ಹಳ್ಳಿಗರ ಆಹಾರವಾಗಿ ಮುಂದುವರಿದ ತೃಣಧಾನ್ಯ

7

ಹಳ್ಳಿಗರ ಆಹಾರವಾಗಿ ಮುಂದುವರಿದ ತೃಣಧಾನ್ಯ

Published:
Updated:

ಶ್ರೀನಿವಾಸಪುರ: ತಾಲ್ಲೂಕಿನ ರೈತರು ಸಾಂಪ್ರದಾಯಿಕ ಬೆಳೆಗಳನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ. ಈ ಬಾರಿ ಅಲ್ಲಲ್ಲಿ ಸಾಮೆ ಹಾಗೂ ನವಣೆ ಬೆಳೆದಿರುವುದು ಅದಕ್ಕೆ ಒಂದು ಉತ್ತಮ ನಿದರ್ಶನ.ಗ್ರಾಮೀಣ ಆಹಾರ ಪದ್ಧತಿಯಲ್ಲಿ ಸಾಮೆಗೆ ತನ್ನದೇ ಸ್ಥಾನವಿತ್ತು. ಸಾಮೆ ಅನ್ನಕ್ಕೆ ಹಸಿ ಮೆಣಸಿನ ಕಾಯಿ ಗೊಜ್ಜು ಅಥವಾ ಮಜ್ಜಿಗೆ ಹಾಕಿಕೊಂಡು ತಿಂದವರಿಗೆ ಗೊತ್ತು ಅದರ ರುಚಿ!ಸಾಮೆಯಲ್ಲಿ ಹಲ ತಳಿಗಳಿವೆ. ಬಿಳಿ ಸಾಮೆ, ಕರಿ ಸಾಮೆ, ಹಾಲು ಸಾಮೆ, ಅರೆಸಾಮೆ ಎಂದು ಕರೆಯಲ್ಪಡುವ ಸಾಮೆ ತಳಿಗಳು ಇನ್ನೂ ಅಲ್ಲಲ್ಲಿ ಉಳಿದುಕೊಂಡಿವೆ. ಸಾಮೆಯನ್ನು ಒಣಗಿಸಿ ಕುಟ್ಟಿ ಅನ್ನ ಮಾಡುತ್ತಾರೆ. ಸಾಮೆ ಬೇಯಿಸಿ ಬಿಸಿಲಲ್ಲಿ ಒಣಗಿಸಿ ಕುಟ್ಟಿ ಬಳಸುವುದೂ ಇತ್ತು. ಸಾಮೆ ಅಕ್ಕಿಯನ್ನು ಮುದ್ದೆ ತಯಾರಿಕೆಯಲ್ಲಿ ನುಚ್ಚಿನಂತೆ ಬಳಸಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಶಿವರಾತ್ರಿ ಹಬ್ಬಕ್ಕೆ ಸಾಮೆ ಪುರಿ, ಪುರಿಯನ್ನು ಕುಟ್ಟಿ ತಯಾರಿಸಿದ ಹಿಟ್ಟು ಬೇಕೇ ಬೇಕು.ಹಿಂದೆ ಶಿವರಾತ್ರಿ ಸಂದರ್ಭ ಸಾಮೆಯನ್ನು ಹುರಿದು ಪುರಿ ಮಾಡುವ ಬಟ್ಟಿಗಳೇ ಇರುತ್ತಿದ್ದವು. ಸಾಮೆಯನ್ನು ಹದವಾಗಿ ನೆನೆಸಿ ಹುರಿದಾಗ ಸಾಮೆ ಪುಟ್ಟ ಪುರಿಯಾಗಿ ಮಾರ್ಪಡುತ್ತಿತ್ತು. ಅದರ ಜತೆ ರಾಗಿಯನ್ನೂ ಹುರಿದು ಹುರಿಟ್ಟು ತಯಾರಿಸಿ ಬೆಲ್ಲದೊಂದಿಗೆ ಕಲೆಸಿ ತಿನ್ನುತ್ತಿದ್ದರು. ಹುರಿದಿಟ್ಟನ್ನು ನೀರಿನಲ್ಲಿ ಬೆರೆಸಿ, ಸಕ್ಕರೆ ಅಥವಾ ಬೆಲ್ಲವನ್ನು ಬೆರೆಸಿ ಪಾನಕ ತಯಾರಿಸಿ ಕುಡಿಯುತ್ತಿದ್ದರು. ಇವೆರಡೂ ಶಿವರಾತ್ರಿ ವಿಶೇಷ. ಎಡೆಗೂ ಇವನ್ನು ಬಳಸುತ್ತಿದ್ದರು.ಸಾಮೆ ಅಲ್ಪಾವಧಿ ಬೆಳೆಯಾಗಿದ್ದು ಹೆಚ್ಚು ಬೇಸಾಯ ಬಯಸುವುದಿಲ್ಲ. ಆದ್ದರಿಂದ ಹೆಚ್ಚಿನ ಸಂಖ್ಯೆಯ ರೈತರು ಅದನ್ನು ಬೆಳೆಯುತ್ತಿದ್ದರು. ಸಾಮೆ ಹುಲ್ಲು ಜಾನುವಾರುಗಳಿಗೆ ಉತ್ಕೃಷ್ಟ ಆಹಾರವಾಗಿತ್ತು. ಯಾಕೋ ಏನೋ ರೈತರು ಇದ್ದಕ್ಕಿದಂತೆ ಸಾಮೆ ಮರೆತಿದ್ದರು. ಅದರ ಬಿತ್ತನೆ ಹೋಯಿತು ಎಂಬ ಮಾತು ಕೇಳಿ ಬಂದ ಸಂದರ್ಭ ಮತ್ತೆ ಸಾಮೆ ಹೊಲ ಕಾಣಿಸಿಕೊಂಡು ಆಶ್ಚರ್ಯ ಉಂಟುಮಾಡಿವೆ.ಸಾಂಪ್ರದಾಯಿಕ ಹೊಲ ಪದ್ಧತಿಯಲ್ಲಿ ಅರೆಸಾಮೆಯನ್ನು ಸಾಲುಗಳಲ್ಲಿ ಬೆಳೆಯುವುದು ರೂಢಿ. ಹೊಲದಲ್ಲಿ ಅವರೆ, ಜೋಳ, ಹುಚ್ಚೆಳ್ಳು, ತೊಗರಿ, ಸಜ್ಜೆ ಮುಂತಾದ ದವಸ ಧಾನ್ಯಗಳ ಜತೆ ಅರೆ ಸಾಮೆಯನ್ನೂ ಬೆಳೆಲಾಗುತ್ತದೆ. ಸಾಮೆ ತೆನೆಯನ್ನು ಕೊಯ್ದು ಜಾನುವಾರುಗಳಿಂದ ತುಳಿಸಿ ಕಾಳು ಮಾಡಿಕೊಳ್ಳುತ್ತಾರೆ. ಹಚ್ಚಗೆ ಇರುವ ಅರಿಯನ್ನು ದನಕರುಗಳಿಗೆ ಮೇವಾಗಿ ಬಳಸುತ್ತಾರೆ. ಇದು ದೀರ್ಘಕಾಲಿಕ ಬೆಳೆಯಾಗಿದ್ದು, ರಾಗಿ ಬೆಳೆ ಮುಗಿದ ಬಳಿಕ ಕೊಯಿಲಿಗೆ ಬರುತ್ತದೆ.ಸಾಮೆಯಂತೆಯೇ ಬೆಳೆಯುವ ಆರ‌್ಕೆ ಸಂಪೂರ್ಣ ನೇಪಥ್ಯಕ್ಕೆ ಸರಿದಿದೆ. ಆರ‌್ಕೆಯನ್ನೂ ಸಹ ಸಾಮೆಯಂತೆಯೇ ಬಳಸಲಾಗುತ್ತಿತ್ತು. ನವಣೆ ರಾಗಿ ಹೊಲಗಳಲ್ಲಿ ಅಲ್ಲಲ್ಲಿ ಕಂಡುಬರುತ್ತದೆ. ಆದರೆ ತೀರಾ ಕಡಿಮೆ. ಇಂದಿನ ತಲೆಮಾರಿನವರಿಗೆ ನವಣೆಯ ಬಳಕೆಯೇ ಗೊತ್ತಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ನವಣೆಯನ್ನು ಕುಟ್ಟಿ ಗಿಣ್ಣು ಮಾಡಿದರೆ ಅದರ ರುಚಿಯೇ ಬೇರೆ! ಆದರೆ ಇಂದಿನ ಮಕ್ಕಳಿಗೆ ಅದರ ಪರಿಚಯವೇ ಇಲ್ಲದಿರುವುದರಿಂದ ರುಚಿ ಹೇಗೆ ತಿಳಿಯಬೇಕು. ವಿಶೇಷವೆಂದರೆ ಈಗ ಅಪರೂಪಕ್ಕೆ ಕೆಲವು ರೈತರು ನವಣೆಯನ್ನು ಪ್ರತ್ಯೇಕವಾಗಿ ಬೆಳೆಯುತ್ತಿದ್ದಾರೆ. ಬದಲಾದ ಪರಿಸ್ಥಿತಿಯಲ್ಲಿ ತೃಣಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆ ಬಂದಿದೆ.ದೇಸಿ ದವಸ ಧಾನ್ಯಗಳು ರುಚಿ ಮತ್ತು ಉತ್ಕೃಷ್ಟತೆಗೆ ಹೆಸರು. ಅಂಥ ದವಸ ಧಾನ್ಯಗಳನ್ನು ಸೇವಿಸುತ್ತಿದ್ದ ಹಳ್ಳಿಗರು ವಯಸ್ಸಾದರೂ ಗಟ್ಟಿಮುಟ್ಟಾಗಿ ಇರುತ್ತಿದ್ದರು. ಜತೆಗೆ ರೋಗ ನಿರೋಧಕ ಶಕ್ತಿಯೂ ಅವರಲ್ಲಿ ಹೆಚ್ಚಿತ್ತು. ಆದರೆ ಹೈಬ್ರೀಡ್ ಸಂಸ್ಕೃತಿ ಬಂದ ಮೇಲೆ ದೇಸಿ ದವಸ ಧಾನ್ಯ ಬೆಳೆಯುವುದನ್ನು ಬಿಡಲಾಯಿತು. ಆದರೂ ಅವುಗಳ ಅದ್ಭುತ ರುಚಿಯಿಂದ ನೆನಪು ಮಾಸಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry