ಶುಕ್ರವಾರ, ಮಾರ್ಚ್ 5, 2021
27 °C

ಹಳ್ಳಿಯಂತಿರುವ ವಿದ್ಯಾನಗರ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳ್ಳಿಯಂತಿರುವ ವಿದ್ಯಾನಗರ..

ಹಾಸನ: ಇದು ಹಾಸನದ ವಿದ್ಯಾನಗರ ಬಡಾವಣೆಯ ಬವಣೆ. ನಗರದ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದು ಎನಿಸಿರುವ ವಿದ್ಯಾನಗರದಲ್ಲಿ ಭೂಮಿಯ ಬೆಲೆ ಗಗನಕ್ಕೆ ಏರಿ ವರ್ಷಗಳು ಕಳೆದಿವೆ. ಜನಸಂಖ್ಯೆಯೂ ಹೆಚ್ಚುತ್ತಲೇ ಇದೆ. ಪ್ರತಿ ಓಣಿಯಲ್ಲೂ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಲೇ ಇದೆ. ಆದರೆ ಸೌಲಭ್ಯಗಳನ್ನು ಮಾತ್ರ ಕೇಳುವಂತಿಲ್ಲ.ಮೊದಲೇ ಇದ್ದ ಹತ್ತು ಹಲವು ಸಮಸ್ಯೆಗಳ ಜತೆಗೆ ಮಳೆಯ ಅಭಾವದಿಂದಾಗಿ ಈ ಭಾಗದ ಜನರು ಈಗ ನೀರಿನ ಸಮಸ್ಯೆಯನ್ನೂ ಎದುರಿಸುವಂತಾಗಿದೆ.ಹಾಸನದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದು ಎನಿಸಿಕೊಂಡಿದ್ದರೂ ಈ ಭಾಗ ನಗರಸಭೆಯ ವ್ಯಾಪ್ತಿಗೆ ಒಳಪಟ್ಟಿಲ್ಲ. ರಾಜ್ಯದ ಅತಿ ದೊಡ್ಡ ಗ್ರಾಮಪಂಚಾ ಯಿತಿಗಳಲ್ಲಿ ಒಂದು ಎಂದು ಎನಿಸಿಕೊಂಡಿರುವ ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ.ಹೀಗೆ ಪಟ್ಟಣದ ಒಳಗಿದ್ದುಕೊಂಡೇ ಅದರ ವ್ಯಾಪ್ತಿಗೆ ಬಾರದಿರುವಂಥ ಅಪರೂಪದ ಸಂಕಷ್ಟವನ್ನು ಈ ವಿದ್ಯಾನಗರ ಎದುರಿಸುತ್ತಿದೆ. (ನಗರಸಭೆಯ ವ್ಯಾಪ್ತಿಗೆ ಬಾರದಿರುವುದರಿಂದ ಇಲ್ಲಿಯ ನಿವಾಸಿಗಳಿಗೆ ಕೆಲವು ಅನುಕೂಲವಾಗಿದ್ದೂ ಇದೆ). ನಮ್ಮ ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಸ್ಥಿತಿ ಹೇಗಿದೆ ಎಂಬುದನ್ನು ಯಾರಿಗೂ ಹೇಳಬೇಕಾಗಿಲ್ಲ.ಗ್ರಾಮಪಂಚಾಯಿತಿಗಳಿಗೆ ಸರ್ಕಾರ ನೀಡುವ ಅನುದಾನ ಬೀದಿ ದೀಪಗಳು ಹಾಗೂ ನೀರು ಸರಬರಾಜಿನ ಮೋಟರ್‌ಗೆ ಉಪಯೋಗಿಸುವ ವಿದ್ಯುತ್ ಬಿಲ್ ಕಟ್ಟಲೂ ಸಾಕಾಗುತ್ತಿಲ್ಲ ಎಂದು ಎಲ್ಲ ಗ್ರಾಮಪಂಚಾಯಿತಿಗಳು ಗೋಳಾಡುತ್ತಿವೆ.

 

ಇನ್ನು ಅಭಿವೃದ್ಧಿಯ ಮಾತು ಹೇಗೆ ಬರಬೇಕು? ಸಾಲದೆಂಬಂತೆ ಸತ್ಯಮಂಗಲಕ್ಕೆ ಅತಿ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಬೇರೆ ಇದೆ. ದೊಡ್ಡ ಗ್ರಾಮ ಪಂಚಾಯಿತಿ ಎಂದರೆ ಸಮಸ್ಯೆಯೂ ದೊಡ್ಡದು ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.ಬಡಾವಣೆ ನಿರ್ಮಾಣವಾಗಿ ಹಲವು ವರ್ಷಗಳು ಕಳೆದಿದ್ದರೂ, ಇನ್ನೂ ಡಾಂಬರು ಕಾಣದಿರುವ ರಸ್ತೆಗಳು ಎಷ್ಟೋ ಇವೆ. ಕೆಲವು ಭಾಗಗಳಿಗೆ ಹೋದರೆ ಈಗಲೂ ಪಕ್ಕಾ ಹಳ್ಳಿಯ ವಾತಾವರಣವಿದೆ. ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ನೂರಾರು ಮನೆಗಳಿದ್ದರೂ ಇನ್ನೂ ಒಳಚರಂಡಿ ಸಂಪರ್ಕ ಇಲ್ಲ. ಹೇಮಾವತಿ ಜಲಾಶಯದಿಂದ ಶುದ್ಧವಾದ ಕುಡಿಯುವ ನೀರು ಪಡೆಯಬೇಕೆಂಬ ಕನಸು ನನಸಾಗಲು ಅದೆಷ್ಟು ವರ್ಷ ಕಾಯಬೇಕೋ.ಯಾವುದೋ ಕಾಲದಲ್ಲಿ ಡಾಂಬರು ಕಂಡಿದ್ದ ಅನೇಕ ರಸ್ತೆಗಳು ಈಗ ಹದಗೆಡುತ್ತಿವೆ. ವಾಹನಗಳ ಓಡಾಟ ಹೆಚ್ಚಾಗಿರುವುದು ಒಂದು ಕಾರಣವಾದರೆ, ಅಕ್ಕಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ನೀರು- ವಿದ್ಯುತ್ ಸಂಪರ್ಕ ಒದಗಿಸಲು ರಸ್ತೆಯನ್ನು ಅಗೆಯಲಾಗುತ್ತಿದೆ.

 

ಹೀಗೆ ಅಗೆದ ರಸ್ತೆಗಳನ್ನು ಸರಿಯಾಗಿ ಮುಚ್ಚಲೂ ಆಗದಂಥ ಸ್ಥಿತಿ ಇದೆ. ನೂರು ಮೀಟರ್ ಉದ್ದದ ರಸ್ತೆಯಲ್ಲಿ ಕನಿಷ್ಠವೆಂದರೂ ಐದಾರು ಇಂಥ ಗುಂಡಿಗಳು ಕಾಣಿಸುತ್ತಿವೆ. ಒಂದು ಒಳ್ಳೆಯ ಮಳೆಯಾದರೆ ಎಲ್ಲ ರಸ್ತೆಗಳೂ ಕಂಬಳದ ಗದ್ದೆಗಳಾಗುತ್ತವೆ.ನೀರಿನ ಬವಣೆ ತೀವ್ರ: ಹೇಮಾವತಿ ಜಲಾಶಯದಿಂದ ಅಲ್ಲದಿದ್ದರೂ ಕಳೆದ ಜನವರಿ ತಿಂಗಳ ಅಂತ್ಯದವರೆಗೂ ಈ ಭಾಗದಲ್ಲಿ ಬೇಕಾದಷ್ಟು ನೀಡು ಬರುತ್ತಿತ್ತು. ಅನೇಕ ಸಂಪ್‌ಗಳು ಹಗಲು ರಾತ್ರಿ ಎನ್ನದೆ ಉಕ್ಕಿ ಹರಿಯುತ್ತಿದ್ದವು. ಆದರೆ ಈಗ ಏಕಾಏಕಿ ನೀರಿನ ಹಾಹಾಕಾರ ಉಂಟಾಗಿದೆ. ಇದರ ಜತೆಯಲ್ಲೇ ಗ್ರಾ.ಪಂ. ಗಮನಕ್ಕೆ ಬಾರದೆ, ಕದ್ದು ಮುಚ್ಚಿ ಏನೇನಾಗಿದೆ ಎಂಬ ಅಂಶವೂ ಬೆಳಕಿಗೆ ಬರುತ್ತಿದೆ.ಮಳೆಯ ಅಭಾವದಿಂದ ಅನೇಕ ಕೊಳವೆಬಾವಿಗಳು ಒಣಗಿದ್ದರಿಂದ ಎಲ್ಲ ಬಡಾವಣೆಗಳಿಗೆ ನೀರು ಒದಗಿಸಲು ಸಾಧ್ಯವಾಗದೆ ಗ್ರಾಮ ಪಂಚಾಯಿತಿ ಒದ್ದಾಡುತ್ತಿದೆ. ಇದರ ಮಧ್ಯದಲ್ಲೇ ಈ ಭಾಗದಲ್ಲಿ ವಾಲ್ವ್‌ಮೆನ್ ಆಗಿ ವೃತ್ತಿ ನಿರ್ವಹಿಸುತ್ತಿದ್ದ ವ್ಯಕ್ತಿ ಅಸ್ವಸ್ಥಗೊಂಡು ರಜೆಯ ಮೇಲೆ ಹೋಗಬೇಕಾಯಿತು. ಹೊಸದಾಗಿ ಬಂದವರಿಗೆ ಯಾವ ವಾಲ್ವ್ ಎಲ್ಲಿದೆ ಎಂಬುದು ಗೊತ್ತಿಲ್ಲ, ನಕಾಶೆ ಹಿಡಿದು ಹೊರಟರೆ ವಾಲ್ವ್‌ಗಳಿಗೂ ನಕಾಶೆಗೂ ತಾಳೆಯಾಗುತ್ತಿಲ್ಲ.

 

ಜನರು ತಾವಾಗಿಯೇ ಬೇಕು ಬೇಕಾದಲ್ಲಿ ವಾಲ್ವ್ ಹಾಕಿಸಿಕೊಂಡಿದ್ದಾರೆ. ಯಾವ ವಾಲ್ವ್ ಬಿಟ್ಟರೆ ಯಾವ ಕಡೆಗೆ ನೀರು ಬರುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಪರಿಣಾಮ ಕೆಲವು ಭಾಗದವರಿಗೆ ಸರಾಗವಾಗಿ ನೀರು ಬಂತು, ಇನ್ನೂ ಕೆಲವು ಭಾಗಗಳಲ್ಲಿ ವಾರಗಟ್ಟಲೆ ನೀರು ಬರುತ್ತಿಲ್ಲ. ಸದ್ಯದಲ್ಲೇ ಮಳೆ ಬಾರದಿದ್ದಲ್ಲಿ ಈ ಭಾಗದಲ್ಲಿ ನೀರಿಗಾಗಿ ಹೊಡೆದಾಟ ನಡೆದರೂ ಅಚ್ಚರಿ ಇಲ್ಲ.ಜನ ವಸತಿಯೇ ಇಲ್ಲದ ಅನೇಕ ಪ್ರದೇಶಗಳನ್ನು ನಗರಸಭೆ ತನ್ನೊಳಗೆ ಸೇರಿಸಿಕೊಂಡಿದೆ. ಆದರೆ ಜನನಿಬಿಡವಾದ ಪ್ರತಿಷ್ಠಿತರೇ ಇರುವ ವಿದ್ಯಾನಗರ ನಗರಸಭೆಗೆ ಯಾಕೆ ಬೇಡವಾಗಿದೆ. ಇಲ್ಲಿಯ ಜನರು ನಗರದೊಳಗೆ ಇದ್ದುಕೊಂಡೇ ಯಾಕೆ ದೂರ ಉಳಿಯಬೇಕಾಗಿ ಬಂದಿದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.