ಹಳ್ಳಿಗರಿಗೆ ಸ್ನಾನಗೃಹ ಸಹಿತ ಶೌಚಾಲಯ

7

ಹಳ್ಳಿಗರಿಗೆ ಸ್ನಾನಗೃಹ ಸಹಿತ ಶೌಚಾಲಯ

Published:
Updated:

ಬೆಂಗಳೂರು: `ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸ್ನಾನಗೃಹ ಸಹಿತ ಶೌಚಾಲಯ ನಿರ್ಮಿಸುವ ಪ್ರಸ್ತಾವನೆ ಇದ್ದು, ಶೀಘ್ರದಲ್ಲಿ ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಿ ಇದಕ್ಕೆ ಮೂರ್ತ ಸ್ವರೂಪ ನೀಡಲಾಗುವುದು' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.ನಗರದ ಗ್ರಾಮೀಣಾಭಿವೃದ್ಧಿ ಭವನದ ಆವರಣದಲ್ಲಿ ಸೋಮವಾರ ನಡೆದ `ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ'ದ 40ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿ, `ಇಲಾಖೆ ವತಿಯಿಂದ ಗ್ರಾಮಾಂತರ ಪ್ರದೇಶದ ಜನರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಸ್ನಾನಗೃಹವೂ ಅಷ್ಟೇ ಅವಶ್ಯಕ. ಈ ನಿಟ್ಟಿನಲ್ಲಿ 22,000 ರೂಪಾಯಿ ವೆಚ್ಚದಲ್ಲಿ ಸ್ನಾನಗೃಹ ಸಹಿತ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ' ಎಂದು ತಿಳಿಸಿದರು.`ರಾಜ್ಯದಲ್ಲಿ 56 ಲಕ್ಷ ಶೌಚಾಲಯಗಳನ್ನು ನಿರ್ಮಿಸಬೇಕಿದೆ. ಈ ವರ್ಷ ಆರು ಲಕ್ಷ ಶೌಚಾಲಯಗಳನ್ನು ನಿರ್ಮಿಸುವ ಗುರಿ ಇರಿಸಿಕೊಳ್ಳಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡವರಿಗೆ 15,000 ರೂಪಾಯಿ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ. ಬಡವರಿಗೆ ಹಾಗೂ ಹಿಂದುಳಿದವರಿಗೂ ಈ ಯೋಜನೆಯನ್ನು ವಿಸ್ತರಿಸಬೇಕು. ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು' ಎಂದು ಅವರು ಹೇಳಿದರು.ಸಿಎಂ ಅಸಮಾಧಾನ:  `ಹಳ್ಳಿಗಳಿಗೆ ಇನ್ನೂ ಸಮರ್ಪಕ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ ಎಂಬ ನೋವು ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ರಸ್ತೆ, ಚರಂಡಿ ಕಾಮಗಾರಿಗಳನ್ನು ನಡೆಸಲು ಅವಕಾಶ ಇದೆ. ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ಈ ಕೆಲಸ ಮಾಡಬೇಕು' ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.`ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಹಗಲು ಹೊತ್ತಿನಲ್ಲೂ ತಿರುಗಾಡಲು ಸಾಧ್ಯ ಇಲ್ಲ. ಈ ಸಮಸ್ಯೆ ಪರಿಹರಿಸಲು ಹೆಚ್ಚಿನ ಇಚ್ಛಾಶಕ್ತಿ ತೋರ್ಪಡಿಸಬೇಕು. ಇದು ಜನಪ್ರತಿನಿಧಿಗಳಿಂದ ಮಾತ್ರ ಆಗುವ ಕೆಲಸ ಅಲ್ಲ' ಎಂದರು.`ಗ್ರಾಮೀಣ ಪ್ರದೇಶದಲ್ಲಿ ಅನೇಕ ಕಾಮಗಾರಿಗಳನ್ನು ನಡೆಸಲು ಬಾಕಿ ಇದೆ. ನಿಗಮ ಶೌಚಾಲಯ ನಿರ್ಮಾಣ, ಆಸ್ಪತ್ರೆ, ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳನ್ನು ನಡೆಸಬೇಕು. ಟೆಂಡರ್‌ಗಳಲ್ಲಿ ಭಾಗವಹಿಸಬೇಕು. ಆಗ ಗುತ್ತಿಗೆದಾರರಿಂದ ಕಾಮಗಾರಿ ನಡೆಸುವುದು ತಪ್ಪುತ್ತದೆ. ಜೊತೆಗೆ ಸರ್ಕಾರಕ್ಕೂ ಲಾಭವಾಗುತ್ತದೆ' ಎಂದು ಅವರು ಅಭಿಪ್ರಾಯಪಟ್ಟರು.`ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂಬ ನೆಪ ಒಡ್ಡಿ ನಿಗಮ ಕಾಮಗಾರಿಗಳನ್ನು ನಿಲ್ಲಿಸಿದ ಉದಾಹರಣೆ ಇದೆ. ಇಂತಹ ಪ್ರವೃತ್ತಿ ಸಲ್ಲದು. ನಿಗಮ ಲಾಭ ಗಳಿಸುವ ಕಡೆಗೆ ಗಮನ ಕೊಡುವುದು ಬೇಡ. ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಅವುಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು' ಎಂದು ಕಿವಿಮಾತು ಹೇಳಿದರು.`ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರ ಬದ್ಧ. ನಿಗಮದಲ್ಲಿ ಸಾಮಾಜಿಕ ನ್ಯಾಯ ಇಲ್ಲ ಎಂಬ ದೂರು ಬಂದಿದೆ. ಇಂತಹ ಅಸಮಾಧಾನ ನಿಗಮದ ಬೆಳವಣಿಗೆಗೆ ಮಾರಕ. ಇಲ್ಲಿ ಆಗಿರುವ ಲೋಪವನ್ನು ಕೂಡಲೇ ಸರಿಪಡಿಸಬೇಕು' ಎಂದು ಅವರು ಸೂಚಿಸಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್‌`ರಾಜ್ಯದಲ್ಲಿ ಗುತ್ತಿಗೆದಾರರು ಸಿಂಡಿಕೇಟ್ ಮಾಡಿಕೊಂಡಿದ್ದಾರೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಮೈತ್ರಿ ಮಾಡಿಕೊಂಡು ರಾಜ್ಯ ಸರ್ಕಾರಕ್ಕೆ ಹಾನಿ ಮಾಡುತ್ತಿದ್ದಾರೆ. ಕಾಮಗಾರಿಯನ್ನೂ ಪೂರ್ಣಗೊಳಿಸುತ್ತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.`20 ಜಿಲ್ಲೆಗಳಲ್ಲಿ 30 ಗುತ್ತಿಗೆದಾರರಿಗೆ ರೂ 30 ಕೋಟಿಯಿಂದ ರೂ100 ಕೋಟಿ ವರೆಗಿನ ಕಾಮಗಾರಿಗಳನ್ನು ನೀಡಲಾಗುತ್ತಿದೆ. ಆ ಕಾಮಗಾರಿಗೆ ಅವರೇ ಸಲಹೆಗಾರರು. ಕಾಮಗಾರಿ ನಡೆಸುವವರು ಅವರೇ. ಇದೊಂದು ದೊಡ್ಡ ಲೋಪ. ರಾಜ್ಯದ ಹಿತದೃಷ್ಟಿಯಿಂದ ಇದಕ್ಕೆ ಕಡಿವಾಣ ಹಾಕಿ ಈ ಕಾಮಗಾರಿಗಳನ್ನು ನಿಗಮಕ್ಕೆ ವಹಿಸಬೇಕು' ಎಂದು ಅವರು ಮನವಿ ಮಾಡಿದರು.ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಚ್.ಪಿ.ಪ್ರಕಾಶ್, `ನಿಗಮಕ್ಕೆ ಸರ್ಕಾರವು ಪಾರದರ್ಶಕ ಕಾಯ್ದೆಯಡಿ ರೂ 1 ಕೋಟಿ ವರೆಗೆ ಕೆಲವು ಕಾಮಗಾರಿಗಳಿಗೆ ವಿನಾಯಿತಿ ನೀಡಿದೆ. ಈ ವಿನಾಯಿತಿಯನ್ನು ಪ್ರತಿವರ್ಷ ನವೀಕರಿಸಬೇಕಾಗಿದೆ. ಸರ್ಕಾರ ವಿನಾಯಿತಿ ಮಿತಿಯನು ರೂ 3 ಕೋಟಿಗೆ ಹೆಚ್ಚಿಸಿ ಐದು ವರ್ಷಗಳ ವರೆಗೆ ವಿನಾಯಿತಿ ನೀಡಬೇಕು' ಎಂದು ಒತ್ತಾಯಿಸಿದರು.`ನಿಗಮದಲ್ಲಿರುವ ಬಹುತೇಕ ತಾಂತ್ರಿಕ ಸಿಬ್ಬಂದಿ ಐದು ವರ್ಷಗಳಲ್ಲಿ ನಿವೃತ್ತರಾಗಲಿದ್ದಾರೆ. ಈಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ 200 ತಾಂತ್ರಿಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸಬೇಕು' ಎಂದು ಅವರು ಮನವಿ ಮಾಡಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಉಪಸ್ಥಿತರಿದ್ದರು.

 

ಕುಡಿದು ಮಲಗಿದರೆ..!

`ರಾತ್ರಿ ಹೊತ್ತಿನಲ್ಲಿ ನಿದ್ರೆ ಬರುವುದಿಲ್ಲ ಎಂದು ಹೇಳುವವರು ಹೆಚ್ಚು. ಅವರು ಕೆಲಸ ಮಾಡುವುದಿಲ್ಲ. ಹಗಲಿನಲ್ಲಿ ಮೈ ಬಗ್ಗಿಸಿ ದುಡಿದು ಕುಡಿದು ಮಲಗಿದರೆ ಚೆನ್ನಾಗಿ ಚೆನ್ನಾಗಿ ನಿದ್ದೆ ಬರುತ್ತದೆ' ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಸಭೆ ನಗೆಗಡಲಲ್ಲಿ ತೇಲಿತು.`ಜನರು ಮದ್ಯಪಾನ ಮಾಡಬಾರದು ಎಂದು ಬಯಸುವವನು ನಾನು. ಆರೋಗ್ಯ ಹಾಗೂ ಆರ್ಥಿಕ ದೃಷ್ಟಿಯಿಂದ ಜನರು ಮದ್ಯಪಾನ ಮಾಡಬಾರದು. ಹಿಂದಿನ ಸರ್ಕಾರ ಮದ್ಯಪಾನ ನಿಷೇಧಿಸಿತು. ಹಳ್ಳಿಗಳ ಜನರು ಸಾರಾಯಿ ಬಿಟ್ಟು ಈಗ ವಿಸ್ಕಿ ಕುಡಿಯುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ಗುಜರಾತ್‌ನಲ್ಲಿ ಮದ್ಯಪಾನ ನಿಷೇಧಿಸಲಾಯಿತು. ಅಲ್ಲಿ ಈಗಲೂ ಮದ್ಯಪಾನ ಮಾಡುವ ಸಾಕಷ್ಟು ಮಂದಿ ಇದ್ದಾರೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry