ

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಇಬ್ಬರು ಜನಪ್ರಿಯ ನಟರಿಗೆ ಕಳ್ಳರ ಪಾತ್ರ ಕೊಟ್ಟು ಅದರಲ್ಲಿ ಹಾಸ್ಯ ಹುಡುಕುವ ಕಲೆ ಬಾಲಿವುಡ್‌ಗೆ ಹೊಸತಲ್ಲ. ಒಬ್ಬಳ ಪ್ರೀತಿಗಾಗಿ ನಾಯಕರಿಬ್ಬರು ಬಡಿದಾಡಿಕೊಳ್ಳುವ ಕಥೆಯೂ ಹಳತೇ. ಅಂತಹ ಕಥೆಗಳನ್ನು ಬೆರೆಸಿ ಹಾಸ್ಯದ ಹೆಸರಿನಲ್ಲಿ ಸೃಷ್ಟಿಯಾದ ಚಿತ್ರ `ರ‌್ಯಾಸ್ಕಲ್ಸ್~.ನಿರ್ದೇಶಕ ಡೇವಿಡ್ ಧವನ್ ಇಲ್ಲಿ ಹೆಚ್ಚು ಶ್ರಮ ಪಟ್ಟಿಲ್ಲ. ತಮ್ಮದೇ ಚಿತ್ರಗಳಾದ `ದೀವಾನಾ ಮಸ್ತಾನಾ~, `ಮುಜಸೇ ಶಾದಿ ಕರೋಗಿ~, `ಪಾರ್ಟ್‌ನರ್~ ಚಿತ್ರಗಳಲ್ಲಿನ ಸಾರವನ್ನೇ ಕಲಬೆರಕೆ ಮಾಡಿ ಚಿತ್ರಾನ್ನವಾಗಿಸಿದ್ದಾರೆ. ಒಗ್ಗರಣೆ ಮಾತ್ರ ಹೊಸತು. ಹಾಲಿವುಡ್‌ನ `ಡರ್ಟಿ ರಾಟನ್ ಸ್ಕ್ರೌಂಡಲ್ಸ್~ ಚಿತ್ರದ ಸ್ಫೂರ್ತಿ ಸಹ ಚಿತ್ರಕ್ಕಿದೆ.ಚೇತನ್ ಚೌಹಾಣ್ (ಸಂಜಯ ದತ್) ಮತ್ತು ಭಗತ್ ಬೋಸ್ಲೆ (ಅಜಯ್ ದೇವಗನ್) ಹುಟ್ಟಾ ಕಳ್ಳರು. ಕಳ್ಳ ವ್ಯವಹಾರಗಳಿಂದಲೇ ಹಣ ಸಂಪಾದಿಸುವ ಆಂಥೋನಿಯ (ಅರ್ಜುನ್ ರಾಮ್‌ಪಾಲ್) ಹಣವನ್ನು ಲಪಟಾಯಿಸಿ ಬ್ಯಾಂಕಾಕ್ ಸೇರುತ್ತಾರೆ. ಅಲ್ಲಿ ಸಿಗುವ ಖುಷಿ (ಕಂಗನಾ ರಣಾವತ್)ಗಾಗಿ ಅವರಿಬ್ಬರು ನಡೆಸುವ ಕಿತ್ತಾಟ, ಪೀಕಲಾಟ `ಟಾಮ್ ಅಂಡ್ ಜೆರ‌್ರಿ~ ಕಾರ್ಟೂನನ್ನು ನೆನಪಿಸುತ್ತದೆ. ಅವರಿಬ್ಬರೂ ಆಕೆಯ ಪ್ರೀತಿಗಾಗಿ ಹೊಡೆದಾಡುತ್ತಾರೋ ಅಥವಾ ಆಕೆ ಬಳಿಯಿರುವ ಸಂಪತ್ತಿಗಾಗಿಯೋ ಎಂಬುದು ಕೊನೆಗೂ ಸ್ಪಷ್ಟವಾಗುವುದಿಲ್ಲ.ಎರಡು ಗಂಟೆ ಪೂರ್ಣ ಮನರಂಜನೆ ನೀಡುವ ಭರದಲ್ಲಿ ಧವನ್ ಅನೇಕ ಕಡೆ ಹಾಸ್ಯದ ಎಲ್ಲೆ ಮೀರುತ್ತಾರೆ. ಅದರ ತೀವ್ರತೆ ಎಷ್ಟಿದೆಯೆಂದರೆ ಅರ್ಜುನ್ ರಾಮ್‌ಪಾಲ್ ಆವೇಶಕ್ಕೊಳಗಾಗುವ ಸನ್ನಿವೇಶ ಸಹ ಹಾಸ್ಯದಂತೆ ಕಾಣಿಸುತ್ತದೆ. ಮಾತನ್ನೇ ಬಂಡವಾಳವಾಗಿಸಿಕೊಂಡಿರುವ ಚಿತ್ರದಲ್ಲಿ ಕಥೆ ಮತ್ತು ಅಭಿನಯ ಗೌಣವಾಗುತ್ತದೆ.ಕಚಗುಳಿಯಿಡುವ ಸಂಭಾಷಣೆಗಳಿದ್ದರೂ (ಸಂಭಾಷಣೆ-ಸಂಜಯ್ ಚೆಲ್) ದ್ವಂದ್ವಾರ್ಥದ ಸಾಲುಗಳೇ ವಿಜೃಂಭಿಸುತ್ತವೆ. ಮನೆಮಂದಿಯೆಲ್ಲ ಕುಳಿತು ನೋಡಲು ಮುಜುಗರ ಉಂಟುಮಾಡುವಂತಹ ಸಂಭಾಷಣೆಗಳಿವೆ. (ಉದಾ: ಕರಿ ಜಾಮೂನಿನಂತಹ ಅಪ್ಪನಿಗೆ ರಸಗುಲ್ಲದಂತಹ ಮಗಳು ಹೇಗೆ ಹುಟ್ಟಿದಳು?). ಕಥೆಯನ್ನು ಹೇಗೆ ಮುಂದುವರಿಸಬೇಕು ಎಂಬ ಗೊಂದಲ ನಿರ್ದೇಶಕರನ್ನು ಕಾಡಿರುವುದು ಪ್ರೇಕ್ಷಕನ ಅರಿವಿಗೂ ಬರುತ್ತದೆ (ಚಿತ್ರಕಥೆ: ಯೂನಸ್ ಸೆಜವಾಲ್).ಪಾತ್ರಕ್ಕೆ ತಕ್ಕ ಮುಖಭಾವ ಹೊಂದಿರುವ ಅಜಯ್ ದೇವಗನ್ ಚಿತ್ರದ ತುಂಬಾ ಕಾಣಿಸಿಕೊಳ್ಳಲು ಹೆಣಗಾಡಿದ್ದಾರೆ. ಹಾಸ್ಯನಟ ಜಾನಿ ಲಿವರ್ ಅವರನ್ನು ಅನುಕರಿಸುವ ಪ್ರಯತ್ನದಂತೆ ಅವರ ನಟನೆ ಕಾಣಿಸುತ್ತದೆ. ನಟನೆಗಿಂತ ಹೆಚ್ಚಾಗಿರುವ ಅರಚಾಟ ಒಮ್ಮಮ್ಮೆ ಅಸಹನೀಯವೆನಿಸುತ್ತದೆ.ದೇವಗನ್‌ಗೆ ಹೋಲಿಸಿದರೆ ಸಂಜಯ್ ದತ್ ಪಾತ್ರ ನಿರ್ವಹಣೆಯಲ್ಲಿ ಅಚ್ಚುಕಟ್ಟುತನವಿದೆ. ನಟಿ ಕಂಗನಾ ರಣಾವತ್ ಸ್ತಬ್ಧಚಿತ್ರದಂತೆ ಕಾಣಿಸುತ್ತಾರೆ. ಮೈಸಿರಿ ಪ್ರದರ್ಶನಕ್ಕಷ್ಟೆ ಅವರ ಪಾತ್ರ ಸೀಮಿತ. ಹಿತೇನ್ ಪೈಂತೆಲ್ ಮತ್ತು ಚುಂಕಿ ಪಾಂಡೆ ಅವರ ಹಾಸ್ಯ ಅತಿರೇಕವೆನಿಸುತ್ತದೆ.

 

ಇ್ದ್ದದುದರಲ್ಲಿ ವಾಸಿ ಎನಿಸುವ ಲೀಸಾ ಹೇಡನ್ ಸಹ ಅಂಗಪ್ರದರ್ಶನದಲ್ಲಿ ಹಿಂದೆ ಬಿದ್ದಿಲ್ಲ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅರ್ಜುನ್ ರಾಮ್‌ಪಾಲ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸತೀಶ್ ಕೌಶಿಕ್, ಭಾರತಿ ಅಚ್ರೇಕರ್ ಪಾತ್ರಗಳಿಗೂ ತೂಕವಿಲ್ಲ.ಚಿತ್ರಕ್ಕೊಂದು ಅಂತ್ಯ ಕಾಣಿಸಬೇಕೆಂಬ ಉದ್ದೇಶದಿಂದ ಸೃಷ್ಟಿಸಿದಂತಿರುವ ಕ್ಲೈಮ್ಯಾಕ್ಸ್ ಸಪ್ಪೆಯೆನಿಸುತ್ತದೆ. ವಿಶಾಲ್-ಶೇಖರ್ ಸಂಗೀತದಲ್ಲಿ ಅಬ್ಬರವೇ ಹೆಚ್ಚು. ಶೀರ್ಷಿಕೆಯನ್ನು ತೋರಿಸುವ ಅನಿಮೇಷನ್ ಗಮನ ಸೆಳೆಯುತ್ತದೆ. ಆದರೆ ಧವನ್ ಅವರ ಹಿಂದಿನ ಚಿತ್ರಗಳು ನೀಡುವ ಮಟ್ಟಿಗಿನ ಮನರಂಜನೆ ನೀಡುವಲ್ಲಿ `ರ‌್ಯಾಸ್ಕಲ್ಸ್~ ಸೋಲುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.