ಭಾನುವಾರ, ನವೆಂಬರ್ 17, 2019
24 °C
ತೆಗ್ಗಳ್ಳಿ- ಶಾಖಾಪುರಕ್ಕೆ ಬರಲು ಬೀಗರಿಂದಲೂ ಹಿಂಜರಿಕೆ

ಹಳ್ಳದ ಬಸಿ ನೀರೇ ಜೀವಜಲ

Published:
Updated:
ಹಳ್ಳದ ಬಸಿ ನೀರೇ ಜೀವಜಲ

ಕೆಂಭಾವಿ: ರಾಜ್ಯದ ಪ್ರತಿ ಗ್ರಾಮಗಳಿಗೂ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿರುವುದದಾಗಿ ಹೇಳುವ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಸವಾಲು ಎಂಬಂತಿದೆ ಸಮೀಪದ ತೆಗ್ಗಳ್ಳಿ ಹಾಗೂ ಶಾಖಾಪುರ ಗ್ರಾಮಗಳು. ಇಂದಿಗೂ ಈ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಾಗಿದ್ದು, ಇಲ್ಲಿನ ಜನರಿಗೆ ಹಳ್ಳದ ನೀರೇ ಗತಿ ಎನ್ನುವಂತಾಗಿದೆ.ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಇಲ್ಲಿನ ಜನರು ದಶಕಗಳಿಂದ ಅನಿವಾರ್ಯವಾಗಿ ಹಳ್ಳದ ನೀರನ್ನೇ ಕುಡಿಯುತ್ತ ಬಂದಿದ್ದಾರೆ. ಸದ್ಯಕ್ಕೆ ಬೇಸಿಗೆ ಇರುವುದರಿಂದ ಹಳ್ಳವೂ ಬತ್ತಿ ಹೋಗಿದ್ದು, ಜನರು ನೀರಿಗಾಗಿ ಪರದಾಡುವಂತಾಗಿದೆ. ಜಿಲ್ಲಾಡಳಿತವು ಗ್ರಾಮಕ್ಕೆ ನೀರು ಒದಗಿಸಲೆಂದು ಮುದನೂರಿನಿಂದ ಪೈಪ್‌ಲೈನ್ ಹಾಕಿ ನೀರು ಬಿಡುತ್ತಿದ್ದು, ಆ ನೀರು ಮಾತ್ರ ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ನೀರಿಗಾಗಿ ಇಲ್ಲಿ ನಿತ್ಯ ಜಗಳಗಳಂತೂ ತಪ್ಪಿದ್ದಲ್ಲ ಎಂದು ಮಹಿಳೆಯರು ಹೇಳುತ್ತಾರೆ.ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹಾಕಿದ ಯೋಜನೆಗಳು ಸಫಲವಾಗದೇ, ಕೇವಲ ಗುತ್ತಿಗೆದಾರರ ಜೇಬು ತುಂಬಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.“ಕುಡಿಯುವ ನೀರೊದಗಿಸಲು ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಯೋಜನೆಗಳಡಿ ಮುದನೂರಿನಿಂದ ತೆಗ್ಗಳ್ಳಿಗೆ, ಯಡಿಯಾಪುರದಿಂದ ಶಾಖಾಪುರಕ್ಕೆ ಮತ್ತು ಮಾವಿನಮಟ್ಟಿ ಗ್ರಾಮದಿಂದಲೂ ಪೈಪ್‌ಲೈನ್ ಹಾಕ್ಯರ್ರಿ. ಆದರೆ ನೀರು ಮಾತ್ರ ಬರಂಗಿಲ್ಲರ‌ರ್ರಿ. ನಮಗ ನೀರ ಕೊಡಲಿಕ್ಕಿ ಆ ಭಗವಂತ ಯಾರನ್ನಾದ್ರು ಕಳಿಸಲಿ” ಎಂದು ಗ್ರಾಮದ ಮಹಿಳೆ ಮಾಯಮ್ಮ ಹೇಳುತ್ತಾರೆ.“ಎನ್ ಮಾಡೊದ್ರಿ ಸಾಹೇಬರಾ. ನಮ್ಮುರಾಗ ಕುಡಿಲಿಕ್ಕಿ ನೀರ ಬರಂಗಿಲ್ರಿ. ಪೈಪ್ ಹಾಕ್ಯರ‌್ರಿ ಮೊದಲು ಅದರಾಗ ಕಣ್ಣೀರ ಬಂದ್ಹಂಗ್ ನೀರ ಬರತಿತ್ತು. ಆದ್ರ ಈಗ ಅದೂ ಬರಲಾಕತ್ತಿಲ್ಲ ನೋಡ್ರಿ. ನೀರಿಲ್ದಕ್ಕ ನಮ್ಮೂರಿಗಿ ಬ್ಯಾಸ್ಯಗ್ಯಾಗ ಬೀಗರು ಸಂಬಂಧಿಕರು ಬರಲಾರದಂಗ್ ಆಗ್ಯದ್ರಿ.ಎರಡು ಕಿ.ಮೀ ದೂರದ ಹಳ್ಳದಾಗಿನ ಬಸಿ ನೀರ ಕುಡಿದ ಜೀವನ ನಡಸಬೇಕ್ರಿ” ಎಂದು ಗ್ರಾಮದ ರಾಯಮ್ಮ ತಮ್ಮ ಅಳಲು ತೋಡಿಕೊಂಡರು.

ಕೃಷ್ಣಾ ಭಾಗ್ಯ ಜಲ ನಿಗಮದ ನಾರಾಯಣಪುರ ಎಡದಂಡೆ ಕಾಲುವೆಯ ಪ್ರದೇಶವಾದ್ದರಿಂದ ಇಲ್ಲಿನ ಬಹುತೇಕ ಹಳ್ಳಗಳು ಕಾಲುವೆಯಲ್ಲಿ ನೀರಿದ್ದಾಗ ಮಾತ್ರ ಹರಿಯುತ್ತವೆ. ಇದೀಗ ಕಾಲುವೆಗೆ ನೀರು ಸ್ಥಗಿತಗೊಂಡಿದ್ದರಿಂದ, ಹಳ್ಳಗಳು ಬತ್ತಿ ಹೋಗಿವೆ.ಹೀಗಾಗಿ ಇಲ್ಲಿಯ ಜನ ನೀರಿಗಾಗಿ 8 ಕಿ.ಮೀ ದೂರದ ಮುದನೂರಿಗೆ ಟಂಟಂ ಅಥವಾ ದ್ವಿಚಕ್ರ ವಾಹನದಲ್ಲಿ ನೀರು ತರುವ ಪರಿಸ್ಥಿತಿ ಮುಂದುವರಿದಿದೆ.“ಜಲ ನಿರ್ಮಲ ಯೋಜನೆಯಡಿ ಈ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ರೂ. 80 ಲಕ್ಷ ಬಿಡುಗಡೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿಯ ಜನರಿಗೆ ಕುಡಿಯಲೂ ನೀರಿಲ್ಲ. ನಿತ್ಯ ನೀರು ತರುವುದೊಂದೇ ಕೆಲಸವಾಗಿದೆ” ಎನ್ನುತ್ತಾರೆ ಗುಂಡೆರಾವ.  ಕಾಲುವೆಗೆ ನೀರು ಬರುವವರೆಗೆ ನಮಗೆ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಎಂಬುದು ಇಲ್ಲಿನ ಜನರ ಮನವಿಯಾಗಿದೆ.ಕುಡಿಯುವ ನೀರಿನ ವ್ಯವಸ್ಥೆಗಾಗಿ ಸರ್ಕಾರ ಪ್ರತಿ ವರ್ಷ ವಿವಿಧ ಯೋಜನೆಗಳಡಿ ನೂರಾರು ಕೋಟಿ ಖರ್ಚು ಮಾಡುತ್ತದೆ. ಆದರೆ ಈ ಯೋಜನೆಗಳು ಗ್ರಾಮೀಣ ಪ್ರದೇಶದ ಜನರಿಗೆ ಎಷ್ಟರ ಮಟ್ಟಿಗೆ ತಲುಪುತ್ತವೆ ಎಂಬುದರ ಬಗ್ಗೆ ಯಾರೋಬ್ಬರು ಯೋಚಿಸುತ್ತಿಲ್ಲ.ಸರ್ಕಾರದ ಹಣ ಮಾತ್ರ ವ್ಯಯವಾಗುತ್ತಿದೆಯೇ ಹೊರತು ಗ್ರಾಮೀಣ ಜನರಿಗೆ ಅದರಿಂದ ಪ್ರಯೋಜನವಾಗುತ್ತಿಲ್ಲ. ಕನಿಷ್ಠ ಕುಡಿಯುವ ನೀರಾದರೂ ಕೊಡುವ ಬಗ್ಗೆ ಅಧಿಕಾರಿಗಳು ಚಿಂತಿಸಬೇಕು ಎಂದು ಗ್ರಾಮಸ್ಥರ ಕೋರಿಕೆ.

 

ಪ್ರತಿಕ್ರಿಯಿಸಿ (+)