ಶನಿವಾರ, ಏಪ್ರಿಲ್ 17, 2021
32 °C

ಹಳ್ಳಿಯಲ್ಲೇ ಬಿಪಿ, ಶುಗರ್ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ತಮ್ಮ ದೈನಂದಿನ ಕಷ್ಟ ಕಾರ್ಪಣ್ಯಗಳ ನಡುವೆ ಗ್ರಾಮೀಣ ಜನತೆ ಆರೋಗ್ಯದ ಕಡೆ ಗಮನ ನೀಡುವುದು ಕಡಿಮೆ. ಹಾಗಾಗಿ ಬಿಪಿ, ಶುಗರ್ ಪರೀಕ್ಷೆಗಾಗಿ  ಹಳ್ಳಿಗಳಿಗೇ ಆರೋಗ್ಯ ಅಭಿಯಾನ ಹೊರಟಿದೆ.

ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದಂತೆ ಇದ್ದ `ಹಳ್ಳಿ ಭೇಟಿ ಮತ್ತು ಪರೀಕ್ಷೆ ಇದೀಗ ಸರ್ವೇ ಸಾಮಾನ್ಯ ರೋಗಗಳಾದ ರಕ್ತದೊತ್ತಡ (ಬಿಪಿ) ಮತ್ತು ಮಧುಮೇಹ (ಶುಗರ್) ತಪಾಸಣೆಗೂ ಕೈಚಾಚಿದೆ.ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಸಂಸ್ಥೆ ಗ್ರಾಮೀಣ ಜನರ ಆರೋಗ್ಯ ಸ್ಥಿತಿಗತಿ ಕುರಿತು ಈಚೆಗೆ ಅಧ್ಯಯನ ನಡೆಸಿ ಹಳ್ಳಿಗಳಲ್ಲೂ ಬಿಪಿ ಮತ್ತು ಮಧುಮೇಹ ಕಾಡುತ್ತಿರುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಿತ್ತು. ಗ್ರಾಮೀಣ ಜನತೆಗೆ ಈ ಬಗ್ಗೆ ನಿರ್ಲಕ್ಷ್ಯವಿದೆ ಎಂದು ವರದಿ ಪ್ರಸ್ತಾಪಿಸಿತ್ತು.ಈ ವರದಿ ಆಧರಿಸಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲೇ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. 30 ವರ್ಷ ದಾಟಿದ ಎಲ್ಲರಿಗೂ ಉಚಿತವಾಗಿ ಬಿಪಿ, ಮಧುಮೇಹ ಪರೀಕ್ಷಿಸಲಾಗುತ್ತದೆ.

ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಖ್ಯಸ್ಥರ ನೇತೃತ್ವದಲ್ಲಿ ನಡೆಯುವ ಪರೀಕ್ಷಾ ಅಭಿಯಾನಕ್ಕೆ ಆಸ್ಪತ್ರೆಯ ಆರೋಗ್ಯ ಸಹಾಯಕಿ, ಸಹಾಯಕರನ್ನು ಬಳಸಿಕೊಳ್ಳಲಾಗುತ್ತಿದೆ.ಇವರಿಗೆ ಈಗಾಗಲೇ ಕೆಲವೆಡೆ ತರಬೇತಿ ನೀಡಲಾಗಿದೆ. ಈ ಯೋಜನೆಗೆ ಆಶಾ ಕಾರ್ಯಕರ್ತೆಯರ ನೆಟ್‌ವರ್ಕ್ ಸಹಕಾರಿಯಾಗಿದೆ.ಪರೀಕ್ಷೆ ಕುರಿತು ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಹಳ್ಳಿಯ ಮನೆಮನೆಗೆ ಹೋಗಿ ವಿಷಯ ಮುಟ್ಟಿಸುತ್ತಾರೆ. ನಿಗದಿತ ದಿನದಂದು ಆರೋಗ್ಯ ಸಹಾಯಕರು ಗ್ರಾಮಕ್ಕೆ ಬಂದು ಅಲ್ಲಿಯ ಅಂಗನವಾಡಿ ಕೇಂದ್ರ ಅಥವಾ ಶಾಲಾ ಕೊಠಡಿಯಲ್ಲಿ ಪರೀಕ್ಷೆ ನಡೆಸುತ್ತಾರೆ. ಅತ್ಯಾಧುನಿಕ ಸರಳ ಯಂತ್ರವು ಸ್ಟ್ರಿಪ್ ಮಾದರಿಯಲ್ಲಿ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಪರೀಕ್ಷಿಸುತ್ತದೆ.ಇದಕ್ಕೆಂದು ಒಮ್ಮೆ ಮಾತ್ರ ಬಳಸಬಹುದಾದ ಪ್ರತ್ಯೇಕ ಪಂಚಬಲ್ ಸೂಜಿ ಮತ್ತು ಸ್ಟ್ರಿಪ್ ಉಪಯೋಗಿಸುತ್ತಾರೆ. ಮಾಮೂಲಿ ವಿಧಾನದ ಮೂಲಕ ಬಿಪಿ ಪರೀಕ್ಷೆಯನ್ನೂ ಮಾಡುತ್ತಾರೆ. ಪರೀಕ್ಷೆಯಿಂದ ಸಮಸ್ಯೆ ಕಂಡುಬಂದರೆ ಆ ವ್ಯಕ್ತಿಗೆ ತಿಳಿಸಿ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಯಾವುದಾದರೂ ಆಸ್ಪತ್ರೆಯಲ್ಲಿ ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವಂತೆ ಸೂಚಿಸುತ್ತಾರೆ.ಕೆಲಸದ ಒತ್ತಡದಲ್ಲಿ ಆರೋಗ್ಯ ಪರೀಕ್ಷೆಗೆ ಹೋಗದ, ಹಣದ ಸಮಸ್ಯೆಯಿಂದ ಹಿಂಜರಿಯುತ್ತಿದ್ದ ಹಾಗೂ ನಿರ್ಲಕ್ಷ್ಯದಲ್ಲಿದ್ದ ಗ್ರಾಮೀಣ ಜನರಿಗೆ ಈ ವ್ಯವಸ್ಥೆ ವರದಾನವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.