ಹಳೇ ಲುಕ್, ಹೊಸ ಅವತಾರ !

7

ಹಳೇ ಲುಕ್, ಹೊಸ ಅವತಾರ !

Published:
Updated:
ಹಳೇ ಲುಕ್, ಹೊಸ ಅವತಾರ !

ಇತ್ತೀಚೆಗೆ ದೆಹಲಿಯಲ್ಲಿ ಬಿಡುಗಡೆಯಾದ `ಟಾಟಾ ಇಂಡಿಕಾ ವಿಸ್ತಾ ಡಿ90' ಕಾರನ್ನು ಒಮ್ಮೆ ನೋಡಿದ ತಕ್ಷಣ ಹುಟ್ಟುವ ಭಾವ ಹಳೆಯ ಲುಕ್ ಆದರೆ ಹೊಸ ಅವತಾರ!2008ರಲ್ಲಿ ಮಾರುಕಟ್ಟೆಗೆ ಬಂದ `ಟಾಟಾ ಇಂಡಿಕಾ ವಿಸ್ತಾ'ಗೂ ಈಗಿನ `ವಿಸ್ತಾ ಡಿ90'ಗೂ ಮೇಲ್ಮೋಟಕ್ಕೆ ಹೇಳಿಕೊಳ್ಳುವಂತಹ ವ್ಯತ್ಯಾಸ ಕಾಣುವುದಿಲ್ಲ. ವಿಸ್ತಾ ಹೇಗಿದೆಯೋ ಅದೇ ರೀತಿ ಡಿ90 ಕೂಡ ಇದೆ. ಅದೇ ಪ್ಲಾಟ್‌ಫಾರಂ ಮೇಲೆ ವಿಸ್ತಾ ಡಿ90 ಉತ್ಪಾದನೆ ಆಗುತ್ತಿದೆ. ಹೀಗಾಗಿ ಎರಡೂ ಬಹುತೇಕ ಒಂದೇ ರೀತಿ ಇವೆ.ಹೊರ ನೋಟ ಹಾಗೆ ಕಂಡರೂ ಅದರ ಒಳನೋಟದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಎಂಜಿನ್ ಸೇರಿದಂತೆ ಡ್ಯಾಷ್ ಬೋರ್ಡ್‌ನಲ್ಲೂ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ. ಆಧುನಿಕ ತಂತ್ರಜ್ಞಾನವನ್ನು ಸಾಧ್ಯವಾದಷ್ಟು ಬಳಕೆ ಮಾಡಿಕೊಂಡಿರುವುದು ಡಿ90ಯ ಹೆಗ್ಗಳಿಕೆ.ಮಾರುತಿ ಸುಜುಕಿಯ ಎಸ್‌ಎಕ್ಸ್4, ಟಾಟಾದ ಮಾಂಜಾ, ಫಿಯಟ್‌ನ ಪುಂಟೊ 90ಎಚ್‌ಪಿ- ಈ ಕಾರುಗಳಲ್ಲಿ ಈಗ ಬಳಕೆ ಆಗುತ್ತಿರುವ ಫಿಯೆಟ್‌ನ 1.3 ಲೀ. ಕ್ವಾಡ್ರಜೆಟ್ ಡೀಸೆಲ್ ಎಂಜಿನ್ ಅನ್ನೇ ವಿಸ್ತಾ ಡಿ90ಕ್ಕೂ ಬಳಸಲಾಗಿದೆ. ಆದರೆ, ಅದನ್ನು ಟಾಟಾದವರು ತಮಗೆ ಬೇಕಾದ ಹಾಗೆ ಟ್ಯೂನ್ ಮಾಡಿರುವುದು ಮತ್ತೊಂದು ವಿಶೇಷ.ಈ ಎಂಜಿನ್‌ನ ಕಾರ್ಯಕ್ಷಮತೆ ಬಗ್ಗೆ ಯಾರಿಗೂ ಅನುಮಾನ ಇಲ್ಲ. ಕಾರಣ, ಅದು ಬಳಕೆಯಲ್ಲಿರುವ ಎಲ್ಲ ಕಾರುಗಳಲ್ಲಿಯೂ ಉತ್ತಮ ಸಾಧನೆ ತೋರಿದೆ. ಪುಂಟೊ ನಂತರ ಹ್ಯಾಚ್‌ಬ್ಯಾಕ್ ವಲಯದಲ್ಲಿ ಬಳಕೆ ಆಗುತ್ತಿರುವುದು ಇದೇ ಮೊದಲು. ಇದುವರೆಗೂ ಸೆಡಾನ್ ಸೆಗ್‌ಮೆಂಟ್‌ನಲ್ಲಿದ್ದ ಈ ಎಂಜಿನ್ ಹೆಚ್ಚು ಶಕ್ತಿ ಶಾಲಿ. ಅದನ್ನು ಹ್ಯಾಚ್‌ಬ್ಯಾಕ್ ಕಾರುಗಳಿಗೆ ಬಳಕೆ ಮಾಡಿರುವುದರಿಂದ ಅದರ ಸಾಮರ್ಥ್ಯ ಸಹಜವಾಗಿಯೇ ಹೆಚ್ಚು ಇದೆ.ಸೆಡಾನ್ ಕಾರುಗಳಲ್ಲಿ ಇರುವ `ವೇರಿಯಬಲ್ ಜಾಮೆಟ್ರಿ ಟರ್ಬೊ ಚಾರ್ಜರ್ (ವಿಜಿಟಿ) ತಂತ್ರಜ್ಞಾನವನ್ನು ಡಿ90ಯಲ್ಲೂ ಬಳಸಲಾಗಿದೆ. ಸಾಮಾನ್ಯವಾಗಿ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಫಿಕ್ಸೆಡ್ ಜಾಮೆಟ್ರಿ ಟರ್ಬೊ ಚಾರ್ಜರ್ (ಎಫ್‌ಜಿಟಿ) ತಂತ್ರಜ್ಞಾನ ಬಳಸಲಾಗುತ್ತದೆ. ಇದು ಅತ್ಯಂತ ಸುಧಾರಿತ ಎಂಜಿನ್ ಹೊಂದಿದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ.ಇದು ಎಂಜಿನ್ ಕುರಿತಾದ ಮಾಹಿತಿಯಾದರೆ ಇನ್ನೂ ಡ್ಯಾಷ್ ಬೋರ್ಡ್‌ನಲ್ಲಿ ಸಾಕಷ್ಟು ಬದಲಾವಣೆಗಳ ಬಗ್ಗೆ ಒಮ್ಮೆ ನೋಡೋಣ. ಹಳೆ ವಿಸ್ತಾದಲ್ಲಿ ಡ್ಯಾಷ್‌ಬೋರ್ಡ್‌ನ ಮಧ್ಯದಲ್ಲಿ ಮೀಟರ್ ಬೋರ್ಡ್ ಇತ್ತು. ಈಗ ಅದನ್ನು ತೆಗೆದು, ಮಾಮೂಲಿಯಂತೆ ಸ್ಟೇರಿಂಗ್ ಹಿಂಬದಿಯಲ್ಲೇ ಹಾಕಲಾಗಿದೆ. ಹೈ ಎಂಡ್ ಕಾರುಗಳಲ್ಲಿ ಇರುವ ಹಾಗೆ ಸ್ಟೀರಿಂಗ್‌ನಲ್ಲೇ ಕೆಲವು ನಿಯಂತ್ರಣಗಳಿಗೆ ಅವಕಾಶ ಕಲ್ಪಿಸಲಾಗಿದೆ.ಟ್ಯಾಂಕ್‌ನಲ್ಲಿರುವ ಡೀಸೆಲ್‌ನಿಂದ ಇನ್ನೂ ಎಷ್ಟು ದೂರ ಕ್ರಮಿಸಬಹುದು? ಎಷ್ಟು ಲೀಟರ್ ಡೀಸೆಲ್ ಇದೆ? ಇತ್ಯಾದಿ ಮಾಹಿತಿ ನೀಡುವ ವ್ಯವಸ್ಥೆಯನ್ನೂ ಇದರಲ್ಲಿ ಕಲ್ಪಿಸಲಾಗಿದೆ. ಡ್ಯಾಷ್‌ಬೋರ್ಡ್‌ನ ಮಧ್ಯದಲ್ಲಿ ಆ ಮಾಹಿತಿ ಡಿಸ್‌ಪ್ಲೇ ಆಗುತ್ತದೆ. ಹೊರ ಭಾಗದ ಹವಾಮಾನಕ್ಕೆ ತಕ್ಕಂತೆ ಕಾರಿನ ಒಳಗೂ ತಾಪಮಾನವನ್ನು ತನ್ನಿಂದಾನೆ ಬದಲಿಸಿಕೊಳ್ಳುವಂತಹ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ.ಟಚ್ ಸ್ಕ್ರೀನ್ ಮಲ್ಟಿಮೀಡಿಯಾ ಸಿಸ್ಟಮ್ ಕೂಡ ಇದರಲ್ಲಿ ಇದೆ. ಬೆರಳ ತುದಿಯ ಸ್ಪರ್ಶದಿಂದ ಡಿ.ವಿ.ಡಿ, ವಿಡಿಯೋ, ಬ್ಲೂಟೂತ್... ಎಲ್ಲವನ್ನೂ ಆನ್ ಮಾಡಬಹುದು. `ಬ್ಲೂ5' ತಂತ್ರಜ್ಞಾನ ಇದ್ದು, ಐದು ಮೊಬೈಲ್ ಸಂಖ್ಯೆಗಳನ್ನು ಬ್ಲೂಟೂತ್ ಮೂಲಕ ಸಂಪರ್ಕ ಸಾಧಿಸಲು ಇದು ನೆರವಾಗಲಿದೆ. ಈ ವ್ಯವಸ್ಥೆ ಈಗ `ಬ್ಲೂ ಅಂಡ್ ಮಿ' ಎಂದು ಫಿಯೆಟ್ ಪುಂಟೊ ಕಾರುಗಳು ಹೊಂದಿವೆ. ಪರಿಚಯ ಇಲ್ಲದ ಊರು- ಕೇರಿಗಳಿಗೆ ಹೋಗುವುದಕ್ಕೆ ಅನುಕೂಲ ಆಗುವ ಜಿಪಿಎಸ್ ತಂತ್ರಜ್ಞಾನ ಕೂಡ ಇದೆ. ಇದು ಎಡ, ಬಲ, ನೇರ.... ಹೀಗೆ ಎಲ್ಲವನ್ನೂ ಡ್ರೈವರ್‌ಗೆ ಮಾಹಿತಿ ಕೊಟ್ಟು, ನಿಗದಿತ ಸ್ಥಳಕ್ಕೆ ಸುಲಭವಾಗಿ ತೆರಳಲು ಸಹಕಾರಿ ಆಗಲಿದೆ.ಆಧುನಿಕ ತಂತ್ರಜ್ಞಾನಕ್ಕೆ ಆದ್ಯತೆ ಕೊಟ್ಟಿರುವ ಹಾಗೆ ಸುರಕ್ಷತೆಗೂ ಒತ್ತು ನೀಡಲಾಗಿದೆ. ಕಾರಿನೊಳಗೆ ಕುಳಿತರೆ ಒಂದು ರೀತಿಯ ಸುರಕ್ಷತೆಯ ಭಾವನೆ ಮೂಡುವಂತೆ ಮಾಡಲಾಗಿದೆ. ಗಟ್ಟಿಮುಟ್ಟಾಗಿರುವ ಈ ಕಾರಿನ ಸುತ್ತ 105 ಕೆ.ಜಿ. ತೂಕದ ಗುಣಮಟ್ಟದ ಕಬ್ಬಿಣದ ಸರಳುಗಳನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ ಎರಡು ಎಸ್‌ಆರ್‌ಎಸ್ ಏರ್‌ಬ್ಯಾಗ್‌ಗಳು ಕೂಡ ಇವೆ. ಇದೆಲ್ಲದರ ಜತೆಗೆ ಕಾರಿನಲ್ಲಿ ಕುಳಿತಿದ್ದಾಗ ಎಂಜಿನ್‌ನ ಶಬ್ದ ಹೆಚ್ಚು ಕೇಳಿಸದಂತೆ ಒಳ ಭಾಗವನ್ನು ವಿನ್ಯಾಸಗೊಳಿಸಲಾಗಿದೆ.ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬೂಷನ್ (ಇಬಿಡಿ) ವ್ಯವಸ್ಥೆ ಇರುವ ಎ.ಬಿ.ಎಸ್ ಬ್ರೇಕ್ ಜೋಡಿಸಿದ್ದು, ಬೇಕೆಂದ ಕಡೆ ಕಾರು ನಿಲ್ಲುತ್ತದೆ. ದಿಢೀರ್ ಹಾಕುವ ಬ್ರೇಕ್‌ನಿಂದಾಗಿ ಪಕ್ಕಕ್ಕೆ ಸೆಳೆಯುವ ಅಥವಾ ಸ್ಕಿಡ್ ಆಗುವ ಸಾಧ್ಯತೆ ಕಡಿಮೆ. ಬ್ರೇಕ್ ಹಾಕಿದ ತಕ್ಷಣ ಅದು ಹಾಗೆಯೇ ನಿಲ್ಲುತ್ತದೆ. ಇದು ಈ ಲೇಟೆಸ್ಟ್ ವಿಸ್ತಾದ ವಿಶೇಷ. ಆದರೆ, ಟಾಟಾದ ಸರ್ವೀಸ್ ಈ ಎಲ್ಲ ಸೌಲಭ್ಯಗಳಿಗೆ ಪೂರಕವಾಗಿ ಸ್ಪಂದಿಸುತ್ತದೆಯೇ ಎನ್ನುವುದು ಎಂತಹವರನ್ನೂ ಕಾಡುತ್ತಿರುವ ಪ್ರಶ್ನೆ.ಒಟ್ಟಿನಲ್ಲಿ ಟಾಟಾ ತಾನು ಕೂಡ ಮೇಲ್ವರ್ಗದವರು ಓಡಿಸಬಲ್ಲ ಕಾರು ಉತ್ಪಾದಿಸಬಲ್ಲೆ ಎನ್ನುವುದನ್ನು ತೋರಿಸುವುದಕ್ಕೆ ಡಿ90 ಅನ್ನು ಮಾರುಕಟ್ಟೆಗೆ ಬಿಟ್ಟಿದೆ. ಮಧ್ಯಮ ವರ್ಗದವರು ಮಾತ್ರವಲ್ಲದೆ, ಶ್ರೀಮಂತರು ಕೂಡ ಟಾಟಾಗೆ ಮೊರೆ ಹೋಗಲಿ ಎನ್ನುವ ಕಾರಣಕ್ಕೆ ಹೊಸ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. ಆದರೆ, ಎಸ್‌ಎಕ್ಸ್4, ಪುಂಟೊ ಹಾಗೆ ಇದು ಕೂಡ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರುತ್ತದೆಯೇ ಎನ್ನುವ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಾಗಿದೆ.150 ಕಿ.ಮೀ ವೇಗದಲ್ಲಿ ವಿಸ್ತಾ ಡಿ90

ಜನವರಿ 28, ಟಾಟಾ ವಿಸ್ತಾ ಡಿ90 ಮಾರುಕಟ್ಟೆಗೆ ಬಿಡುಗಡೆಯಾದ ದಿನ. ಅಂದು ದೆಹಲಿಗೆ ಸಮೀಪದಲ್ಲೇ ಇರುವ `ಫಾರ್ಮುಲಾ-1' ರೇಸ್ ನಡೆಯುವ `ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್'ನಲ್ಲಿ (ಬಿಐಸಿ) ಬಿಡುಗಡೆಯ ಸಂಭ್ರಮ.ಹೊಸ ಕಾರುಗಳು 150 ಕಿ.ಮೀ ವೇಗದಲ್ಲಿ ಓಡಿದ್ದಲ್ಲದೆ, ಸ್ಟಂಟ್‌ಗಳ ಮೂಲಕ ಎಲ್ಲರ ಗಮನ ಸೆಳೆದವು. 80-90 ಕಿ.ಮೀ ವೇಗದಲ್ಲಿ ಹೋಗುತ್ತಿದ್ದ ಕಾರು ದಿಢೀರ್ ಉಲ್ಟಾ ತಿರುಗಿ ನಿಲ್ಲುವುದು! ಅಬ್ಬಾಬ್ಬಾ, ಎಂತಹವರಿಗೂ ಮೈನಡಗಿಸುತ್ತದೆ. ರೇಸ್ ಕಾರು ಓಡಿಸುವವರೇ ಸ್ಟಂಟ್‌ಗಳ ಮೂಲಕ ಎಲ್ಲರ ಗಮನ ಸೆಳೆದರು. ದೇಶದ ವಿವಿಧ ರಾಜ್ಯಗಳಿಂದ ಬಂದಿದ್ದ 70ಕ್ಕೂ ಹೆಚ್ಚು ಮಾಧ್ಯಮದವರ ಮುಂದೆ ಕಾರಿನ ಕಾರ್ಯಕ್ಷಮತೆ ಪ್ರದರ್ಶಿಸಲಾಯಿತು. ವಿಪರೀತ ವೇಗವಾಗಿ ಹಿಂದೆ-ಮುಂದೆ ಓಡಿಸುವ ಮತ್ತು ತಕ್ಷಣಕ್ಕೆ ನಿಲ್ಲಿಸುವ ಎಲ್ಲ ಸಾಹಸಗಳಿಗೂ ಬಿಐಸಿ ಸಾಕ್ಷಿಯಾಯಿತು.ಸ್ಟಂಟ್ ಪ್ರದರ್ಶನದ ನಂತರ ವಾಹನ ಚಾಲನಾ ಪರವಾನಗಿ ಇದ್ದ ಮಾಧ್ಯಮದವರಿಗೂ ರೇಸ್ ರಸ್ತೆಯಲ್ಲಿ ಕಾರು ಓಡಿಸುವ ಅವಕಾಶ ಕಲ್ಪಿಸಲಾಗಿತ್ತು. 0-100 ಕಿ.ಮೀ ವೇಗವನ್ನು ಕೇವಲ 15.5 ಸೆಕೆಂಡ್‌ಗಳಲ್ಲಿ ತಲುಪುವ ಸಾಮರ್ಥ್ಯದ ಈ ಎಂಜಿನ್ ಹೆಚ್ಚು ಸದೃಢವಾಗಿದೆ ಎಂದೆನಿಸಿತು. ಗರಿಷ್ಠ 158 ಕಿ.ಮೀ ವೇಗ ಓಡಿಸುವುದಕ್ಕೆ ಅವಕಾಶ ಕಲ್ಪಿಸಿದ್ದರೂ 150 ಕಿ.ಮೀವರೆಗೆ ಓಡಿಸಿದ ಅನುಭವ ಅಂತೂ ಆಯಿತು. ಇಷ್ಟು ವೇಗದಲ್ಲಿ ಓಡುತ್ತಿದ್ದರೂ ಅಲುಗಾಡುವುದಿಲ್ಲ; ಅದೇ ಈ ವಿಸ್ತಾದ ವಿಶೇಷ. ಎಬಿಎಸ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry