ಹಳೇಬೀಡು ಅಭಿವೃದ್ಧಿಗೆ ಪ್ರಾಧಿಕಾರ: ಸಲಹೆ

7

ಹಳೇಬೀಡು ಅಭಿವೃದ್ಧಿಗೆ ಪ್ರಾಧಿಕಾರ: ಸಲಹೆ

Published:
Updated:
ಹಳೇಬೀಡು ಅಭಿವೃದ್ಧಿಗೆ ಪ್ರಾಧಿಕಾರ: ಸಲಹೆ

ಹಳೇಬೀಡು: `ಪ್ರವಾಸಿ ತಾಣವಾಗಿರುವ ಹಳೇಬೀಡು ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಗೆ ಬರುವ ಅನುದಾನ ಸಾಕಾಗದಿದ್ದರೆ ಹಳೇಬೀಡು ಅಭಿವೃದ್ಧಿ ಪ್ರಾಧಿಕಾರ ರಚಿಸಿ  ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅವಕಾಶವಿದೆ~ ಎಂದು ಜಿಲ್ಲಾಧಿಕಾರಿ ಡಾ.ಜಗದೀಶ್ ಸಲಹೆ ನೀಡಿದರು.ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿ ಪ್ರಾಧಿಕಾರ ರಚನೆ ಮಾಡಿಕೊಂಡರೆ ಸರ್ಕಾರದಿಂದ ವಿಶೇಷ ಅನುದಾನ ಬರುತ್ತದೆ.ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾಕಷ್ಟು ಕೆಲಸಗಳು ಬರುವುದರಿಂದ ಗ್ರಾಮ ಪಂಚಾಯಿತಿ ಅನುದಾನವನ್ನೇ ನೆಚ್ಚಿಕೊಂಡು ಕೂರುವ ಅವಶ್ಯಕತೆ ಇರುವುದಿಲ್ಲ. ಜತೆಗೆ ಗ್ರಾಮ ಪಂಚಾಯಿತಿ ಅನುದಾನ ಉಳಿತಾಯವಾಗುತ್ತದೆ. ಪ್ರಾಧಿಕಾರ ಸ್ವಚ್ಛತೆ ಹಾಗೂ ಹೊಯ್ಸಳ ದೇವಾಲಯ ಮೊದಲಾದ ಪ್ರವಾಸಿ ತಾಣಗಳ ಸುತ್ತಮುತ್ತ ಅಭಿವೃದ್ಧಿ ಕೆಲಸ ಕೈಗೊಳ್ಳಬಹುದು. ಗ್ರಾಮ ಪಂಚಾಯಿತಿಗೆ ಬರುವ ಅನುದಾನವನ್ನು ಗ್ರಾಮೀಣ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬಹುದು ಎಂದರು.ಉಪ ವಿಭಾಗಾಧಿಕಾರಿ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸಹ ಪ್ರಾಧಿಕಾರದಲ್ಲಿ ಸದಸ್ಯರಾಗಿರುತ್ತಾರೆ. ಪ್ರಾಚೀನ ಕಾಲದ ಸ್ಮಾರಕಗಳನ್ನು ಮಾತ್ರವಲ್ಲದೆ, ಪರಂಪರೆ ಹೊಂದಿರುವ ಸ್ಥಳವನ್ನು ಅಭಿವೃದ್ಧಿ ಪಡಿಸಿ ಹೊಯ್ಸಳ ಪರಂಪರೆಯ ಈ  ಅಮೂಲ್ಯ ಕಾಣಿಕೆಗಳನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡಬೇಕು. ಜನರ ಒಪ್ಪಿಗೆ ಪಡೆದು ಅಭಿವೃದ್ಧಿ ಕೆಲಸದ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಡಾ. ಜಗದೀಶ್ ತಿಳಿಸಿದರು.ಯುನೆಸ್ಕೊ ಪ್ರತಿನಿಧಿ ಕನ್ನಡ ಮೂಲದ ಡಾ.ಜ್ಯೋತಿ ಹೊಸ ಅಗ್ರಹಾರ, ಉಪವಿಭಾಗಾಧಿಕಾರಿ ನಾಗೇಂದ್ರಪ್ರಸಾದ್, ತಹಶೀಲ್ದಾರ್ ಚಿದಾನಂದ, ಸಹಾಯಕ ಪ್ರವಾಸೋದ್ಯಮ ನಿರ್ದೇಶಕ ಭಾಸ್ಕರ್, ಪ್ರವಾಸಿ ಅಧಿಕಾರಿ ತಮ್ಮಣ್ಣಗೌಡ, ಕನ್ನಡ ಸಂಸ್ಕೃತಿ ಸಹಾಯಕ ನಿರ್ದೇಶಕ ದಾಮೋದರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry