ಹಳ್ಳಿಯ ನೀತಿ ಲಹರಿ (ಚಿತ್ರ: ಪುತ್ರ)

7

ಹಳ್ಳಿಯ ನೀತಿ ಲಹರಿ (ಚಿತ್ರ: ಪುತ್ರ)

Published:
Updated:

ನೀತಿ ಹುದುಗಿಸಿಕೊಂಡ ಹಳ್ಳಿ ಕತೆಗಳು ಸಿನಿಮಾ ವಸ್ತು ಗಳಾಗಿ ಗೆದ್ದಿರುವ ಉದಾಹರಣೆಗಳು ಹೇರಳ. `ಪುತ್ರ~ ಅದೇ ನಮೂನೆಗೆ ಸೇರಿದ್ದು. ಅದರ ಮೂಲ ತಮಿಳಿನ `ಎಮ್ತನ್ ಮಗನ್~. ಆರು ವರ್ಷದ ಹಿಂದೆ ತೆರೆಕಂಡಿದ್ದ ಆ ಚಿತ್ರವನ್ನು ತಿರುಮುಗನ್ ನಿರ್ದೇಶಿಸಿದ್ದರು. ಕನ್ನಡ ಚಿತ್ರದಲ್ಲೂ ಕತೆಯ ವಾರಸುದಾರರು ಅವರೇ ಎಂಬುದನ್ನು ಶೀರ್ಷಿಕೆಯ ಪಟ್ಟಿ ಸಮರ್ಥಿಸುತ್ತದೆ.ಮೂಲ ಚಿತ್ರದ ಪರಿಸರ, ಪಾತ್ರಗಳ ವರ್ತನೆ, ಕಥಾಹಂದರ, ಕಥನಗಳು ಎಲ್ಲವನ್ನೂ ಬಹುಪಾಲು ಉಳಿಸಿಕೊಂಡೇ ವಿ.ಉಮಾಕಾಂತ್ `ಪುತ್ರ~ನಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಶಾಟ್‌ಗಳಲ್ಲಿ ಕೂಡ ಅವರು ಸೃಜನಶೀಲತೆಗಾಗಲೀ ಸಮಕಾಲೀನತೆ ಗಾಗಲೀ ಹೆಚ್ಚೇನೂ ಹೆಣಗಾಡಿಲ್ಲ. ಮೂಲಕ್ಕೆ ಸಂಪೂರ್ಣ ನಿಷ್ಠರಾಗಿಯೇ ಚಿತ್ರವನ್ನು ತಂದಿದ್ದಾರೆ. ಮೂಲ ಚಿತ್ರದಲ್ಲಿ ಇರುವ ಚುಂಬನದ ರೋಮಾಂಚಕ ದೃಶ್ಯವನ್ನು ಮಾತ್ರ ಬಿಟ್ಟಿದ್ದಾರೆ.ಹಳ್ಳಿಯ ಕಥನಗಳಲ್ಲಿ ಸಹಜವಾದ ಮೆಲೋಡ್ರಾಮಾ ಬೆರೆತಿರುತ್ತದೆ. ದಕ್ಷಿಣ ಭಾರತದಲ್ಲಿ 1970, 80 ಅಷ್ಟೇಕೆ 90ರ ದಶಕದಲ್ಲೂ ಗೆದ್ದ ಬಹುತೇಕ ಚಿತ್ರಗಳು ಹಳ್ಳಿಯ ಪರಿಸರ ಉಳ್ಳಂಥವು. `ಯಜಮಾನ~ ಚಿತ್ರದ ಯಶಸ್ಸಿನಲ್ಲೂ ತಮಿಳು ಮೂಲದ ಪಾಲಿತ್ತು. `ಪುತ್ರ~ ಜಾಯಮಾನವೂ ಇದೇ. ಒರಟು ತಂದೆಗೆ ನಿಷ್ಠನಾದ ಮಗನ ಬದುಕಿನ ಅನಾವರಣ ಚಿತ್ರದ ಹೂರಣ. ತಮಿಳಿನ ನೆಲಕ್ಕೆ ಪಕ್ಕಾ ಹೊಂದುವ ಒರಟುತನವನ್ನು ಉಮಾಕಾಂತ್ ಕನ್ನಡದಲ್ಲೂ ಉಳಿಸಿಕೊಂಡಿದ್ದಾರೆ. ಮಂಡ್ಯ ಕಡೆಯ ಹಳ್ಳಿಯಲ್ಲಿ ಕತೆ ನಡೆಯುವುದರಿಂದ ಅಲ್ಲಿನ ಪರಿಸರಕ್ಕೂ ಕತೆ ಒಗ್ಗಿದೆ.ದಿನಸಿ ಅಂಗಡಿ ಇಟ್ಟ ಅಪ್ಪ ದೂರ್ವಾಸ. ತಾನಾಯಿತು, ತನ್ನಂಗಡಿ ವ್ಯಾಪಾರವಾಯಿತು. ಊರಿನ ಉಸಾಬರಿಗೆ ಹೋಗುವುದಿಲ್ಲ. ಗೆಳೆಯರಂತೂ ಇಲ್ಲವೇ ಇಲ್ಲ. ಕೂಲಿಯಿಂದ ಶುರುವಾಗಿದ್ದ ಬದುಕು ಈಗ ಈ ಮಟ್ಟ ಮುಟ್ಟಲು ಶ್ರಮವಷ್ಟೆ ಬಂಡವಾಳ. ಮಗ ಕೂಡ ತನ್ನಂತೆಯೇ ಕಷ್ಟ ಪಡಬೇಕು ಎಂಬುದು ಆತನ ಬಯಕೆ. ಕಾಲೇಜು ಹೈದನಾದ ಮಗನನ್ನು ಎಲ್ಲರ ಎದುರು ಹೀನಾಮಾನ ಬಯ್ಯುವ, ಹೊಡೆಯುವ ಮುಂಗೋಪವನ್ನು ಹತ್ತಿಕ್ಕದ ವಿಚಿತ್ರವೂ ಅಪರೂಪವೂ ಆದ ಅಪ್ಪ. ಅವನ ಹೆಂಡತಿ ಅರ್ಥಾತ್ ನಾಯಕನ ತಾಯಿಯ ಕಡೆಯ ಸಂಬಂಧ ಕೂಡ ಯಾವುದೋ ಜಗಳದ ಕಾರಣ ಕಡಿದುಹೋಗಿದೆ.ಅಮ್ಮನ ಕಡೆ ಸಂಬಂಧದ ಹುಡುಗಿಯ ಮೇಲೆ ನಾಯಕನಿಗೆ ಪ್ರೀತಿ. ಇದರಿಂದ ಉದ್ಭವಿಸುವ ಸಮಸ್ಯೆಗಳ ಸುತ್ತ ಚಿತ್ರ ಸುತ್ತುತ್ತದೆ. ಅಪ್ಪ ಮನೆಯಿಂದ ಹೊರದಬ್ಬಿದರೂ ನಾಯಕನ ಪಿತೃಭಕ್ತಿ ಕಡಿಮೆ ಯಾಗುವುದಿಲ್ಲ. ಆತ ವೃತ್ತಿಬದುಕು, ದಾಂಪತ್ಯ ಎರಡರಲ್ಲೂ ಏಕಕಾಲಕ್ಕೆ ಸಿನಿಮೀಯ ಯಶಸ್ಸು ಸಾಧಿಸುತ್ತಾನೆಂಬುದು ಕಥಾಸಾರ.ಚಿತ್ರದ ಕಥಾಚೌಕಟ್ಟಿಗೆ ಹೊರತಾಗದ ಒಂದೂ ಪಾತ್ರವನ್ನು ತಿರುಮುಗನ್ ಸೃಷ್ಟಿಸಿಲ್ಲ. ನಾಯಕನ ಆತ್ಮಸಾಕ್ಷಿಯಂತೆ ಮಾತನಾಡುವ ಮಾವನ ಪಾತ್ರದಲ್ಲೇ ಸಹಜವಾದ ಹಾಸ್ಯವೂ ಬೆರೆತಿರುವುದರಿಂದ ಚಿತ್ರದ ಓಘ ಚೆನ್ನಾಗಿದೆ. ಉಮಾಕಾಂತ್ ಕನ್ನಡದಲ್ಲೂ ಅದು ಮುಕ್ಕಾಗದಂತೆ ಎಚ್ಚರಿಕೆ ವಹಿಸಿದ್ದಾರೆ.ತಮಿಳಿನಲ್ಲಿ ನಾಸಿರ್ ಮಾಡಿರುವ ಪಾತ್ರವನ್ನು ಅವಿನಾಶ್ ಇಲ್ಲಿ ಅನುಕರಣೆ ಮಾಡದೆ ಅನುಭವಿಸಿದ್ದಾರೆ. ನಟನೆಯ ಮಟ್ಟಿಗೆ ಚಿತ್ರದ ನಿಜವಾದ ನಾಯಕ ಅವರೇ. ಕೋಪದ ವದನಾರವಿಂದ, ಬೆಚ್ಚನೆಯ ಹೃದಯವನ್ನು ಪ್ರೇಕ್ಷಕರಿಗೆ ಅವರು ದಾಟಿಸಿರುವ ಪರಿಗೆ ಶಹಬ್ಬಾಸ್. ದಿಗಂತ್ ಕೂಡ ಅಭಿನಯದಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ನಾಯಕಿ ಸುಪ್ರೀತಾ ಇನ್ನಷ್ಟು ಭಾವ ಸೂಸುವ ಸಾಧ್ಯತೆ ಇತ್ತು. ದೀರ್ಘ ಕಾಲದ ನಂತರ ಸಿಕ್ಕಿರುವ ಅಪರೂಪದ ಪಾತ್ರದಲ್ಲಿ ಟೆನ್ನಿಸ್ ಕೃಷ್ಣ ಕೂಡ ಛಾಪು ಮೂಡಿಸಿದ್ದಾರೆ. ಸುಧಾ ಬೆಳವಾಡಿ ಎಂದಿನ ಶೈಲಿಯ ಅಮ್ಮ. ರಮೇಶ್ ರಾಜಾ ಸಂಗೀತದ ಹಾಡುಗಳಿಗೆ ಹಿಡಿದಿಡುವ ಗುಣವಿಲ್ಲ. ರವಿ ಸುವರ್ಣ ಕ್ಯಾಮೆರಾ ಕೆಲಸದಲ್ಲೂ ವಿಶೇಷವೇನೂ ಇಲ್ಲ. ತಾಂತ್ರಿಕ ಕಸುವೂ ಹದವಾಗಿ ಬೆರೆತಿದ್ದರೆ `ಪುತ್ರ~ನ ಗುಣಮಟ್ಟ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಹಳ್ಳಿ ಚಿತ್ರಗಳೇ ವಿರಳವಾಗುತ್ತಿರುವ ಈ ದಿನಗಳಲ್ಲಿ ರೀಮೇಕ್ `ಪುತ್ರ~ ಗಮನಾರ್ಹವಂತೂ ಹೌದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry