ಶುಕ್ರವಾರ, ಮೇ 7, 2021
25 °C

ಹಳ್ಳಿಗಳತ್ತ ಹೊಸನೀರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾತ್ಮಕ ಚಿತ್ರಗಳ ಬೆಳವಣಿಗೆಗೆ ಭದ್ರ ನೆಲೆಗಟ್ಟು ಒದಗಿಸುವ ಮತ್ತೊಂದು ಪ್ರಯತ್ನಕ್ಕೆ ಚಾಲನೆ ದೊರೆತಿದೆ. ನಿರ್ದೇಶಕ ಬಿ. ಸುರೇಶ್ ಅವರ `ಮೀಡಿಯಾ ಹೌಸ್- ಸ್ಟುಡಿಯೊ ಟೂರಿಂಗ್ ಟಾಕೀಸ್' ಸಂಸ್ಥೆ ನಾಲ್ಕು ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವ ಕಾರ್ಯ ಯೋಜನೆಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ಪಸರಿಸಲು ಮುಂದಾಗಿದೆ.`ಸದಭಿರುಚಿ ಚಿತ್ರಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ದೃಷ್ಟಿಯಿಂದ `ಮೀಡಿಯಾ ಹೌಸ್- ಸ್ಟುಡಿಯೊ ಟೂರಿಂಗ್ ಟಾಕೀಸ್' ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಳೆದ ವರ್ಷ ಕಲಾತ್ಮಕ ಚಿತ್ರಯಾನ ಹಮ್ಮಿಕೊಂಡಿತ್ತು.  ನಾಲ್ಕು ಜಿಲ್ಲೆಗಳಿಗೆ ಸೀಮಿತವಾದ ಈ ಪ್ರದರ್ಶನವನ್ನು ಇದೀಗ ಬೆಂಗಳೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ವಿಸ್ತರಿಸಲು, ನಂತರದ ಹಂತಗಳಲ್ಲಿ ರಾಜ್ಯಾದ್ಯಂತ `ಚಿತ್ರ ತಿರುಗಾಟ' ನಡೆಸಲು ಸುರೇಶ್ ಬಳಗ ಉದ್ದೇಶಿಸಿದೆ.`ಸ್ವಯಂ ಸೇವಕರು ಚಿತ್ರ ಪ್ರದರ್ಶನಗೊಳ್ಳುವ ಆಯ್ದ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಚಿತ್ರವನ್ನು ಯಾವ ಕಾರಣಕ್ಕೆ ವೀಕ್ಷಿಸಬೇಕು ಎನ್ನುವ ಅಂಶವನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡಿಕೊಡುವರು. ಚಿತ್ರ ಪ್ರದರ್ಶನದ ನಂತರ ಸಂವಾದ ಏರ್ಪಡಿಸಿ ಚಿತ್ರದ ಬಗ್ಗೆ ಪ್ರೇಕ್ಷಕನ ಮನದಲ್ಲಿ ಮೂಡಿರುವ ಪ್ರಶ್ನೆಗಳಿಗೆ ಮತ್ತು ಗೊಂದಲಗಳಿಗೆ ಉತ್ತರಿಸಲಾಗುತ್ತದೆ. ಪ್ರದರ್ಶನಕ್ಕೆ ನಿಗದಿತ ಮೊತ್ತದ ಟಿಕೆಟ್ ಇರುತ್ತದೆ. ಗ್ರಾಮಗಳ ರಂಗಮಂದಿರ, ಶಾಲಾ ಕಾಲೇಜುಗಳನ್ನು ಚಿತ್ರಪ್ರದರ್ಶನಕ್ಕೆ ಬಳಸಿಕೊಳ್ಳಲಾಗುವುದು. ಗಳಿಕೆಯಲ್ಲಿ ಖರ್ಚು-ವೆಚ್ಚ ಕಳೆದು ಉಳಿದ ಹಣವನ್ನು ನಿರ್ಮಾಪಕರಿಗೆ ನೀಡಲಾಗುವುದು' ಎಂದು ಸುರೇಶ್ ಚಿತ್ರಯಾನದ ರೂಪುರೇಷೆ ವಿವರಿಸುತ್ತಾರೆ.ಮೊದಲ ಹಂತದ ಪಯಣದಲ್ಲಿ ಪ್ರದರ್ಶನಗೊಂಡ `ಪುಟ್ಟಕ್ಕನ ಹೈವೇ', `ಗುಬ್ಬಚ್ಚಿಗಳು', ಪ್ರಕಾಶ್ ರೈ ಅವರ ತಮಿಳು ಚಿತ್ರ `ದೋನಿ',  ಗಿರೀಶ್ ಕಾಸರವಳ್ಳಿ ಅವರ `ಗುಲಾಬಿ ಟಾಕೀಸ್', `ನಾಯಿ ನೆರಳು' ಮತ್ತು ಪಿ. ಶೇಷಾದ್ರಿ ಅವರ `ಬೇರು', `ಬೆಟ್ಟದ ಜೀವ' ಚಿತ್ರಗಳು ಎರಡನೇ ಹಂತದಲ್ಲೂ ಪ್ರದರ್ಶನಗೊಳ್ಳಲಿವೆ.`ಕಲಾತ್ಮಕ ಚಿತ್ರಗಳು ಚಳವಳಿಯ ಪ್ರತಿಬಿಂಬ. ಈ ಚಿತ್ರಗಳಿಗೆ ಚಳವಳಿಯನ್ನು ರೂಪಿಸುವ ಶಕ್ತಿ ಇದೆ. ಇಂತಹ ಚಿತ್ರಯಾನದ ಬೆಳವಣಿಗೆಗಳಿಗೆ ಸರ್ಕಾರದ ಬೆಂಬಲಕ್ಕಿಂತ ಜನರ ಸ್ವೀಕಾರ ಮುಖ್ಯ. ಜನರಿಂದಲೇ ಈ ಬಂಡಿಯನ್ನು ಎಳೆಸಬೇಕು' ಎನ್ನುವುದು ಸುರೇಶ್ ಅನಿಸಿಕೆ.ಹಿರಿಯ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರಿಗೆ ಕಲಾತ್ಮಕ ಚಿತ್ರಗಳನ್ನು ಹಳ್ಳಿಗಳಲ್ಲಿರುವ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನದ ಬಗ್ಗೆ ನಿರೀಕ್ಷೆಗಳಿವೆ. ಈ ಪ್ರಯತ್ನದ ಬಗ್ಗೆ ಮಾತನಾಡಿದ ಅವರು- `ಚಿತ್ರ ವಿತರಕರು, ನಿರ್ಮಾಪಕರು ಮತ್ತು ನಿರ್ದೇಶಕರ ನಡುವೆ ಸಾವಯವ ಸಂಬಂಧ ಕಷ್ಟವಾಗುತ್ತಿದೆ. ಕನ್ನಡದ ಕಲಾತ್ಮಕ ಚಿತ್ರಗಳು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡರೂ ನಮ್ಮ ಹಳ್ಳಿಯ ಜನರನ್ನು ತಲುಪುತ್ತಿಲ್ಲ. ಹಳ್ಳಿಗಳಿಗೆ ಕಲಾತ್ಮಕ ಚಿತ್ರಗಳನ್ನು ತಲುಪಿಸುವುದರಿಂದ ನಿರ್ಮಾಪಕ, ನಿರ್ದೇಶಕ ಮತ್ತು ವೀಕ್ಷಕನ ನಡುವೆ ಮುಖಾಮುಖಿ ಸಾಧ್ಯವಾಗುತ್ತದೆ. ಸದಭಿರುಚಿಯ ಚಿತ್ರಗಳು ಸಾಗುವುದು ಮತ್ತು ಮಾಗುವುದು ಜನರನ್ನು ತಲುಪಿದಾಗಲೇ' ಎಂದರು.

ಕಲಾತ್ಮಕ ಸಿನಿಮಾಗಳನ್ನು ಕೇವಲ ಪ್ರಶಸ್ತಿಗಾಗಿಯೇ ಮಾಡುತ್ತಾರೆ ಎನ್ನುವ ಅಪನಂಬಿಕೆಯನ್ನು ಈ ಅಭಿಯಾನದ ಮೂಲಕ ಹೋಗಲಾಡಿಸಬಹುದು ಎನ್ನುವ ಆಶಯ ಅವರದು.ಗುಲ್ಬರ್ಗದಲ್ಲಿ ತಾವು ರೂಪಿಸಿದ `ಗುಲ್ಬರ್ಗ ಫಿಲ್ಮಂ ಕ್ಲಬ್'ನ ಏಳುಬೀಳುಗಳನ್ನು ನೆನಪಿಸಿಕೊಂಡ ನಿರ್ದೇಶಕ ಪಿ. ಶೇಷಾದ್ರಿ, `ಚಿತ್ರಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ತಿರುಗಾಟಗಳ ಮೂಲಕ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಬಹುದು' ಎಂದರು.

ಕಲಾತ್ಮಕ ಚಿತ್ರಗಳ ಹೊಸ ಪಯಣದ ಬಗ್ಗೆ ಮಾಹಿತಿ ನೀಡಲು ಕರೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಅಭಯಸಿಂಹ, ಸ್ವಯಂ ಸೇವಕರಾದ ವಿಜಯಕುಮಾರ್, ಉಪೇಂದ್ರ ಮತ್ತಿತರರು ಹಾಜರಿದ್ದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.