ಶನಿವಾರ, ಮೇ 8, 2021
25 °C

ಹಳ್ಳಿಗಳಲ್ಲಿ ರಾಜಕಾರಣಿಗಳೂ ಇದ್ದಾರೆ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

1983ರಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪಂಚಾಯತ್‌ ರಾಜ್‌ ಕಾನೂನನ್ನು ಜಾರಿಗೊಳಿಸಲು ಮುಂದಾದಾಗ ಅವರ ವಿರೋಧಿಗಳು ಇದು ಜನತಾ ಪಕ್ಷವನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸುವ ಮಸೂದೆ ಎಂದು ಟೀಕಿಸಿದ್ದರು. ರಾಮಕೃಷ್ಣ ಹೆಗಡೆ ಮತ್ತು ಅಬ್ದುಲ್‌ ನಜೀರ್‌ಸಾಬ್‌ ಅವರ ಮೂಲ ಉದ್ದೇಶ ಏನೇ ಆಗಿರಲಿ ವಿರೋಧಿಗಳ ಟೀಕೆಯಲ್ಲಿ ಸತ್ಯಾಂಶವೂ ಇತ್ತು. ಅದನ್ನು ಒಪ್ಪಲೇ ಬೇಕು.ಪಂಚಾಯತ್‌ರಾಜ್‌ ವ್ಯವಸ್ಥೆ ಜಾರಿಗೆ ಬಂದ ಇಷ್ಟು ವರ್ಷಗಳ ನಂತರ ಒಮ್ಮೆ ಹಿಂತಿರುಗಿ ನೋಡಿದರೆ ಅಂದು ಹೆಗಡೆ ವಿರೋಧಿಗಳು ಹೇಳಿದ ಮಾತು ಸತ್ಯವಾಗಿದೆ. ಅಲ್ಲದೆ ವಿರೋಧ ಪಕ್ಷಗಳಿಗೂ ಅವು ರಾಜಕೀಯ ರಂಗದಲ್ಲಿ ಮೆಟ್ಟಿಲುಗಳಾಗಿವೆ.ಪಂಚಾಯತ್‌ ವ್ಯವಸ್ಥೆ ಯಾವುದೇ ರಾಜಕೀಯ ಪಕ್ಷಕ್ಕೆ ಗಟ್ಟಿ ನೆಲೆಯನ್ನು ಒದಗಿಸುವ ತಾಣವೂ ಹೌದು. ಗ್ರಾಮ ಪಂಚಾಯ್ತಿಗಳಲ್ಲಿ ಅಧಿಕೃತವಾಗಿ ಪಕ್ಷಗಳ ಆಧಾರದಲ್ಲಿ ಚುನಾವಣೆ ನಡೆಯುವುದಿಲ್ಲ. ಆದರೆ ಅನಧಿಕೃತವಾಗಿ ಅಲ್ಲಿಯ ಸದಸ್ಯರೂ ಯಾವುದಾರೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡವರೇ ಆಗಿರುತ್ತಾರೆ. ರಾಜ್ಯದ 5627 ಗ್ರಾಮ ಪಂಚಾಯ್ತಿಗಳಲ್ಲಿ 91,402 ಸದಸ್ಯರಿದ್ದಾರೆ. ಅಂದರೆ ಅಷ್ಟೊಂದು ರಾಜಕಾರಣಿಗಳು ತಯಾರಾಗಿದ್ದಾರೆ ಎಂದೇ ಅರ್ಥ.ಜಿಲ್ಲಾ ಪಂಚಾಯ್ತಿಗಳಲ್ಲಿ 1013 ಹಾಗೂ ತಾಲ್ಲೂಕು ಪಂಚಾಯ್ತಿಗಳಲ್ಲಿ 3667 ಮಂದಿ ಸದಸ್ಯರಿದ್ದಾರೆ. ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿಗಳಿಗೆ ರಾಜಕೀಯ ಪಕ್ಷಗಳ ಚಿಹ್ನೆಯ ಆಧಾರದಲ್ಲಿಯೇ ಚುನಾವಣೆ ನಡೆಯುವುದರಿಂದ ಇಲ್ಲಿ ಪಕ್ಷಗಳ ಬಲಾಬಲ ಇರುತ್ತದೆ.ಗುಂಡೂರಾವ್‌ ಸರ್ಕಾರದಿಂದ ಬೇಸತ್ತ ಜನ 1983ರಲ್ಲಿ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದರು. ಆದರೆ ಆಗ ಜನತಾ ಪಕ್ಷಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ನೆಲೆ ಇರಲಿಲ್ಲ. ಜನತಾ ಸರ್ಕಾರ ಜಿಲ್ಲಾ ಪರಿಷತ್‌ ಮತ್ತು ಮಂಡಲ ಪಂಚಾಯ್ತಿ ವ್ಯವಸ್ಥೆಯನ್ನು ಜಾರಿಗೆ ತಂದ ನಂತರ ರಾಜ್ಯದಲ್ಲಿ ಜನತಾ ಪಕ್ಷ ಬಲವಾಯಿತು. ಮುಂದೆ 1985ರಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ಇದರ ಫಲವನ್ನು ಜನತಾ ಪಕ್ಷ ಅನುಭವಿಸಿತು. 1983ರಲ್ಲಿ ಇದ್ದ ಸಮ್ಮಿಶ್ರ ಸರ್ಕಾರ ಹೋಗಿ 1985ರಲ್ಲಿ ಏಕ ಪಕ್ಷದ ಸರ್ಕಾರ ಬಂತು. ಇದು ಜನತಾ ಪಕ್ಷ ಗ್ರಾಮೀಣ ಪ್ರದೇಶಗಳಲ್ಲಿ ನೆಲೆ ನಿಂತಿದ್ದರ ಫಲ.ಜನತಾ ಪಕ್ಷ ಜಿಲ್ಲಾ ಪರಿಷತ್‌ಗಳನ್ನು ಜಿಲ್ಲಾ ಸರ್ಕಾರ ಎಂದು ಕರೆಯಿತು. ಜಿಲ್ಲಾ ಪರಿಷತ್‌ ಅಧ್ಯಕ್ಷರಿಗೆ ಸಚಿವ ಸ್ಥಾನಮಾನವನ್ನು ನೀಡಿತು. ಜಿಲ್ಲಾ ಪರಿಷತ್‌ ಕಾರ್ಯದರ್ಶಿಯನ್ನು ಮುಖ್ಯ ಕಾರ್ಯದರ್ಶಿ ಎಂದು ಕರೆಯಿತು. ಮಂಡಲ ಪ್ರಧಾನರಿಗೂ ಸಾಕಷ್ಟು ಅಧಿಕಾರವನ್ನು ನೀಡಿತ್ತು. ಇದರಿಂದ ಸಹಜವಾಗಿಯೇ ಜನತಾ ಪಕ್ಷ ಗ್ರಾಮೀಣ ಪ್ರದೇಶಗಳಲ್ಲಿ ಬೇರು ಬಿಟ್ಟಿತು.ಯಾವುದೇ ರಾಜಕೀಯ ಪಕ್ಷವನ್ನು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಗೊಳಿಸುವ ಶಕ್ತಿ ಪಂಚಾಯತ್ ಗಳಿಗೆ ಇದೆ ಎನ್ನುವುದು ನಂತರದಲ್ಲಿ ಬಿಜೆಪಿ ವಿಷಯದಲ್ಲಿಯೂ ಸಾಬೀತಾಯಿತು. ಬಿಜೆಪಿಯನ್ನು ಮೇಲ್ವರ್ಗದ, ಪಟ್ಟಣ ಪ್ರದೇಶದ ಪಕ್ಷ ಎಂದೇ ಮೊದಲು ಪರಿಗಣಿಸಲಾಗಿತ್ತು. ಈ ಪಕ್ಷ ಕೂಡ ತಾಲ್ಲೂಕು, ಜಿಲ್ಲಾ ಪಂಚಾಯ್ತಿಗಳಲ್ಲಿ ತನ್ನ ಬಲವನ್ನು ತೋರಿಸಲು ಆರಂಭಿಸಿದ ನಂತರವೇ ರಾಜ್ಯದಲ್ಲಿ ಅದು ಗಟ್ಟಿಯಾಯಿತು.ಜಿಲ್ಲಾ ಪಂಚಾಯ್ತಿಯಲ್ಲಿ 1013 ಸದಸ್ಯರಿದ್ದಾರೆ ಎಂದರೆ ಅಷ್ಟು ಮಂದಿಗೆ ಅಧಿಕಾರವನ್ನು ನೀಡುವ ಅವಕಾಶ ರಾಜಕೀಯ ಪಕ್ಷಗಳಿಗೆ ದೊರೆಯುತ್ತದೆ. ಅದೇ ರೀತಿ ತಾಲ್ಲೂಕು ಪಂಚಾಯ್ತಿಗಳಲ್ಲಿ 3667 ಮಂದಿಗೆ ಅಧಿಕಾರವನ್ನು ನೀಡಬಹುದು. ಇವರಲ್ಲಿ ಎಲ್ಲರೂ ಒಂದೇ ಪಕ್ಷದಿಂದ ಗೆಲ್ಲದೇ ಇರಬಹುದು. ಆದರೆ ಪಕ್ಷಗಳಿಂದ ಇಷ್ಟು ಮಂದಿಗೆ ಟಿಕೆಟ್‌ ನೀಡಲೇ ಬೇಕಾಗುತ್ತದೆ. ಟಿಕೆಟ್‌ ನೀಡಿದೆ ಎಂದರೆ ಆ ಪಕ್ಷ ಅವರನ್ನು ಗುರುತಿಸಿದೆ ಎಂದೇ ಅರ್ಥ. ಚುನಾವಣೆಯಲ್ಲಿ ಅವರು ಗೆಲ್ಲದೇ ಹೋದರು ಅಷ್ಟು ಮಂದಿ ಕಟ್ಟಾ ಕಾರ್ಯಕರ್ತರು ಒಂದು ಪಕ್ಷಕ್ಕೆ ದೊರೆಯುತ್ತಾರೆ. ಒಬ್ಬ ವ್ಯಕ್ತಿ ಜಿಲ್ಲಾ ಅಥವಾ ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ನಿಂತಿದ್ದಾನೆ ಎಂದರೆ ಅವನೊಬ್ಬನೇ ಇರುವುದಿಲ್ಲ. ಅವನ ಜೊತೆಗೆ ಅವನ ಹಿಂಬಾಲಕರೂ ಇರುತ್ತಾರೆ. ಅವರೂ ಆಯಾ ರಾಜಕೀಯ ಪಕ್ಷಗಳ ಬಲವೇ ಆಗಿರುತ್ತಾರೆ.ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ಬಂದ ನಂತರ ಜಿಲ್ಲಾ ಪರಿಷತ್‌ ಮತ್ತು ಮಂಡಲ ಪಂಚಾಯ್ತಿ ಹೋದವು. ಹೊಸ ವ್ಯವಸ್ಥೆ ಜಾರಿಗೆ ಬಂತು. ಆಗ ಗ್ರಾಮೀಣ ಪ್ರದೇಶಗಳ ಸ್ಥಿತಿ ಇನ್ನಷ್ಟು ಬದಲಾಯಿತು.ಎರಡು ಹಂತದ ವ್ಯವಸ್ಥೆ ಹೋಗಿ ಮೂರು ಹಂತದ ವ್ಯವಸ್ಥೆ ಜಾರಿಗೆ ಬಂತು. ಎರಡು ಹಂತದ ವ್ಯವಸ್ಥೆ ಇದ್ದಾಗ ಪರಿಶಿಷ್ಟರಿಗೆ ಮಾತ್ರ ಮೀಸಲಾತಿ ಇತ್ತು. ಮೂರು ಹಂತದ ವ್ಯವಸ್ಥೆ ಬಂದಾಗ ಹಿಂದುಳಿದ ವರ್ಗ, ಮಹಿಳೆಯರಿಗೂ ಮೀಸಲಾತಿ ಕಲ್ಪಿಸಲಾಯಿತು. ಇದರಿಂದ ರಾಜಕೀಯ ಅಧಿಕಾರವನ್ನು ಕನಸು ಮನಸಿನಲ್ಲಿಯೂ ಎಣಿಸದೇ ಇದ್ದ ಜನಾಂಗಗಳಿಗೂ ಅಧಿಕಾರ ಸಿಕ್ಕಿತು. ಇಂತಹ ಜನಾಂಗಗಳ ವ್ಯಕ್ತಿಗಳನ್ನು ಹುಡುಕುವುದು ರಾಜಕೀಯ ಪಕ್ಷಗಳಿಗೆ ಅನಿವಾರ್ಯವಾಯಿತು. ಯಾಕೆಂದರೆ ಕೆಲವು ಸ್ಥಾನಗಳನ್ನು ನಿರ್ದಿಷ್ಟ ಜನಾಂಗಗಳಿಗೇ ಮೀಸಲಿಡಲಾಗಿತ್ತು. ಇದರಿಂದಾಗಿ ಆಯಾ ಜನಾಂಗಗಳಲ್ಲಿ ಪಕ್ಷಗಳು ಗುರುತಿಸಿಕೊಳ್ಳುವುದಕ್ಕೂ ಅವಕಾಶವಾದಂತೆ ಆಯಿತು.ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿದ್ದರಿಂದ ರಾಜ್ಯದಲ್ಲಿ ಸಾಮಾಜಿಕ ಕ್ರಾಂತಿಯೇ ಆಯಿತು. ಯಾವ ವ್ಯಕ್ತಿ ಯಜಮಾನನ ಹೊಲದಲ್ಲಿ ದುಡಿಯುತ್ತಿದ್ದನೋ ಅವನೇ ಪಂಚಾಯ್ತಿ ಅಧ್ಯಕ್ಷನಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಯಜಮಾನನೇ ತನ್ನ ಮನೆಯ ಆಳಿನ ಮುಂದೆ ಅರ್ಜಿ ಹಿಡಿದು ನಿಲ್ಲಬೇಕಾದ ಪರಿಸ್ಥಿತಿ ಬಂತು. ಊರ ಮುಂದಿರುವ ಬಾವಿಯಲ್ಲಿ ನೀರನ್ನು ತೆಗೆದುಕೊಳ್ಳುವ ಅಧಿಕಾರವಿಲ್ಲದೆ ಮೇಲ್ವರ್ಗದವರು ನೀರು ಹಾಕುತ್ತಾರೆ ಎಂದು ಕಾದು ಬಾವಿಯ ಸುತ್ತ ಕುಳಿತುಕೊಳ್ಳುತ್ತಿದ್ದ ಅಸ್ಪೃಶ್ಯರಿಗೂ ಅಧಿಕಾರ ಬಂತು. ಅವರ ಕಾಲೋನಿಗಳಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳು ಬಂದವು. ಇದು ರಾಜ್ಯದಲ್ಲಿ ಸಾಮಾಜಿಕ ಬದಲಾವಣೆಯನ್ನು ಸಣ್ಣ ಮಟ್ಟದಲ್ಲಿಯಾದರೂ ಉಂಟು ಮಾಡಿತು. ಇಷ್ಟೆಲ್ಲಾ ಆದ ಮೇಲೆ ರಾಜಕೀಯ ಪಕ್ಷಗಳು ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡುವುದು ಅನಿವಾರ್ಯವಾಯಿತು.‘ನಮ್ಮ ಹಳ್ಳಿಗಳಲ್ಲಿ ಲೇಖಕರು, ಕಲಾವಿದರು ಇದ್ದಾರೆ. ಶಿಲ್ಪಿಗಳು, ವೈದ್ಯರು, ಉಪಾಧ್ಯಾಯರು, ಬಡಗಿ, ನೇಕಾರ ಮುಂತಾದ ಅನೇಕ ಪ್ರತಿಭಾವಂತರು ಇದ್ದಾರೆ. ಅವರೆಲ್ಲಾ ನಮ್ಮ ಹಳ್ಳಿಗಳ ಏಳಿಗೆಗೆ ದುಡಿಯುವಂತೆ ಆಗಬೇಕು. ನಮ್ಮ ಹಳ್ಳಿಯಲ್ಲಿ ಎಲ್ಲವೂ ಇದ್ದು ಅದು ಹಳ್ಳಿಯ ಏಳಿಗೆಗೆ ಬಳಕೆಯಾಗಬೇಕು’ ಎಂದು ಮಹಾತ್ಮಾಗಾಂಧಿ ಹೇಳಿದ್ದರು. ನಿಜ, ನಮ್ಮ ಹಳ್ಳಿಯಲ್ಲಿ ಶಿಲ್ಪಿಗಳು, ವೈದ್ಯರು, ಉಪಾಧ್ಯಾಯರು, ಕಲಾವಿದರು ಎಲ್ಲರೂ ಇದ್ದಾರೆ. ಈಗ ನಮ್ಮ ಹಳ್ಳಿಗಳಲ್ಲಿ ರಾಜಕಾರಣಿಗಳೂ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.