ಗುರುವಾರ , ಮೇ 19, 2022
23 °C

ಹಳೇ ಚಿತ್ರಕ್ಕೆ ಹೊಸ ರೂಪ (ಚಿತ್ರ: ಸಾಹಿಬ್ ಬೀವಿ ಔರ್ ಗ್ಯಾಂಗ್‌ಸ್ಟರ್ (ಹಿಂದಿ))

ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ದಿಲೀಪ್ ಕುಮಾರ್ ನಟನೆಯ `ದೇವದಾಸ್~ ಚಿತ್ರವನ್ನು 2002ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರು ಅದ್ದೂರಿ ಸೆಟ್ ಹಾಕಿ ಮತ್ತೊಮ್ಮೆ ತೆರೆಮೇಲೆ ತಂದರು. ಅದರ ಬಳಿಕ ಬದಲಾದ ಜೀವನ ಶೈಲಿಗೆ ಅದೇ ದೇವದಾಸ್ `ಡೇವ್ ಡಿ~ ಆಗಿ ಪರಿವರ್ತನೆಗೊಂಡು ಅಪಾರ ಜನಮನ್ನಣೆಗಳಿಸಿದ್ದು ಗೊತ್ತೇ ಇದೆ. ಇದೀಗ ಅದೇ ಸಾಲಿಗೆ `ಸಾಹಿಬ್ ಬೀವಿ ಔರ್ ಗ್ಯಾಂಗ್‌ಸ್ಟರ್~ ಸೇರಿದೆ.ಗುರುದತ್ ಅವರ ಸಾರ್ವಕಾಲಿಕ ಜನಪ್ರಿಯ ಚಿತ್ರ `ಸಾಹಿಬ್ ಬೀವಿ ಔರ್ ಗುಲಾಮ್~ ಚಿತ್ರಕ್ಕೆ ಯುವ ನಿರ್ದೇಶಕ ತಿಂಗ್‌ಮನ್ಷು ಧುಲಿಯಾ ಅವರು ಆಧುನಿಕ ಸ್ಪರ್ಶ ನೀಡಿದ್ದಾರೆ.ಸಿರಿವಂತಿಕೆಯ ಅಮಲು ಹಾಗೂ ಭೂಗತಲೋಕವನ್ನು ಸಿನಿಮಾ ಭಾಷೆಯಲ್ಲಿ ನಿರೂಪಿಸಿ ತೆರೆಮೇಲೆ ತರುವ ಅವರ ಪ್ರಯತ್ನ ಹೊಸತನದಿಂದ ಕೂಡಿದೆ. ಸಾಹಿಬ್ (ಜಿಮ್ಮಿ ಶೆರ್ಗಿಲ್) ಹಳೆಯ ರಾಜಮನೆತನದ ರಾಜಕುಮಾರ. ಅವನ ಮಡದಿ- `ಬೀವಿ~ (ಮಾಹಿ ಗಿಲ್).ಇಬ್ಬರಿಗೂ ಇಷ್ಟವಿಲ್ಲದಿದ್ದರೂ ಪತಿ-ಪತ್ನಿಯರಾಗಿ ಬದುಕುವ ಅನಿವಾರ್ಯ. ಸಾಹಿಬ್  ರಾತ್ರಿಗಳನ್ನು ಮತ್ತೊಬ್ಬಳೊಂದಿಗೆ ಕಳೆಯುತ್ತಾನೆ. ಆದರೆ ಬೀವಿ ತನ್ನ ಚಾಲಕನ (ರಣದೀಪ್ ಹೂಡಾ) ತೋಳಿನಲ್ಲಿರುತ್ತಾಳೆ. ಚಾಲಕ ಸಾಹೀಬ್‌ನ ವಿರುದ್ಧ ಕತ್ತಿ ಮಸೆಯುತ್ತಿರುವ ಮಾಜಿ ಭೂಗತ ಪಾತಕಿ. ಇದನ್ನು ಅರಿತ ಬೀವಿ ತನ್ನ `ಸವತಿ~ಯನ್ನು ಸಾಯಿಸಲು ಅವನನ್ನು ಕೋರುತ್ತಾಳೆ. ಅವನು ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾನೆ. ಇದಕ್ಕೆ ಸಂಭಾವನೆ ಎಂಬಂತೆ `ಬೀವಿ~ ಶಾಶ್ವತವಾಗಿ ತನಗೇ ಸಲ್ಲಬೇಕೆಂಬ ಹಠಕ್ಕೆ ಬೀಳುತ್ತಾನೆ. ಇಂಥ ಪಾತ್ರಗಳಿದ್ದ ಮೇಲೆ ಸಂಪತ್ತಿನ ಅರಮನೆ ರಕ್ತಸಿಕ್ತವಾಗಲು ಹೆಚ್ಚು ಕಾಲವೇನೂ ಬೇಕಾಗುವುದಿಲ್ಲ. ಕುಸಿಯುತ್ತಿದ್ದ ರಾಜನ ಸಿಂಹಾಸನ, ಅರ್ಥವಿಲ್ಲದ ಸಂಬಂಧಗಳು ಚಿತ್ರವನ್ನು ಮುಂದುವರಿಸುತ್ತವೆ.ಶೇಕ್‌ಸ್ಪಿಯರ್‌ನ `ಮ್ಯಾಕ್‌ಬೆತ್~ನಿಂದ ಪ್ರೇರಣೆ ಪಡೆದಿರುವ `ಸಾಹೀಬ್ ಬೀವಿ ಔರ್ ಗ್ಯಾಂಗ್‌ಸ್ಟರ್~ ಚಿತ್ರದಲ್ಲಿ ನೋಡಲೇಬೇಕಾದ ಹಲವು ಗುಣಗಳಿವೆ.ನಿರ್ದೇಶಕ ಧುಲಿಯಾ ಅವರ ಹಿಂದಿನ `ಹಾಸಿಲ್~, `ಶಾಗೀರ್ದ್~ಚಿತ್ರಗಳ ನಿರೂಪಣೆಯಂತೆ ಈ ಚಿತ್ರವೂ ಸಾಗುತ್ತದೆ. ಆದರೆ ನೋಡುಗರನ್ನು ತನ್ನದೇ ಆದ ಲೋಕಕ್ಕೆ ಕರೆದೊಯ್ಯುವಂತೆ ಮಾಡುವಲ್ಲಿ ನಿರ್ದೇಶಕರ ಕೈಚಳಕ ಕೆಲಸ ಮಾಡಿದೆ. ಕೊನೆಯವರೆಗೆ ಪ್ರೇಕ್ಷಕರು ಕುತೂಹಲ ಉಳಿಸಿಕೊಳ್ಳುವಂತೆ ಮಾಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.ನಟನೆಯಲ್ಲಿ ಜಿಮ್ಮಿ ಶೇರ್ಗಿಲ್, ಮಾಹೀ ಗಿಲ್ ಹಾಗೂ ರಣದೀಪ್ ಹೂಡಾ ಪಾತ್ರಗಳ ಮೂಲಕ  ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸುತ್ತಾರೆ. ಮಾಹಿ ಗಿಲ್ ಈಗಾಗಲೇ ಬಿಸಿ ಬಿಸಿ ದೃಶ್ಯಗಳಲ್ಲಿ ನಟಿಸಿ ಪಡ್ಡೆಗಳ ಮನಗೆದ್ದ್ದಿದಾರೆ. ಈ ಚಿತ್ರದ ಮೂಲಕ ಆಕೆ ಪೂರ್ಣ ಪ್ರಮಾಣದ ನಾಯಕಿಯಾಗಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ. ಜಿಮ್ಮಿ ಅವರದ್ದು ಪಾತ್ರಕ್ಕೆ ತಕ್ಕ ನಟನೆ. ರಣದೀಪ್ ಅಭಿನಯ ಭರವಸೆ ಮೂಡಿಸುವಂತಿದೆ. ಒಟ್ಟಿನಲ್ಲಿ ಹಳೆಯ ಬಾಟಲಿಯಲ್ಲಿ ಹೊಸ ಮದ್ಯ ಸುರಿದರೂ, ಮದ್ಯದಿಂದಾಗಿ ಬಾಟಲಿಗೂ ಹೊಸ ಕಳೆ ಬಂದಂತಾಗಿದೆ. ಅನುರಾಗ್ ಕಶ್ಯಪ್ ಅವರ ಹಾದಿ ತುಳಿದಿದ್ದ ಧುಲಿಯಾ ಅವರ ಹೊಸ ಪ್ರಯತ್ನ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.