ಗುರುವಾರ , ಮೇ 6, 2021
32 °C

ಹಳೆ ಹುಚ್ಚು! ಹೊಸ ಹುಡುಗರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಹೊರವಲಯದ ಚಿಕ್ಕಜಾಲದ ಕೆರೆ ಅಂಗಳದಲ್ಲಿ ಬೀಡುಬಿಟ್ಟಿರುವ `ಹುಚ್ಚುಡುಗ್ರು' ತಂಡ ಚಿತ್ರದ ಕಥೆ ಮತ್ತು ಪಾತ್ರಗಳ ಬಗ್ಗೆ ತುಟಿಬಿಚ್ಚಲೇ ಇಲ್ಲ. ಎಲ್ಲರ ಬಾಯಿಂದ ಹೊರಬಿದಿದ್ದು `ಚಿತ್ರಕಥೆ ಚೆನ್ನಾಗಿದೆ, ಚಿತ್ರದಲ್ಲಿ ಹೊಸತನವಿದೆ' ಎನ್ನುವ ನವನವೀನ ಮಾತು. ನೀರಿನ ಒರತೆಯಿಲ್ಲದ ಬರಡು ಕೆರೆ ಅಂಗಳಲ್ಲಿ ನಟ ರವಿಶಂಕರ್ ಒಂದೇ ಶಾಟ್‌ಗೆ ನಾಲ್ಕಾರು ಸಲ ಖಡಕ್ ಡೈಲಾಗ್ ಹೇಳಿ ಮುಗಿಸುವುದನ್ನೇ ಕಾಯುತ್ತಿದ್ದ ಚಿತ್ರತಂಡ ನಂತರ ಚಿತ್ರದ ಮಾಹಿತಿ ವಿನಿಮಯಕ್ಕೆ ಮುಂದಾಯಿತು.ಪ್ರದೀಪ್ `ಹುಚ್ಚುಡುಗ್ರು' ಚಿತ್ರದ ನಿರ್ದೇಶಕರು. ರೇಡಿಯೊ ಜಾಕಿಯಾಗಿ ಕೆಲಸ ಮಾಡಿ ಅನುಭವ ಇರುವ ಅವರು ಇದೀಗ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.`ಕುಂಭರಾಶಿ'ಯ ಏಯ್ಟ ಫ್ಯಾಕ್ ಹೀರೊ ಚೇತನ್‌ಚಂದ್ರ `ಹುಚ್ಚುಡುಗ್ರು' ತಂಡದಲ್ಲಿದ್ದಾರೆ. ಅವರ ಜೊತೆಗೆ ಪ್ರತಾಪ್, ಅಮಿತ್, ದೇವ ಎನ್ನುವ ಹೊಸ ಹುಡುಗರಿದ್ದಾರೆ. ಹದಿಹರೆಯದ ಹುಚ್ಚುಮುಖಗಳ ಅನಾವರಣವೇ ಚಿತ್ರದ ವಸ್ತು. ಕಥೆ ವಾಸ್ತವ ಬದುಕಿಗೆ ಹತ್ತಿರವಿದೆ. `ಹುಚ್ಚುಡುಗ್ರು' ಸೀರಿಯಸ್, ಕಾಮಿಡಿಯ ಮಾಸ್ ಚಿತ್ರ.`ನಿರ್ದಿಷ್ಟ ವಯೋಮಾನದ ಯುವಕರು ಸಂಯಮವಿಲ್ಲದೆ ತೆಗೆದುಕೊಳ್ಳುವ ನಿರ್ಧಾರಗಳಿಂದ ಅವರ ಜೀವನಕ್ಕೆ ಯಾವ ರೀತಿಯ ತಿರುವುಗಳು ಸಿಕ್ಕುತ್ತವೆ ಎನ್ನುವುದು ಚಿತ್ರದ ಕಥೆ' ಎಂದರು ನಿರ್ದೇಶಕ ಪ್ರದೀಪ್. ಕಥೆಯ ಒಳಸುಳಿಗಳು ಮತ್ತು ಪಾತ್ರಗಳ ಬಗ್ಗೆ ಅವರು ಮಾತು ಬಿಚ್ಚಲಿಲ್ಲ.`ಹುಚ್ಚುಡುಗ್ರು' ಅವತಾರಗಳನ್ನು ಈಗಾಗಲೇ ಶೇ. 40ರಷ್ಟು ಚಿತ್ರಿಸಲಾಗಿದೆ. ನಂಜನಗೂಡಿನಿಂದ ಆರಂಭವಾದ ಚಿತ್ರೀಕರಣ ಮೈಸೂರು, ಮದ್ದೂರಿನ ಹಳ್ಳಿಗಳಲ್ಲಿ ನಡೆದು, ಈಗ ಬೆಂಗಳೂರಿಗೆ ಬಂದಿದೆ.ನಟ ವೆಂಕಟೇಶ್ ಮತ್ತು ನಾಯಕಿ ಅದಿತಿರಾವ್ ಚಿತ್ರತಂಡದ ಲಕ್ಷ್ಮಣ ರೇಖೆ ದಾಟಿಕೊಂಡೇ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. ನನ್ನದು ಚಿತ್ರದಲ್ಲಿ `ಭೂ ಮಾಫಿಯಾದ ವಿಲನ್ ಪಾತ್ರ' ಎಂದು ವೆಂಕಟೇಶ್ ಹೇಳಿದರೆ, ಹಳ್ಳಿಯಿಂದ ನಗರಕ್ಕೆ ಬರುವ ಹುಡುಗಿ ನಗರದ ಬದುಕಿಗೆ ಹೊಂದಾಣಿಕೆಯಾಗದೆ ತೊಳಲಾಡುವ ಪಾತ್ರ ಅದಿತಿ ರಾವ್ ಅವರದಂತೆ.ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಮಾಗಿಸಲು ನಿರ್ದೇಶಕರು ಆರೇಳು ತಿಂಗಳು ಕೆಲಸ ಮಾಡಿದ್ದಾರಂತೆ. ವೇದಮೂರ್ತಿ ನಿರ್ಮಾಪಕರಾಗಿರುವ ಚಿತ್ರಕ್ಕೆ, ರಘು ಹಾಸನ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಜೋಶ್ವ ಶ್ರೀಧರ್ ಸಂಗೀತ, ಶಮನ್ ಮಿತ್ರ ಛಾಯಾಗ್ರಹಣ ಚಿತ್ರದಲ್ಲಿದೆ.  ಸಾಧುಕೋಕಿಲ, ತಬಲಾ ನಾಣಿ, ಅಶ್ವಿನ್ ಮತ್ತಿತರರು ತಾರಾಗಣದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.