ಗುರುವಾರ , ನವೆಂಬರ್ 21, 2019
24 °C

ಹಳ್ಳಿಯಲ್ಲೂ ಮಹಿಳಾ ಅಂಚೆ ಕಚೇರಿಗೆ ಚಿಂತನೆ

Published:
Updated:

ನವದೆಹಲಿ(ಪಿಟಿಐ): ಗ್ರಾಮೀಣ ಭಾಗದಲ್ಲಿ ಪೂರ್ಣ ಮಹಿಳಾ ಸಿಬ್ಬಂದಿಯೇ ಇರುವಂತಹ ಅಂಚೆ ಕಚೇರಿಗಳನ್ನು ತೆರೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.ಅಂಚೆ ಕಚೇರಿಯನ್ನು ಸುಸೂತ್ರವಾಗಿ ನಡೆಸಲು ಅಗತ್ಯವಿರುವಷ್ಟು ಮಹಿಳಾ ಸಿಬ್ಬಂದಿ ಲಭ್ಯವಿರುವ ಗ್ರಾಮಗಳಲ್ಲಿ   `ವನಿತಾ ಅಂಚೆ ಕಚೇರಿ' ಆರಂಭಿಸುವ ಆಲೋಚನೆ ಇದೆ ಎಂದು ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಸುದ್ದಿಸಂಸ್ಥೆಗೆ ಇಲ್ಲಿ ತಿಳಿಸಿದರು.ಸದ್ಯ ನವದೆಹಲಿಯ ಶಾಸ್ತ್ರಿ ಭವನ ಮತ್ತು ದೆಹಲಿ ವಿಶ್ವವಿದ್ಯಾಲಯದಲ್ಲಿ ಹಾಗೂ ಮುಂಬೈನ ಪುರಭವನ ಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ತಲಾ ಒಂದು ಮಹಿಳಾ ಅಂಚೆ ಕಚೇರಿ ಆರಂಭಗೊಂಡಿವೆ.

ಇಂಥ ವಿಶೇಷ  ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿರುವುದು ವಿಶ್ವದಲ್ಲಿ ಭಾರತದಲ್ಲಿಯೇ ಪ್ರಥಮ ಎಂದು ಅಂಚೆ ಇಲಾಖೆ ಕಾರ್ಯದರ್ಶಿ ಪಿ.ಗೋಪಿನಾಥ್ ಹೇಳಿದ್ದಾರೆ.ಪ್ರತಿ ಮಹಾ ನಗರದಲ್ಲಿ ಮೂರರಿಂದ ನಾಲ್ಕು ಮತ್ತು 2ನೇ ಶ್ರೇಣಿ ನಗರಗಳಲ್ಲಿ ತಲಾ ಒಂದು ಮಹಿಳಾ ಅಂಚೆ ಕಚೇರಿ ತೆರೆಯುವ ಗುರಿ ಇದೆ.

ಮುಂದಿನ ಆರು ತಿಂಗಳೊಳಗಾಗಿ ಇದು ಕಾರ್ಯಗತವಾಗಲಿದೆ ಎಂದಿದ್ದಾರೆ. ಸದ್ಯ ದೇಶದಾದ್ಯಂತ 1,54,822 ಅಂಚೆ ಕಚೇರಿಗಳಿವೆ. ಇದರಲ್ಲಿ 1.39 ಲಕ್ಷ ಘಟಕಗಳು ಗ್ರಾಮೀಣ ಭಾಗದಲ್ಲಿಯೇ ಇವೆ.

ಪ್ರತಿಕ್ರಿಯಿಸಿ (+)