ಭಾನುವಾರ, ಜೂನ್ 20, 2021
28 °C

ಹಳ್ಳದ ನೀರೇ ಅಮೃತ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳ್ಳದ ನೀರೇ ಅಮೃತ...!

ಶಹಾಪುರ: ಕುಡಿಯುವ ನೀರಿನ ಯೋಜನೆ ಜಾರಿಗೊಳ್ಳುವುದು ಸರ್ಕಾರ ಅನುದಾನ ದಾಖಲೆಗಳಲ್ಲಿ ಮಾತ್ರ ಕೇಂದ್ರಿಕೃತವಾಗಿದೆ.ತುರ್ತು ಸಹಾಯವಾಣಿ ಟಾಸ್ಕ್‌ಫೋರ್ಸ್ ಹೀಗೆ ಆಕರ್ಷಕ ಹೆಸರುಗಳನ್ನು ಹೊತ್ತುಕೊಂಡು ಬೇಸಿಗೆಯ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಮಹತ್ವ ಅಧಿಕಾರಿಗಳು ನಡೆಸುವ ಸಾಮಾನ್ಯ ಸಭೆಗೆ ಮಾತ್ರ ಸಿಮೀತವಾಗಿದೆ. ಅನುಷ್ಠಾನಗೊಳಿಸಬೇಕಾದ ಅಧಿಕಾರಿ ಮಾತ್ರ ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುವುದಿಲ್ಲ ಎಂಬ ದೂರುಗಳು ಕೇಳಿ ಬರುತ್ತಲಿವೆ. ಇದಕ್ಕೆ ತಾಜಾತನ ಎನ್ನುವಂತೆ ತಾಲ್ಲೂಕಿನ ಹತ್ತಿಗೂಡುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನಮುಟಗಿ ಗ್ರಾಮ. ಕೇವಲ 1,500 ಜನಸಂಖ್ಯೆಯನ್ನು ಹೊಂದಿದೆ. ಗ್ರಾಮಕ್ಕೆ ಕುಡಿಯುವ ನೀರಿನ ಭಾಗ್ಯ ಮಾತ್ರ ಗಗನ ಕುಸುಮವಾಗಿ ಉಳಿದಿದೆ.ಮೂರು ವರ್ಷದ ಹಿಂದೆ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಕಿರು ನೀರು ಯೋಜನೆ ಸ್ಥಾಪನೆಗೊಂಡಿತು. ಕೊಳವೆ ಬಾವಿ ಕೊರೆಸಿದ್ದು. ನೀರು ಸಂಗ್ರಹ ತೊಟ್ಟಿ ನಿರ್ಮಿಸಿದ್ದು ಸಾಧನೆಯಾಗಿದೆ. ಪೈಪ್‌ಲೈನ್ ಹಾಕದೆ ಇಡೀ ಯೋಜನೆ ಹಣವನ್ನು ಗುಳುಂ ಮಾಡಲಾಯಿತು. ಅದರ ಶಾಪದ ಪರಿಣಾಮ ಇಂದಿಗೂ ನೀರಿನ ಭಾಗ್ಯ ಲಭಿಸಿಲ್ಲ.  ಗ್ರಾಮದಲ್ಲಿ ಎರಡು ಕೈಪಂಪುಗಳಿವೆ  ಅದರ ನೀರು ಕುಡಿಯಲು ಯೋಗ್ಯವಿಲ್ಲ.ಉಪ್ಪು ನೀರು ಇವೆ ಬಳಕೆ ಮಾಡಲು ಮಾತ್ರ ಉಪಯೋಗಿಸುತ್ತೇವೆ ಎನ್ನುತ್ತಾರೆ ಗ್ರಾಮದ ಹಿರಿಯ ಮುಖಂಡ ವಿರುಪಣ್ಣಗೌಡ.ಗ್ರಾಮದಿಂದ ಕೂಗಳತೆಯ ದೂರದಲ್ಲಿ ಹಳ್ಳದ ಕಡೆ ಜನತೆ ದಿನಾಲು  ಮುಖ ಮಾಡಬೇಕು. ಮಹಿಳೆಯರು ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಬೆಳಿಗ್ಗೆ ಎದ್ದು ತಕ್ಷಣ ಕುಡಿಯುವ ನೀರಿಗಾಗಿ ಹಳ್ಳಕ್ಕೆ ಆಗಮಿಸುತ್ತಾರೆ. ಹರಿಯುವ ನೀರಿನ ತುಸು ದೂರದಲ್ಲಿಯೇ ಒರತಿ (ಒರ್ತಿ) ಮರಳು ತೆಗೆದು ಹಾಕಿದಾಗ ಅದರ ಮೂಲಕ ಬರುವ ಕಲುಷಿತ ನೀರನ್ನು ಹಿಡಿ ಬಟ್ಟಲಿನ ಮೂಲಕ ಕೊಡದಲ್ಲಿ ತುಂಬಿಕೊಳ್ಳಬೇಕು.ಅದು ಕೆಲ ನಿಮಿಷಗಳ ಕಾಲ ನಡೆಯುತ್ತದೆ. ರಾಡಿಯಂತಹ ಒರತಿ ನೀರು ನಮಗೆ ಅಮೃತವಾಗಿದೆ ಎನ್ನುತ್ತಾರೆ ಮಹಿಳೆಯೊಬ್ಬರು.ನೀರು ನಿರ್ವಹಣೆಯ ನೊಗ ಹೊತ್ತ ಅಧಿಕಾರಿ ಮಾತ್ರ ಅಪ್ಪಿತಪ್ಪಿಯೂ ಕಣ್ಣು ಹಾಯಿಸುವುದಿಲ್ಲ. ಅರ್ಜಿ, ದೂರು ನೀಡಿದರೆ ಯಾರು ಸ್ಪಂದಿಸುವುದಿಲ್ಲ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಇಲ್ಲವೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಭೆಯಲ್ಲಿ ಭಾಗವಹಿಸಿರುವುದಾಗಿ ಸಿದ್ದಪಡಿಸಿದ ಉತ್ತರ ಸಿಗುತ್ತದೆ.  ಪಟ್ಟಣ ಪ್ರದೇಶದಲ್ಲಿ ನಿವೇಶನ ಮಾಡಿಕೊಂಡಿದ್ದರಿಂದ ಹಳ್ಳದ ನೀರು ಕುಡಿದು ಜೀವಿಸುವ ಜನತೆಯ ನೋವು ಅವರಿಗೆಲ್ಲಿ ಅರ್ಥವಾಗಬೇಕೆಂದು ಗ್ರಾಮದ ಸಿದ್ದಪ್ಪ ಆಕ್ರೋಶ ವ್ಯಕ್ತಪಡಿಸುತ್ತಾರೆ.ಆತಂಕ: ಹಳ್ಳದ ಕಲುಷಿತ ನೀರು ಸೇವನೆಯಿಂದ ರೋಗ ರುಜಿನ ಬರುವ ಅಪಾಯವಿದೆ. ಅದರಲ್ಲಿ ಬೇಸಿಗೆ ದಿನಗಳಲ್ಲಿ ಮತ್ತಷ್ಟು ತೊಂದರೆ ಆಗುವ ಭೀತಿಯು ಗ್ರಾಮಸ್ಥರಲ್ಲಿ ಮೂಡಿದೆ.ಕೆಲ ಜನಪ್ರತಿನಿಧಿಗಳ ಬಗ್ಗೆ ನಮಗೆ ವಿಶ್ವಾಸವಿಲ್ಲವಾಗಿದೆ. ಇನ್ನಿಲ್ಲದ ಸಬೂಬು ಹೇಳಿ ಪಾರಾಗುವುದರಲ್ಲಿ ನಿಸ್ಸೀಮರಾಗಿದ್ದಾರೆ. ನೀರಿನ ಸೌಕರ್ಯವಿದೆ ನಿರ್ವಹಣೆ ಬರ ಎದುರಾಗಿದೆ. ಕನಿಷ್ಠ ಪಕ್ಷ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಭಾಗ್ಯವಾದರು ಕಲ್ಪಿಸಿ ಎಂಬುದು ಗ್ರಾಮಸ್ಥರ ಮನವಿಯಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.