ಭಾನುವಾರ, ಡಿಸೆಂಬರ್ 8, 2019
21 °C

ಹಳೇ ಪುಸ್ತಕ ಪ್ರೀತಿ

Published:
Updated:
ಹಳೇ ಪುಸ್ತಕ ಪ್ರೀತಿ

‘ಪುಸ್ತಕ ಓದುವವನು ಒಂದೇ ಜನ್ಮದಲ್ಲಿ ಸಾವಿರ ಜೀವನ ಕಾಣಬಲ್ಲ, ಆದರೆ ಪುಸ್ತಕ ಓದದವನು ಒಂದು ಹುಟ್ಟಿನಲ್ಲಿ ಕೇವಲ ಒಂದೇ ಜೀವನ ಅನುಭವಿಸಬಲ್ಲ’ ಎಂದು ಪುಸ್ತಕದ ಮಹತ್ವ ಸಾರುವ ಗಾದೆ ಮಾತೊಂದಿದೆ.ಈ ಮಾತಿಗೆ ತಕ್ಕಂತೆ ನಗರದಲ್ಲಿ ಪುಸ್ತಕ ಪ್ರೇಮಿಗಳೂ ದಿನೇ ದಿನೇ ಹೆಚ್ಚುತ್ತಿದ್ದಾರೆ. ನಿತ್ಯದ ಜಂಜಾಟದಿಂದ ಮುಕ್ತಿ ಹೊಂದಿ ಮನಕ್ಕೆ ಒಂದಿಷ್ಟು ಚೈತನ್ಯ ನೀಡುವ ಪುಸ್ತಕಗಳೇ ನಮಗೆ ಉತ್ತಮ ಸಂಗಾತಿಗಳಾಗುತ್ತಿವೆ. ಕಣ್ಣಿಗೆ ಕಾಣುವ ಪುಸ್ತಕಗಳನ್ನೆಲ್ಲಾ ಸಂಗ್ರಹಿಸಿಟ್ಟುಕೊಳ್ಳುವ ಹವ್ಯಾಸವೂ ಜನರಲ್ಲಿ ಹೆಚ್ಚುತ್ತಿದೆ. ಅಂತಹ ಹವ್ಯಾಸವುಳ್ಳ ನಗರದ ಅನಿತಾ ನಾಯರ್‌ ವಿಭಿನ್ನವಾದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.ಜನರಲ್ಲಿ ಪುಸ್ತಕ ಪ್ರೇಮ ಬೆಳೆಸಲೆಂದೇ ‘ಯೂಸ್ಡ್‌ ಬುಕ್‌ ಫೇರ್‌’ (ಬಳಸಿದ ಪುಸ್ತಕಗಳ ಮಾರಾಟ) ಆಯೋಜಿಸಿದ್ದಾರೆ. ಮೂಲತಃ ಕೇರಳದವರಾದ ಅನಿತಾ ನಾಯರ್‌ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವವರು. ನಗರಿಗರಲ್ಲಿ ಪುಸ್ತಕ ಪ್ರೀತಿ ಹೆಚ್ಚಿರುವ ಕಾರಣ ‘ಮಾಲ್‌ಗಳಲ್ಲಿ ಹಳೆ ಪುಸ್ತಕಗಳ ಮಾರಾಟ’ ಎಂಬ ಪರಿಕಲ್ಪನೆ ಹೊಸ ಅನುಭವ ನೀಡಲಿದೆ ಎನ್ನುವ ಅಭಿಪ್ರಾಯ ಅನಿತಾ ಅವರದ್ದು.‘ಪುಸ್ತಕಗಳನ್ನು ಒಮ್ಮೆ ಓದಿದ ಮೇಲೆ ಅದನ್ನು ಮೂಲೆಗೆ ಸೇರಿಸುವವರೇ ಹೆಚ್ಚು ಮಂದಿ. ಅದೂ ಅಲ್ಲದೆ ಒಮ್ಮೊಮ್ಮೆ ನಾವು ಹುಡುಕುವ ಹಳೆಯ ಪುಸ್ತಕಗಳೂ ಎಲ್ಲೂ ಸಿಗದೇ ಹೋಗ­ಬಹುದು. ಬೀದಿ ಬದಿ ಒಮ್ಮೊಮ್ಮೆ ಕಾಣಸಿಗುತ್ತವೆ ಅಷ್ಟೆ. ಆದರೆ ಹಳೆಯ ಪುಸ್ತಕಗಳನ್ನು ಹುಡುಕಿಕೊಂಡು ಬೀದಿ ಬೀದಿ ಅಲೆಯಲೂ ಸಾಧ್ಯವಿಲ್ಲ. ಹೇಗೂ ಮಾಲ್‌ಗಳಿಗೆ ಭೇಟಿ ನೀಡಿದಾಗ ಇಲ್ಲೇ ಕೊಂಡುಕೊಳ್ಳಬಹುದು.ಪುಸ್ತಕಪ್ರೇಮಿಗಳಿಗೆ ಸುಲಭವಾಗಿ ಕೈಗೆಟುಕುವ ಮಾರ್ಗವಿದು’ ಎನ್ನುತ್ತಾರೆ ಅನಿತಾ. ಕಥೆಗಳು, ಕಾದಂಬರಿಗಳು, ತತ್ವಜ್ಞಾನದ ಪುಸ್ತಕಗಳು, ಮಕ್ಕಳ ಕತೆಗಳು ಸೇರಿದಂತೆ ಹಲವು ಮಾದರಿಯ ಸುಮಾರು 300 ರಿಂದ 400 ಬಗೆಯ ಪುಸ್ತಕಗಳನ್ನು ಮಾರಾಟಕ್ಕೆ ಇಡಲಾಗಿದೆ.ಇಂಗ್ಲಿಷ್‌, ಕನ್ನಡ, ತೆಲುಗು, ಹಿಂದಿ, ತಮಿಳಿನ ಭಾಷೆಯ ಪುಸ್ತಕಗಳೂ ಲಭ್ಯವಿದೆಯಂತೆ. ಹೋದ ಕಡೆಯಲ್ಲೆಲ್ಲಾ ಪುಸ್ತಕಗಳನ್ನು ಖರೀದಿಸುವ ಹವ್ಯಾಸವುಳ್ಳ ಅನಿತಾ ಅವರ ಬಳಿ 400ರಿಂದ 500 ಪುಸ್ತಕಗಳ ಸಂಗ್ರಹವೂ ಇದೆಯಂತೆ. ಬೇರೆ ಪುಸ್ತಕ ಮಳಿಗೆಗಳಿಗೆ ಹೋಲಿಸಿದರೆ, ಬೆಲೆಯೂ ಕೈಗೆಟುಕುವಂತಿದೆ. ಪ್ರಸಿದ್ಧ ಲೇಖಕರ ಹಲವು ಪುಸ್ತಕಗಳೂ ಇಲ್ಲಿವೆ ಎಂದು ಮಾಹಿತಿ ನೀಡಿದರು.

ಮಕ್ಕಳಿಗೆ ಧನಸಹಾಯ

ಇವರ ಪುಸ್ತಕ ಪ್ರೀತಿ ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಈ ಪುಸ್ತಕ ಮಾರಾಟದಿಂದ ಬಂದ ಲಾಭದಲ್ಲಿ ಶೇ 20ರಷ್ಟನ್ನು ಕೇರಳದಲ್ಲಿನ ಭಾರತೀಯ ವಿದ್ಯಾಭವನ ಶಾಲೆಗೆ ನೀಡುತ್ತಿದ್ದು, ಸ್ಥಳೀಯ ಶಾಲೆಗಳಿಗೂ ಸಹಾಯ ಮಾಡುವ ಉದ್ದೇಶ ಹೊಂದಿದ್ದಾರೆ ಇವರು.‘ಇದೇ ಮೊದಲ ಬಾರಿ ಈ ರೀತಿಯ ಹಳೆ ಪುಸ್ತಕಗಳ ಮಾರಾಟ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ನನ್ನ ಮತ್ತು ಪತಿಯ ಪುಸ್ತಕ ಮೋಹವೇ ಇದಕ್ಕೆ ಕಾರಣ. ಇದರಿಂದ ಬಂದ ಲಾಭವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಗಿಸಿಕೊಳ್ಳಬೇಕೆಂದುಕೊಂಡಿದ್ದೇವೆ. ಯಾವುದಾದರೂ ಶಾಲೆಯ ಇಬ್ಬರು ಬಡ ವಿದ್ಯಾರ್ಥಿಗಳ ವರ್ಷದ ಖರ್ಚನ ಜವಾಬ್ದಾರಿ ಹೊರುವ ಯೋಜನೆಯಿದೆ. ಆದರೆ ಇದೇ ಮೊದಲ ಬಾರಿ ಇಂಥದ್ದೊಂದು ಕಾರ್ಯಕ್ರಮ ಆಯೋಜಿಸಿದ್ದೇವೆ’ ಎನ್ನುತ್ತಾರೆ ಅನಿತಾ.ನೀವೂ ನಿಮ್ಮಿಷ್ಟದ ಹಳೆಯ ಪುಸ್ತಕ ಕೊಂಡು ಮಕ್ಕಳಿಗೂ ಸಹಾಯ ಮಾಡಿ ಎಂದು ಕರೆ ನೀಡುತ್ತಾರೆ ಇವರು. ಪುಸ್ತಕಗಳ ಮಾರಾಟ ಸೆ. 14, ಶನಿವಾರದಂದು ಬೆಳಿಗ್ಗೆ 10.30 ರಿಂದ ರಾತ್ರಿ 9ರವರೆಗೂ ಇರುತ್ತದೆ.ಸ್ಥಳ: ಇನ್‌ಆರ್ಬಿಟ್‌ ಮಾಲ್‌, ಇಪಿಐಪಿ ಏರಿಯಾ, ವೈಟ್‌ಫೀಲ್ಡ್‌, ನೆಲಮಹಡಿ, ಹೈಪರ್‌ಸಿಟಿ ಎಂಟ್ರೆನ್ಸ್‌ ಸಮೀಪ.

 

ಪ್ರತಿಕ್ರಿಯಿಸಿ (+)