ಮಂಗಳವಾರ, ಮೇ 18, 2021
24 °C

ಹಳ್ಳಿಯ ಅಂಚೆಪಾಲಕ

ಪಿ.ಎನ್. ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಇಷ್ಟೆಲ್ಲಾ ವಿದ್ಯುನ್ಮಾನ ಸಂಪರ್ಕ ಕ್ರಾಂತಿಯ ನಡುವೆಯೂ ಮಲೆನಾಡಿನ ಗುಡ್ಡದ ತುದಿ, ಕಾಡು ಮಧ್ಯದ ಒಂಟಿ ಮನೆಗಳಿಗೆ ಸಂದೇಶವನ್ನು ಈಗಲೂ ಪ್ರಾಮಾಣಿಕವಾಗಿ ತಲುಪಿಸುತ್ತಿರುವುದು ಭಾರತೀಯ ಅಂಚೆ ವ್ಯವಸ್ಥೆ ಎಂಬುದರಲ್ಲಿ ಎರಡು ಮಾತಿಲ್ಲ.34 ವರ್ಷಗಳಿಂದ ಹಳ್ಳಿಗಳಿಗೆ ಅಂಚೆಯನ್ನು ಪ್ರಾಮಾಣಿಕವಾಗಿ ತಲುಪಿಸುವ ಮೂಲಕ ರಾಷ್ಟ್ರಮಟ್ಟದ ಗಮನ ಸೆಳೆದ ರಾಜ್ಯ ಪ್ರಶ್ತಸಿ ಪುರಸ್ಕೃತ ಮಾರುತಿಪುರ ಗ್ರಾಮೀಣ ಅಂಚೆಪಾಲಕ ಕೆ.ಎನ್. ಶಿವರಾಮ್ ಅವರ ಸೇವೆ ಗಣನೀಯವಾಗಿದೆ.ಕೊರಿಯರ್, ಮೊಬೈಲ್‌ಗಳ ಸಮೂಹ ಸಂಪರ್ಕದ ಜತೆ, ಪೈಪೋಟಿಯಲ್ಲಿ ಗೆಲುವು ಸಾಧಿಸಿದ ಹೆಮ್ಮೆ ಅವರದು. ಪೋಸ್ಟ್ ಕಾರ್ಡ್, ಅಂತರ್ದೇಶೀಯ ಪತ್ರ(ಇನ್‌ಲ್ಯಾಂಡ್ ಲೆಟರ್) ಬರೆಯುವ ಪೀಳಿಗೆ ಇಳಿಮುಖವಾಗುತ್ತಿರುವ ಈ ಸಂದರ್ಭದಲ್ಲಿ ಸಣ್ಣ ಉಳಿತಾಯ, ಅಂಚೆ ಜೀವವಿಮೆ ಯೋಜನೆಗಳನ್ನು ಹಳ್ಳಿ ಹಳ್ಳಿಗಳಿಗೆ ತಲುಪಿಸುವ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮಾರುತಿಪುರ ಅತ್ಯುತ್ತಮ ಗ್ರಾಮೀಣ ಅಂಚೆ ಶಾಖಾ ಕಚೇರಿ(ಬಿ.ಒ) ಆಗಿದೆ.

ಮಾರುತಿಪುರ ಸುತ್ತಲಿನ 8 ಗ್ರಾಮಗಳ ಸುಮಾರು 700ಕ್ಕೂ ಹೆಚ್ಚು ಕಾಡಿನಂಚಿನ ಮಲೆನಾಡಿನ ಒಂಟಿ ಮನೆಗಳಿಗೆ ಪ್ರಾಮಾಣಿಕ ಅಂಚೆ ಸೇವೆ ಒದಗಿಸುವ ಜತೆ ಜತೆಗೆ, ಮಾರುತಿಪುರ ಹವ್ಯಾಸಿ ನಾಟಕ ತಂಡ ಹುಟ್ಟು ಹಾಕಿ ನಾಟಕ ಪ್ರದರ್ಶನ, ನಾಣ್ಯ, ಅಂಚೆ ಚೀಟಿ ಸಂಗ್ರಹ ಹವ್ಯಾಸಗಳನ್ನು ರೂಢಿಸಿಕೊಂಡ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಸರಳ, ಪ್ರಾಮಾಣಿಕ, ಸಜ್ಜನಿಕೆಯ ಗ್ರಾಮೀಣ ಅಂಚೆಪಾಲಕ ಶಿವರಾಮ್ `ಪ್ರಜಾವಾಣಿ~ ಜತೆ, ಅಂಚೆ ಸೇವೆ ಕುರಿತು ಹಂಚಿಕೊಂಡ ಅನುಭವದ ಆಯ್ದ ಭಾಗ ಇಲ್ಲಿದೆ.* ಅಂಚೆ ಸೇವೆಯ ಆರಂಭದ ದಿನಗಳು ಹೇಗಿದ್ದವು?

ಶಿಕ್ಷಕರೇ ಅಂಚೆ ಸೇವೆ ನಡೆಸುತ್ತಿದ್ದ ಕಾಲ 1964ರಲ್ಲಿ ಹೊಸನಗರ ತಾಲ್ಲೂಕು ಮಾರುತಿಪುರ ಗ್ರಾಮದ ಪುಟ್ಟ ಸೂರಿನಡಿಯಲ್ಲಿ ಸೇವೆಯನ್ನು ಆರಂಭಿಸಲಾಗಿತ್ತು. ಹಣದ ದುರುಪಯೋಗದ ಆರೋಪ ಹೊತ್ತ ಗ್ರಾಮೀಣ ಶಾಖಾ ಅಂಚೆ ಕಚೇರಿಯ ಅಂಚೆ ಪಾಲಕರಾಗಿ 1977ರಲ್ಲಿ ಸೇರ್ಪಡೆಯಾದೆ. ಅಂಚೆ ಕಚೇರಿಯ ಮೇಲೆ ಗ್ರಾಮಸ್ಥರಲ್ಲಿ ಪುನಃ ನಂಬಿಕೆ ಹುಟ್ಟಿಸುವ ಗುರುತರವಾದ ಜವಾಬ್ದಾರಿ ಯುವಕನಾದ ನನ್ನ ಮೇಲೆ ಇತ್ತು.* ಪ್ರಥಮ ರಾಜ್ಯ ಪ್ರಶಸ್ತಿಯ ಬಗ್ಗೆ ಹೇಗನಿಸುತ್ತದೆ?

ಹಳ್ಳಿಯ ಮುಗ್ಧರಿಗೆ ಪ್ರಾಮಾಣಿಕ ಸೇವೆ ಸಲ್ಲಿಸುವುದು ನನ್ನ ಜೀವನದ ಗುರಿಯಾಗಿಸಿಕೊಂಡೆ. 15 ಪೈಸೆಯ ಕಾರ್ಡ್ ಅನಕ್ಷರರು ಹೇಳಿದ ವಿಷಯ ಬರೆದು ಪೋಸ್ಟ್ ಮಾಡುವುದು. ದೂರದ ಊರುಗಳಿಂದ ಬರುವ- ಹೋಗುವ ಸಣ್ಣ ಮೊತ್ತದ ಎಂಒ (ಮನಿ ಆರ್ಡರ್)ಗಳನ್ನು ಸಹ ಸಕಾಲದಲ್ಲಿ ತಲುಪಿಸುವುದು. ಬ್ಯಾಂಕ್ ಇಲ್ಲದ ಹಳ್ಳಿಯ ಜನರಲ್ಲಿ ಸಣ್ಣ ಉಳಿತಾಯ ಪ್ರಚಾರ ಹೀಗೆ ಗ್ರಾಮೀಣ ಅಂಚೆಯ ವಿವಿಧ ಯೋಜನೆ ಅನುಷ್ಠಾನಗೊಳಿಸಿದೆ.ಇದರ ಪರಿಣಾಮ ಭಾರತೀಯ ಅಂಚೆ ಸೇವೆಗೆ ಸೇರಿದ 10 ವರ್ಷದಲ್ಲಿ ರಾಜ್ಯಮಟ್ಟದಲ್ಲಿ ನನ್ನ ಸೇವೆ ಗುರುತಿಸಿದ್ದು ಗ್ರಾಮದ ಹೆಮ್ಮೆಯ ಸಂಗತಿ. 1987ರಲ್ಲಿ ಬೆಂಗಳೂರಿನಲ್ಲಿ ನಡೆದ ಅ. 9ರ ವಿಶ್ವ ಅಂಚೆ ದಿನಾಚರಣೆಯಲ್ಲಿ ಪ್ರಥಮ ವರ್ಷದ `ಡಾಕ್ ಸೇವಾ ಪ್ರಶಸ್ತಿ~ ಕರ್ನಾಟಕ ಪೋಸ್ಟ್ ಮಾಸ್ಟರ್ ಜನರಲ್ ಅವರು ನನಗೆ ನೀಡಿ ಗೌರವಿಸಿದರು.* ಪೈಪೋಟಿ ಬಗ್ಗೆ ಏನಂತೀರಿ?

ಮೊಬೈಲ್, ಖಾಸಗಿ ಕೋರಿಯರ್ ಅಂಚೆ ಸೇವೆಗಳ ಪೈಪೋಟಿಗಳ ನಡುವೆಯೂ ಮಲೆನಾಡಿನ ಬಹುಭಾಗದ ಜನರು ಪ್ರಾಮಾಣಿಕ ಅಂಚೆ ಸೇವೆಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಈ ಮೂಲಕ 150ಕ್ಕೂ ಹೆಚ್ಚು ವರ್ಷದ ಭಾರತೀಯ ಅಂಚೆ ಸೇವೆ ಜನರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಯಶಸ್ಸಿಯಾಗಿದೆ ಎನ್ನುವುದು ಕಳೆದ 34 ವರ್ಷ ಸೇವೆ ಸಲ್ಲಿಸಿದ ನನ್ನ ಅನಿಸಿಕೆ.* ಸೇವಾ ವಿಸ್ತರಣೆ ಬಗ್ಗೆ?

ಕೇವಲ ಅಂಚೆ ಸೌಲಭ್ಯಕ್ಕೆ ಗ್ರಾಮೀಣ ಶಾಖಾ ಅಂಚೆ ಕಚೇರಿ ಸೀಮಿತವಾಗಿಲ್ಲ. ಬ್ಯಾಂಕ್ ಸೇವೆ ಇಲ್ಲದ ಹಳ್ಳಿಗಳಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಹೆಚ್ಚು ಜನರು ತೊಡಗಿಸಿಕೊಂಡಿದ್ದಾರೆ. ಅಂಚೆಯ ಬ್ಯಾಂಕ್‌ನಲ್ಲಿ ಪ್ರಾಮಾಣಿಕ ಸೇವೆ ಕಂಡಿದ್ದಾರೆ. ಅಂಚೆ ಜೀವವಿಮೆ ಈಚಿನ ದಿನಗಳಲ್ಲಿ ಸಹ ಹೆಚ್ಚು ಪ್ರಚಾರ ಹಾಗೂ ಪ್ರಸ್ತುತತೆಯನ್ನು ಜನರು ಕಂಡುಕೊಂಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಹಣ ವಿತರಿಸುವ ಗುರುತರವಾದ ಜವಾಬ್ದಾರಿ ಗ್ರಾಮೀಣ ಅಂಚೆ ಕಚೇರಿಯ(ಬಿ.ಒ) ಮೇಲೆ ಇದ್ದು, ಇದುವರೆಗೆ ಯಾವ ಕಪ್ಪು ಚುಕ್ಕೆ ಕಂಡು ಬಾರದಿರುವುದು ಭಾರತೀಯ ಅಂಚೆ ಸೇವೆಯ ಪ್ರಾಮಾಣಿಕ ಕಾರ್ಯಕ್ಕೆ ಹಿಡಿದ ಕನ್ನಡಿ ಆಗಿದೆ.* ಅಂಚೆ ಸೇವೆ ಪ್ರಸ್ತುತತೆಯ ಬಗ್ಗೆ ಹೇಳಿ

ಗ್ರಾಮೀಣ ಅಂಚೆ ಕಚೇರಿಗಳು ಗ್ರಾಮಸ್ಥರ ಮನ-ಮನೆಗೆ ಹತ್ತಿರವಾಗಿದೆ. ಗ್ರಾಮೀಣ ಬಿಪಿಒಗಳು ಗಣಕೀಕರಣ ಆಗಲಿರುವುದು ಸಂತೋಷದ ಸಂಗತಿ. ಸಣ್ಣ ಸಣ್ಣ ಮೊತ್ತದ ಉಳಿತಾಯ ಖಾತೆಗಳು ಸೇರಿದಂತೆ ತಿಂಗಳಲ್ಲಿ ್ಙ 10ರಿಂದ 11 ಲಕ್ಷ ವಹಿವಾಟು ನಡೆಸುವ ಮೂಲಕ ಜಿಲ್ಲೆಯಲ್ಲಿ ಅತಿ ಪ್ರತಿಷ್ಠಿತ ಗ್ರಾಮೀಣ ಅಂಚೆ ಕಚೇರಿ ಎಂದು ಗುರುತಿಸಲ್ಪಟ್ಟಿದೆ. ಇದೆಲ್ಲದರ ನಡುವೆ ಅತಿ ಕಡಿಮೆ ಗೌರವ ಧನದಲ್ಲಿ ಅಂಚೆ ಇಲಾಖೆಯ ಮೂಲಕ ಹಳ್ಳಿಯ ಜನಕ್ಕೆ ಸೇವೆ ಸಲ್ಲಿಸಿದ ಸಾರ್ಥಕತೆ ಇದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.